ಕೊಡಗು: ಸೂರಿಗಾಗಿ ಶೆಡ್ಡು ಹಾಕಿ ಕುಳಿತ 80 ಕುಟುಂಬಗಳು, ಭೂಮಿ ತನ್ನದೆಂದು ಅಧಿಕಾರಿಗಳ ಮೊರೆ ಹೋದ ವ್ಯಕ್ತಿ
ಹಲವು ವರ್ಷಗಳಿಂದ ತಮಗೊಂದು ಸೂರು ಕೊಡಿ ಎಂದು ಮನವಿ ಮಾಡಿ ಮಾಡಿ ಕಾದು ಸುಸ್ತಾದ 80 ಕುಟುಂಬಗಳು ಇದೀಗ ಸರ್ಕಾರಿ ಜಾಗದಲ್ಲಿ ಶೆಡ್ ಹಾಕಿ ಕುಳಿತಿವೆ.
ವರದಿ : ರವಿ.ಎಸ್. ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು(ಡಿ.23): ಕೊಡಗು ಜಿಲ್ಲೆಯಲ್ಲಿ ವಸತಿ ರಹಿತರಿಗೇನು ಕಡಿಮೆ ಇಲ್ಲ. ಒಂದೊಂದು ಪಂಚಾಯಿತಿ ವ್ಯಾಪ್ತಿಯಲ್ಲೂ ನೂರಾರು ಸಂಖ್ಯೆಯಲ್ಲಿ ವಸತಿ ರಹಿತರಿದ್ದಾರೆ. ಹಲವು ವರ್ಷಗಳಿಂದ ತಮಗೊಂದು ಸೂರು ಕೊಡಿ ಎಂದು ಮನವಿ ಮಾಡಿ ಮಾಡಿ ಕಾದು ಸುಸ್ತಾದ 80 ಕುಟುಂಬಗಳು ಇದೀಗ ಸರ್ಕಾರಿ ಜಾಗದಲ್ಲಿ ಶೆಡ್ ಹಾಕಿ ಕುಳಿತಿವೆ.
ಹೌದು, ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆ ಗ್ರಾಮದಲ್ಲಿ 80 ಕುಟುಂಬಗಳು ಈಗ ಇದ್ದಕ್ಕಿದ್ದಂತೆ ಗುಡಿಸಲು ಹಾಕಿ ಕುಳಿತಿವೆ. ಕಳೆದ 10 ರಿಂದ 15 ವರ್ಷಗಳಿಂದ ಬಾಡಿಗೆ ಮನೆಗಳಲ್ಲಿ ಬದುಕುತ್ತಿದ್ದ ಕುಟುಂಬಗಳು ತಮಗೂ ಒಂದು ನಿವೇಶನ ಬೇಕು ಎಂದು ಹಲವು ಬಾರಿ ಮನವಿ ಮಾಡಿದ್ದವು. ಆದರೆ ಪಂಚಾಯಿತಿ ಅಧಿಕಾರಿಗಳು ಮಾತ್ರ ಯಾವುದೇ ರೀತಿಯ ಕ್ರಮಕೈಗೊಳ್ಳುತ್ತಿಲ್ಲ. ಇದರಿಂದ ಬೇಸತ್ತು ಈಗ ಸರ್ಕಾರಿ ಜಾಗವನ್ನು ಹುಡುಕಿ ಶೆಡ್ಡು ಹಾಕಿ ಕುಳಿತಿದ್ದೇವೆ. ನಾವು ಕುಳಿತಿರುವ ಜಾಗಗಳಿಗೆ ಅಧಿಕಾರಿಗಳು ಹಕ್ಕುಪತ್ರ ಕೊಡಲಿ ಎನ್ನುವುದು ನಮ್ಮ ಒತ್ತಾಯ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 6 ತಿಂಗಳಿಂದ ಬರೀ ವಿವಾದ ಮಾಡಿದ್ದೆ ಆಯ್ತು: ಮಾಜಿ ಸ್ಪೀಕರ್ ಕೆಜಿ ಬೋಪಯ್ಯ ಕಿಡಿ
