ಬಳ್ಳಾರಿಯಲ್ಲಿ ಮರಣ ಮೃದಂಗ: ಒಂದೇ ದಿನ 80 ಪ್ರಕರಣ ಪತ್ತೆ, ನಾಲ್ವರು ಬಲಿ

ಭಾನುವಾರ ಬಳ್ಳಾರಿ ಜಿಲ್ಲೆಯಲ್ಲಿ 80 ಪ್ರಕರಣಗಳು ಪತ್ತೆ, ನಾಲ್ವರ ಸಾವು| ಲಾಕ್‌ಡೌನ್‌ ವೇಳೆ ಒಂದಂಕಿಯಲ್ಲಿದ್ದ ಸೋಂಕಿತರ ಪ್ರಕರಣಗಳು ಲಾಕ್‌ಡೌನ್‌ ತೆರವಿನ ಬಳಿಕ ಹೆಚ್ಚಾಗುತ್ತಲೆ ಸಾಗಿದೆ| ಜಿಲ್ಲೆಯಲ್ಲಿ ಇಷ್ಟೊಂದು ಪ್ರಕರಣಗಳು ಪತ್ತೆಯಾಗಲು ಜಿಂದಾಲ್‌ ಕಂಪನಿ ಸಹ ಕಾರಣ|

80 New Coronavirus Cases in Ballari District in a Day

ಸಿದ್ಧಲಿಂಗಸ್ವಾಮಿ ವೈ.ಎಂ.

ಬಳ್ಳಾರಿ(ಜೂ.29): ಮಹಾಮಾರಿ ಕೊರೋನಾ ಸೋಂಕು ಗಣಿನಾಡು ಬಳ್ಳಾರಿಯಲ್ಲಿ ಒಂದೇ ದಿನ ಮಹಾಸ್ಫೋಟವಾಗಿದ್ದು, ನಾಲ್ವರನ್ನು ಬಲಿ ಪಡೆದಿದೆ. ಇದರಿಂದ ಜಿಲ್ಲೆಯ ಜನತೆ ಬೆಚ್ಚಿಬಿದ್ದಿದ್ದಾರೆ. ಭಾನುವಾರ ಜಿಲ್ಲೆಯಲ್ಲಿ 80 ಪ್ರಕರಣಗಳು ಪತ್ತೆಯಾಗಿದೆ. ಲಾಕ್‌ಡೌನ್‌ ವೇಳೆ ಒಂದಂಕಿಯಲ್ಲಿದ್ದ ಸೋಂಕಿತರ ಪ್ರಕರಣಗಳು ಲಾಕ್‌ಡೌನ್‌ ತೆರವಿನ ಬಳಿಕ ಹೆಚ್ಚಾಗುತ್ತಲೆ ಸಾಗಿದೆ. ಜಿಲ್ಲೆಯಲ್ಲಿ ಇಷ್ಟೊಂದು ಪ್ರಕರಣಗಳು ಪತ್ತೆಯಾಗಲು ಜಿಂದಾಲ್‌ ಕಂಪನಿ ಸಹ ಕಾರಣವಾಗಿದೆ. ಕಂಪನಿಯ ಉದ್ಯೋಗಿಗೆ ಸೋಂಕು ತಗುಲುವ ಮೊದಲ 100 ಒಳಗೆ ಇದ್ದ ಪ್ರಕರಣಗಳು ಇದೀಗ 725ಕ್ಕೇರಿದೆ. ಇಂದಿನ 80 ಪ್ರಕರಣದಲ್ಲಿ 20 ಪ್ರಕರಣಗಳು ಜಿಂದಾಲ್‌ಗೆ ಸೇರಿವೆ.

