Asianet Suvarna News Asianet Suvarna News

ಬೆಂಗ್ಳೂರಲ್ಲಿ ಹೊಸವರ್ಷಕ್ಕೆ ಸಿದ್ಧತೆ: ಶೇ.75 ಹೋಟೆಲ್‌ಗಳು ಬುಕ್‌..!

ಹೊಸ ವರ್ಷಾಚರಣೆಗೆ ನಗರಕ್ಕೆ ಎನ್‌ಆರ್‌ಐ, ಅಂತಾರಾಜ್ಯದ ಜನ ಲಗ್ಗೆ ಇಡುತ್ತಿದ್ದಾರೆ. ಎಂ.ಜಿ.ರೋಡ್‌, ಬ್ರೀಗೇಡ್‌ ರೋಡ್‌, ಚರ್ಚ್ ಸ್ಟ್ರೀಟ್ ಸೇರಿದಂತೆ ಇಂದಿರಾನಗರ, ಕೋರಮಂಗಲ, ವೈಟ್‌ಫೀಲ್ಡ್‌, ಎಲೆಕ್ಟ್ರಾನಿಕ್‌ ಸಿಟಿ, ಟೆಕ್‌ ಕಾರಿಡಾರ್‌ಗಳು ಪಾರ್ಟಿ ಮೂಡ್‌ಗೆ ತೆರೆದುಕೊಂಡಿವೆ. ಪಬ್‌, ರೆಸ್ಟೋರೆಂಟ್‌ಗಳು ಡಿ.31ರ ಪಾರ್ಟಿ, ವಿಶೇಷ ಚಟುವಟಿಕೆಗೆ ರಿಯಾಯಿತಿ ಘೋಷಿಸಿ ಗ್ರಾಹಕರನ್ನು ಸೆಳೆಯುತ್ತಿವೆ.

75 Percent Hotels Booked to New Year Celebration in Bengaluru grg
Author
First Published Dec 28, 2023, 5:59 AM IST

ಮಯೂರ್ ಹೆಗಡೆ

ಬೆಂಗಳೂರು(ಡಿ.28):  ಹೊಸ ವರ್ಷ ಸ್ವಾಗತಿಸಲು ಐಟಿಸಿಟಿ ಸಜ್ಜಾಗಿದೆ. ಶೇ.60-75ರಷ್ಟು ಹೋಟೆಲ್‌ ಕೊಠಡಿ ಮುಂಗಡ ಬುಕ್‌ ಆಗಿದ್ದರೆ, ರಂಜನೀಯ ರಾತ್ರಿಗಾಗಿ ಪಬ್‌, ಪಾರ್ಟಿ ಲಾನ್‌, ಫಾರ್ಮ್‌ಹೌಸ್‌ನಲ್ಲಿ ತಯಾರಿ ಜೋರಾಗಿದೆ. ಸುಮಾರು ₹600 ಕೋಟಿಗಳ ಆದಾಯ ಇದೊಂದೇ ರಾತ್ರಿ ಗಳಿಸುವ ನಿರೀಕ್ಷೆಯನ್ನು ಹೋಟೆಲ್ ಉದ್ಯಮ ಹೊಂದಿದೆ.

ಹೊಸ ವರ್ಷಾಚರಣೆಗೆ ನಗರಕ್ಕೆ ಎನ್‌ಆರ್‌ಐ, ಅಂತಾರಾಜ್ಯದ ಜನ ಲಗ್ಗೆ ಇಡುತ್ತಿದ್ದಾರೆ. ಎಂ.ಜಿ.ರೋಡ್‌, ಬ್ರೀಗೇಡ್‌ ರೋಡ್‌, ಚರ್ಚ್ ಸ್ಟ್ರೀಟ್ ಸೇರಿದಂತೆ ಇಂದಿರಾನಗರ, ಕೋರಮಂಗಲ, ವೈಟ್‌ಫೀಲ್ಡ್‌, ಎಲೆಕ್ಟ್ರಾನಿಕ್‌ ಸಿಟಿ, ಟೆಕ್‌ ಕಾರಿಡಾರ್‌ಗಳು ಪಾರ್ಟಿ ಮೂಡ್‌ಗೆ ತೆರೆದುಕೊಂಡಿವೆ. ಪಬ್‌, ರೆಸ್ಟೋರೆಂಟ್‌ಗಳು ಡಿ.31ರ ಪಾರ್ಟಿ, ವಿಶೇಷ ಚಟುವಟಿಕೆಗೆ ರಿಯಾಯಿತಿ ಘೋಷಿಸಿ ಗ್ರಾಹಕರನ್ನು ಸೆಳೆಯುತ್ತಿವೆ.

