ಕೋಲಾರ[ಸೆ.10] ಮೊಹರಂ ನಿಮಿತ್ತ ಶಾಲೆಗೆ ರಜೆ ಘೊಷಿಸಲಾಗಿತ್ತು. ಮಕ್ಕಳು ತಾವೇ ತಯಾರಿಸಿದ್ದ ಚಿಕ್ಕ ಚಿಕ್ಕ ಗಣೇಶ ವಿಗ್ರಹವನ್ನು ವಿಸರ್ಜನೆ ಮಾಡಲು  ಕೆರೆಗೆ ತೆರಳಿದ್ದರು. ಆದರೆ ವಿಧಿಯ ಕೈವಾಡ ಬೇರೆಯೇ ಆಗಿತ್ತು. ಗಣೇಶ ಮುಳುಗಿಸಲು ಹೋದ ಮಕ್ಕಳು ನೀರಿನಲ್ಲಿ ಮುಳುಗಿ ಹೋದರು... ಈಗ ಪಾಲಕರು ಮತ್ತು ಕುಟುಂಬಕ್ಕೆ ಕಣ್ಣೀರು ಮಾತ್ರ  ಉಳಿದಿದೆ.

ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಕ್ಯಾಸಂಬಲ್ಲಿ ಹೋಬಳಿಯ ಮರದಘಟ್ಟ ಕೆರೆ 6 ಮಕ್ಕಳ ಜೀವ ಬಲಿಪಡೆದಿದೆ. ನಾಲ್ವರು ಬಾಲಕಿಯರು ಸೇರಿದಂತೆ ಇಬ್ಬರು ಬಾಲಕರು ನೀರು ಪಾಲಾದರು. ರಕ್ಷಿತಾ, ತೇಜಾ, ವೈಷ್ಣವಿ, ವೀಣಾ, ರೋಹಿತ ಮತ್ತು ಧನುಷ್ ಕಂದಮ್ಮಗಳು ಗಣೇಶ ವಿಸರ್ಜನೆಗೆ ತೆರಳಿ ಪ್ರಾಣ ಕಳೆದುಕೊಂಡಿದ್ದಾರೆ.

ಆರ್ಕೆಸ್ಟ್ರಾದಲ್ಲಿ ಹಾಡುತ್ತಿದ್ದಾಗಲೇ ಕುಸಿದುಬಿದ್ದು ಗಾಯಕ ಸಾವು

ಮೊಹರಂ ಹಬ್ಬದ ರಜೆ ನಿಮಿತ್ತ ಮಕ್ಕಳು ತಾವೇ ಗಣೇಶ ಮೂರ್ತಿ ತಯಾರಿಸಿ ಆಟವಾಡುತ್ತಿದ್ದರು. ಬಳಿಕ ಮೂರ್ತಿ ವಿಸರ್ಜನೆ ಮಾಡಲು ಕೆರೆಗೆ ತೆರಳಿದ್ದರು. ಈ ವೇಳೆ ಕಾಲು ಜಾರಿ ಬಿದ್ದು ಮಕ್ಕಳು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಆಂಡರ್ ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಜಿಎಫ್ ನ ಶವಗಾರಕ್ಕೆ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಭೇಟಿ ನೀಡಿ ವಿವರ ಪಡೆದುಕೊಂಡರು. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ ಎರಡು ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಕಲ್ಯಾಣ ನಿಧಿಯಿಂದ 50 ಸಾವಿರ ಪರಿಹಾರವನ್ನು ನೀಡಲಾಗಿದೆ. ಕುಟುಂಬಸ್ಥರ ಆಕ್ರಂದನ ಎಂಥವರ ಕಣ್ಣಲ್ಲಿಯೂ ನೀರು ತರಿಸುವಂತಿತ್ತು.