77ನೇ ಸ್ವಾತಂತ್ರ್ಯೋತ್ಸವ: ವಿಧುರಾಶ್ವತ್ಥ, ಕಾರ್ಗಿಲ್ ತ್ಯಾಗ ಕತೆ ಹೇಳಿದ ಮಕ್ಕಳು
ತ್ರಿವರ್ಣ ಧ್ವಜ ಕೈಯಲ್ಲಿ ಹಿಡಿದು ಕೇಸರಿ, ಬಿಸಿ, ಹಸಿರು ಬಣ್ಣದ ಬಟ್ಟೆಧರಿಸಿ, ಕೆನ್ನೆಯ ಮೇಲೆ ತ್ರಿವರ್ಣ ಧ್ವಜದ ಬಣ್ಣ ಬಳಿದುಕೊಂಡ ಚಿಣ್ಣರು ಸಂಭ್ರಮಿಸಿದರು.
ಬೆಂಗಳೂರು (ಆ.16): ದಕ್ಷಿಣದ ಜಲಿಯನ್ ವಾಲಾಬಾಗ್ ಎಂದು ಕರೆಯಲ್ಪಡುವ ವಿಧುರಾಶ್ವತ್ಥದಲ್ಲಿ 1938ರ ಧ್ವಜ ಸತ್ಯಾಗ್ರಹದ ವೇಳೆ ನಡೆದ ಬ್ರಿಟಿಷರ ‘ನರಮೇಧ’ ಮರು ದರ್ಶನ, 35 ವಿಶ್ವ ದಾಖಲೆ ಬರೆದ ಖ್ಯಾತ ಮೋಟರ್ ಸೈಕಲ್ ತಂಡದಿಂದ ಮೈನವಿರೇಳಿಸುವ ಮೋಟರ್ ಸೈಕಲ್ ಸಾಹಸ, ಕುದುರೆ ಏರಿ ಸಾಹಸ ಪ್ರದರ್ಶನ, ಕೇರಳದ ಕಲಾ ಪ್ರದರ್ಶನದ ಮೂಲಕ ಬೆರಗುಗೊಳಿಸಿದ ಕಮಾಂಡೋಗಳು... ಇದು, ಮಂಗಳವಾರ ಬೆಂಗಳೂರಿನ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಪ್ರಮುಖ ಹೈಲೆಟ್ಸ್‌ಗಳು... ತ್ರಿವರ್ಣ ಧ್ವಜ ಕೈಯಲ್ಲಿ ಹಿಡಿದು ಕೇಸರಿ, ಬಿಸಿ, ಹಸಿರು ಬಣ್ಣದ ಬಟ್ಟೆಧರಿಸಿ, ಕೆನ್ನೆಯ ಮೇಲೆ ತ್ರಿವರ್ಣ ಧ್ವಜದ ಬಣ್ಣ ಬಳಿದುಕೊಂಡ ಚಿಣ್ಣರು ಸಂಭ್ರಮಿಸಿದರು.
ವಂದೇ ಮಾತರಂ, ಭಾರತ್ ಮಾತಾಕಿ ಜೈ ಘೋಷಣೆಗಳು ಮುಗಿಲು ಮುಟ್ಟಿದ್ದವು. ಬೆಳಗ್ಗೆ 8.45ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈದಾನದಕ್ಕೆ ಆಗಮಿಸಿ 8.59ಕ್ಕೆ ಧ್ವಜಾರೋಹಣ ನೆರವೇರಿಸಿದರು. ಬಳಿಕ ತೆರೆದ ಜೀಪಿನಲ್ಲಿ ಪೆರೇಡ್ ಪರಿವೀಕ್ಷಣೆ ಮತ್ತು ಗೌರವ ರಕ್ಷೆ ಸ್ವೀಕರಿಸಿ ನಾಡಿನ ಜನತೆಗೆ 77ನೇ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು. ಬಳಿಕ ಕೆಎಸ್‌ಆರ್‌ಪಿ, ಸಿಆರ್‌ಪಿಎಫ್, ಬಿಎಸ್‌ಎಫ್ ಸೇರಿದಂತೆ ವಿವಿಧ ಇಲಾಖೆ ಸೇರಿದಂತೆ 38 ತುಕಡಿಗಳಿಂದ ಪಥ ಸಂಚಲನ ನಡೆಯಿತು. ವಿವಿಧ ಶಾಲೆಯ 1,500 ವಿದ್ಯಾರ್ಥಿಗಳಿಂದ ದೇಶಭಕ್ತಿ ಕಿಚ್ಚು ಹೊತ್ತಿಸಿದ ಎರಡು ನೃತ್ಯ ರೂಪಕ ಪ್ರರ್ದಶಿಸಿದರು.