ಹೊಸ ವರ್ಷಕ್ಕೆ ಟ್ರಿಪ್ ಹೊರಟವರಿಗೆ ಪೊಲೀಸ್ ಎಚ್ಚರ, ಕೆಮಿಕಲ್‌ನಿಂದ ಕಾರಿನ ಗಾಜು ಒಡೆದು ಕಳ್ಳತನ!

ಏನೇನು ಸ್ಪೆಷಲ್‌:

ಪೂಲ್‌ಸೈಡ್ ಪಾರ್ಟಿ, ರೈನ್ ಡ್ಯಾನ್ಸ್, ಫೈರ್‌ ಡ್ಯಾನ್ಸ್‌, ಸೆಲೆಬ್ರಿಟಿ ಡಿಜೆ, ಹಾಲಿವುಡ್‌, ಬಾಲಿವುಡ್‌, ಪಂಜಾಬಿ, ಲೋಕಲ್‌ ಮ್ಯೂಸಿಕ್, ಬೆಲ್ಲಿ ಡ್ಯಾನ್ಸ್‌ ಮನರಂಜನೆಗಳಿವೆ. ಇದಕ್ಕಾಗಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕಲಾವಿದರನ್ನು ಕರೆಸಲಾಗುತ್ತಿದೆ. ಲೈವ್‌ ಫುಡ್‌ ಕೌಂಟರ್, ಅನಿಯಮಿತ ತಿನಿಸು, ಡ್ರಿಂಕ್ಸ್‌ಗಳನ್ನು ಪಾರ್ಟಿ ಆಯೋಜಕರು ಕಲ್ಪಿಸುತ್ತಿದ್ದಾರೆ. ವಿಐಪಿ, ವಿವಿಐಪಿ ಕೌಂಟರ್‌, ಸೆಲೆಬ್ರಿಟಿ ಕೌಂಟರ್‌, ಫ್ಯಾಮಿಲಿ ಕೌಂಟರ್‌ ಎಂದು ಪ್ರತ್ಯೇಕ ವ್ಯವಸ್ಥೆಗಳಿವೆ. ಭದ್ರತೆಗೆ ಮಹಿಳಾ ಹಾಗೂ ಪುರುಷ ಬೌನ್ಸರ್‌ ನಿಯೋಜಿಸಿಕೊಳ್ಳುತ್ತಿವೆ. ಪಾರ್ಟಿ ಬಳಿಕ ಸುರಕ್ಷಿತವಾಗಿ ಮನೆ ತಲುಪಿಸಲು ಕ್ಯಾಬ್‌ ಅಥವಾ ವಸತಿ ವ್ಯವಸ್ಥೆಯನ್ನೂ ಒದಗಿಸುತ್ತಿವೆ.

ಮಕ್ಕಳಿಗೆ ವಿಶೇಷ:

ಮಕ್ಕಳಿಗಾಗಿ ಸೌಂಡ್‌ ಆ್ಯಂಡ್ ಲೈಟ್‌ ಶೋ, ವಿಶೇಷ ಮನರಂಜನಾ ಚಟುವಟಿಕೆ, ಕ್ರೀಡೆ ಹಾಗೂ ಪ್ರತ್ಯೇಕ ಊಟದ ಕೌಂಟರ್‌ಗಳನ್ನು ತೆರೆಯುತ್ತಿವೆ. ದೊಡ್ಡವರಿಂದ ಪ್ರತ್ಯೇಕವಾಗಿ ಕಿಡ್ಸ್‌ ಪಾರ್ಟಿ ಝೋನ್‌ ಎಂದು ಬೇರೆಯ ವಿಭಾಗ ತೆರೆದಿವೆ. ಬಹುತೇಕ ಕಡೆ 5 ವರ್ಷ ಒಳಗಿನ ಮಕ್ಕಳಿಗೆ ಪಾರ್ಟಿ ಪ್ರವೇಶ ನಿರಾಕರಿಸಲಾಗಿದೆ.