ಮೂರು ದಿನಗಳಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಜೂ. 25ರಂದು 58, 26ರಂದು 47, 27ರಂದು 35, 28ರಂದು 80 ಜನರಲ್ಲಿ ಸೋಂಕು ದೃಢಪಟ್ಟಿರುವುದು ಜನರಲ್ಲಿ ತೀರಾ ಆತಂಕಕ್ಕೆ ಕಾರಣವಾಗಿದೆ. ಬಳ್ಳಾರಿ ತಾಲೂಕಿನಲ್ಲಿ 29, ಸಂಡೂರು 21, ಹೊಸಪೇಟೆ 18, ಹಗರಿಬೊಮ್ಮನಹಳ್ಳಿ 5, ಹಡಗಲಿ 1, ಕೂಡ್ಲಿಗಿ 1, ಸಿರುಗುಪ್ಪ 1, ಮೊಳಕಾಲ್ಮುರು 1, ಆಲೂರು 1, ಉರವಕೊಂಡ 1 ಸೇರಿ ಒಟ್ಟು 80 ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 17 ಐಎಲ್‌ಐ ಪ್ರಕರಣಗಳಾಗಿದ್ದು, 10 ಉಸಿರಾಟ ಸಮಸ್ಯೆಯುಳ್ಳ ದುರ್ಬಲ ವರ್ಗದ ಪ್ರಕರಣಗಳಾಗಿವೆ. 4 ಪ್ರಕರಣಗಳು ಪತ್ತೆ ಹಚ್ಚಬೇಕಾಗಿದ್ದು, ಇನ್ನುಳಿದವು ವಿವಿಧ ಸೋಂಕಿತರ ಸಂಪರ್ಕ ಹೊಂದಿದವರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಹೇಳಿದ್ದಾರೆ.

SSLC ಪರೀಕ್ಷೆ: ಕಂಟೈನ್‌ಮೆಂಟ್‌ ಪ್ರದೇಶದಿಂದ ಬಂದ 110 ವಿದ್ಯಾರ್ಥಿಗಳು

ಜಿಂದಾಲ್‌ನಲ್ಲಿ ಹೆಚ್ಚಿದ ಸೋಂಕಿತರು:

ಜಿಂದಾಲ್‌ ಕೈಗಾರಿಕೆಯಲ್ಲೂ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ಈಗಾಗಲೇ ಜಿಂದಾಲ್‌ ಕೈಗಾರಿಕೆಯಲ್ಲೇ ಸೋಂಕಿತರ ಸಂಖ್ಯೆ 400ರ ಗಡಿದಾಟಿದೆ. ಭಾನುವಾರ 20 ಸೋಂಕಿತರು ಜಿಂದಾಲ್‌ ಕೈಗಾರಿಕೆ ನೌಕರರು ಮತ್ತವರ ಸಂಪರ್ಕಿತರಾಗಿದ್ದಾರೆ. ಅಲ್ಲದೇ, ಶನಿವಾರ ಜಿಂದಾಲ್‌ ಕೈಗಾರಿಕೆಗೆ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಪೊಲೀಸ್‌ ಪೇದೆಗೆ ಆವರಿಸಿದ್ದ ಸೋಂಕು, ಜಿಂದಾಲ್‌ ಕೈಗಾರಿಕೆಯ ಸಿಬ್ಬಂದಿ ಸ್ಟೋರ್‌ ಕೀಪರ್‌ಗೂ ತಗುಲಿದ್ದು, ಇನ್ನಿತರ ಸಿಬ್ಬಂದಿಗಳಲ್ಲಿ ಆತಂಕ ಮನೆ ಮಾಡಿದೆ.

ಒಂದೇ ದಿನ ನಾಲ್ವರು ಸಾವು:

ಜಿಲ್ಲೆಯಲ್ಲಿ ಕೊರೋನಾ ಮರಣ ಮೃದಂಗ ಮುಂದುವರಿದಿದ್ದು, ಒಂದೇ ದಿನ ಮೂವರು ವೃದ್ಧರು ಮತ್ತು ಓರ್ವ ವೃದ್ಧೆ ಸೇರಿ ನಾಲ್ವರು ಮೃತರಾಗಿದ್ದಾರೆ. ಒಟ್ಟು 14 ಜನರು ಈ ವರೆಗೂ ಮರಣ ಹೊಂದಿದ್ದಾರೆ. ಉಸಿರಾಟ ತೊಂದರೆ ಹಾಗೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಆಂಧ್ರದ ಆಧೋನಿ ಮೂಲದ 60 ವರ್ಷದ ವೃದ್ಧ, ಹೃದಯ ರೋಗದಿಂದ 65 ವರ್ಷದ ತಾಲೂಕಿನ ರೂಪನಗುಡಿ ಗ್ರಾಮದ ವೃದ್ಧ, ಹೃದಯ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬಳ್ಳಾರಿಯ ಕೋಟೆ ಪ್ರದೇಶದ 63 ವರ್ಷದ ವೃದ್ಧೆ, ಕೆಮ್ಮು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬಳ್ಳಾರಿಯ ರಾಜೇಶ್ವರಿ ನಗರದ 58 ವರ್ಷದ ವೃದ್ಧ ಕೋರೋನಾ ರೋಗಕ್ಕೆ ಬಲಿಯಾಗಿದ್ದಾರೆ.

