ಮೈಸೂರು (ಸೆ.01): ಎಂಟು ವರ್ಷಗಳ ಹಿಂದೆ ನಡೆದಿದ್ದ ಕೊಲೆ ಪ್ರಯತ್ನ ಪ್ರಕರಣದ ಮೂವರು ಆರೋಪಿಗಳು ಇದೀಗ ಸಿಕ್ಕಿಬಿದ್ದಿದ್ದಾರೆ.

2012ರ ಆ.14 ರಂದು ಸಂಜೆ ದೇವರಾಜ ಪೊಲೀಸ್‌ ಠಾಣೆ ವ್ಯಾಪ್ತಿಯ ದುರ್ಗಮ್ಮ ಗುಡಿ ಬೀದಿ ಕ್ರಾಸ್‌ನಲ್ಲಿ ನಡೆದು ಹೋಗುತ್ತಿದ್ದ ಟಿಬೆಟಿಯನ್‌ ವ್ಯಕ್ತಿ ತನ್‌ಜಿನ್‌ ದೆರ್‌ಗ್ಯಾಲ್‌ (23) ಎಂಬವರ ಮೇಲೆ ಡ್ರ್ಯಾಗರ್‌ನಿಂದ ಹಲ್ಲೆ ಮಾಡಿ, ಕೊಲೆಗೆ ಯತ್ನಿಸಿದ್ದ ಗಾಂಧಿನಗರದ ಅಣ್ಮಮ್ಮ ದೇವಸ್ಥಾನ ರಸ್ತೆ 2ನೇ ಕ್ರಾಸಿನ ಸಲೀಂಪಾಷ (28), ಎನ್‌.ಆರ್‌. ಮೊಹಲ್ಲಾ ಸೆಂಟ್‌ ಮೇರಿಸ್‌ ರಸ್ತೆಯ ಸಲ್ಮಾನ್‌ ಪಾಷ (29) ಹಾಗೂ ಮಹಮದ್‌ ಸೇಠ್‌ ಬ್ಲಾಕ್‌ ಹೈದರಾಲಿ ರಸ್ತೆಯ ಇಸ್ಮಾಯಿಲ್‌ ಖಾನ್‌ (29) ಬಂಧಿತ ಆರೋಪಿಗಳು.

ಈ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿತ್ತು. ಆರೋಪಿಗಳು ಪತ್ತೆಯಾಗದಿದ್ದರಿಂದ ಪ್ರಕರಣವನ್ನು ಮುಕ್ತಾಯ ಮಾಡಲಾಗಿತ್ತು.

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 1.28 ಕೋಟಿ ಮೌಲ್ಯದ ಗಾಂಜಾ ವಶ ...

ಪತತೆಯಾಗದ ಹಳೆ ಪ್ರಕರಣಗಳ ಬಗ್ಗೆ ದೇವರಾಜ ಠಾಣೆಯ ಇನ್‌ಸ್ಪೆಕ್ಟರ್‌ ಪ್ರಸನ್ನಕುಮಾರ್‌ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದು, ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ, ಬಂಧಿಸಿದ್ದಾರೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಡಾ.ಎ.ಎನ್‌. ಪ್ರಕಾಶ್‌ಗೌಡ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

ಆರೋಪಿಗಳು ತಪ್ಪೊಪ್ಪಿಕೊಂಡಿದ್ದು, ಕೃತ್ಯಕ್ಕೆ ಬಳಸಿದ್ದ ಬೈಕ್‌ ವಶಪಡಿಸಿಕೊಳ್ಳಲಾಗಿದೆ. ಕೃತ್ಯದ ನಂತರ ಆರೋಪಿಗಳು ಕೆಲಕಾಲ ಬೆಂಗಳೂರು ಹಾಗೂ ದುಬೈನಲ್ಲಿ ತಲೆಮರೆಸಿಕೊಂಡಿದ್ದರು. ಸಲೀಂ ಪಾಷನು ಎನ್‌.ಆರ್‌. ಠಾಣೆಯ ರೌಡಿ ಆಸಾಮಿ. 2012 ರಲ್ಲಿ ತನ್ನ ಪ್ರೇಯಸಿ ಮೇಲೆ ಹಲ್ಲೆ ಮಾಡಿ, ಅಪಹರಿಸಿದ್ದ. ಇದೇ ವಿಚಾರವಾಗಿ ಪ್ರೇಯಸಿಯ ಚಿಕ್ಕಪ್ಪನ ಮೇಲೆ ಹಲ್ಲೆ ಮಾಡಿ, ಕೊಲೆಗೆ ಯತ್ನಿಸಿದ್ದ. ಈತನ ವಿರುದ್ಧ ಐದು ಪ್ರಕರಣಗಳು ದಾಖಲಾಗಿವೆ.

ಡಿಸಿಪಿ ಡಾ.ಎ.ಎನ್‌. ಪ್ರಕಾಶ್‌ಗೌಡ ಅವರ ಮಾರ್ಗದರ್ಶನ, ಎಸಿಪಿ ಎಂ.ಎನ್‌. ಶಶಿಧರ್‌ ಅವರ ನೇತೃತ್ವದಲ್ಲಿ ದೇವರಾಜ ಠಾಣೆಯ ಪಿಐ ಪ್ರಸನ್ನಕುಮಾರ್‌, ಲಷ್ಕರ್‌ ಠಾಣೆ ಪಿಐ ಸುರೇಶ್‌ಕುಮಾರ್‌, ಎಸ್‌ಎ ಎಸ್‌. ರಾಜು, ಮಹಿಳಾ ಎಸ್‌ಐ ಎಂ.ಆರ್‌. ಲೀಲಾವತಿ, ಎಎಸ್‌ಐ ಉದಯಕುಮಾರ್‌, ಸಿಬ್ಬಂದಿಯವರಾದ ಸೋಮಶೆಟ್ಟಿ, ವೇಣುಗೋಪಾಲ್‌, ಸುರೇಶ್‌, ಆರ್‌. ನಂದೀಶ್‌, ಪ್ರದೀಪ್‌, ವೀರೇಶ್‌ ಬಾಗೇವಾಡಿ, ಮಂಚನಾಯಕ, ನಾಗರಾಜು, ಚಂದ್ರು, ಶಂಕರಗೌಡ ಪಾಟೀಲ್‌, ಚಾಲಕ ವಸಂತಕುಮಾರ್‌ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಈ ಪತ್ತೆ ಕಾರ್ಯವನ್ನು ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ ಶ್ಲಾಘಿಸಿ, ಬಹುಮಾ ಘೋಷಿಸಿದ್ದಾರೆ.