ಹೊಸ ವರ್ಷಾಚರಣೆ ಸಂಬಂಧ ಗೃಹ ಸಚಿವರ ನೇತೃತ್ವದಲ್ಲಿ ಪೊಲೀಸರು, ಬಿಬಿಎಂಪಿ, ಆರೋಗ್ಯ, ಅಬಕಾರಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬೆಸ್ಕಾಂ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳ ಜತೆ ಸಮಾಲೋಚಿಸಿ ಮಾರ್ಗರೂಚಿ ರೂಪಿಸಲಾಗಿದೆ. 

ಬೆಂಗಳೂರು(ಡಿ.27): ಹೊಸ ವರ್ಷಾಚರಣೆಗೆ ಡಿ.31 ರ ರಾತ್ರಿ 1ರವರೆಗೆ ಸಮಯ ನೀಡಿರುವ ರಾಜಧಾನಿ ಪೊಲೀಸರು, ಅಂದು ಪಾನಮತ್ತ ಚಾಲಕರು ಹಾಗೂ ಡ್ರಗ್ಸ್ ವ್ಯಸನಿಗಳ ಪತ್ತೆಗೆ 40 ಚೆಕ್‌ ಪೋಸ್ಟ್‌ಗಳು ಮತ್ತು ಠಾಣಾ ಮಟ್ಟದಲ್ಲಿ ವಿಶೇಷ ತಂಡ ರಚಿಸಿದ್ದಾರೆ. ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೊಸ ವರ್ಷಾಚರಣೆ ಕುರಿತು ಮಾರ್ಗಸೂಚಿ ಬಿಡುಗಡೆಗೊಳಿಸಿ ಮಾತನಾಡಿದ ಆಯುಕ್ತರು, ಹೊಸ ವರ್ಷಾಚರಣೆ ವೇಳೆ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗುತ್ತದೆ ಎಂದರು.

ಹೊಸ ವರ್ಷಾಚರಣೆ ಸಂಬಂಧ ಗೃಹ ಸಚಿವರ ನೇತೃತ್ವದಲ್ಲಿ ಪೊಲೀಸರು, ಬಿಬಿಎಂಪಿ, ಆರೋಗ್ಯ, ಅಬಕಾರಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬೆಸ್ಕಾಂ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳ ಜತೆ ಸಮಾಲೋಚಿಸಿ ಮಾರ್ಗರೂಚಿ ರೂಪಿಸಲಾಗಿದೆ ಎಂದು ತಿಳಿಸಿದರು.

ಹೊಸ ವರ್ಷಾಚರಣೆಗೆ ನಂದಿಬೆಟ್ಟಕ್ಕೆ ಬರೋ ಪ್ರವಾಸಿಗರಿಗೆ ನಿರ್ಬಂಧ! ಕಾರಣ ಇಲ್ಲಿದೆ

ಹೊಸ ವರ್ಷಾಚರಣೆಗೆ ರಾತ್ರಿ 1ರವರೆಗೆ ಸರ್ಕಾರ ಅನುಮತಿ ನೀಡಿದೆ. ಅಂತೆಯೇ ಆ ಸಮಯದೊಳಗೆ ಮಾತ್ರ ವರ್ಷಾಚರಣೆ ಕಾರ್ಯಕ್ರಮಗಳನ್ನು ನಡೆಸಲು ಅ‍ವಕಾಶವಿರುತ್ತದೆ ಎಂದು ಆಯುಕ್ತರು ಸ್ಪಷ್ಟಪಡಿಸಿದರು.
ಅಂದು ಕಾನೂನುಬಾಹಿರ ಚಟುವಟಿಕೆಗಳು, ಡ್ರಗ್ಸ್ ಸರಬರಾಜು ಅಥವಾ ಶಂಕಾಸ್ಪದ ವಸ್ತುಗಳ ಬಗ್ಗೆ ಮಾಹಿತಿ ಇದ್ದರೆ ನಮ್ಮ-112 (ಪೊಲೀಸ್‌ ನಿಯಂತ್ರಣ ಕೊಠಡಿ) ಅಥವಾ ಸ್ಥಳೀಯ ಪೊಲೀಸರಿಗೆ ತಕ್ಷಣವೇ ಸಾರ್ವಜನಿಕರು ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.

