ನವದೆಹಲಿ/ ಬೆಂಗಳೂರು(ಜು.13): ತೀವ್ರತರದ ಕೊರೋನಾ ಸೋಂಕಿಗೆ ರಾಮಬಾಣ ಎಂದು ಹೇಳಲಾಗುತ್ತಿರುವ ಬೆಂಗಳೂರು ಮೂಲದ ಬಯೋಕಾನ್‌ ಕಂಪನಿಯ ಇಟೋಲಿಜಮ್ಯಾಬ್‌ ಔಷಧ ಬಳಸಿ ಒಬ್ಬರಿಗೆ ಚಿಕಿತ್ಸೆ ನೀಡಲು 32,000 ರು. ವೆಚ್ಚವಾಗಲಿದೆ ಎಂದು ಸಂಸ್ಥೆಯ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಶಾ ಹೇಳಿದ್ದಾರೆ.

ಸೋರಿಯಾಸಿಸ್‌ ಚರ್ಮರೋಗಕ್ಕೆ ಔಷಧವಾಗಿ ಬಳಸುವ ಇಟೋಲಿಜಮ್ಯಾಬ್‌ (ಅಲ್ಜುಮ್ಯಾಬ್‌) ಚುಚ್ಚುಮದ್ದನ್ನು ಕೊರೋನಾ ರೋಗಿಗಳಿಗೆ ನೀಡಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಶುಕ್ರವಾರ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಈ ಕುರಿತು ಶಾ ಭಾನುವಾರ ಟ್ವೀಟ್‌ ಮಾಡಿದ್ದಾರೆ.

ನಿನ್ನೆ ದೇಶದಲ್ಲಿ 30,800 ಜನರಿಗೆ ಕೊರೋನಾ, 503 ಸಾವು

ಇಟೋಲಿಜಮ್ಯಾಬ್‌ನ ಒಂದು ಇಂಜೆಕ್ಷನ್‌ಗೆ (25 ಎಂಜಿ/5 ಎಂಎಲ್‌) 7950 ರು. ಬೆಲೆಯಿದೆ. ಒಬ್ಬ ರೋಗಿಗೆ 4 ಇಂಜೆಕ್ಷನ್‌ ನೀಡಬೇಕಾಗುತ್ತದೆ. ಆಕ್ಸಿಜನ್‌ ಸಪೋರ್ಟ್‌ ಮೇಲಿರುವ ರೋಗಿಗೆ ಇದನ್ನು ನೀಡಿದ ಮರುದಿನವೇ ಚೇತರಿಸಿಕೊಳ್ಳಲು ಆರಂಭಿಸುತ್ತಾರೆ. ಈ ಔಷಧ ತೆಗೆದುಕೊಂಡವರೆಲ್ಲ ಎರಡು ವಾರದಲ್ಲಿ ಗುಣಮುಖರಾಗಿ ಡಿಸ್ಚಾಜ್‌ರ್‍ ಆಗಿದ್ದಾರೆ. ಅಮೆರಿಕದಲ್ಲಿ ಈ ಔಷಧ ಕಂಡುಹಿಡಿದಿದ್ದರೆ ಜನರು ಹುಚ್ಚೆದ್ದು ಕೂಗಾಡಿಬಿಡುತ್ತಿದ್ದರು ಎಂದು ಅವರು ಹೇಳಿದ್ದಾರೆ.

120 ದಿನ, 4 ಆಸ್ಪತ್ರೆಯಲ್ಲಿ ಪ್ರಯೋಗ:

120 ದಿನಗಳ ಕಾಲ ದೇಶದ ನಾಲ್ಕು ಕೇಂದ್ರಗಳಲ್ಲಿ ಈ ಔಷಧದ ಪ್ರಯೋಗ ನಡೆದಿದೆ. ಮುಂಬೈನ ಕೆಇಎಂ ಮತ್ತು ನಾಯರ್‌ ಆಸ್ಪತ್ರೆ ಹಾಗೂ ದೆಹಲಿಯ ಎಲ್‌ಎನ್‌ಜೆಪಿ ಮತ್ತು ಏಮ್ಸ್‌ ಆಸ್ಪತ್ರೆಯಲ್ಲಿ ಇದನ್ನು ಪ್ರಯೋಗಿಸಲಾಗಿದೆ. ನಂತರವೇ ಔಷಧ ನಿಯಂತ್ರಣ ಪ್ರಾಧಿಕಾರ ಇದಕ್ಕೆ ಒಪ್ಪಿಗೆ ನೀಡಿದೆ. ವೈದ್ಯರೆಲ್ಲ ಈ ಔಷಧದ ಪರಿಣಾಮದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ ಎಂದೂ ಕಿರಣ್‌ ಶಾ ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಪ್ರಯೋಗದ ವೇಳೆ 100ಕ್ಕೂ ಹೆಚ್ಚು ಕೊರೋನಾ ರೋಗಿಗಳು ಇದರಿಂದ ಗುಣಮುಖರಾಗಿದ್ದಾರೆ.

