ಮಲ್ಪೆ (ಜ.25):  ಇಲ್ಲಿನ ಕಡೆಕಾರು ಗ್ರಾಮದ 65ರ ಹರೆಯದ ಗಂಗಾಧರ ಜಿ. ಕಡೆಕಾರು ಅವರು ಪದ್ಮಾಸನ ಶೈಲಿಯಲ್ಲಿ (ಪದ್ಮಾಸನ ಭಂಗಿಯಲ್ಲಿ ಕಾಲುಗಳನ್ನು ಮಡಚಿ, ಸರಪಳಿಯಿಂದ ಬಿಗಿದು, ಬ್ರೆಸ್ವ್‌ ಸ್ಟೊ್ರೕಕ್‌ ಶೈಲಿಯಲ್ಲಿ) ಸಮುದ್ರದಲ್ಲಿ 1.40 ಕಿ.ಮಿ. ಈಜಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ನವರು ಗಂಗಾಧರ್‌ ಅವರಿಗೆ ಈ ಭಂಗಿಯಲ್ಲಿ 800 ಮೀಟರ್‌ ಈಜುವ ಗುರಿ ನೀಡಿದ್ದರು, ಆದರೆ ಹಿರಿಯ ರಾಷ್ಟ್ರೀಯ ಈಜುಪಟು, ಸಮುದ್ರ ಈಜು ತರಬೇತುದಾರ ಗಂಗಾಧರ್‌ ಅವರು ಈ ಗುರಿ ಮೀರಿ 1400 ಮೀಟರ್‌ ಈಜಿ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ದಾಖಲಾದರು. ಇದುವರೆಗೆ ಯಾರೂ ಈ ದಾಖಲೆಯನ್ನು ಮಾಡಿಲ್ಲ, ಇದು ಹೊಸ ದಾಖಲೆಯಾಗಿದೆ.

ಅಬ್ಬರದ ಅಲೆಗಳಿಗೆ ಎದೆಯೊಡ್ಡಿ, ಕಾಲುಗಳ ಸಹಕಾರ ಇಲ್ಲದೇ ಕೇವಲ ಕೈಗಳಿಂದ ನೀರನ್ನು ಸೀಳುತ್ತಾ, ಇಷ್ಟುದೂರ ಈಜುವುದಕ್ಕೆ ಅವರು ತೆಗೆದುಕೊಂಡ ಸಮಯ 1 ಗಂಟೆ 13 ನಿಮಿಷ 7 ಸೆಕುಂಡುಗಳು. ಬೆಳಗ್ಗೆ 8.36 ಗಂಟೆಗೆ ಮಲ್ಪೆ ಪಡುಕರೆ ಬೀಚಿನಲ್ಲಿ ಇಂಡಿಯ ಬುಕ್‌ ಆಪ್‌ ರೆಕಾರ್ಡ್ಸ್ನ ಪ್ರತಿನಿಧಿ ಹರೀಶ್‌ ಆರ್‌. ಮತ್ತು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರು ಸಮ್ಮುಖದಲ್ಲಿ ಪದ್ಮಾಸನ ಹಾಕಿ ಕಾಲಿಗೆ ಸರಪಳಿ ಕಟ್ಟಿಬೀಗ ಹಾಕಿಸಿಕೊಂಡು ಸಮುದ್ರಕ್ಕೆ ಧುಮುಕಿದರು. 9.40 ಗಂಟೆಗೆ ದಡ ಸೇರಿದರು.

ಸಿಬ್ಬಂದಿಯೊಂದಿಗೆ ಕರಾವಳಿಯಲ್ಲಿ ಸುತ್ತು ಹಾಕಿದ ಭಾಸ್ಕರ್ ರಾವ್ .

ಅವರು ಈಜುವಾಗ ಕರಾವಳಿ ಕಾವಲು ಪಡೆಯ ಬೋಟುಗಳು ಮತ್ತು ಮೀನುಗಾರರ ದೋಣಿಗಳು ಸುರಕ್ಷತೆಯನ್ನು ಒದಗಿಸಿದ್ದವು. ದಾಖಲೆ ನಿರ್ಮಿಸಿದ ಅವರನ್ನು ಉಡುಪಿ ಶಾಸಕ ಕೆ. ರಘುಪತಿ ಭಟ್‌, ಸಹಕಾರಿ ಮೀನುಗಾರಿಕಾ ಫೇಡರೇಶನ್‌ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ, ಕರಾವಳಿ ಕಾವಲುಪಡೆ ಪೊಲೀಸ್‌ ಅಧೀಕ್ಷಕ ಚೇತನ್‌ ಆರ್‌. ಮತ್ತು ಸ್ಥಳೀಯ ಗಣ್ಯರು ಅಭಿನಂದಿಸಿದರು. ಇತ್ತೀಚಿಗೆ ಯುವಜನತೆಯಲ್ಲಿ ಕಡಿಮೆಯಾಗುತ್ತಿರುವ ಆತ್ಮಸ್ಥೆ ೖರ್ಯ ಮತ್ತು ಆತ್ಮರಕ್ಷಣೆಯ ಮನೋಭಾವವನ್ನು ಹೆಚ್ಚಿಸುವುದಕ್ಕೆ, ಸ್ಫೂರ್ತಿಯಾಗುವುದಕ್ಕೆ ತಾವು ಈ ರೀತಿ ಸಮುದ್ರದಲ್ಲಿ ಅಪಾಯಕಾರಿ ಸಾಧನೆ ಮಾಡಿದ್ದಾಗಿ ಗಂಗಾಧರ್‌ ಈ ಸಂದರ್ಭದಲ್ಲಿ ಹೇಳಿದರು.

ಜೆಲ್ಲಿ ಫಿಶ್‌ಗಳ ಆತಂಕ ಇತ್ತು...

ಗಂಗಾಧರ್‌ ಅವರು ಈ ದಾಖಲೆಗಾಗಿ ತಿಂಗಳುಗಳಿಂದ ಸಮುದ್ರದಲ್ಲಿ ಈಜುತ್ತಾ ಅಭ್ಯಾಸ ಮಾಡುತಿದ್ದರು. ಆದರೆ ಕಳೆದ ಏಳೆಂಟು ದಿನಗಳಿಂದ ಸಮುದ್ರದಲ್ಲಿ ಜೆಲ್ಲಿ ಫಿಶ್‌ (ಮೈಗೆ ತಾಗಿದರೆ ತುರಿಕೆಯನ್ನುಂಟು ಮಾಡುವ ಲೋಳೆ ಮೀನು) ಕಾಣಿಸಿಕೊಂಡು ತೊಂದರೆ ಕೊಡುತಿದ್ದವು. ಗಂಗಾಧರ ಅವರಿಗೆ ಭಾನುವಾರವೂ ಈ ಆತಂಕ ಇತ್ತು. ಆದರೆ ಜೆಲ್ಲಿ ಫಿಶ್‌ ತೊಂದರೆ ಕೊಡಲಿಲ್ಲ, ದಾಖಲೆ ನಿರ್ಮಿಸುವುದಕ್ಕೆ ಅವೂ ಸಹಕಾರ ನೀಡಿದವು ಎಂದವರು ನಗುತ್ತಾ ಹೇಳಿದರು.