ಜನ ನಿಯಂತ್ರಣಕ್ಕೆ ಹೆಚ್ಚಿನ ಸಿಬ್ಬಂದಿ

ಹೊಸ ವರ್ಷಾಚರಣೆಗೆ ಹೆಚ್ಚಿನ ಸಾರ್ವಜನಿಕರು ಸೇರುವ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೆಂಟ್ ಮಾರ್ಕ್ಸ್‌ ರಸ್ತೆ, ಕಬ್ಬನ್ ಪಾರ್ಕ್‌, ಟ್ರಿನಿಟಿ ಸರ್ಕಲ್‌, ಫೀನಿಕ್ಸ್‌ ಮಾಲ್‌, ಕೋರಮಂಗಲ, ಇಂದಿರಾನಗರ 100 ಅಡಿ ರಸ್ತೆ, ಪ್ರಮುಖ ಸ್ಟಾರ್‌ ಹೋಟೆಲ್‌ಗಳು, ಪಬ್‌ಗಳು ಹಾಗೂ ಕ್ಲಬ್‌ಗಳು ಸೇರಿದಂತೆ ಇತರೆಡೆ ಜನರನ್ನು ನಿಯಂತ್ರಿಸಲು ಬಂದೋಬಸ್ತ್ ಪಿಕೇಟಿಂಗ್ ಪಾಯಿಂಟ್‌ಗಳನ್ನು ನೇಮಕ ಮಾಡಲಾಗುತ್ತದೆ.

ನಗರದ ಭದ್ರತೆಗೆ 8 ಸಾವಿರ ಪೊಲೀಸರು:

ಹೊಸ ವರ್ಷಾಚರಣೆ ಭದ್ರತೆಗೆ ನಗರ ವ್ಯಾಪ್ತಿ ಇಬ್ಬರು ಹೆಚ್ಚುವರಿ ಆಯುಕ್ತರು, ಜಂಟಿ ಆಯುಕ್ತ, 15 ಡಿಸಿಪಿಗಳು, 45 ಎಸಿಪಿಗಳು, 160 ಪಿಐಗಳು, 600 ಪಿಎಸ್‌ಐಗಳು, 600 ಎಎಸ್‌ಐಗಳು, 1800 ಎಚ್‌ಸಿಗಳು, 5200 ಕಾನ್‌ಸ್ಟೇಬಲ್‌ಗಳು ಸೇರಿ ಒಟ್ಟು 8500 ಪೊಲೀಸರು ನಿಯೋಜಿತರಾಗಿದ್ದಾರೆ. ಇವರಲ್ಲದೆ ನಗರ ಸಶಸ್ತ್ರ ಹಾಗೂ ರಾಜ್ಯ ಸಶಸ್ತ್ರ ಮೀಸಲು ಪಡೆಗಳು ಹಾಗೂ ಸಂಚಾರ ವಿಭಾಗದ ಪೊಲೀಸರನ್ನು ಸಹ ನಿಯುಕ್ತಿಗೊಳಿಸಲಾಗುತ್ತದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಮಹಿಳೆ, ಮಕ್ಕಳ ಸುರಕ್ಷತಾ ತಾಣಗಳು

ನೂತನ ವರ್ಷ ಸ್ವಾಗತಿಸುವ ಸಂಭ್ರಮದ ವೇಳೆ ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಗೆ ಕೂಡಾ ಪೊಲೀಸರು ಮುನ್ನಚ್ಚರಿಕೆವಹಿಸಿದ್ದಾರೆ. ನಗರದ ಪ್ರಮುಖ ಸುಮಾರು 60 ಸ್ಥಳಗಳಲ್ಲಿ ಮಹಿಳೆಯರ ರಕ್ಷಣೆಗೆ ಮಹಿಳಾ ಪೊಲೀಸ್ ಅಧಿಕಾರಿಗಳ ಸಾರಥ್ಯದಲ್ಲಿ ಸುರಕ್ಷತಾ ಸ್ಥಳಗಳು (ಹೂಮೆನ್‌ ಸೆಫ್ಟಿ ಐಲ್ಯಾಂಡ್‌) ಹಾಗೂ ಮಕ್ಕಳ ಸುರಕ್ಷತೆಗೆ ಪೊಲೀಸ್ ಕಿಯೋಸ್ಕ್‌ಗಳನ್ನು ತೆರೆಯಲಾಗುತ್ತದೆ. ಮಕ್ಕಳು ನಾಪತ್ತೆ ಅಥವಾ ತುರ್ತು ಸೇವೆಗಳಿಗೆ ಈ ತಾಣಗಳು ಸ್ಪಂದಿಸುತ್ತವೆ.

ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ ಬಂದ್

ಕಳೆದ ವರ್ಷ ಸಂಭ್ರಮ ಮುಗಿದ ಬಳಿಕ ಮನೆಗೆ ಹೋಗುವ ಧಾವಂತದಲ್ಲಿ ಎಂ.ಜಿ.ರಸ್ತೆಯ ಮೆಟ್ರೋ ನಿಲ್ದಾಣದ ಹೆಚ್ಚಿನ ಜನರು ಜಮಾಯಿಸಿದ ಪರಿಣಾಮ ನೂಕುನುಗ್ಗಲು ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಡಿ.31ರಂದು ರಾತ್ರಿ 11ರಿಂದ 2ರವೆರೆಗೆ ಎಂ.ಜಿ.ರಸ್ತೆಯ ಮೆಟ್ರೋ ನಿಲ್ದಾಣ ಬಂದ್ ಮಾಡಲಾಗಿದೆ. ಈ ನಿಲ್ದಾಣದ ಬದಲಾಗಿ ಟ್ರಿನಿಟಿ ಸರ್ಕಲ್ ಹಾಗೂ ಕಬ್ಬನ್‌ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಸಬಹುದು.

ಡ್ರೋನ್ ಕ್ಯಾಮೆರಾ, ವೀಕ್ಷಣಾ ಗೋಪುರ

ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್ ರಸ್ತೆಗಳು ಸೇರಿದಂತೆ ಹೆಚ್ಚು ಜನಸಂದಣಿ ಸೇರುವ ಸ್ಥಳಗಳಲ್ಲಿ ಖಾಕಿ ಕಣ್ಗಾವಲಿಗೆ ವೀಕ್ಷಣಾ ಗೋಪುಗಳನ್ನು ಸ್ಥಾಪನೆಯಾಗಿದೆ. ಅಲ್ಲದೆ ಸಿಸಿಟಿವಿ ಕ್ಯಾಮೆರಾಗಳು ಹಾಗೂ ಡ್ರೋನ್ ಕ್ಯಾಮೆರಾಗಳನ್ನು ಪೊಲೀಸರು ಬಳಸಲಿದ್ದಾರೆ.

ಡ್ರಗ್‌ ಪೆಡ್ಲರ್‌ಗಳ ಮೇಲೆ ನಿಗಾ

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮಾದಕ ವಸ್ತು ಮಾರಾಟ ಜಾಲದ ಮೇಲೆ ಎಲ್ಲ ಡಿಸಿಪಿಗಳು ಹಾಗೂ ಸಿಸಿಬಿ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿದ್ದಾರೆ. ಹಳೇ ಪ್ರಕರಣಗಳ ಪೆಡ್ಲರ್‌ಗಳ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಲಾಗುತ್ತಿದ್ದು, ಕೆಲವರನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಲಾಗುತ್ತಿದೆ. ಡಿಸೆಂಬರ್‌ ತಿಂಗಳಲ್ಲಿ 9 ವಿದೇಶಿ ಪ್ರಜೆಗಳು ಸೇರಿದಂತೆ 56 ಪೆಡ್ಲರ್‌ಗಳ ಬಂಧಿತರಾಗಿದ್ದು, 99.85 ಕೇಜಿ ಡ್ರಗ್ಸ್ ಜಪ್ತಿಯಾಗಿದೆ. 40 ಪ್ರಕರಣಗಳು ದಾಖಲಿಸಲಾಗಿದೆ ಎಂದು ದಯಾನಂದ್ ವಿವರಿಸಿದ್ದಾರೆ.

ಮದ್ಯ ದಾಸ್ತಾನು ಮೇಲೆ ಖಾಕಿ ಕಣ್ಣು:

ಅಕ್ರಮವಾಗಿ ಮದ್ಯ ಸಂಗ್ರಹಿಸುವವರ ಮೇಲೆ ಅಬಕಾರಿ ಇಲಾಖೆ ಜತೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಲಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ.

ಅತಿಥಿಗಳ ಮೊಬೈಲ್‌ ನಂ. ಸಂಗ್ರಹ

ಪಾರ್ಟಿಗಳಿಗೆ ಆಗಮಿಸುವ ಗ್ರಾಹಕರು ಹಾಗೂ ಅತಿಥಿಗಳ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಕ್ಲಬ್‌, ಪಬ್‌ ಹಾಗೂ ಹೋಟೆಲ್ ಮಾಲೀಕರಿಗೆ ಸೂಚಿಸಲಾಗಿದೆ. ಪ್ರತಿಯೊಬ್ಬರ ಹೆಸರು ಹಾಗೂ ಮೊಬೈಲ್ ನಂಬರ್ ಸಹಿತ ವಿವರ ಪಡೆಯಬೇಕು. ಅಲ್ಲದೆ ಈ ಕಾರ್ಯಕ್ರಮಗಳಿಗೆ ಅನುಮತಿ ಪಡೆಯುವಾಗ ನಿಗದಿತ ಮೀತಿ ಮೀರದಂತೆ ಪಾಸ್‌ಗಳನ್ನು ವಿತರಿಸದಂತೆ ಪೊಲೀಸರು ಸೂಚಿಸಿದ್ದಾರೆ.