ವಿದೇಶಿ ಪರಿಕಲ್ಪನೆ

ನಗರದ ಪ್ರತಿಷ್ಠಿತ ಹೋಟೆಲ್‌ಗಳು ವಿದೇಶಿ ಪರಿಕಲ್ಪನೆಯಲ್ಲಿ ಪಾರ್ಟಿ ಆಯೋಜಿಸಿವೆ. ಹೊಷ ವರ್ಷ ಪ್ರಯುಕ್ತ ಎಚ್‌ಎಸ್‌ಆರ್‌ ಲೇಔಟ್‌ ಡಬ್ಲೂಎಲ್‌ ಕ್ಲಬ್‌ ‘ಒನ್‌ ನೈಟ್‌ ಇನ್‌ ಪ್ಯಾರಿಸ್‌’, ದ ಲೀಲಾ ಭಾರತೀಯ ಸಿಟಿಯಲ್ಲಿ ‘ಲಾಸ್‌ ಏಂಜಲೀಸ್‌ ಏವ್‌ -2024’, ತಾಜ್‌ ಯಶವಂತಪುರ ‘ಲಾಸ್‌ ವೆಗಾಸ್‌, ಎಂ.ಜಿ.ರಸ್ತೆಯ ದ ಪರ್ಕ್‌ ಹೋಟೆಲ್‌‘ ಅನ್‌ಲಾಕ್‌ 2024’, ಕೋರಮಂಗಲದ ಬ್ಯುಲ್ಡರ್ಸ್‌ ಕ್ಲಬ್‌ ‘ಮಿಯಾಮಿ 2024, ಶಾಂಘ್ರೀಲಾದಲ್ಲಿ ‘ಗ್ಲೋರಿ ರೆಸನೆಂಟ್’, ಹೀಗೆ ಹಲವು ಹೋಟೆಲ್‌ಗಳು ಬಿಯಾಂಡ್‌ ದ ಮಾಸ್ಕ್‌, ಅನ್‌ಮಾಸ್ಕ್‌ ದ ನೈಟ್‌, ವೈಲ್ಡ್‌ ವೆಸ್ಟ್, ಸೂಪರ್‌ನೋವಾ, ಕ್ಯಾರ್ನಿವಲ್‌ ಹೀಗೆ ಹಲವು ವಿಶೇಷತೆಗಳ ಪಾರ್ಟಿ ಆಯೋಜಿಸಿವೆ. ಇದಕ್ಕಾಗಿ ಬೃಹತ್‌ ಸೆಟಪ್‌, ಡೆಕೊರೆಟ್‌ ತಯಾರಿ ನಡೆದಿದೆ.

ಬೆಂಗಳೂರು: ಡಿ.31ರ ರಾತ್ರಿ 1ರವರೆಗೆ ವರ್ಷಾಚರಣೆಗೆ ಅವಕಾಶ, ಎಲ್ಲ ಮೇಲ್ಸೇತುವೆ ಬಂದ್‌..!

