Asianet Suvarna News Asianet Suvarna News

ತಾರಿಹಾಳ ಅಗ್ನಿ ದುರಂತದ ಕರಾಳತೆ: ಕುಟುಂಬಕ್ಕಿದ್ದ ಆಸರೆಯೇ ಕಳಚಿತು, 6 ತಿಂಗಳ ಕೂಸು ಅನಾಥ..!

ಸರ್ಕಾರ ತಾರಿಹಾಳ ಅಗ್ನಿ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 5 ಲಕ್ಷ ಪರಿಹಾರ ಕೊಡುವುದಾಗಿ ಭರವಸೆ ನೀಡಿತ್ತು. ಆದರೆ ಈ ವರೆಗೂ ಪರಿಹಾರ ಕೊಟ್ಟಿಲ್ಲ. 

6 Month Old Infant is an Orphan Due to Father Dies in Tarihal Fire Tragedy in Hubballi grg
Author
Bengaluru, First Published Aug 27, 2022, 9:25 PM IST

ಶಿವಾನಂದ ಗೊಂಬಿ

ಹುಬ್ಬಳ್ಳಿ(ಆ.27):  ‘ನನ್ನ ಮಗಾ ಆ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗಾಕ ಶುರು ಮಾಡಿ ಬರೀ ಒಂದು ವಾರ ಆಗಿತ್ರಿ.. ಅವಂಗ ಆರು ತಿಂಗಳ ಕೂಸು ಐತಿ ನೋಡ್ರಿ.. ಅಷ್ಟರೊಳಗೆ ನಮ್ಮನ್ನೆಲ್ಲ ಬಿಟ್ಟು, ತನ್ನ ಕೂಸಿನ್ನೂ ಅನಾಥ ಮಾಡಿ ಹೊಂಟಹೋದಾ..’!

ಇದು ಕಳೆದ ತಿಂಗಳು ಇಲ್ಲಿನ ತಾರಿಹಾಳದ ಸ್ಪಾರ್ಕಲ್‌ ಕ್ಯಾಂಡಲ್‌ ತಯಾರಿಸುವ ಆಕ್ಷನಿಕ್‌ ಇನ್ನೋವೇಶನ್‌ ಪ್ರೈ.ಲಿ. ಫ್ಯಾಕ್ಟರಿಯಲ್ಲಿ ನಡೆದ ಅಗ್ನಿ ದುರಂತದಲ್ಲಿ ಮೃತಪಟ್ಟ ಮಾಳೇಶನ ತಂದೆ ಬಸವರಾಜ ಹದ್ದನವರ ಹೇಳುವ ಮಾತಿದು.
ಮಾಳೇಶ 27 ವರ್ಷದ ಯುವಕ. ಕಲಘಟಗಿ ತಾಲೂಕಿನ ಲಿಂಗನಕೊಪ್ಪ ಗ್ರಾಮದವನು. ರೈತಾಪಿ ಕುಟುಂಬ. ಆದರೂ ಈತನ ಓದಿಗೆ ತಂದೆ ಬಸವರಾಜ ಪ್ರೋತ್ಸಾಹಿಸಿದ್ದ. ಈ ಕಾರಣದಿಂದ ಡಿಪ್ಲೊಮಾ ಮುಗಿಸಿದ ಬಳಿಕ ಬೆಳಗಾವಿ ಜಿಲ್ಲೆಯ ನಿಡಸೋಸಿ ಎಂಜಿನಿಯರಿಂಗ್‌ ಕಾಲೇಜ್‌ನಲ್ಲಿ ಮೆಕಾನಿಕಲ್‌ ಎಂಜಿನಿಯರಿಂಗ್‌ ಮಾಡಿದ್ದ. ಬಳಿಕ ಪುಣೆ, ಬೆಂಗಳೂರಲ್ಲಿ ವಿವಿಧ ಕಾರ್ಖಾನೆಗಳಲ್ಲಿ ಕೆಲಸ ನಿರ್ವಹಿಸಿದ್ದ. ಕೋವಿಡ್‌ ಬಂದ ಮೇಲೆ ಅಲ್ಲಿನ ಕೆಲಸ ಬಿಟ್ಟು ಊರಿಗೆ ಮರಳಿದ್ದ. ಊರಲ್ಲಿ ಇರುವ ಜಮೀನನ್ನೇ ನೋಡಿಕೊಂಡು ಕೆಲದಿನ ಕೃಷಿ ಮಾಡಿಕೊಂಡು ಹೋದರಾಯ್ತು ಎಂದುಕೊಂಡಿದ್ದ. ಅದೇ ರೀತಿ ಕೆಲ ದಿನ ಕೃಷಿ ಮಾಡಿಕೊಂಡಿದ್ದ. ಬಳಿಕ ಕೋವಿಡ್‌ ಪೂರ್ಣ ಮುಗಿದ ಮೇಲೆ ಅತ್ತ ಕೃಷಿಯ ಜತೆಗೆ ಬೇರೆ ಬೇರೆ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡಿಕೊಂಡಿದ್ದ.

