7th Pay Commission : ಸರ್ಕಾರದ ಭರವಸೆ ತೃಪ್ತಿ ತಂದಿಲ್ಲ; ಹೋರಾಟ ಜೀವಂತ : ಬಿ.ಪಾಲಾಕ್ಷಿ

ರಾಜ್ಯ ಸರ್ಕಾರಿ ನೌಕರರಿಗೆ ಶೇ.17 ಮಧ್ಯಂತರ ಭತ್ಯೆ ನೀಡಿ, ಸಮಿತಿ ರಚಿಸುವ ಮೂಲಕ ಹಳೆ ಮಾದರಿ ಪಿಂಚಣಿ ಜಾರಿಗೆ ಇನ್ನು 2 ತಿಂಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿದ್ದರಿಂದ ಅನಿರ್ದಿಷ್ಟಾವಧಿ ಮುಷ್ಕರ ಹಿಂಪಡೆದಿದ್ದರೂ ಭರವಸೆ ಈಡೇರುವವರೆಗೂ ಹೋರಾಟ ಜೀವಂತವಿರಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಾಲಾಕ್ಷಿ ತಿಳಿಸಿದರು.

7th pay commission issue  governments promise did not satisfy and Struggle alive says B. Palakshi rav

ದಾವಣಗೆರೆ (ಮಾ.2) : ರಾಜ್ಯ ಸರ್ಕಾರಿ ನೌಕರರಿಗೆ ಶೇ.17 ಮಧ್ಯಂತರ ಭತ್ಯೆ ನೀಡಿ, ಸಮಿತಿ ರಚಿಸುವ ಮೂಲಕ ಹಳೆ ಮಾದರಿ ಪಿಂಚಣಿ ಜಾರಿಗೆ ಇನ್ನು 2 ತಿಂಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿದ್ದರಿಂದ ಅನಿರ್ದಿಷ್ಟಾವಧಿ ಮುಷ್ಕರ ಹಿಂಪಡೆದಿದ್ದರೂ ಭರವಸೆ ಈಡೇರುವವರೆಗೂ ಹೋರಾಟ ಜೀವಂತವಿರಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಾಲಾಕ್ಷಿ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸರ್ಕಾರವು ಬೇಡಿಕೆಗಳ ಈಡೇರಿಸುವವರೆಗೂ ಹೋರಾಟವು ಜೀವಂತವಾಗಿರಲಿದೆ. ಸರ್ಕಾರವು ಈಗ ನೀಡಿರುವ ಭರವಸೆ ನಮಗಿನ್ನೂ ತೃಪ್ತಿ ತಂದಿಲ್ಲ. ಇನ್ನೂ 2 ತಿಂಗಳ ಕಾಲ ಕಾದು ನೋಡುತ್ತೇವೆ ಎಂದರು. ಮುಷ್ಕರದಿಂದಾಗಿ ವಿದ್ಯಾರ್ಥಿಗಳು, ಜನ ಸಾಮಾನ್ಯರಿಗೆ, ರೋಗಿಗಳಿಗೆ, ಗ್ರಾಮೀಣರಿಗೆ, ಜನ ರೈತರಿಗೆ ತೊಂದರೆಯಾದ ಬಗ್ಗೆ ನಮಗೂ ವಿಷಾದವಿದೆ. ಆದರೆ,7-8 ವರ್ಷಗಳಿಂದ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸುತ್ತಿದ್ದರೂ ಅಧಿಕಾರಕ್ಕೆ ಬಂದ ಸರ್ಕಾರಗಳು ಜಾಣ ಕಿವುಡು ಪ್ರದರ್ಶನ ಮಾಡಿದ್ದರಿಂದ ಅನಿವಾರ್ಯವಾಗಿ ನಾವು ಅನಿರ್ದಿಷ್ಟಾವಧಿ ಮುಷ್ಕರದ ಹಾದಿ ಹಿಡಿಯಬೇಕಾಯಿತು ಎಂದು ಹೇಳಿದರು.

