ನಮ್ಮ ಜಮೀನಿಗೆ ಖಾಸಗಿ ಶಿಕ್ಷಣ ಸಂಸ್ಥೆಯವರು ಅತಿಕ್ರಮ ಪ್ರವೇಶ ಮಾಡಿ ಬೆಲೆಬಾಳುವ 70 ಮರಗಳನ್ನು ಅಕ್ರಮವಾಗಿ ಕಡಿದು ಹಾಕಿದ್ದಾರೆ ಎಂದು ಬಿಂದು ಪಟೇಲ್ ಎಂಬ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ಪಾಂಡವಪುರ : ನಮ್ಮ ಜಮೀನಿಗೆ ಖಾಸಗಿ ಶಿಕ್ಷಣ ಸಂಸ್ಥೆಯವರು ಅತಿಕ್ರಮ ಪ್ರವೇಶ ಮಾಡಿ ಬೆಲೆಬಾಳುವ 70 ಮರಗಳನ್ನು ಅಕ್ರಮವಾಗಿ ಕಡಿದು ಹಾಕಿದ್ದಾರೆ ಎಂದು ಬಿಂದು ಪಟೇಲ್ ಎಂಬ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ತಾಲೂಕಿನ ಜಯಂತಿನಗರ ಗ್ರಾಮದ ಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಪಂಚಲಿಂಗೇಗೌಡರು ತಮ್ಮ ಜಮೀನು ಕಬಳಿಸಲು ಯತ್ನಿಸುತ್ತಿದ್ದಾರೆ. ತಾವು ಅವರಿಗೆ ಜಮೀನು ನೀಡದಿದ್ದ ಕಾರಣ ಪಾಂಡವಪುರ ಸರ್ವೆ ಅಧಿಕಾರಿಗಳಿಗೆ ಹಣ ನೀಡಿ ತಮ್ಮ ಬಾಬ್ತು 7 ಕುಂಟೆ ಜಮೀನು ಒತ್ತುವರಿ ಮಾಡಿಕೊಂಡು ಅದರಲ್ಲಿ ಬೆಳೆದಿದ್ದ ಸುಮಾರು 2 ಲಕ್ಷ ರು. ಮೌಲ್ಯದ 70 ಸಿಲ್ವರ್, ಹೆಬ್ಬೇವು, ಅಡಕೆ ಮತ್ತು ಅದರ ಮೇಲೆ ಬೆಳೆಸಿದ್ದ ಮೆಣಸು ಗಿಡಗಳನ್ನು ಕಡಿದು ಹಾಕಿದ್ದಾರೆ ಎಂದು ದೂರಿದರು.
ತಾಲೂಕಿನ ಕೆನ್ನಾಳು ಗ್ರಾಮದ ಸರ್ವೆ ನಂ 192/2 ರಲ್ಲಿ ತಾವು 2 ಎಕರೆ 26 ಗುಂಟೆ ಮತ್ತು 3 ಕುಂಟೆ ಖರಾಬು ಜಮೀನನ್ನು ತಾವು 2006 ರಲ್ಲಿ ಖರೀದಿ ಮಾಡಿ ಅನುಭವದಲ್ಲಿ ಇದ್ದೇವೆ. ಈ ಜಮೀನು ಕಬಳಿಸಲು ಪಂಚಲಿಂಗೇಗೌಡ ಹವಣಿಸುತ್ತಿದ್ದರು. ಜಮೀನು ಮಾರುವಂತೆ ಹಲವು ಬಾರಿ ಒತ್ತಡವನ್ನು ತಂದಿದ್ದರು ಎಂದರು.
ತಾವು ಜಮೀನು ಮಾರಾಟ ಮಾಡುವುದಿಲ್ಲ ಎಂದಾಗ ನಿಮ್ಮ ಬಳಿ ನಮಗೆ ಸೇರಿದ ಜಮೀನು ಇದೆ ಎಂದು ಪದೇ ಪದೇ ಅಳತೆ ಮಾಡಿಸಿ ಸರ್ವೆ ಅಧಿಕಾರಿಗಳಿಗೆ ಹಣದ ಆಮಿಷ ನೀಡಿ ನಮ್ಮ ಜಮೀನು ಕಬಳಿಸಿದ್ದಾರೆ. ಶನಿವಾರ ಅಳತೆ ಮಾಡುವ ನೆಪ ಮಾಡಿಕೊಂಡು ನಮ್ಮ ಜಮೀನಿನಲ್ಲಿ ಅಕ್ರಮವಾಗಿ ಕಲ್ಲು ನೆಟ್ಟು ನಮ್ಮ ಜಮೀನಿನ ತಂತಿಬೇಲಿ ಕಿತ್ತು ಬೆಲೆಬಾಳುವ ಮರಗಳನ್ನು ಕಡಿದಿದ್ದಾರೆ ಎಂದು ಅಳಲು ತೋಡಿಕೊಂಡರು.
ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದರೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಾರೆ. ಪೊಲೀಸರಿಗೆ ಹೇಳಿದರೆ ಇದು ಸಿವಿಲ್ ಮ್ಯಾಟರ್ ಎಂದು ಕಳಿಸುತ್ತಾರೆ. ನಾನು ಒಬ್ಬ ಮಹಿಳೆಯಾಗಿ ನಮ್ಮ ಜಮೀನು ಕಬಳಿಸಲು ಹೊಂಚು ಹಾಕಿರುವ ವ್ಯಕ್ತಿಗೆ ಎಲ್ಲರೂ ಸಹಕಾರ ನೀಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ತಾವು ದೂರು ನೀಡುವುದಾಗಿ ಬಿಂದು ಪಟೇಲ್ ಹೇಳಿದರು.
ಕೋಟ್ ಸರ್ವೆ ಅಧಿಕಾರಿಗಳು ಶಾಮೀಲಾಗಿ ಈಗಾಗಲೇ 8 ಬಾರಿ ಅಳತೆ ಮಾಡಲಾಗಿದೆ. ಯಾವ ಸರ್ವೆ ಅಧಿಕಾರಿಗಳು ಅಳತೆಗೆ ಬಂದರೂ ಮೂಲ ಕಲ್ಲಿನಿಂದ ಅಳತೆ ಮಾಡುವುದಿಲ್ಲ. ಪಂಚಲಿಂಗೇಗೌಡರಿಗೆ ಅನುಕೂಲ ಮಾಡಲು ಅಗತ್ಯವಾದ ಸ್ಥಳದಿಂದ ಅಳತೆ ಮಾಡುತ್ತಾ ನನಗೆ ಮೋಸ ಮಾಡುತ್ತಿದ್ದಾರೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರೂ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
