ಲಾಕ್‌ಡೌನ್ ಎಫೆಕ್ಟ್: BRTS ಬೊಕ್ಕಸಕ್ಕೆ ಕೋಟಿ ಕೋಟಿ ನಷ್ಟ..!
ಅಭಿವೃದ್ಧಿ ಕಾರ್ಯಗಳು ಸ್ಥಗಿತ| ಪ್ರಯಾಣಿಕರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡೆ ಮರು ಪ್ರಾರಂಭ| ಮರು ಪ್ರಾರಂಭವಾದರೂ ಆರಂಭದಲ್ಲೇ ಒಮ್ಮೆಲೆ ಬಸ್ ಭರ್ತಿ ಮಾಡಿಕೊಂಡು ಕರೆದೊಯ್ಯುವುದು ಅಸಾಧ್ಯ| ಶೇ. 50 ರಷ್ಟು ಪ್ರಯಾಣಿಕರನ್ನು ಕರೆದೊಯ್ಯಲು ಹಾಗೂ ಸ್ಯಾನಿಟೈಸರ್ ವ್ಯವಸ್ಥೆ, ಎರಡು, ಮೂರು ಸೀಟುಗಳ ಅಂತರದಲ್ಲಿ ಪ್ರಯಾಣಿಕರನ್ನು ಕುಳ್ಳರಿಸಿ ಕರೆದುಕೊಂಡು ಹೋಗುವ ಕುರಿತು ಚಿಂತನೆ ನಡೆದಿದೆ|
ಮಯೂರ ಹೆಗಡೆ
ಹುಬ್ಬಳ್ಳಿ(ಏ.30): ಕೊರೋನಾ ಒಂದು ತಿಂಗಳ ಲಾಕ್‌ಡೌನ್ ಕಾರಣದಿಂದ ಹು-ಧಾ ಬಿಆರ್‌ಟಿಎಸ್ ಬೊಕ್ಕಸಕ್ಕೆ ಬರುತ್ತಿದ್ದ 7 ಕೋಟಿ ಆದಾಯಕ್ಕೆ ಕತ್ತರಿ ಬಿದ್ದಿದೆ. ಅಲ್ಲದೆ ಬೂಮ್ ಬ್ಯಾರಿಯರ್ ಅಳವಡಿಕೆ ಸೇರಿ ಕೆಲ ಅಭಿವೃದ್ಧಿ ಕಾರ್ಯವೂ ಸ್ಥಗಿತಗೊಂಡಿದೆ!
ಹು-ಧಾ ಮಹಾನಗರದ ಮಹತ್ವಾಕಾಂಕ್ಷಿ ಯೋಜನೆಯಾದ ಬಿಆರ್‌ಟಿಎಸ್ ಅಧಿಕೃತವಾಗಿ ಉದ್ಘಾಟನೆಗೊಂಡ (ಫೆ. 2) ಒಂದು ತಿಂಗಳ ಬಳಿಕ ಕೊರೋನಾ ಲಾಕ್‌ಡೌನ್ ಕಾರಣದಿಂದ ಮಾ. 24ರಿಂದ ಸಂಚಾರ ನಿಲ್ಲಿಸಿದೆ.
ಸ್ಥಗಿತಕ್ಕೂ ಮುನ್ನ ಹುಬ್ಬಳ್ಳಿ ಧಾರವಾಡದ ನಡುವೆ ಪ್ರತಿದಿನ 96 ಚಿಗರಿ ಸಂಚಾರ ಮಾಡುತ್ತಿದ್ದವು. ದಿನ 1200 ಟ್ರಿಪ್ ಗಳಿಂದ 15-16 ಲಕ್ಷ ಆದಾಯವಿತ್ತು. ಇದು ಕೆಲ ದಿನಗಳಲ್ಲಿ 18 ಲಕ್ಷ ತಲುಪಿದ್ದೂ ಉಂಟು. ಕೆಲದಿನ ಖಾಸಗಿ ಬೇಂದ್ರೆ ಬಸ್ ಬಂದ್ ಮಾಡಿದ್ದಾಗ ಇನ್ನೂ ಹೆಚ್ಚಿನ ಆದಾಯ ಬಿಆರ್‌ಟಿಎಸ್ ಬೊಕ್ಕಸಕ್ಕೆ ಬಂದಿತ್ತು.
