ಸೋಂಕು ತೀವ್ರ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ದಿನದಿನವೂ ಕೊರೋನಾ ಸಾವು-ಸೋಂಕಿತರ ಸಂಖ್ಯೆ ಏರಿಗತಿಯಲ್ಲೇ ಸಾಗುತ್ತಿದೆ. ಚಿಕಿತ್ಸೆ ನೀಡುವ ವೈದ್ಯರು, ನರ್ಸ್‌ಗಳು, ಆಶಾ ಕಾರ್ಯಕರ್ತೆಯರನ್ನು ಬಿಡುತ್ತಿಲ್ಲ. ಇದರಿಂದ ಮುಂದಿನ ದಿನಗಳ ಬಗ್ಗೆ ತೀವ್ರ ಆತಂಕದ ಸ್ಥಿತಿ ಎದುರಾಗಿದೆ. 

ತುಮಕೂರು (ಏ.02):  ಈಗಾಗಲೇ ತುಮಕೂರು ಜಿಲ್ಲೆಯಲ್ಲಿ 6ಕ್ಕೂ ಹೆಚ್ಚು ವೈದ್ಯರಿಗೆ ಕೊರೋನಾ ಸೋಂಕು ತಗುಲಿದೆ. ನರ್ಸ್‌ಗಳು, ಆಶಾ ಕಾರ್ಯಕರ್ತರು ಕೂಡ ಸೋಂಕಿಗೆ ಗುರಿಯಾಗಿದ್ದರು. 

ಇದು ಹೀಗೆ ಮುಂದುವರೆದರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮಾಡುವವರು ಯಾರು ಎಂಬ ಪ್ರಶ್ನೆ ಕೂಡ ಉದ್ಭವವಾಗಿದೆ. ಕೊರೋನಾ ಹಿಮ್ಮೆಟ್ಟಿಸುವ ದೊಡ್ಡ ಸವಾಲನ್ನು ಜಿಲ್ಲಾಡಳಿತ ಹೊತ್ತಿದ್ದು ಪ್ರತಿ ದಿನ ಪ್ರತಿಯೊಂದು ತಾಲೂಕಿನ ಭೇಟಿ ನೀಡಿ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಆದರೆ ದಿನೇ ದಿನೇ ಕೊರೋನಾ ತನ್ನ ಉಗ್ರ ರೂಪ ತೋರುತ್ತಿದೆ. 

ಮಂಡ್ಯ : 8 ಗ್ರಾಮ ಸೀಲ್‌ಡೌನ್‌! ..

ಪ್ರತಿ ದಿನ ತುಮಕೂರಿನಲ್ಲಿ 2 ಸಾವಿರ ಸಮೀಪ ಸೋಂಕಿತರು ಬರುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಬೆಡ್‌ಗಳಿಲ್ಲ, ತೀವ್ರ ನಿಗಾ ಘಟಕದಲ್ಲೂ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಹೀಗಾಗಿ ಪ್ರತಿದಿನ ಒಂದು ರೀತಿಯಲ್ಲಿ ಆತಂಕ ನಿರ್ಮಾಣವಾಗಿದೆ.

ಹಾಟ್‌ಸ್ಪಾಟ್‌ಗಳಲ್ಲಿ ಕೊರೋನಾ ನಿಯಂತ್ರಣ ಸಾಧ್ಯವಾಗಿಲ್ಲ

ತುಮಕೂರಿನ ಸುಶಿಕ್ಷಿತ ಪ್ರದೇಶಗಳೆಲ್ಲಾ ಕೊರೋನಾ ಹಾಟ್‌ಸ್ಪಾಟ್‌ಗಳಾಗಿ ಮಾರ್ಪಟ್ಟಿವೆ. ಕೆಲ ವಾರ್ಡ್‌ಗಳಲ್ಲಿ ಮಹಾನಗರ ಪಾಲಿಕೆಯಿಂದ ಜಾಗೃತಿ ಮೂಡಿಸಲಾಗುತ್ತಿದೆಯಾದರೂ ಕೊರೋನಾ ನಿಯಂತ್ರಿಸಲು ಸಾಧ್ಯವಾಗಿಲ್ಲ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿಲ್ಲ. ಸಕ್ರಿಯ ಸೋಂಕಿತರೇ 11 ಸಾವಿರ ದಾಟಿಯಾಗಿದೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 100 ದಾಟಿಯಾಗಿದೆ. 

ಗುಣಮುಖರಾಗಿ ಡಿಸ್‌ಜಾರ್ಜ್ ಪ್ರಮಾಣಕ್ಕಿಂತ ಹೊಸ ಸೋಂಕಿತರು ಮೂರು ಪಟ್ಟು ಹೆಚ್ಚಾಗುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲೂ ಕೂಡ ಬೆಡ್‌ಗಳಿಲ್ಲ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಕೊರೋನಾ ರುದ್ರ ತಾಂಡವಕ್ಕೆ ಜಿಲ್ಲೆಯ ಜನ ತತ್ತರಿಸಿ ಹೋಗಿದ್ದಾರೆ. ಯಾವಾಗ ಇದು ಮುಗಿದು ಮಾಮೂಲಿಯಂತೆ ಜನ ಜೀವನ ಆಗುತ್ತದೆ ಎಂಬ ನಿರೀಕ್ಷೆಯಲ್ಲಿ ಇದ್ದಾರೆ. ಪ್ರತಿದಿನ ಎಲ್ಲರ ಮನೆಗಳಲ್ಲೂ ಆತಂಕದ ಕಾರ್ಮೋಡ ಕವಿದಿದೆ. ಮನೆಯಲ್ಲಿ ಒಬ್ಬರಿಗೆ ಜ್ವರ ಬಂದರೆ ಉಳಿದವರು ಆತಂಕ ಪಟ್ಟುಕೊಳ್ಳಬೇಕಾಗಿದೆ. ಒಟ್ಟಾರೆಯಾಗಿ ಕೊರೋನಾ ಮಹಾಮಾರಿ ತುಮಕೂರು ಜಿಲ್ಲೆ ಅಕ್ಷರಶಃ ತತ್ತರಿಸಿಹೋಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona