ಮೈಸೂರು(ಏ.23):  ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್‌ ಲಸಿಕೆ ನೀಡುವಲ್ಲಿ ಮೈಸೂರು ಇಡೀ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಹೇಳಿದರು.

ಕೊರೋನಾ ನಿಯಂತ್ರಣ ಕುರಿತು ಗುರುವಾರ ಜಿಪಂ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 18 ವರ್ಷ ಮೇಲ್ಪಟ್ಟವರಿಗೆ ಮೇ 1 ರಿಂದ ಕೊರೋನಾ ಲಸಿಕೆ ನೀಡಲಾಗುವುದು. ಜಿಲ್ಲೆಯಲ್ಲಿ 21 ಲಕ್ಷ ಮಂದಿಗೆ ಕೋವಿಡ್‌ ಲಸಿಕೆ ಹಾಕುವ ಗುರಿ ಹೊಂದಿದ್ದೇವೆ. ಜಿಲ್ಲೆಯಲ್ಲಿ ಈವರೆಗೆ 7 ಲಕ್ಷ ಜನರಿಗೆ ಕೊರೋನಾ ಲಸಿಕೆ ಹಾಕಲಾಗಿದೆ. ಅತ್ಯಂತ ವೇಗವಾಗಿ ಕೊರೋನಾ ಲಸಿಕೆ ಹಾಕಿದರೆ ಕೋವಿಡ್‌ ಹತೋಟಿಗೆ ಬರಲು ಸಾಧ್ಯವಾಗಲಿದೆ. ಹಾಗಾಗಿ ಲಸಿಕೆ ವಿತರಣೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಔಷಧ, ಆಕ್ಸಿಜನ್‌ ಕೊರತೆ ಉಂಟಾಗದಂತೆ ಡ್ರಗ್‌ ಕಂಟ್ರೋಲರ್‌ ಕಚೇರಿಯಿಂದ ಸಹಾಯವಾಣಿ ಆರಂಭಿಸಲಾಗುತ್ತಿದೆ ಎಂದರು.

ಬೆಡ್, ವೆಂಟಿಲೇಟರ್, ಆಕ್ಸಿಜನ್ ಕೊರತೆಯಾಗದಂತೆ ಶೀಘ್ರ ವ್ಯವಸ್ಥೆ: ಡಾ. ಸುಧಾಕರ್ ಭರವಸೆ .

ಏ. 1ರ ನಂತರ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಕೊರೋನಾ ನಿಯಂತ್ರಣಕ್ಕೆ ಸದಾ ಕಾಲ ವಾರ್‌ ರೂಮ್‌ ಕ್ರಿಯಾಶೀಲವಾಗಿರುತ್ತದೆ. ಮೈಸೂರಿನಲ್ಲಿ ಬಹುತೇಕ ತಡವಾಗಿ ಆಸ್ಪತ್ರೆಗೆ ಸೇರಿದ ಕೊರೋನಾ ಸೋಂಕಿತರು ಮೃತಪಟ್ಟಿದ್ದಾರೆ. ಕೆಲ ಸೋಂಕಿತರು ಆಸ್ಪತ್ರೆಗೆ ಬರುವ ಮಾರ್ಗ ಮಧ್ಯದಲ್ಲೇ ಮೃತರಾಗಿದ್ದಾರೆ. ಈ ಸಂಬಂಧ ವೈಜ್ಞಾನಿಕ ಕಾರಣ ತಿಳಿದುಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಾವಿನ ಪ್ರಮಾಣ ಕಡಿಮೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಚುನಾಯಿತ ಜನಪ್ರತಿನಿಧಿಗಳ ನೇತೃತ್ವದಲ್ಲಿ ಕೊರೋನಾ ಕುರಿತು ಅರಿವು ಮೂಡಿಸಲಾಗುತ್ತಿದೆ. ಅವಶ್ಯಕವಾಗಿ ಭಯ, ಆತಂಕಗೊಳ್ಳುವ ಜನರಿಗೆ ಸರಿಯಾದ ಮಾರ್ಗದರ್ಶನ ನೀಡಲಾಗುವುದು. ಇದಕ್ಕಾಗಿ ಸ್ವಯಂ ಸೇವಾ ಸಂಸ್ಥೆಗಳು, ಗಣ್ಯರನ್ನು ತೊಡಗಿಸಿಕೊಂಡು ಕೋವಿಡ್‌ ನಿಯಂತ್ರಣ ಮಾಡಲಾಗುವುದು ಎಂದು ಅವರು ಹೇಳಿದರು.

ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌, ಶಾಸಕರಾದ ಎಲ್‌. ನಾಗೇಂದ್ರ, ಎಂ. ಅಶ್ವಿನ್‌ಕುಮಾರ್‌, ಅನಿಲ್‌ ಚಿಕ್ಕಮಾದು, ಜಿಪಂ ಅಧ್ಯಕ್ಷೆ ಪರಿಮಳ ಶಾಮ , ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ನಗರ ಪೊಲೀಸ್‌ ಆಯುಕ್ತ ಚಂದ್ರಗುಪ್ತ, ನಗರಪಾಲಿಕೆ ಆಯುಕ್ತೆ ಶಿಲ್ಪನಾಗ್‌, ಎಸ್ಪಿ ರಿಷ್ಯಂತ್‌ ಮೊದಲಾದವರು ಇದ್ದರು.