ವ್ಹೀಲಿಂಗ್‌ ಮಾಡಿದರೆ ಕ್ರಮ

ಹೊಸ ವರ್ಷಾಚರಣೆ ವೇಳೆ ವ್ಹೀಲಿಂಗ್‌ ಮಾಡುವವರು, ಪಾನಮತ್ತರಾಗಿ ಚಾಲಕರು ಮತ್ತು ಸವಾರರು, ಹಾಗೂ ಡ್ರಗ್ಸ್ ಸೇವಿಸುವ ಓಡಾಡುವರ ಮೇಲೆ ನಿಗಾವಹಿಸಲು ನಗರದ 40 ಕಡೆ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ಪ್ರತಿ ವಾಹನವನ್ನು ತಪಾಸಣೆ ನಡೆಸಲಾಗುತ್ತದೆ. ಅಲ್ಲದೆ ಸಂಚಾರ ವಿಭಾಗದ 17 ಠಾಣೆಗಳಲ್ಲಿ ವಿಶೇಷ ತಂಡ ರಚಿಸಲಾಗಿದೆ.

ಎಲ್ಲ ಮೇಲ್ಸೇತುವೆಗಳು ಬಂದ್‌:

ಕೆಂಪೇಗೌಡ ವಿಮಾನ ನಿಲ್ದಾಣ ಮಾರ್ಗದ ಮೇಲ್ಸೇತುವೆ ಹೊರತುಪಡಿಸಿ ಡಿ.31 ರಂದು ರಾತ್ರಿ 11 ಗಂಟೆಯಿಂದ ಬೆಳಗ್ಗೆ 6 ಗಂಟೆವೆರೆಗೆ ನಗರದ ಇನ್ನುಳಿದ ಎಲ್ಲ ಮೇಲ್ಸೇತುವೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.

ವಾಹನ ನಿಲುಗಡೆ ನಿಷೇಧ

ಡಿ.31ರಂದು ಬ್ರಿಗೇಡ್ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಸಾರ್ವಜನಿಕರಿಗೆ ನಡಿಗೆಯ ಮೂಲಕ ಏಕ ಮುಖ ಪ್ರವೇಶಕ್ಕೆ ಮಾತ್ರ ಅ‍ವಕಾಶವಿದ್ದು, ಎಂ.ಜಿ ರಸ್ತೆಗೆ ಅನಿಲ್ ಕುಂಬ್ಳೆ ಸರ್ಕಲ್ ಹಾಗೂ ಮೇಯೋ ಹಾಲ್‌ ಜಂಕ್ಷನ್ ಮೂಲಕ ಪ್ರವೇಶಿಸಬಹುದು. ಎಂ.ಜಿ.ರಸ್ತೆ, ಕಸ್ತೂರಿ ಬಾ ಹಾಗೂ ಬ್ರಿಗೇಡ್ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಹೊಸವರ್ಷಕ್ಕೆ ಕೆಲವೇ ದಿನಗಳು ಬಾಕಿ; ಗೃಹ ಸಚಿವ ಪರಮೇಶ್ವರ ಕೊಟ್ಟ ಸೂಚನೆ ಏನು?

ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧನೆಗಳಿಲ್ಲ. ಅಂದು ರಾತ್ರಿ 1 ರವರೆಗೆ ಜನರು ಮುಕ್ತವಾಗಿ ಸಂಭ್ರಮಿಸಬಹುದು. ಆದರೆ ಪಾನಮತ್ತರಾಗಿ ವಾಹನ ಚಾಲನೆ ಬೇಡ. ಡ್ರಗ್ಸ್‌ನಿಂದ ದೂರವಿರಿ ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದ್ದಾರೆ. 

ಡಿ.31ರಂದು ರಾತ್ರಿ 8 ಗಂಟೆಯಿಂದಲೇ ಡ್ರಂಕ್ ಡ್ರೈವ್‌ ತಪಾಸಣೆ ನಡೆಸಲಾಗುತ್ತದೆ. ಡ್ರ್ಯಾಗ್ ರೇಸ್‌ ಹಾಗೂ ವ್ಹೀಲಿಂಗ್‌ ನಡೆಸುವವರ ಮೇಲೆ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗುತ್ತದೆ. ಮದ್ಯ ಸೇವಿಸಿ ವಾಹನ ಚಾಲನೆ ಮಾಡಬೇಡಿ ಎಂದು ಜಂಟಿ ಪೊಲೀಸ್ ಆಯುಕ್ತ ಎಂ.ಎನ್‌.ಅನುಚೇತ್‌ ತಿಳಿಸಿದ್ದಾರೆ.