ವರದಿ : ಅಣ್ಣೂರು ಸತೀಶ್‌

 ಭಾರತೀನಗರ (ಫೆ.17):  ಕೊಕ್ಕರೆ ಬೆಳ್ಳೂರು ಗ್ರಾಮ ಪಂಚಾಯಿತಿಗೆ 75 ವರ್ಷದ ಅಜ್ಜಿ ಅಧ್ಯಕ್ಷಗಾದಿಗೇರಿದ್ದಾರೆ.

ಪರಿಶಿಷ್ಟಜಾತಿಗೆ ಮೀಸಲಾಗಿದ್ದ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಗ್ರಾಪಂ ವ್ಯಾಪ್ತಿಯ ಭೀಮನಕೆರೆ ಗ್ರಾಮದ 75 ವರ್ಷದ ಜಯಲಕ್ಷ್ಮಮ್ಮ ಆಯ್ಕೆಗೊಂಡಿದ್ದಾರೆ.

ಜಯಲಕ್ಷ್ಮಮ್ಮರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ 7 ಮೊಮ್ಮಕ್ಕಳು ಇದ್ದಾರೆ. ಭೀಮನಕೆರೆ ಗ್ರಾಮದಲ್ಲಿ ಗ್ರಾಪಂ ಸದಸ್ಯ ಸ್ಥಾನಕ್ಕೆ ಪ್ರಥಮ ಬಾರಿಗೆ ಸ್ಪರ್ಧೆ ಮಾಡಿದ್ದರು. 3 ಮತಗಳ ಅಂತದ ಗೆಲುವು ಕಂಡಿದ್ದರು. ಗ್ರಾಮ ಪಂಚಾಯ್ತಿಯಲ್ಲಿ 16 ಸದಸ್ಯರನ್ನು ಹೊಂದಿದ್ದು, ಶನಿವಾರ ನಡೆದ ಗ್ರಾಪಂ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್‌-ಬಿಜೆಪಿ ಬೆಂಬಲಿತರ 11 ಸದಸ್ಯರ ಬಲದೊಂದಿಗೆ ಜಯಲಕ್ಷ್ಮಮ್ಮ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.

ಮಂಡ್ಯದಲ್ಲಿ ಬಿಗ್ ಆಪರೇಷನ್ ಕಮಲ : ಬಿಜೆಪಿಯತ್ತ ಶಾಸಕರು? ..

7ನೇ ತರಗತಿ ವಿದ್ಯಾಭ್ಯಾಸ ಮಾಡಿರುವ ಜಯಲಕ್ಷ್ಮಮ್ಮ ಕವಯತ್ರಿ, ಗಾಯಕಿಯೂ ಆಗಿದ್ದಾರೆ. ನೂರಾರು ಕವನಗಳನ್ನು ರಚಿಸಿ ಸ್ವತಃ ರಾಗ ಸಂಯೋಜಿಸಿ ಹಾಡುವಂತಹ ಪ್ರತಿಭೆ ಅವರಲ್ಲಿದೆ. ಜನಪದ ಗೀತೆ, ಭಾವಗೀತೆ ಹಾಗೂ ದೇವರ ನಾಮಗಳನ್ನು ಸುಶ್ರಾವ್ಯವಾಗಿ ಹಾಡುವುದನ್ನು ಕರಗತ ಮಾಡಿಕೊಂಡಿದ್ದಾರೆ. ಕೊರೋನಾ ಕುರಿತು ಜಾಗೃತಿ ಗೀತೆ ರಚಿಸಿ ಹಾಡಿ ಹರಿವು ಮೂಡಿದ್ದಾರೆ.

ಕುಟುಂಬದವರ ಅಚ್ಚುಮೆಚ್ಚಿನ ಅಜ್ಜಿಯಾಗಿರುವ ಜಯಲಕ್ಷ್ಮಮ್ಮ ಎಲ್ಲರಿಗೂ ಉತ್ತಮ ಶಿಕ್ಷಣ ನೀಡಿದ್ದಾರೆ. ಪುತ್ರ ಲಿಂಗರಾಜು ಗ್ರಾಪಂ ಕಾರ್ಯದರ್ಶಿಯಾಗಿ, ಪುತ್ರಿ ಬಿ.ಎನ್‌.ತನುಜಾ ಅಂಗನವಾಡಿ ಕಾರ್ಯಕರ್ತೆಯಾಗಿ, ಸೊಸೆಯಂದಿರಾದ ಸರೋಜಮ್ಮ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ, ರಮ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಟಾಪ್‌ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಮತ್ತೊಬ್ಬ ಪುತ್ರ ಕೆಂಪರಾಜು ವ್ಯವಸಾಯ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.