ಮುಂದಿನ ಶೈಕ್ಷಣಿಕ ವರ್ಷಕ್ಕೆ ಎನ್‌ಇಪಿ ರದ್ದು: ಸಿಎಂ ಸಿದ್ದರಾಮಯ್ಯ
ಈ ಪೈಕಿ ನಗರದ ಹೆರೋಹಳ್ಳಿಯ ಬಿಬಿಎಂಪಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ 700 ವಿದ್ಯಾರ್ಥಿಗಳು ಮಾಲತೇಶ್ ಬಡಿಗೇರ್ ಹಾಗೂ ಛಾಯ ಭಾರ್ಗವಿ ಅವರ ನಿರ್ದೇಶನದಲ್ಲಿ ದಕ್ಷಿಣದ ಜಲಿಯನ್ ವಾಲಾಬಾಗ್ ಎಂದು ಕರೆಯಲ್ಪಡುವ ಚಿಕ್ಕಬಳ್ಳಾಪುರ ಜಿಲ್ಲೆಯ ವಿಧುರಾಶ್ವತ್ಥದಲ್ಲಿ 1938ರ ಧ್ವಜ ಸತ್ಯಾಗ್ರಹದ ವೇಳೆ ನಡೆದ ಬ್ರಿಟಿಷರ ‘ನರಮೇಧ’ದ ‘ವೀರ ಭೂಮಿ ವಿಧುರಾಶ್ವತ್ಥ ಧ್ವಜ ಸತ್ಯಾಗ್ರಹ’ ನೃತ್ಯರೂಪಕ ಕರ್ನಾಟಕದ ಸ್ವಾತಂತ್ರ್ಯ ಹೋರಾಟದ ಕಿಚ್ಚಿನ ತೀವ್ರತೆಯನ್ನು ಸಾರಿತು.
ದೇಶ ಭಕ್ತಿ ಇಮ್ಮಡಿಗೊಳಿಸಿದ ವೀರನಮನ: ಬೆಂಗಳೂರಿನ ಜೆ.ಪಿ.ನಗರದ ಸಾರಕ್ಕಿಯ ಕರ್ನಾಟಕ ಪಬ್ಲಿಕ್ ಶಾಲೆಯ 750 ವಿದ್ಯಾರ್ಥಿಗಳು ದೇಶದ ಕಿರಿಟ ಪ್ರಾಯವಾದ ಕಾರ್ಗಿಲ್ ಪ್ರದೇಶವನ್ನು ಶತ್ರು ರಾಷ್ಟ್ರ ಆಕ್ರಮಣ ಮಾಡಿಕೊಂಡ ಸಂದರ್ಭದಲ್ಲಿ ಭಾರತೀಯ ಯೋಧರು ದಿಟ್ಟವಾಗಿ ಹೋರಾಟ ನಡೆಸಿ ಹುತಾತ್ಮರಾದ ಸೈನಿಕರ ತ್ಯಾಗ, ಬಲಿದಾನದ ಜೀವನದ ಬಗೆಗಿನ ‘ಯೋಧರಿಗೆ ವೀರನಮನ’ ನೃತ್ಯ ರೂಪಕ ಎಲ್ಲ ಮೆಚ್ಚುಗೆಗೆ ಪಾತ್ರವಾಗುವ ಮೂಲಕ ದೇಶ ಭಕ್ತಿಯನ್ನು ಇಮ್ಮಡಿಗೊಳಿಸಿತ್ತು.
ಶಾಲಾ ಮಕ್ಕಳಿಂದ ರೋಪ್ ಸ್ಕಿಪಿಂಗ್: ಬಿಳಿಯ ಬಣ್ಣದ ಉಡುಪು ಧರಿಸಿದ ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಕಿತ್ತೂರು ರಾಣಿ ಚನ್ನಮ್ಮ ಶಿಕ್ಷಣ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯ 50 ಬಾಲಕ- ಬಾಲಕಿಯರು ಹಗ್ಗ ಹಿಡಿದು ವಿವಿಧ ಬಗೆಯ ಸ್ಕಿಪಿಂಗ್ ಪ್ರದರ್ಶನ ನೀಡಿದರು. ಇದೊಂದು ಅದ್ಬುತ ಮತ್ತು ಹೊಸ ಬಗೆಯ ಅನುಭವವನ್ನು ನೋಡುಗರಿಗೆ ನೀಡಿತು.
