ಶಿವಮೊಗ್ಗ ಸ್ಫೋಟ : 616 ಡಿಟೋನೇಟರ್ ಪತ್ತೆಹಚ್ಚಿದ ಎಎಸ್‌ಸಿ ತಂಡ
ಹುಣಸೋಡು ಗ್ರಾಮದ ಕ್ರಷರ್‌ನಲ್ಲಿ ಜನವರಿ 21ರಂದು ಸ್ಫೋಟ ನಡೆದ ಸ್ಥಳದಲ್ಲಿ ಪೊಲೀಸರ ಪರಿಶೀಲನೆ ಮುಂದುವರಿಸಿದ್ದು ಅತ್ಯಧಿಕ ಪ್ರಮಾಣದಲ್ಲಿ ಡಿಟೋನೇಟರ್‌ಗಳು ಪತ್ತೆಯಾಗುತ್ತಿವೆ.
ಶಿವಮೊಗ್ಗ (ಫೆ.08): ಹುಣಸೋಡು ಗ್ರಾಮದ ಕ್ರಷರ್‌ನಲ್ಲಿ ಜನವರಿ 21ರಂದು ಸ್ಫೋಟ ನಡೆದ ಸ್ಥಳದಲ್ಲಿ ಪೊಲೀಸರ ಪರಿಶೀಲನೆ ಮುಂದುವರಿಸಿದ್ದು, ಸ್ಥಳದಲ್ಲಿ ಮತ್ತಷ್ಟುಡಿಟೋನೇಟರ್‌ಗಳು ಪತ್ತೆಯಾಗಿವೆ.
ಎಎಸ್‌ಸಿ ತಂಡ ಹಾಗೂ ಪೊಲೀಸರು ಸೇರಿ ಕೈಗೊಂಡ ಜಂಟಿ ಸ್ಥಳ ತಪಾಸಣೆ ವೇಳೆ ಕ್ರಷರ್ ಸ್ಫೋಟಗೊಂಡ ಜಾಗದಲ್ಲೇ 175 ಡಿಟೋನೇಟರ್‌ಗಳು ಪತ್ತೆಯಾಗಿವೆ. ಈ ಮೂಲಕ ಹುಣಸೋಡು, ಗೆಜ್ಜೇನಹಳ್ಳಿಯ ತೆಂಗಿನ ತೋಟ ಹಾಗೂ ಘಟನೆಯಲ್ಲಿ ಮೃತಪಟ್ಟಪ್ರವೀಣನ ಮನೆಯಲ್ಲಿ ಸಿಕ್ಕ ಡಿಟೋನೇಟರ್ ಸೇರಿ ಒಟ್ಟು 616 ಡಿಟೋನೇಟರ್‌ನ್ನು ಎಎಸ್‌ಸಿ ತಂಡ ಪತ್ತೆ ಮಾಡಿದೆ. ಹಾಗೆಯೇ ಈ ತನಕ ಒಟ್ಟು 415 ಜಿಲೆಟಿನ್ ಪೇಸ್ಟ್‌ಗಳು ಸಿಕ್ಕಿವೆ.
ಖಚಿತ ಮಾಹಿತಿ ಮೇರೆಗೆ ಎಎಸ್‌ಸಿ ತಂಡ ಕೈಗೊಳ್ಳುತ್ತಿರುವ ಪ್ರತಿ ತಪಾಸಣೆ ವೇಳೆಯಲ್ಲೂ ಡಿಟೋನೇಟರ್ ಹಾಗೂ ಜಿಲೆಟಿನ್‌ಗಳು ಪತ್ತೆಯಾಗುತ್ತಿವೆ. ಇದನ್ನು ಆರೋಪಿಗಳು ಕಳೆದ ಅನೇಕ ವರ್ಷಗಳಿಂದ ದಾಸ್ತಾನು ಮಾಡುತ್ತಿದ್ದುದು ದೃಢಪಟ್ಟಿದೆ. ಈ ಎಲ್ಲ ಡಿಟೋನೇಟರ್ ಹಾಗೂ ಜಿಲೆಟಿನ್ ಪೇಸ್ಟ್ ಅನ್ನು ಪೊಲೀಸರು ಭದ್ರಾವತಿಯ ಬಂಡಿಗುಡ್ಡದಲ್ಲಿ ವಿಐಎಸ್‌ಎಲ್ ಕಾರ್ಖಾನೆಗೆ ಸೇರಿದ ಮ್ಯಾಗಜೀನ್‌ನಲ್ಲಿ ಸುರಕ್ಷಿತವಾಗಿಸಿದ್ದಾರೆ.
'ಶಿವಮೊಗ್ಗ ಸ್ಫೋಟದಲ್ಲಿ ಸತ್ತವರು ಕಾರ್ಮಿಕರಲ್ಲ.. ಸಮಾಜ ದ್ರೋಹಿಗಳು: ಪರಿಹಾರ ಕೊಡ್ಬೇಡಿ' ..
ಮೂಲಗಳ ಪ್ರಕಾರ ಸ್ಫೋಟ ನಡೆದ ಸುತ್ತಮುತ್ತಲ ಪ್ರದೇಶಗಳಲ್ಲಿ ಆರೋಪಿಗಳು ಅನೇಕ ವರ್ಷಗಳಿಂದ ಸ್ಫೋಟಕಗಳನ್ನು ದಾಸ್ತಾನು ಮಾಡುತ್ತಿದ್ದಾರೆ. ಅದನ್ನು ತಮ್ಮದೇ ನೆಟ್‌ವರ್ಕ್ ಮೂಲಕ ಚಿಲ್ಲರೆಯಾಗಿ ಮಾರಾಟ ಮಾಡುತ್ತಿದ್ದರು ಎನ್ನಲಾಗುತ್ತಿದೆ.
ಸ್ಫೋಟಕ ಬಳಸಿ ಪರವಾನಗಿ ಇಲ್ಲದ ಕ್ವಾರಿಗಳು ಹಾಗೂ ಕ್ರಷರ್‌ಗೆ ಹೊಂದಿಕೊಂಡ ಪ್ರದೇಶಗಳಲ್ಲಿರುವ ಕಲ್ಲುಬಂಡೆಗಳನ್ನು ಸಿಡಿಸಿ ಅವುಗಳ ಜಲ್ಲಿಯನ್ನು ಮಾರಾಟ ಮಾಡುವ ಜಾಲ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ. ಇದಕ್ಕೆ ಬೆನ್ನಲುಬಾಗಿ ಬಂಧಿತ ಆರೋಪಿಗಳು ಆಂಧ್ರಪ್ರದೇಶ ಮತ್ತಿತರ ಕಡೆಗಳಿಂದ ಅಕ್ರಮವಾಗಿ ಭಾರೀ ಪ್ರಮಾಣದಲ್ಲಿ ಸ್ಫೋಟಕ ತರಿಸಿ ಕ್ವಾರಿ ಹಾಗೂ ಕ್ರಷರ್‌ನವರಿಗೆ ಪೂರೈಕೆ ಮಾಡುತ್ತಿದ್ದರು ಎಂಬ ಮಾಹಿತಿ ತನಿಖೆ ವೇಳೆ ತಿಳಿದುಬಂದಿದೆ.