ಬೆಂಗಳೂರು(ಸೆ.03): ಚಿತ್ರರಂಗದಲ್ಲಿ ಗಾಂಜಾ ವ್ಯಸನಿಗಳಿದ್ದಾರೆ ಎಂಬ ಕೂಗು ಎದ್ದಿರುವ ನಡುವೆಯೇ ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ 1.28 ಕೋಟಿ ರು. ಮೌಲ್ಯದ 8 ಕೇಜಿ ಗಾಂಜಾ ಹಾಗೂ ಮರಿಜುವಾನಾ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.

ಮುಂಬೈನಲ್ಲಿ ಮಂಗಳವಾರ ಗಾಂಜಾ ಪೂರೈಕೆ ಜಾಲದಲ್ಲಿ ಇದ್ದ ಪೆಡ್ಲರ್‌ ಒಬ್ಬ ಸಿಕ್ಕಿಬಿದ್ದಿದ್ದ. ಈತ ಬೆಂಗಳೂರಿನ ಕೆಲವು ಸೆಲೆಬ್ರಿಟಿಗಳಿಗೆ ಮಾದಕ ವಸ್ತು ಪೂರೈಸುತ್ತಿದ್ದ ಎಂದು ಗೊತ್ತಾಗಿತ್ತು. ಈತ ವಿಚಾರಣೆ ಸಂದರ್ಭದಲ್ಲಿ ಬೆಂಗಳೂರಿಗೆ ವಿದೇಶದಿಂದ ಕೊರಿಯರ್‌ ಮೂಲಕ ಗಾಂಜಾ ಹಾಗೂ ಮರಿಜುವಾನಾ ಸಾಗಣೆ ಆಗುತ್ತಿದೆ ಎಂದು ಬಾಯಿಬಿಟ್ಟಿದ್ದ.

ಡ್ರಗ್ಸ್ ದಂಧೆ: ಸ್ಟಾರ್‌ ದಂಪತಿ, ತ್ರಿಭಾಷಾ ತಾರೆ, ಮೈಸೂರಲ್ಲಿ ಫಾರ್ಮ್ ಹೌಸ್ ಇರೋ ನಟ ಭಾಗಿ!

ಈತ ನೀಡಿದ ಮಾಹಿತಿ ಆಧರಿಸಿ ಕೆಂಪೇಗೌಡ ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು ಕೊರಿಯರ್‌ ವಿಭಾಗದಲ್ಲಿ ತಪಾಸಣೆ ನಡೆಸಿದಾಗ 1.28 ಕೋಟಿ ಮೌಲ್ಯದ 8 ಕೇಜಿ ಗಾಂಜಾ ಹಾಗೂ ಮರಿಜುವಾನಾ ಪತ್ತೆಯಾಗಿದೆ. ಇದನ್ನು 4 ಕನ್‌ಸೈನ್ಮೆಂಟ್‌ಗಳಲ್ಲಿ ಎಲೆಕ್ಟ್ರಾನಿಕ್‌ ಉಪಕರಣಗಳಲ್ಲಿ ಬಚ್ಚಿಟ್ಟು ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ಕೂಡ ಲಭಿಸಿದೆ.