ನಾವು ಶೆಡ್ಡ್ ಹಾಕಿ ಕುಳಿತರೂ ಯಾವುದೇ ಅಧಿಕಾರಿಗಳು ಮೂರು ದಿನಗಳಿಂದ ಇತ್ತ ತಿರುಗಿ ನೋಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಸರ್ಕಾರಿ ಜಾಗವೆಂದು ಸರ್ವೆ ನಂಬರ್ 17/2 ರಲ್ಲಿ ಗ್ರಾಮದ ನಿವೇಶನ ರಹಿತರು ಗುಡಿಸಲು ಹಾಕಿ ಕುಳಿತಿದ್ದರೆ, ಅತ್ತ ವ್ಯಕ್ತಿಯೊಬ್ಬರು ಇದು ತಮ್ಮ ಜಾಗವೆಂದು ಗಲಾಟೆ ಮಾಡುತ್ತಿದ್ದು, ನಮ್ಮ ಮತ್ತು ನಮ್ಮ ಗುಡಿಸಲುಗಳ ಫೋಟೋ, ವಿಡಿಯೋ ತೆಗೆದು ಪೊಲೀಸರಿಗೆ ದೂರು ನೀಡುತ್ತೇವೆ ಎಂದು ತೊಂದರೆ ಕೊಡುತ್ತಿದ್ದಾರೆ. ಇದರಿಂದ ನಮಗೆ ಮಾನಸಿಕವಾಗಿ ಕಿರಿಕಿರಿ ಆಗುತ್ತಿದೆ. ಅಧಿಕಾರಿಗಳು ಸ್ಥಳಕ್ಕೆ ಬಂದು ನಮ್ಮ ಸಮಸ್ಯೆಯನ್ನು ಬಗೆಹರಿಸಲಿ ಎಂದು ಒತ್ತಾಯಿಸುತ್ತಿದ್ದಾರೆ. ಕಳೆದ ಒಂದು ದಶಕದಿಂದಲೂ ಬಾಡಿಗೆ ಮನೆಗಳಲ್ಲಿ ಬದುಕುತ್ತಿರುವ ನಮಗೆ ಸಂಬಂಧಿಸಿದ ಅಧಿಕಾರಿಗಳು ಇನ್ನಾದರೂ ನಾವು ಗುಡಿಸಲು ಹಾಕಿ ಕುಳಿತ್ತಿರುವ ಸ್ಥಳಕ್ಕೆ ಬಂದು ನಮಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸುತ್ತಿದ್ದಾರೆ.
ಪವಿತ್ರ ಎಂಬುವರು ಮಾತನಾಡಿ 20 ವರ್ಷಗಳ ಹಿಂದೆಯೇ ನಮ್ಮ ಪತಿಯವರು ಸೇನೆಯಿಂದ ನಿವೃತ್ತರಾದರು. ಅಂದಿನಿಂದ ಇಂದಿನವರೆಗೆ ಹತ್ತಾರು ಬಾರಿ ಮನವಿ ಮಾಡಿದ್ದೇವೆ. ಆದರೂ ನಮಗೆ ಕೊಡಬೇಕಾಗಿರುವ ನಾಲ್ಕು ಎಕರೆ ಭೂಮಿ ಇರಲಿ ಒಂದು ನಿವೇಶನ ನೀಡಿಲ್ಲ. ಅಧಿಕಾರಿಗಳ ಬಳಿಗೆ ಅಲೆದು ಅಲೆದು ಸಾಕಾಗಿದೆ. ಹೀಗಾಗಿ ನಾವೇ ಸರ್ಕಾರಿ ಜಾಗವನ್ನು ಗುರುತ್ತಿಸಿ ಗುಡಿಸಲು ಹಾಕಿಕೊಂಡಿದ್ದೇವೆ. ಈಗಲಾದರೂ ಅಧಿಕಾರಿಗಳು ನಾವು ಕುಳಿತಿರುವ ಜಾಗಕ್ಕೆ ಹಕ್ಕುಪತ್ರ ನೀಡಲಿ ಎಂದು ಆಗ್ರಹಿಸುತ್ತೇವೆ ಎಂದಿದ್ದಾರೆ.
ವಿಪರ್ಯಾಸವೆಂದರೆ ಗುಡಿಸಲು ಹಾಕಿ ಕುಳಿತಿರುವವರ ಪೈಕಿ ಕೆಲವರಿಗೆ ಮನೆಗಳಿದ್ದರೂ ತಮಗೂ ಒಂದು ನಿವೇಶನ ಸಿಗುತ್ತದೆ ಎಂದು ಗುಡಿಸಲು ಹಾಕಿ ಕುಳಿತಿದ್ದಾರೆ. ಇದರಿಂದ ನಿಜವಾದ ನಿವೇಶನ ರಹಿತರಿಗೂ ನ್ಯಾಯ ಸಿಗುವುದಿಲ್ಲವೇ ಎನ್ನುವ ಆತಂಕವೂ ಇದೆ.