ಅನುಮತಿ ಕೊಡದಿದ್ದರೂ ಹುಬ್ಬಳ್ಳಿ ಈದ್ಗಾದಲ್ಲಿ ಗಣೇಶೋತ್ಸವ: ಪ್ರಮೋದ್‌ ಮುತಾಲಿಕ್‌

ಇನ್ನೂ ತಾರಿಹಾಳದ ಸ್ಪಾರ್ಕಲ್‌ ಕ್ಯಾಂಡಲ್‌ ಫ್ಯಾಕ್ಟರಿಯಲ್ಲಿ ಕೆಲಸ ಖಾಲಿಯಿದೆ. ಜತೆಗೆ ಸಂಬಳ ಕೂಡ ಹೆಚ್ಚಿಗೆ ಕೊಡುತ್ತಾರೆ ಎಂದುಕೊಂಡು ಘಟನೆಯ ನಡೆಯುವ ವಾರ ಮುಂಚೆಯಷ್ಟೇ ಕೆಲಸಕ್ಕೆ ಸೇರಿದ್ದನಂತೆ. ಅಷ್ಟರೊಳಗೆ ಸ್ಪಾರ್ಕಲ್‌ ಕ್ಯಾಂಡಲ್‌ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಅದರಲ್ಲಿ ತೀವ್ರ ಗಾಯಗೊಂಡಿದ್ದ ಈತ ಅದೇ ದಿನ ರಾತ್ರಿ ಕೊನೆಯುಸಿರೆಳೆದಿದ್ದ.

6 ತಿಂಗಳು ಕೂಸು:

ಬೆಂಗಳೂರಲ್ಲಿ ಕೆಲಸ ಬಿಟ್ಟು ಬಂದ ಮೇಲೆ ಕೃಷಿ ಮಾಡಿಕೊಂಡಿದ್ದ ಈತನಿಗೆ ಮನೆಯಲ್ಲಿ ಒಂದುವರೆ ವರ್ಷದ ಹಿಂದೆಯಷ್ಟೇ ಮದುವೆ ಮಾಡಿಸಿದ್ದರು. ಈತನಿಗೆ 6 ತಿಂಗಳು ಮಗುವಿದೆ. ಆ ಮಗು ಈಗ ಅನಾಥವಾದಂತಾಗಿದೆ. ಇನ್ನೂ ಈತನ ತಂದೆ ತಾಯಿಗೆ ಇಬ್ಬರು ಗಂಡು ಮಕ್ಕಳು. ಇಬ್ಬರಲ್ಲಿ ಈತನೇ ಕಿರಿಯ ಪುತ್ರ. ಹಿರಿಯ ಪುತ್ರ ಕಳೆದ ನಾಲ್ಕೈದು ವರ್ಷದ ಹಿಂದೆ ತೀರಿಕೊಂಡಿದ್ದನಂತೆ. ಹೀಗಾಗಿ ಈ ಕುಟುಂಬಕ್ಕೆ ಈತನೇ ಆಸರೆಯಾಗಿದ್ದ. ಇದೀಗ ಈ ಕೊಂಡಿಯೂ ಕಳಚಿದಂತಾಗಿದೆ. ಈ ಮಗನೂ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾನೆ ಎಂದು ಮಗನನ್ನು ನೆನಪಿಸಿಕೊಂಡು ತಂದೆ ಬಸವರಾಜ ಕಣ್ಣೀರು ಸುರಿಸುತ್ತಾರೆ.

ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಮೂತ್ರ ವಿಸರ್ಜನೆಗೆ ಬಯಲೇ ಗತಿ..!

ಪರಿಹಾರ ಸಿಕ್ಕಿಲ್ಲ:

ಸರ್ಕಾರ ತಾರಿಹಾಳ ಅಗ್ನಿ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ . 5 ಲಕ್ಷ ಪರಿಹಾರ ಕೊಡುವುದಾಗಿ ಭರವಸೆ ನೀಡಿತ್ತು. ಆದರೆ ಈ ವರೆಗೂ ಪರಿಹಾರ ಕೊಟ್ಟಿಲ್ಲ. ಈ ರೀತಿ ತಾರಿಹಾಳದ ಅಗ್ನಿ ದುರಂತ ಹಲವು ಕುಟುಂಬಗಳನ್ನೇ ಅಲ್ಲೋಲ ಕಲ್ಲೋಲ ಮಾಡಿದಂತಾಗಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಕೊಡಬೇಕು. ಅನಧಿಕೃತ ಫ್ಯಾಕ್ಟರಿ ತೆಗೆದು ಸಮಸ್ಯೆ ಮಾಡಿದ ಮಾಲೀಕರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಈ ಫ್ಯಾಕ್ಟರಿ ಮಾಲೀಕರ ಮೇಲೆ ಕೈಗೊಳ್ಳುವ ಕ್ರಮ ಮುಂದೆ ಎಲ್ಲ ಕೈಗಾರಿಕೋದ್ಯಮಗಳಿಗೆ ಎಚ್ಚರಿಕೆ ಗಂಟೆಯಾಗಬೇಕು. ಯಾರು ಅನಧಿಕೃತವಾಗಿ ಫ್ಯಾಕ್ಟರಿ ಪ್ರಾರಂಭಿಸುವ ದುಸ್ಸಾಹಸಕ್ಕೆ ಕೈಹಾಕಬಾರದು. ಕೈಗಾರಿಕೆಗಳಲ್ಲಿ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತಾಗಬೇಕು ಎಂಬುದು ಈ ಘಟನೆಯಲ್ಲಿ ಸಂತ್ರಸ್ತರ ಅಳಲು.

ನನ್ನ ಮಗ ಆ ಫ್ಯಾಕ್ಟರಿಗೆ ಕೆಲಸಕ್ಕೆ ಬರೀ ಒಂದು ವಾರ, ಹತ್ತು ದಿನದಿಂದಷ್ಟೇ ಹೋಗಲು ಶುರು ಮಾಡಿದ್ದ. ಎಂಜಿನಿಯರಿಂಗ್‌ ಓದಿದ್ದ. ಒಂದೂವರೆ ವರ್ಷದ ಹಿಂದೆಯಷ್ಟೇ ಮದುವೆ ಮಾಡಿದ್ದೇವು. ಅವನಿಗೆ 6 ತಿಂಗಳು ಕೂಸಿದೆ. ಈಗ ನಮ್ಮನ್ನೆಲ್ಲ ಬಿಟ್ಟು ಆತನೇ ಹೋಗಿದ್ದಾನೆ. ಸರ್ಕಾರದಿಂದ ಈ ವರೆಗೂ ಪರಿಹಾರ ಬಂದಿಲ್ಲ ಅಂತ ಮೃತ ಮಾಳೇಶನ ತಂದೆ ಬಸವರಾಜ ಹಡ್ಡನವರ ತಿಳಿಸಿದ್ದಾರೆ. 
 

Follow Us:
Download App:
  • android
  • ios