18 ಜನ ಗುಣಮುಖ:

ನಗರದ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 18 ಜನರು ಗುಣಮುಖರಾದ ಹಿನ್ನೆಲೆಯಲ್ಲಿ ಅವರನ್ನು ಶನಿವಾರ ರಾತ್ರಿ ಬಿಡುಗಡೆಗೊಳಿಸಲಾಯಿತು. ಈ ಮೂಲಕ ಜಿಲ್ಲೆಯಲ್ಲಿ ಗುಣಮುಖರಾದವರ ಸಂಖ್ಯೆ 313ಕ್ಕೆ ಏರಿಕೆಯಾಗಿದೆ. ನಗರದ ದಂತ ವೈದ್ಯಕೀಯ ಕಾಲೇಜಿನಲ್ಲಿ 13 ಜನರು, ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ 5 ಸೇರಿ ಒಟ್ಟು 18 ಜನರು ಗುಣಮುಖರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಗುಣಮುಖರಾದವರನ್ನು ಆಸ್ಪತ್ರೆಯ ಜಿಲ್ಲಾ ಸರ್ಜನ್‌ ಡಾ. ಎನ್‌. ಬಸಾರೆಡ್ಡಿ, ಹೂವು, ಹಣ್ಣು, ಪಡಿತರ ಕಿಟ್‌ ನೀಡಿ ಚಪ್ಪಾಳೆ ತಟ್ಟುವ ಮೂಲಕ ಆಂಬ್ಯುಲೆನ್ಸ್‌ನಲ್ಲಿ ಮನೆಗೆ ಕಳುಹಿಸಿಕೊಟ್ಟರು. 403 ಪ್ರಕರಣಗಳು ಸಕ್ರಿಯವಾಗಿದ್ದು, 313 ಜನರ ವರದಿ ಬರಬೇಕಾಗಿದೆ ಎಂದು ಜಿಲ್ಲಾಧಿಕಾರಿ ನಕುಲ್‌ ಅವರು ಸ್ಪಷ್ಟಪಡಿಸಿದ್ದಾರೆ.

ಇಂಗ್ಲಿಷ್‌ ಪರೀಕ್ಷೆ ಬರೆದ ವಿದ್ಯಾರ್ಥಿಗೆ ಸೋಂಕು

ಜೂ. 25ರಂದು ಎಸ್‌ಎಸ್‌ಎಲ್‌ಸಿ ಇಂಗ್ಲಿಷ್‌ ಪರೀಕ್ಷೆ ಬರೆದಿದ್ದ ಓರ್ವ ವಿದ್ಯಾರ್ಥಿಗೆ ಕೊರೋನಾ ಪಾಸಿಟಿವ್‌ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆ ವಿದ್ಯಾರ್ಥಿ ಪರೀಕ್ಷೆ ಬರೆದ ವಿಸ್ಡಮ್‌ ಲ್ಯಾಂಡ್‌ ಶಾಲೆಯ ಪರೀಕ್ಷಾ ಕೇಂದ್ರವನ್ನು ಸಂಪೂರ್ಣ ಸ್ಯಾನಿಟೈಸ್‌ ಮಾಡಲಾಗಿದ್ದು, ವಿದ್ಯಾರ್ಥಿ ಪರೀಕ್ಷೆ ಬರೆದ ಕೊಠಡಿಯ ಎಲ್ಲ ವಿದ್ಯಾರ್ಥಿಗಳಿಗೆ ಎನ್‌-95 ಮಾಸ್ಕ್‌ ಒದಗಿಸಿ ಅವರಿಗೆ 6 ಅಡಿ ಅಂತರದಂತೆ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ತಿಳಿಸಿದ್ದಾರೆ.

ಈಗಾಗಲೇ ಆ ಪರೀಕ್ಷಾ ಕೇಂದ್ರದ ಎಲ್ಲ ಕೊಠಡಿಗಳಿಗೆ ಸಂಪೂರ್ಣ ಸ್ಯಾನಿಟೈಸ್‌ ಮಾಡಲಾಗಿದ್ದು, ಸೋಮವಾರ ಬೆಳಗ್ಗೆಯೂ ಇನ್ನೊಂದು ಬಾರಿ ಸ್ಯಾನಿಟೈಸ್‌ ಮಾಡಲಾಗುತ್ತದೆ ಎಂದು ತಿಳಿಸಿರುವ ಜಿಲ್ಲಾಧಿಕಾರಿ, ಅಂದು ಪರೀಕ್ಷೆ ಬರೆದು ಕಪಗಲ್ಲು ಗ್ರಾಮಕ್ಕೆ ಮೂವರು ಸ್ನೇಹಿತರು ಬೈಕ್‌ನಲ್ಲಿ ತೆರಳುವ ಸಂದರ್ಭದಲ್ಲಿ ಬೈಕ್‌ ಸ್ಕಿಡ್‌ ಆಗಿ ಬಿದ್ದ ಕಾರಣ ವಿಮ್ಸ್‌ಗೆ ದಾಖಲಿಸಲಾಗಿತ್ತು. ಮೂವರಲ್ಲಿ ಇಬ್ಬರಿಗೆ ಮೂಳೆ ಮುರಿದ ಕಾರಣ ವಿಮ್ಸ್‌ನಲ್ಲಿ ಒಳರೋಗಿಗಳಾಗಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಇದೇ ಸಂದರ್ಭದಲ್ಲಿ ಸ್ವಾ್ಯಬ್‌ ಕಲೆಕ್ಟ್ ಮಾಡಿ ಟೆಸ್ಟ್‌ಗೆ ಕಳಿಸಲಾಗಿತ್ತು. ಇಬ್ಬರಲ್ಲಿ ಓರ್ವ ವಿದ್ಯಾರ್ಥಿ ವರದಿ ಪಾಸಿಟಿವ್‌ ಬಂದಿದೆ. ಹೀಗಾಗಿ ಸೋಂಕು ಹರಡಿರುವ ಸಾಧ್ಯತೆ ಕಡಿಮೆ ಇದೆ. ಅದಾಗಿಯೂ ಜಿಲ್ಲಾಡಳಿತವು ಶಿಕ್ಷಣ ಇಲಾಖೆ ಸುತ್ತೋಲೆ ಮತ್ತು ಸರ್ಕಾರದ ಮಾರ್ಗಸೂಚಿಗಳ ಅನುಸಾರ ಅಗತ್ಯ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.

ಗಾಯಗೊಳ್ಳದ ಇನ್ನೋರ್ವ ವಿದ್ಯಾರ್ಥಿ ಜೂ. 27ರಂದು ನಡೆದ ಪರೀಕ್ಷೆಗೆ ಹಾಜರಾಗಿದ್ದ. ಈ ಮೂವರು ಮುಂದಿನ ಪರೀಕ್ಷೆಗಳಿಗೆ ಹಾಜರಾಗುವುದಿಲ್ಲ. ಅವರಿಗೆ ಪೂರಕ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿರುವ ಜಿಲ್ಲಾಧಿಕಾರಿ, ಎಸ್‌ಒಪಿ ನಿಯಮಗಳ ಅನುಸಾರ ಪರೀಕ್ಷಾ ಕೇಂದ್ರದಲ್ಲಿ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಯಾವುದೇ ರೀತಿಯ ಆತಂಕ ಬೇಡ. ವಿದ್ಯಾರ್ಥಿಗಳು ನಿರಾತಂಕವಾಗಿ ಬಂದು ಪರೀಕ್ಷೆ ಬರೆಯಬೇಕು ಎಂದು ಅವರು ಮನವಿ ಮಾಡಿದ್ದಾರೆ.
 

Latest Videos
Follow Us:
Download App:
  • android
  • ios