ಭದ್ರಾವತಿಯಲ್ಲಿ 6 ವರ್ಷದ ಬಾಲಕ ಸೇರಿ 7 ಮಂದಿಗೆ ಕೊರೋನಾ

ಭದ್ರಾವತಿಯ ಗಾಂಧಿ​ನಗರದ ಮೊದಲಿಯಾರ್‌ ಸಮುದಾಯ ಭವನ ಸಮೀಪದ ಒಂದೇ ಮನೆಯ 6 ವರ್ಷದ ಬಾಲಕ ಸೇರಿ 5 ಮಂದಿಯಲ್ಲಿ ಕೊರೋನಾ ವೈರಸ್‌ ಕಾಣಿಸಿಕೊಂಡಿದೆ. ಈ ಕುರಿಯಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

7 COVID 19 Cases Confirmed in Bhadravathi on June 30

ಭದ್ರಾವತಿ(ಜು.01): ಉಕ್ಕಿನ ನಗರದಲ್ಲಿ ದಿನದಿಂದ ದಿನಕ್ಕೆ ಕೊರೋನಾ ವೈರಸ್‌ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಂಗಳವಾರ ಒಂದೇ ದಿನ 7 ಪ್ರಕರಣಗಳು ಧೃಢಪಟ್ಟಿವೆ. ಇದರಿಂದಾಗಿ ನಾಗರಿಕರು ಆತಂಕಕ್ಕೆ ಒಳಗಾಗಿದ್ದಾರೆ.

ಗಾಂಧಿ​ನಗರದ ಮೊದಲಿಯಾರ್‌ ಸಮುದಾಯ ಭವನ ಸಮೀಪದ ಒಂದೇ ಮನೆಯ 6 ವರ್ಷದ ಬಾಲಕ ಸೇರಿ 5 ಮಂದಿಯಲ್ಲಿ ಕೊರೋನಾ ವೈರಸ್‌ ಕಾಣಿಸಿಕೊಂಡಿದೆ. 56 ವರ್ಷದ ವ್ಯಕ್ತಿ, 44 ವರ್ಷದ ಆತನ ಹೆಂಡತಿ, 26 ವರ್ಷದ ಪುತ್ರಿ, 6 ವರ್ಷದ ಮೊಮ್ಮಗ ಹಾಗೂ 43 ವರ್ಷದ ನಾದಿನಿಯಲ್ಲಿ ಕೊರೋನಾ ವೈರಸ್‌ ದೃಢಪಟ್ಟಿದೆ. ಇತ್ತೀಚೆಗೆ ಜೂ.19ರಂದು ಈ ಮನೆಯ ಮಹಿಳೆಯೊಬ್ಬರು ಮಗನಿಗೆ ಹೆಣ್ಣು ನೋಡಲು ಖಾಸಗಿ ವಾಹನದಲ್ಲಿ ಸುಮಾರು 10 ಮಂದಿಯೊಂದಿಗೆ ತುಮಕೂರಿಗೆ ತೆರಳಿ ಜೂ.21ರಂದು ಹಿಂದಿರುಗಿದ್ದರು.

ಕೆಲವು ದಿನಗಳ ಹಿಂದೆ ಹಳೇನಗರದ ಉಪ್ಪಾರ ಬೀದಿಯಲ್ಲಿ ವಾಸವಿರುವ ಚಾಲಕನಲ್ಲಿ ಕೊರೋನಾ ವೈರಸ್‌ ಕಾಣಿಸಿಕೊಂಡಿತ್ತು. ಇದೀಗ ಒಬ್ಬ ಮಹಿಳೆಯಿಂದ ಮನೆಯ 4 ಮಂದಿಗೆ ವೈರಸ್‌ ಹರಡಿದೆ ಎನ್ನಲಾಗಿದೆ. ವಾಹನದಲ್ಲಿ ತೆರಳಿದ್ದ 10 ಜನರನ್ನು ಸಹ ನಿಗಾದಲ್ಲಿ ಇರಿಸಲಾಗಿತ್ತು. ಗಂಟಲು ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಮಗನ ಪ್ರಯೋಗಾಲಯದ ವರದಿ ಇನ್ನೂ ಬಂದಿಲ್ಲ.

