ಕೊಪ್ಪಳ(ಜೂ.20): ಜಿಲ್ಲೆಯಲ್ಲಿ ಕೊರೋನಾ ಮತ್ತೆ ಅಬ್ಬರಿಸಿದೆ. ಬುಧವಾರವಷ್ಟೆ ಸೋಂಕಿತ ಮಹಿಳೆಯನ್ನು ಬಲಿ ಪಡೆದ ಮಾರಕ ವೈರಸ್‌ ಮತ್ತೆ ಏಳು ಜನರಿಗೆ ಆವರಿಸಿರುವುದು ಶುಕ್ರವಾರ ದೃಢಪಟ್ಟಿದೆ. ಇನ್ನು ಕೋವಿಡ್‌-19 ತಗುಲಿದ ಬಳ್ಳಾರಿಯ ಜಿಂದಾಲ್‌ನ ನೌಕರನೊಬ್ಬ ಜಿಲ್ಲೆಯಲ್ಲಿ ಪತ್ತೆ ಆಗಿರುವುದು ಆತಂಕಕಾರಿ ಬೆಳವಣಿಗೆ ಎನಿಸಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 28ಕ್ಕೇರಿದೆ.

ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ 65 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಬಳ್ಳಾರಿಯ ಮಲಪನಗುಡಿಯಿಂದ ಜೂ. 14 ರಂದು ಕೊಪ್ಪಳಕ್ಕೆ ಆಗಮಿಸಿದ್ದರು. ಹೊಸಲಿಂಗಪುರ ಗ್ರಾಮದ 38 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢ ಪಟ್ಟಿದ್ದು, ಇವರು ಬಳ್ಳಾರಿಯ ಪ್ರತಿಷ್ಠಿತ ಕಂಪನಿ ಜಿಂದಾಲ್‌ ನಲ್ಲಿ ಕೆಲಸಕ್ಕೆ ಹೋಗಿ ಜೂ. 12 ರಂದು ತಮ್ಮ ಗ್ರಾಮಕ್ಕೆ ಆಗಮಿಸಿದ್ದರು. ಯಲಬುರ್ಗಾ ತಾಲೂಕಿನ ಕಕ್ಕಿಹಳ್ಳಿ ಗ್ರಾಮದ 14 ವರ್ಷದ ಬಾಲಕ ಸೋಂಕು ದೃಢ ಪಟ್ಟಿದೆ. ಈ ಬಾಲಕನು ಬೆಂಗಳೂರಿನಿಂದ ಜೂ. 16 ರಂದು ಗ್ರಾಮಕ್ಕೆ ಆಗಮಿಸಿದ್ದಾನೆ. ಗಂಗಾವತಿ ತಾಲೂಕಿನ ಶ್ರೀರಾಮನಗರ ಗ್ರಾಮದ 45 ವರ್ಷದ ಪುರುಷ ಮತ್ತು 40 ವರ್ಷದ ಮಹಿಳೆ ಹಾಗೂ 17 ವರ್ಷದ ಯುವತಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇವರೆಲ್ಲ ಆಂಧ್ರಪ್ರದೇಶದ ವಿಜಯವಾಡದಿಂದ ಜೂ. 16ರಂದು ಗ್ರಾಮಕ್ಕೆ ಆಗಮಿಸಿದ್ದರು.

SSLC ಎಕ್ಸಾಮ್‌: ಪರೀಕ್ಷಾ ಕೇಂದ್ರ ಕೇಳಿದ್ದೊಂದು, ಕೊಟ್ಟಿದ್ದು ಮತ್ತೊಂದು..!