ಕೊರೋನಾ ವಿರುದ್ಧ ಹೋರಾಟ: ರೈಲ್ವೆ ಇಲಾಖೆಯಿಂದ ಪಿಪಿಇ ಕಿಟ್ ತಯಾರಿಕೆ
ಈ ಬಗ್ಗೆ ಮಾತನಾಡಿದ ಬಿಆರ್‌ಟಿಎಸ್ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್, ತಿಂಗಳ ಆದಾಯ ನಷ್ಟವಾಗಿದೆ. ಲಾಕ್‌ಡೌನ್ ಒಂದು ವಾರಕ್ಕೂ ಮೊದಲು ಎಲ್ಲ 32 ಜಂಕ್ಷನ್ ಗಳಲ್ಲಿ ಬೂಮ್ ಬ್ಯಾರಿಯರ್ ಅಳವಡಿಕೆಗೆ ಮುಂಬೈ ಗುರಗಾಂವ್‌ನ ಟೆಕ್ನೋಟ್ರಾಸ್ ಪ್ರೈ. ಲಿ.ಗೆ ಗುತ್ತಿಗೆ ನೀಡಲಾಗಿತ್ತು. ಇನ್ನು ಟೋಲ್‌ನಾಕಾ ಕಾಮಗಾರಿ ಕೂಡ ನಿಂತಿದೆ. ಲಾಕ್‌ಡೌನ್ ಸಡಿಲವಾದ ಬಳಿಕ ಅವನ್ನು ಆರಂಭಿಸಲಿದ್ದೇವೆ ಎಂದರು.
ಮರು ಪ್ರಾರಂಭವಾದರೂ ಆರಂಭದಲ್ಲೇ ಒಮ್ಮೆಲೆ ಬಸ್ ಭರ್ತಿ ಮಾಡಿಕೊಂಡು ಕರೆದೊಯ್ಯುವುದು ಅಸಾಧ್ಯ. ಶೇ. 50 ರಷ್ಟುಪ್ರಯಾಣಿಕರನ್ನು ಕರೆದೊಯ್ಯಲು ಹಾಗೂ ಸ್ಯಾನಿಟೈಸರ್ ವ್ಯವಸ್ಥೆ, ಎರಡು, ಮೂರು ಸೀಟುಗಳ ಅಂತರದಲ್ಲಿ ಪ್ರಯಾಣಿಕರನ್ನು ಕುಳ್ಳರಿಸಿ ಕರೆದುಕೊಂಡು ಹೋಗುವ ಕುರಿತು ಚಿಂತನೆ ನಡೆದಿದೆ ಎಂದರು.
ಮೂರ್ನಾಲ್ಕು ದಿನಕ್ಕೊಮ್ಮೆ ಚಾಲೂ!
ಚಿಗರಿಯಲ್ಲಿ ಎಸಿ ಸೇರಿದಂತೆ ಮತ್ತಿತರ ಸೌಲಭ್ಯ ಇರುವ ಕಾರಣ ಅವನ್ನು ನಿರಂತರವಾಗಿ ಬಂದ್ ಮಾಡಿಡಲು ಸಾಧ್ಯವಿಲ್ಲ. ಹೀಗಾಗಿ ಮೂರ್ನಾಲ್ಕು ದಿನಕ್ಕೊಮ್ಮೆ ಚಾಲೂ ಮಾಡಿ ಟರ್ಮಿನಲ್ ನಲ್ಲಿಯೆ ಒಂದು ಸಣ್ಣ ಸುತ್ತು ಹೊಡೆಸಿ ಇಡಲಾಗುತ್ತಿದೆ. ಪ್ರತಿದಿನ ಟೆಕ್ನಿಶಿಯನ್‌ಗಳು ಎಲ್ಲ ಬಸ್ಸುಗಳನ್ನು ಪರಿಶೀಲಿಸಿ ಸಮಸ್ಯೆ ಕಂಡುಬಂದರೆ ರಿಪೇರಿ ಮಾಡಿಡುತ್ತಿದ್ದಾರೆ.
ಲಾಕ್‌ಡೌನ್ ಕಾರಣದಿಂದ 6 ರಿಂದ 7 ಕೋಟಿ ನಷ್ಟವಾಗಿದೆ. ಸರ್ಕಾರದ ನಿರ್ದೇಶನದ ಬಳಿಕ ಪ್ರಯಾಣಿಕರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಮರು ಪ್ರಾರಂಭಿಸಲಾಗುವುದು ಎಂದು ಬಿಆರ್ಟಿಎಸ್ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಅವರು ಹೇಳಿದ್ದಾರೆ.