ಕನಿಷ್ಠ ₹2 ಸಾವಿರ, ಗರಿಷ್ಠ ₹40 ಸಾವಿರ ಪ್ಯಾಕೇಜ್‌

ಡಿಲಕ್ಸ್, ಪ್ರಿಮಿಯಂ ಪಾರ್ಟಿ ಪ್ಯಾಕೇಜ್‌ಗಳನ್ನು ಹೋಟೆಲ್‌, ಪಬ್‌ಗಳು ಮಾಡಿಕೊಂಡಿವೆ. ಆನ್‌ಲೈನ್‌ ಬುಕ್ಕಿಂಗ್‌ ಜೋರಾಗಿದ್ದು, ಸಿಂಗಲ್‌ (ಸ್ಟ್ಯಾಗ್) ಕನಿಷ್ಠ ₹2 ಸಾವಿರದಿಂದ ₹5 ಸಾವಿರ, ಕಪಲ್‌ ₹4 ಸಾವಿರ - ₹20 ಸಾವಿರದವರೆಗೆ ದರ ನಿಗದಿಸಿವೆ. ಮುಂಗಡ (ಅರ್ಲಿ ಬರ್ಡ್‌ ಬುಕ್ಕಿಂಗ್) ಶೇ.10ರಿಂದ ಶೇ.40ರವರೆಗೆ ರಿಯಾಯಿತಿ ನೀಡುತ್ತಿವೆ. ರಾಮನಗರ, ಅಕ್ಕಲೇನಹಳ್ಳಿ, ಕನಕಪುರ, ಕಾಗನೂರ್‌, ಸರ್ಜಾಪುರ, ಸಾದಹಳ್ಳಿ, ಚೌಡೇನಹಳ್ಳಿ ಹೀಗೆ ನಗರ ಸುತ್ತಲಿನ ಫಾರ್ಮ್‌ಹೌಸ್‌ಗಳೂ ವರ್ಷಾಚರಣೆಗೆ ಸಿದ್ಧತೆ ಮಾಡಿಕೊಂಡಿದ್ದು, ಇಲ್ಲಿ ಕನಿಷ್ಠ ₹20 ಸಾವಿರ - ₹40 ಸಾವಿರವರೆಗೆ ದರ ನಿಗದಿಸಿವೆ.

₹600 ಕೋಟಿ ವಹಿವಾಟು ನಿರೀಕ್ಷೆ

ಹೊಸ ವರ್ಷಾಚರಣೆಗೆ ಈ ಬಾರಿ ನಗರದ ಹೋಟೆಲ್‌, ಪಬ್‌, ಬಾರ್‌ ಆ್ಯಂಡ್‌ ರೆಸ್ಟೊರೆಂಟ್‌ ಸೇರಿ ಸುಮಾರು ₹600 ಕೋಟಿ ವಹಿವಾಟು ನಡೆಯುವ ನಿರೀಕ್ಷೆಯಿದೆ. ಕನಿಷ್ಠ ₹500 ಕೋಟಿ ವಹಿವಾಟು ಆಗಿಯೇ ಆಗುತ್ತದೆ. ಇದರಲ್ಲಿ ₹200 ಕೋಟಿ ಸರ್ಕಾರಕ್ಕೆ ಜಿಎಸ್‌ಟಿ ಹೋಗುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಆತಿಥ್ಯ ಉದ್ಯಮಕ್ಕೆ ಬಂಪರ್‌ ಆದಾಯ ಹರಿದುಬರುವ ನಿರೀಕ್ಷೆಯಿದೆ ಎಂದು ಹೋಟೆಲ್‌ ಉದ್ಯಮಿಗಳ ಸಂಘ ತಿಳಿಸಿದೆ.
ನಗರದಲ್ಲಿ 50 ಸಾವಿರ ಪ್ಲಸ್‌ ಹೋಟೆಲ್‌ ಕೊಠಡಿಗಳು ಬುಕ್‌ ಆಗಿವೆ. ಆನ್‌ಲೈನ್‌ ಬುಕ್ಕಿಂಗ್‌ ಜೋರಾಗಿದ್ದು, ಪಾರ್ಟಿ, ಹಾಲ್ಟಿಂಗ್‌ ಸೇರಿ ಉತ್ತಮ ವಹಿವಾಟು ನಡೆಯುವ ನಿರೀಕ್ಷೆಯಲ್ಲಿದ್ದೇವೆ ಎಂದು ಬೃಹತ್‌ ಬೆಂಗಳೂರು ಹೋಟೆಲ್‌ ಮಾಲೀಕರ ಸಂಘ ಪಿ.ಸಿ.ರಾವ್‌ ತಿಳಿಸಿದ್ದಾರೆ.  

Latest Videos
Follow Us:
Download App:
  • android
  • ios