ಎಲ್ಲರನ್ನೂ ಕೊರೋನಾ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ. ಸದ್ಯ ಇವರನ್ನು ಇಲ್ಲಿನ ಕೋವಿಡ್‌ ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಪತ್ತೆ ಕಾರ್ಯ ನಡೆದಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಜಿಂದಾಲ್‌ ಉದ್ಯೋಗಿಗೆ ಕೊರೋನಾ

ಕೊಪ್ಪಳ ಡಿಎಚ್‌ಒ ಅವರಿಗೆ ಬಳ್ಳಾರಿ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳು ದೂರವಾಣಿ ಸಂದೇಶದನ್ವಯ 26 ವರ್ಷದ ಜಿಂದಾಲ್‌ನಲ್ಲಿ ಕೆಲಸ ಮಾಡುತ್ತಿದ್ದ ನೌಕರನನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈತನ ಗಂಟಲು ದ್ರವವನ್ನು ವಿವಿಪುರ ತೋರಣಗಲ್‌ನಲ್ಲಿ ಪರೀಕ್ಷೆಗೆ ಒಳಪಪಡಿಸಲಾಗಿದ್ದು, ಇವರಲ್ಲಿ ಕೋರೊನಾ ಸೊಂಕು ದೃಡಪಟ್ಟಿದೆ. ಈ ವ್ಯಕ್ತಿಯು ಖುಷಿ ಖಾಸಗಿ ಆಸ್ಪತ್ರೆಗೆ ತಮ್ಮ ಸಂಬಂಧಿಕರನ್ನು ಭೇಟಿ ಮಾಡಲು ಬಂದಿರುವ ವಿಷಯ ತಿಳಿದು ಮಧ್ಯಾಹ್ನ 2 ಗಂಟೆಗೆ ಕೊಪ್ಪಳ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ವಾರಂಟೈನ್‌ ಉಲ್ಲಂಘಿಸಿದರೆ ಕಠಿಣ ಕ್ರಮ; ಎಡಿಸಿ

ಕ್ವಾರಂಟೈನ್‌ ಉಲ್ಲಂಘನೆ ಮಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ ಎಚ್ಚರಿಕೆ ನೀಡಿದ್ದಾರೆ. ಕೋವಿಡ್‌-19 ಸಾಂಕ್ರಮಿಕ ರೋಗ ತಡೆಗಟ್ಟವ ಹಿನ್ನೆಲೆಯಲ್ಲಿ ಸೋಂಕಿತರನ್ನು ಕ್ವಾರಂಟೈನ್‌ ಮಾಡಲಾಗುತ್ತಿದ್ದು, ಜಿಲ್ಲೆಗೆ ಕೋವಿಡ್‌ ವಾರ್‌ ರೂಂನಿಂದ ಜೂ.18 ರಂದು ಕ್ವಾರಂಟೈನ್‌ ಉಲ್ಲಂಘನೆ ಮಾಡಿದ ಜನರ ಮಾಹಿತಿ ಹಾಗೂ ವಿವರಗಳನ್ನು ಕಳುಹಿಸಲಾಗುತ್ತಿದೆ. ಇವರ ಬಗ್ಗೆ ಜಿಲ್ಲಾ ಕಂಟ್ರೋಲ್‌ ರೂಂ ನೀಡಿರುವ ಫೋನ್‌ ನಂಬರ್‌ಗಳಿಗೆ ಫೋನ್‌ ಮಾಡಿ ವಿಚಾರಿಸಿದಾಗ ಕ್ವಾರಂಟೈನ್‌ಗೆ ಒಳಗಾಗಬೇಕಾದ ವ್ಯಕ್ತಿಗಳು ನಿಯಮ ಮೀರಿ ಬೇರೆ ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಗೆ ಹೋಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇವರ ಮೇಲೆ ಕೋವೀಡ್‌-19 ಆಕ್ಟ್ 2020, ಎಪಿಡೆಮಿಕ್‌ ಡಿಸೀಸ್‌ ಆಕ್ಟ್ 1897 ರ ಅಡಿ ನಿಯಮಾನುಸಾರ ಕ್ರಮಕೈಗೊಳ್ಳಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ದೂರು ದಾಖಲಿಸಲು ತಿಳಿಸಲಾಗಿದೆ. ಹೋಂ-ಕ್ವಾರಂಟೈನ್‌ ಹಾಗೂ ಇನ್ಸಟ್ಯೂಷನ್‌ ಕ್ವಾರಂಟೈನ್‌ನಲ್ಲಿ ಇರುವವರು ಕ್ವಾರಂಟೈನ್‌ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಿದ್ದಾರೆ.