ಟೆಂಟ್ ಪೆಗ್ಗಿಂಗ್‌ಗೆ ಕದರ್: ಎಎಸ್‌ಸಿ ಸೆಂಟರ್ ತಂಡದಿಂದ ಪ್ರದರ್ಶನಗೊಂಡ ಕುದುರೆ ರೇಸ್ ಮಾದರಿಯ ‘ಟೆಂಟ್ ಪೆಗ್ಗಿಂಗ್’ ಕದರ್ ಜೋರಾಗಿತ್ತು. ಶರವೇಗದಲ್ಲಿ ಕುದುರೆ ಓಡಿಸುತ್ತಿದ್ದ ಜಾಕಿ ನೆಲದ ಮೇಲೆ ನಾಟಿದ್ದ ಬಾವುಟವನ್ನು ಎತ್ತಿಕೊಂಡಿದ್ದು, ಲಯ ಬದ್ಧವಾಗಿ ಕುದುರೆ ಓಡಿಸಿದ್ದು ಎಲ್ಲ ಮೆಚ್ಚುಗೆಗೆ ಪಾತ್ರವಾಯಿತು. ಎಇಜಿ ಕೇಂದ್ರದ ಯೋಧರು ಕೇರಳದ ಚಂಡೆಯ ಹಿನ್ನೆಲೆಯ ಧ್ವನಿಯಲ್ಲಿ ಕತ್ತಿ, ಗುರಾಣಿ ಹಿಡಿದು ಪಟ್ಟುಗಳನ್ನು ಪ್ರದರ್ಶಿಸುವ ಮೂಲಕ ನೆರೆದಿದ್ದವರು ರೋಮಾಂಚನಗೊಳಿಸಿದರು. ಚಂಡೆಯ ತಾಳಕ್ಕೆ ತಕ್ಕಂತೆ ಕತ್ತಿ, ಚಾಕು ವರಸೆಗಳನ್ನು ಪ್ರದರ್ಶಿಸಿ ಸೆಣೆಸುತ್ತಾ ಕಾರ್ಯಕ್ರಮವನ್ನು ರೋಚಕಗೊಳಿಸಿದರು.
ಟೋರ್ನಾಡಸ್ ಬೈಕ್ ಝಲಕ್: 35 ವಿಶ್ವ ದಾಖಲೆ ನಿರ್ಮಿಸಿದ ದ ಆರ್ಮಿ ಸವೀರ್‍ಸ್ ಕಾಫ್ಸ್‌ರ್‍ನ ಎಎಸ್‌ಸಿ ಟೋರ್ನಾಡಸ್ ಮೋಟಾರು ಸೈಕಲ್ ತಂಡದ ಪ್ರದರ್ಶನವು ಮೈನವಿರೇಳಿಸುವಂತಿತ್ತು. 24 ಸದಸ್ಯರ ಮೋಟಾರ್ ಸೈಕಲಿಸ್ಟ್ ತಂಡ ಬೆಂಕಿ ಹಂಚಿದ್ದ ರಿಂಗ್‌ನಲ್ಲಿ ಬೈಕ್ ಚಲಾಯಿಸಿ ಪ್ರೇಕ್ಷಕರು ಅದ್ಭುತ ಎಂದು ಉದ್ಘರಿಸುವಂತೆ ಮಾಡಿತು. ಇದರ ಜತೆಗೆ ಸರ್ಕಲ್, ಫಿಶ್, ಲೋಟಸ್, ಪಿರಮಿಡ್, ಕ್ರಿಸ್ ಕ್ರಾಸ್ ಸಾಹಸಗಳನ್ನು ಪ್ರದರ್ಶಿಸಿದರು.