ಈ ಔಷಧವನ್ನು ಆರಂಭದಲ್ಲೇ ಕೊರೋನಾ ರೋಗಿಗಳಿಗೆ ನೀಡುವಂತಿಲ್ಲ. ತೀವ್ರ ಪ್ರಮಾಣದ ಉಸಿರಾಟದ ತೊಂದರೆಯಿದ್ದರೆ ಮತ್ತು ರೋಗಿಯು ವೆಂಟಿಲೇಟರ್‌ನಲ್ಲಿ ಇದ್ದಾಗ ಇದನ್ನು ನೀಡಬಹುದು. ಏಳು ವರ್ಷಗಳ ಹಿಂದೆಯೇ ಬಯೋಕಾನ್‌ ಇದನ್ನು ಕಂಡುಹಿಡಿದು, ಸೋರಿಯಾಸಿಸ್‌ಗೆ ಔಷಧವಾಗಿ ಮಾರಾಟ ಮಾಡುತ್ತಿದೆ. ಇದು ತೀವ್ರ ಪ್ರಮಾಣದ ಕೊರೋನಾ ಸೋಂಕನ್ನೂ ಗುಣಪಡಿಸುತ್ತದೆ ಎಂಬುದು ಈಗ ಸಾಬೀತಾಗಿರುವುದರಿಂದ ಇದನ್ನು ಬಳಸಲು ಔಷಧ ನಿಯಂತ್ರಣ ಪ್ರಾಧಿಕಾರ ಒಪ್ಪಿಗೆ ನೀಡಿದೆ.

ಬೆಂಗ್ಳೂರಲ್ಲಿ 1525 ಮಂದಿಗೆ ಸೋಂಕು: 16 ದಿನದ ಕಂದಮ್ಮ ಬಲಿ, ಮೃತರ ಸಂಖ್ಯೆ 274ಕ್ಕೆ ಏರಿಕೆ

‘ಇದು ಮಧ್ಯಮ ಪ್ರಮಾಣದಿಂದ ತೀವ್ರ ಪ್ರಮಾಣದ ಕೊರೋನಾ ಸೋಂಕಿತರಿಗೆ ನೀಡಲು ಔಷಧ ಪ್ರಾಧಿಕಾರದ ಒಪ್ಪಿಗೆ ಪಡೆದ ಜಗತ್ತಿನ ಮೊದಲ ಔಷಧವಾಗಿದೆ’ ಎಂದು ಬಯೋಕಾನ್‌ ಹೇಳಿಕೊಂಡಿದೆ.

ಖ್ಯಾತ ವೈದ್ಯರಿಂದ ಶ್ಲಾಘನೆ:

ಇಟೋಲಿಜಮ್ಯಾಬ್‌ ಔಷಧವನ್ನು ಕೊರೋನಾ ರೋಗಿಗಳ ಮೇಲೆ ಪ್ರಯೋಗಿಸಿದ ವೈದ್ಯರು ಈ ಔಷಧದ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಇಟೋಲಿಜಮ್ಯಾಬ್‌ನಿಂದ ಕೊರೋನಾದಿಂದ ಸಂಭವಿಸುವ ಸಾವನ್ನು ಸಾಕಷ್ಟುಕಡಿಮೆ ಮಾಡಬಹುದು. ಅಷ್ಟೇ ಅಲ್ಲ, ಐಸಿಯು ಹಾಗೂ ವೆಂಟಿಲೇಟರ್‌ನ ಅಗತ್ಯವೂ ಕಡಿಮೆಯಾಗಲಿದೆ’ ಎಂದು ದೆಹಲಿಯ ಎಲ್‌ಎನ್‌ಎಚ್‌ ಆಸ್ಪತ್ರೆಯ ನಿರ್ದೇಶಕ ಡಾ

ಸುರೇಶ್‌ ಕುಮಾರ್‌ ಹೇಳಿದ್ದಾರೆಂದು ಬಯೋಕಾನ್‌ ತಿಳಿಸಿದೆ. ಮುಂಬೈನ ನಾಯರ್‌ ಆಸ್ಪತ್ರೆಯ ಮುಖ್ಯಸ್ಥ ಡಾ ಮೋಹನ್‌ ಜೋಶಿ ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂದು ಬಯೋಕಾನ್‌ ಹೇಳಿಕೊಂಡಿದೆ.

ದೇಶಪಾಂಡೆ, ರಿಜ್ವಾನ್‌ ಅಭಿನಂದನೆ

ಕೊರೋನಾ ಸೋಂಕು ಗುಣಪಡಿಸುವ ಇಟೋಲಿಜಮ್ಯಾಬ್‌ ಔಷಧದ ಶೋಧಕ್ಕಾಗಿ ಕಾಂಗ್ರೆಸ್‌ ನಾಯಕರಾದ ಆರ್‌.ವಿ.ದೇಶಪಾಂಡೆ ಮತ್ತು ರಿಜ್ವಾನ್‌ ಅರ್ಷದ್‌ ಅವರು ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಶಾ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ದೇಶಪಾಂಡೆ, ‘ಕೊರೋನಾ ರೋಗ ನಿಯಂತ್ರಣಕ್ಕೆ ತುರ್ತಾಗಿ ಅಗತ್ಯವಿದ್ದ ಔಷಧವನ್ನು ಕಿರಣ್‌ ಶಾ ನೀಡಿದ್ದಾರೆ. ಇದು ಬಯೋಕಾನ್‌ನ ಸಾಧನೆಗೆ ಮಹತ್ವದ ಮೈಲುಗಲ್ಲು. ಇದರಿಂದ ಲಕ್ಷಾಂತರ ಜೀವಗಳು ಉಳಿಯಲಿವೆ. ಕೊರೋನಾ ಮಹಾಮಾರಿಯನ್ನು ಕಟ್ಟಿಹಾಕುವ ರೇಸ್‌ನಲ್ಲಿ ನಾವು ಭಾರತಕ್ಕೇ ಮುಂಚೂಣಿ ನಾಯಕತ್ವ ಒದಗಿಸಿದಂತಾಗಿದೆ’ ಎಂದಿದ್ದಾರೆ.