ಶೇ.17ರಷ್ಟು ವೇತನ ಹೆಚ್ಚಳ ಮಾಡಿ ಸರಕಾರ ಅಧಿಕೃತ ಆದೇಶ, ಮುಷ್ಕರ ವಾಪಸ್

ಸಂಘದ ಜಿಲ್ಲಾ ಕಾರ್ಯದರ್ಶಿ ಗುರುಮೂರ್ತಿ, ತಿಪ್ಪೇಸ್ವಾಮಿ, ಡಾ.ಉಮೇಶ, ಪರಶುರಾಮಪ್ಪ, ರಾಮಪ್ಪ, ಹಾಲಪ್ಪ, ಮುಬಾರಕ್‌ ಅಲಿ, ಜಗದೀಶ, ಶ್ರೀನಿವಾಸ ಇತರರು ಇದ್ದರು.

ಸರ್ಕಾರವು ಸಮಿತಿ ರಚಿಸಿ, ಹಳೆ ಪಿಂಚಣಿ ಯೋಜನೆ ಜಾರಿಗೆ ತರುವ ಬಗ್ಗೆ ಇನ್ನು 2 ತಿಂಗಳ ಒಳಗಾಗಿ ಅಧ್ಯಯನ ನಡೆಸಿ, ಜಾರಿಗೊಳಿಸುವುದಾಗಿ ಭರವಸೆ ನೀಡಿದೆ. ಹಾಗೊ ಂದು ವೇಳೆ ಸರ್ಕಾರವು ಮಾತು ತಪ್ಪಿದರೆ, ಉಗ್ರ ಹೋರಾಟಕ್ಕಿಳಿಯುತ್ತೇವೆಂಬ ಎಚ್ಚರಿಕೆಯನ್ನೂ ಸಂಘದಿಂದ ಸರ್ಕಾರಕ್ಕೆ ನೀಡಲಾಗಿದೆ. ಅನಿರ್ದಿಷ್ಟಾವಧಿ ಮುಷ್ಕರ ಹಿಂಪಡೆದಿದ್ದರೂ, ನಮ್ಮ ಭರವಸೆ ಈಡೇರಿಸುವವರೆಗೂ ಹೋರಾಟ ಜೀವಂತವಾಗಿಯೇ ಇರುತ್ತದೆ.

ಬಿ.ಪಾಲಾಕ್ಷಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ

 ಸರ್ಕಾರಿ ನೌಕರರ ಮುಷ್ಕರ; ಜನರು ಪರದಾಟ

ಏಳನೇ ವೇತನ ಆಯೋಗ ಹಾಗೂ ಹಳೆ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ರಾಜ್ಯವ್ಯಾಪಿ ಕರೆಯ ಮೇರೆಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ರಾಜ್ಯ ಸರ್ಕಾರಿ ನೌಕರರು ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಮುಷ್ಕರ ಘೋಷಣೆಯಿಂದ ಸಾಮಾನ್ಯ ಜನರಿಗೆ ಅದರ ಬಿಸಿ ತಟ್ಟಿತು.

ನಗರ, ಜಿಲ್ಲಾದ್ಯಂತ ಶಿಕ್ಷಣ, ಆರೋಗ್ಯ, ಕಂದಾಯ, ಗ್ರಾಮೀಣಾಭಿವೃದ್ಧಿ ಸೇರಿ ಬಹುತೇಕ ಎಲ್ಲಾ ಇಲಾಖೆ ಅಧಿಕಾರಿ, ನೌಕರರು ಅನಿರ್ದಿಷ್ಟಾವಧಿ ಮುಷ್ಕರದ ಹಿನ್ನೆಲೆಯಲ್ಲಿ ಕೆಲಸ, ಕಾರ್ಯಗಳಿಂದ ದೂರ ಉಳಿದ ಬೆನ್ನಲ್ಲೇ ಬೆಳಗಿನಿಂದಲೇ ಸಾರ್ವಜನಿಕರ ಸೇವೆ, ಸರ್ಕಾರಿ ಕೆಲಸ, ಕಾರ್ಯಗಳಿದೆ ತೀವ್ರ ಅಡ್ಡಿಯಾಯಿತು. ನಗರ, ತಾಲೂಕು, ಗ್ರಾಮೀಣ ಪ್ರದೇಶದ ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಳರೋಗಿಗಳ ಹೊರತುಪಡಿಸಿ, ಹೊರ ರೋಗಿಗಳ ಚಿಕಿತ್ಸೆಗೆ ತೀವ್ರ ತೊಂದರೆಯಾಯಿತು. ಶಾಲೆ, ಕಾಲೇಜುಗಳು, ವಿಶ್ವ ವಿದ್ಯಾನಿಲಯ, ತಾಂತ್ರಿಕ ಕಾಲೇಜುಗಳ ಸಿಬ್ಬಂದಿ, ಪಾಲಿಕೆ ಸೇರಿ ಸ್ಥಳೀಯ ಸಂಸ್ಥೆಗಳು, ಜಿಪಂ, ತಾಪಂ, ಗ್ರಾಪಂ ಅಧಿಕಾರಿ, ನೌಕರರು, ಶಿಕ್ಷಣ ಇಲಾಖೆ ಅಧಿಕಾರಿ, ಸಿಬ್ಬಂದಿ ಮುಷ್ಕರಕ್ಕೆ ಸಾಥ್‌ ನೀಡಿದರು.