ಪಥ ಸಂಚಲನದಲ್ಲಿ ಬಿಎಸ್‌ಎಫ್ ಪ್ರಥಮ: ಗ್ರೂಪ್-1 ವಿಭಾಗದಲ್ಲಿ ಬಿಎಸ್‌ಎಫ್ ತಂಡಕ್ಕೆ ಪ್ರಥಮ ಬಹುಮಾನ ಲಭಿಸಿದ್ದು, ಸಿಆರ್‌ಪಿಎಫ್ (ಮಹಿಳಾ) ತಂಡಕ್ಕೆ ದ್ವಿತೀಯ ಹಾಗೂ ಕೆಎಸ್‌ಆರ್‌ಪಿ ತಂಡಕ್ಕೆ ತೃತೀಯ ಬಹುಮಾನ ಪಡೆದಿದೆ. ಇದೇ ಕ್ರಮವಾಗಿ ಗ್ರೂಪ್-2 ವಿಭಾಗದಲ್ಲಿ ಎನ್‌ಸಿಸಿ, ಅಗ್ನಿ ಶಾಮಕ ದಳ, ಟ್ರಾಫಿಕ್ ವಾರ್ಡನ್. ಗ್ರೂಪ್-3: ಭಾರತ್ ಸೇವಾದಳ, ಸಿವಿಲ್ ಡಿಫೆನ್ಸ್, ಭಾರತ್ ಸ್ಕೌಟ್ ಮತ್ತು ಗೈಡ್‌್ಸ. ಗ್ರೂಪ್-4: ರಾಷ್ಟ್ರೀಯ ಮಿಲಿಟರಿ ಶಾಲೆ, ಆರ್.ವಿ.ಪಬ್ಲಿಕ್ ಶಾಲೆ ಗ್ರೂಪ್-5: ಪ್ರೆಸಿಡೆನ್ಸಿ ಶಾಲೆ, ಪೊಲೀಸ್ ಪಬ್ಲಿಕ್ ಶಾಲೆ, ಚೈತನ್ಯ ಶಾಲೆ. ಗ್ರೂಪ್-6: ಲಿಟ್ಲ್ ಫ್ಲವರ್ ಪಬ್ಲಿಕ್ ಸ್ಕೂಲ್, ಫ್ಲೇರೆನ್ಸ್ ಪಬ್ಲಿಕ್ ಸ್ಕೂಲ್, ಗ್ರೂಪ್-7: ಪೊಲೀಸ್ ಪಬ್ಲಿಕ್ ಶಾಲೆ, ಪ್ರೆಸಿಡೆನ್ಸಿ ಶಾಲೆ ಪ್ರಶಸ್ತಿ ಭಾಜನವಾಗಿದೆ.
ಕಾವೇರಿ ನೀರಿಗಾಗಿ ತಮಿಳುನಾಡು ಕ್ಯಾತೆ: ರಾಜ್ಯದ ರೈತರ ಹಿತ ಕಾಯುವಂತೆ ಸಿಎಂಗೆ ಬೊಮ್ಮಾಯಿ ಪತ್ರ
ಬಿಬಿಎಂಪಿ ಕಾಲೇಜಿಗೆ ಪ್ರಥಮ ಬಹುಮಾನ: ‘ವೀರ ಭೂಮಿ ವಿಧುರಾಶ್ವತ್ಥ ಧ್ವಜ ಸತ್ಯಾಗ್ರಹ’ ಕುರಿತು ನೃತ್ಯ ರೂಪಕ ಪ್ರದರ್ಶಿಸಿದ ಹೇರೋಹಳ್ಳಿಯ ಬಿಬಿಎಂಪಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ 77ನೇ ಸ್ವಾತಂತ್ರ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ವಿಭಾಗದಲ್ಲಿ ಪ್ರಥಮ ಬಹುಮಾನ ಲಭಿಸಿದೆ. ‘ಯೋಧರಿಗೆ ವೀರನಮನ’ ನೃತ್ಯ ರೂಪಕ ಪ್ರದರ್ಶಿಸಿದ ಸಾರಕ್ಕಿಯ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಗೆ ದ್ವಿತೀಯ ಬಹುಮಾನ ಹಾಗೂ ಬೈಲಹೊಂಗಲದ ಕಿತ್ತೂರು ರಾಣಿ ಚನ್ನಮ್ಮ ಶಿಕ್ಷಣ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ರೋಪ್ ಸ್ಕಿಪಿಂಗ್ ಪ್ರದರ್ಶನಕ್ಕೆ ತೃತೀಯ ಬಹುಮಾನ ಲಭಿಸಿದೆ.
ಗೋವಾ ಪೊಲೀಸ್ ತಂಡ ಭಾಗಿ: ರಾಜ್ಯದ ಸ್ವಾತಂತ್ರ್ಯ ದಿನಾಚರಣೆಯ ಪಥ ಸಂಚಲನದಲ್ಲಿ ಗೋವಾದ ಪೊಲೀಸರ ತಂಡ ಭಾಗವಹಿಸಿದ್ದು, ಈ ಬಾರಿಯ ವಿಶೇಷವಾಗಿತ್ತು. ಗೋವಾ ಪೊಲೀಸ್ ತಂಡ ಸೇರಿದಂತೆ ಎಇಜಿ ಕೇಂದ್ರ ಕಳರಿಪಟು, ಟೆಂಟ್ ಪೆಗ್ಗಿಂಗ್ ಹಾಗೂ ಮೋಟರ್ ಸೈಕಲ್ ಸಾಹನ ಪ್ರದರ್ಶನ ತಂಡಗಳಿಗೆ ವಿಶೇಷ ಬಹುಮಾನ ನೀಡಿ ಈ ವೇಳೆ ಗೌರವಿಸಲಾಯಿತು.