ಮೂಲ್ಕಿ(ಜು.11): ಪ್ರಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್‌ ತಂಡದಲ್ಲಿದ್ದ ಯುವ ಜಾದೂಗಾರ ಯತೀಶ್‌ ಸಾಲ್ಯಾನ್‌ (35) ಮಹಾ​ಮಾರಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಹೊಸಬೆಟ್ಟು ನಿವಾಸಿಯಾಗಿದ್ದ ಅವರು ನಾಲ್ಕು ದಿನಗಳ ಹಿಂದೆ ಶ್ವಾಸಕೋಶದ ತೊಂದರೆಯಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಬಳಿಕ ಯತೀಶ್‌ ಕುಟುಂಬದವರು ಅವರನ್ನು ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಅವ​ರು ಮೃತಪಟ್ಟರು ಎಂದು ಕುಟುಂಬದ ಮೂಲ​ಗಳು ತಿಳಿಸಿವೆ.

ಕೊರೋನಾ ಓಡ್ಸೋಕೆ ಮ್ಯಾಜಿಕ್ ಮಾಡಿದ್ರು ಕುದ್ರೋಳಿ ಗಣೇಶ್‌, ಜನರಲ್ಲಿ ಜಾಗೃತಿ

ಮಾರ್ಗ​ಸೂಚಿಯ ಅನು​ಸಾರ ಮರಣದ ಬಳಿಕ ಸ್ವಾಬ್‌ ಟೆಸ್ಟ್‌ ನಡೆ​ಸ​ಲಾ​ಗಿತ್ತು. ಅದರ ವರದಿ ಬಂದಿದ್ದು ಕೊರೋನಾ ಸೋಂಕು ತಗಲಿರುವುದು ಸಾಬೀತಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತರಾಗಿರುವ ಕುದ್ರೋಳಿ ಗಣೇಶ್‌ ಅವರ ತಂಡದಲ್ಲಿ ಪಳಗಿದ್ದ ಯತೀಶ್‌ ಅನಂತರ ವಿದೇಶಕ್ಕೆ ತೆರಳಿ ಉದ್ಯೋಗದ ಜತೆ ಕ್ಲೋಸ್‌ ಅಪ್‌ ಜಾದೂ ಕಾರ್ಯಕ್ರಮ ನಡೆಸುತ್ತಿದ್ದರು. ಈ ಕಲೆಯಲ್ಲಿ ಅವರು ದೊಡ್ಡ ಮಟ್ಟದ ಪ್ರಖ್ಯಾ​ತಿ​ಯನ್ನೂ ಪಡೆ​ದಿ​ದ್ದರು ಎಂದು ಅವರ ತಂಡದ ಇತರ ಸದಸ್ಯರು ತಿಳಿ​ಸಿ​ದ್ದಾರೆ.

ಇತ್ತೀಚೆಗೆ ಸ್ವದೇಶಕ್ಕೆ ಮರಳಿದ ಇವರು ಇಲ್ಲಿ ಉದ್ಯೋಗ ಮಾಡುತ್ತಿದ್ದು ಅದರ ಜತೆಗೆ ಜಾದೂವನ್ನು ಹವ್ಯಾಸವನ್ನಾಗಿ ಮಾಡಿಕೊಂಡಿದ್ದರು. ಮೃತರು ಪತ್ನಿ, ಮಗುವನ್ನು ಅಗ​ಲಿ​ದ್ದಾರೆ. ಯತೀಶ್‌ ಸಾವಿಗೆ ಹವ್ಯಾಸಿ ಜಾದೂಗಾರರು, ಅಭಿ​ಮಾ​ನಿ​ಗಳು ಸಂತಾಪ ಸೂಚಿಸಿದ್ದಾರೆ.