ವೇತನ ಪರಿಷ್ಕರಣೆ ಹಾಗೂ ಹಳೆ ಪಿಂಚಣಿ ಯೋಜನೆಯನ್ನು ಮತ್ತೆ ಜಾರಿಗೊಳಿಸಬೇಕೆಂಬ ಪ್ರಮುಖ ಎರಡು ಬೇಡಿಕೆಗಳನ್ನು ಮುಂದಿಟ್ಟು ಅನಿರ್ದಿಷ್ಟಾವಧಿ ಮುಷ್ಕರ ಕ್ಕೆ ಮುಂದಾಗಿದ್ದ ಸರ್ಕಾರಿ ನೌಕರರು ಸಂಘದ ಕೇಂದ್ರ ಸಮಿತಿ ಜೊತೆಗೆ ಸರ್ಕಾರ ಮಾತುಕತೆ, ಸರ್ಕಾರದ ಭರವಸೆ ಮೇರೆಗೆ ತಾತ್ಕಾಲಿಕವಾಗಿ ಮುಷ್ಕರ ಹಿಂಪಡೆದಿದ್ದರಿಂದ ಮಧ್ಯಾಹ್ನದ ನಂತರ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿತಾದರೂ ಮುಷ್ಕರದ ವಿಚಾರ ತಿಳಿದು ಬಹುತೇಕರು ಕಚೇರಿಯತ್ತ ಸುಳಿಯಲಿಲ್ಲ.

ಮುಷ್ಕರದ ಹಿನ್ನೆಲೆಯಲ್ಲಿ ಸರ್ಕಾರಿ ಅಧಿಕಾರಿ, ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗಿ, ಪ್ರತಿಭಟನೆ ನಡೆಸಿದರು. ಬೆಳಿಗ್ಗೆಯಿಂದಲೇ ವಿವಿಧ ಇಲಾಖೆಗಳ ನೌಕರರ ಸಂಘಗಳು ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಸರಣಿ ಸಭೆ ನಡೆಸಿ, ಸಂಜೆ ಕೇಂದ್ರ ಸಮಿತಿ ನಿರ್ಧಾರದಂತೆ ತಾತ್ಕಾಲಿಕವಾಗಿ ಹೋರಾಟ ಹಿಂಪಡೆಯಲು ನಿರ್ಧರಿಸಿದರೂ, ಇನ್ನು 2 ತಿಂಗಳವರೆಗೆ ಕಾದು ನೋಡುವುದಾಗಿ, ಹೋರಾಟ ಮುಂದುವರಿಯುತ್ತದೆಂಬ ಸೂಚ್ಯ ಎಚ್ಚರಿಕೆ ಸಂದೇಶ ರವಾನಿಸುವ ಮೂಲಕ ಮೊದಲ ದಿನವೇ ಮುಷ್ಕರಕ್ಕೆ ಮುಕ್ತಿ ಹಾಡಿದರು.