ಶಿವಮೊಗ್ಗ ಜಿಲ್ಲೆಯಲ್ಲಿ ಕೊರೋನಾ ಮಹಾಸ್ಫೋಟ; 22 ಪಾಸಿಟಿವ್‌

ಹೊಸಮನೆ ಸುಭಾಷ್‌ನಗರದಲ್ಲಿ 2 ಪ್ರಕರಣಗಳು ಪತ್ತೆಯಾಗಿದ್ದು, ಸೊಸೆಯ ಹೆರಿಗೆ ಹಿನ್ನೆಲೆಯಲ್ಲಿ ತಮಿಳುನಾಡಿಗೆ ತೆರಳಿದ್ದ 56 ವರ್ಷದ ವ್ಯಕ್ತಿ ಹಾಗೂ ಆತನ 48 ವರ್ಷದ ಹೆಂಡತಿಯಲ್ಲಿ ಕೊರೋನಾ ವೈರಸ್‌ ಕಾಣಿಸಿಕೊಂಡಿದೆ.

3 ಕಡೆ ಸೀಲ್‌ ಡೌನ್‌

ಕೊರೋನಾ ವೈರಸ್‌ ದೃಢಪಟ್ಟಹಿನ್ನೆಲೆಯಲ್ಲಿ ನಗರಸಭೆ ಪೌರಾಯುಕ್ತ ಮನೋಹರ್‌, ಪರಿಸರ ಅಭಿಯಂತರ ರುದ್ರೇಗೌಡ ನೇತೃತ್ವದಲ್ಲಿ ಅ​ಧಿಕಾರಿಗಳು, ಸಿಬ್ಬಂದಿ, ಆರೋಗ್ಯ ಇಲಾಖೆ ಅಧಿ​ಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಪೊಲೀಸ್‌ ಸಿಬ್ಬಂದಿ ಸ್ಥಳ ಪರಿಶೀಲನೆ ಜೊತೆಗೆ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯದೊಂದಿಗೆ ಸ್ಯಾನಿಟೈಸ್‌ ಕೈಗೊಂಡರು. ಮನೆಯ 100 ಹಾಗೂ 200 ಮೀಟರ್‌ ವಿಸ್ತೀರ್ಣದಲ್ಲಿ ಕಂಟೈನ್‌ಮೆಂಟ್‌ ವಲಯದೊಂದಿಗೆ ಸೀಲ್‌ ಡೌನ್‌ ಮಾಡಲಾಗಿದೆ. ಈ ಮನೆಯೊಂದಿಗೆ ಸಂಪರ್ಕದಲ್ಲಿದ್ದ ಮಹಿಳೆಯೊಬ್ಬರು ವಾಸಿಸುತ್ತಿದ್ದ ಹೊಸಮನೆ ಭೋವಿ ಕಾಲೋನಿ ಎಡಭಾಗದ 7ನೇ ತಿರುವಿನ 100 ಹಾಗೂ 200 ಮೀಟರ್‌ ವಿಸ್ತೀರ್ಣದಲ್ಲಿ ಕಂಟೈನ್‌ಮೆಂಟ್‌ ವಲಯದೊಂದಿಗೆ ಸೀಲ್‌ ಡೌನ್‌ ಮಾಡಲಾಗಿದೆ.

ಹೊಸಮನೆ ಸುಭಾಷ್‌ನಗರದ 2ನೇ ತಿರುವಿನಲ್ಲಿ ವಾಸಿಸುತ್ತಿದ್ದ ದಂಪತಿಯಲ್ಲಿ ಕೊರೋನಾ ವೈರಸ್‌ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಈ ಮನೆಯ 100 ಹಾಗೂ 200 ಮೀಟರ್‌ ವಿಸ್ತೀರ್ಣದಲ್ಲಿ ಕಂಟೈನ್‌ಮೆಂಟ್‌ ವಲಯದೊಂದಿಗೆ ಸೀಲ್‌ ಡೌನ್‌ ಮಾಡಲಾಗಿದೆ. ಒಟ್ಟು ನಗರದಲ್ಲಿ 3 ಭಾಗದಲ್ಲಿ ಸೀಲ್‌ಡೌನ್‌ ಮಾಡಲಾಗಿದ್ದು, ನಗರದ ನಾಗರಿಕರಲ್ಲಿ ದಿನದಿಂದ ದಿನಕ್ಕೆ ಆತಂಕ ಹೆಚ್ಚಾಗುತ್ತಿದೆ.
 

Latest Videos
Follow Us:
Download App:
  • android
  • ios