7ನೇ ವೇತನ ಆಯೋಗದ ಮಧ್ಯಂತರ ವರದಿಯಂತೆ ವೇತನ, ಭತ್ಯೆ ಪರಿಷ್ಕರಣೆಗಾಗಿ ಬೀದಿಗಿಳಿದು ಹೋರಾಡಿದ ನೌಕರರು ಸಂಜೆ ಹೊತ್ತಿಗೆ ಸರ್ಕಾರದ ಭರವಸೆಯಿಂದ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆದರು. ಬಹುತೇಕ ಎಲ್ಲಾ ಇಲಾಖೆಗಳ ಅಧಿಕಾರಿಗಳು, ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದರಿಂದ ಸರ್ಕಾರಿ ಸೇವೆಗಳಲ್ಲಿ ವ್ಯತ್ಯಯವಾಗಿತ್ತು. ಬೆಳಿಗ್ಗೆಯಿಂದಲೇ ಸರ್ಕಾರಿ ನೌಕರರು ತುರ್ತು ಸೇವೆ ಹೊರತುಪಡಿಸಿ, ಉಳಿದೆಲ್ಲಾ ಕೆಲಸ, ಕಾರ್ಯ ಸ್ಥಗಿತಗೊಳಿಸಿದ್ದರು.

ಸರ್ಕಾರಿ ನೌಕರರ ಮುಷ್ಕರದ ಬಗ್ಗೆ ಅರಿವಿಲ್ಲದೇ ಬಂದ ಸಾರ್ವಜನಿಕರು, ಹಿರಿಯ ನಾಗರಿಕರು, ವಿಕಲಚೇತನರು, ಅನಕ್ಷರಸ್ಥರು, ಗ್ರಾಮೀಣರು, ರೈತರು ತೀವ್ರ ತೊಂದರೆ ಅನುಭವಿಸಿ, ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ಬೇಸರಿಸಿದರು. ಆಸ್ಪತ್ರೆಗಳಲ್ಲೂ ಹೊರ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗದೇ ಪರದಾಡಬೇಕಾಯಿತು.

7th Pay Commission: ಮಾರ್ಚ್ 1ರಿಂದ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರು!

ಕೆಲವರಿಂದ ಕರ್ತವ್ಯ, ಹಲವರಿಂದ ಮುಷ್ಕರ

ತುರ್ತು ಸೇವೆಯಲ್ಲಿ ತೊಡಗಿದ್ದ ಅಧಿಕಾರಿ, ನೌಕರರು ಮುಷ್ಕರದ ಭಾಗವಾಗಿ ತಮ್ಮ ತೋಳಿಗೆ ಕಪ್ಪು ಪಟ್ಟಿಧರಿಸಿ, ಕರ್ತವ್ಯಕ್ಕೆ ಹಾಜರಾಗಿದ್ದರು. ಸಂಘದ ಪದಾಧಿಕಾರಿಗಳು ಪ್ರತಿ ಇಲಾಖೆಗಳ ಕಚೇರಿಗೆ ತೆರಳಿ, ಕರ್ತವ್ಯಕ್ಕೆ ಹಾಜರಾದ ಅಧಿಕಾರಿ, ನೌಕರರಿಗೆ ಮುಷ್ಕರದಲ್ಲಿ ಪಾಲ್ಗೊಳ್ಳುವಂತೆ ಮನವೊಲಿಸುತ್ತಿದ್ದುದು ಕಂಡು ಬಂದಿತು. ಮಹಾನಗರ ಪಾಲಿಕೆ, ಜಿಪಂ, ತಾಪಂ, ಎಸಿ ಕಚೇರಿ, ತಹಸೀಲ್ದಾರ್‌ ಕಚೇರಿ, ದೂಡಾ, ಆರೋಗ್ಯ ಇಲಾಖೆ, ಆಹಾರ ಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ, ಕೃಷಿ ಮತ್ತು ತೋಟಗಾರಿಕೆ, ಪಶು ಸಂಗೋಪನಾ ಇಲಾಖೆ ಸೇರಿದಂತೆ ಬಹುತೇಕ ಎಲ್ಲಾ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಮುಷ್ಕರದಲ್ಲಿದ್ದರು.

Latest Videos
Follow Us:
Download App:
  • android
  • ios