ಬೆಂಗಳೂರು [ಡಿ.31]:  ನಾಲ್ಕು ವರ್ಷಗಳ ನಂತರ ರಾಜಧಾನಿಯಲ್ಲಿ ಮತ್ತೆ ಅಕ್ರಮ ಶಸ್ತ್ರಾಸ್ತ್ರ ಮಾರಾಟ ದಂಧೆ ಶುರು ಮಾಡಲು ಸಜ್ಜಾಗಿದ್ದ ಕುಖ್ಯಾತ ಪಾತಕಿ ಮೃತ ಬ್ರಿಗೇಡ್‌ ಅಜಂನ ಶಿಷ್ಯರು ಸಿಸಿಬಿ ಬಲೆಗೆ ಬಿದ್ದಿದ್ದಾರೆ.

ಹಾವೇರಿ ಜಿಲ್ಲೆ ಅಸ್ಲಾಂ ಗುತ್ತಲ್‌ ಅಲಿಯಾಸ್‌ ಅಸ್ಲಾಂ, ಮೈಸೂರಿನ ಜಾವೀದ್‌ ಖಾನ್‌ ಅಲಿಯಾಸ್‌ ಜಾವೀದ್‌, ಧರ್ಮಣ್ಣ ದೇವಲಪ್ಪ ಚೌವ್ಹಾಣ್‌, ಧಾರವಾಡದ ರಾಯಣ್ಣಗೌಡ, ಬಿಸ್ಮಿಲ್ಲಾ ನಗರದ ಸೈಯದ್‌ ರಿಜ್ವಾನ್‌ ಅಲಿಯಾಸ್‌ ಅಲ್ಲಾವುದ್ದೀನ್‌ ಹಾಗೂ ಪಶ್ಚಿಮ ಬಂಗಾಳ ಮೂಲದ ರೋಹನ್‌ ಮಂಡಲ್‌ ಬಂಧಿತರು. ಆರೋಪಿಗಳಿಂದ ಮೂರು ಪಿಸ್ತೂಲ್‌, ಒಂದು ರಿವಾಲ್ವಾರ್‌ ಹಾಗೂ ಎಂಟು ಜೀವಂತ ಗುಂಡುಗಳನ್ನು ಜಪ್ತಿ ಮಾಡಲಾಗಿದೆ. ತಮ್ಮ ಗುರು ಬ್ರಿಗೇಡ್‌ ಅಜಂ ಮೃತನಾದ ಬಳಿಕ ನಗರ ತೊರೆದಿದ್ದ ಆರೋಪಿಗಳು, ಮತ್ತೆ ಬೆಂಗಳೂರಿನಲ್ಲಿ ಚಟುವಟಿಕೆ ಪ್ರಾರಂಭಿಸಲು ಸಿದ್ಧತೆ ನಡೆಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಕಾಟನ್‌ಪೇಟೆಯ ಬಿನ್ನಿಮಿಲ್‌ ಮೈದಾನದ ಸಮೀಪ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಸ್ಕೆಟ್‌ಬಾಲ್‌ ಆಟಗಾರ ಗನ್‌ ಡೀಲರ್‌:

ಹಾವೇರಿ ಜಿಲ್ಲೆಯ ಅಸ್ಲಾಂ, ರಾಷ್ಟ್ರೀಯ ಮಟ್ಟದ ಬಾಸ್ಕೆಟ್‌ಬಾಲ್‌ ಆಟಗಾರನಾಗಿದ್ದ. ಎರಡ್ಮೂರು ಬಾರಿ ರಾಷ್ಟ್ರವನ್ನು ಸಹ ಆತ ಪ್ರತಿನಿಧಿಸಿ ಆಟವಾಡಿದ್ದ. ಅಷ್ಟರಲ್ಲಿ ಹಣದಾಸೆಗೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ ಅಸ್ಲಾಂ, ನಿಧಾನವಾಗಿ ಪಾತಕಲೋಕದಲ್ಲಿ ಅಕ್ರಮ ಶಸ್ತ್ರಾಸ್ತ್ರ ಪೂರೈಕೆಗೆ ಕುಖ್ಯಾತಿ ಗಳಿಸಿದ್ದ. ತರುವಾಯ ಆತನಿಗೆ ಶಿವಾಜಿನಗರದ ಬ್ರಿಗೇಡ್‌ ಅಜಂ ಪರಿಚಯವಾಯಿತು. ಅಲ್ಲಿಂದ ಅಜಂ ತಂಡದಲ್ಲಿ ಗುರುತಿಸಿಕೊಂಡು ಅಪರಾಧ ಕೃತ್ಯಗಳನ್ನು ಮುಂದುವರೆಸಿದ್ದ. 2015ರಲ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ಬ್ರಿಗೇಡ್‌ ಸಾವನ್ನಪ್ಪಿದ್ದ ನಂತರ ಅಸ್ಲಾಂ ಹಾಗೂ ಜಾವೀದ್‌, ರಾಜಧಾನಿಯಿಂದ ಹೊರಗಡೆಗೆ ತಮ್ಮ ಕಾರ್ಯ ಕ್ಷೇತ್ರವನ್ನು ಬದಲಾಯಿಸಿದ್ದರು ಎಂದು ಸಿಸಿಬಿ ಅಧಿಕಾರಿಗಳು ವಿವರಿಸಿದ್ದಾರೆ.

ಬೆಂಗ್ಳೂರಲ್ಲಿ ಸುದ್ದಿಯಾಗಿದ್ದ ಬ್ಲ್ಯಾಕ್‌ ಪಲ್ಸರ್‌ ಬೈಕ್ ಯಾದಗಿರಿಯಲ್ಲೂ ಸದ್ದು...!..

ಬೆಂಗಳೂರು ನಗರದ ರೌಡಿಗಳಿಗೆ ಮೊದಲ ಬಾರಿಗೆ ಪಿಸ್ತೂಲ್‌, ರಿವಾಲ್ವಾರ್‌ಗಳ ಪೂರೈಸಿದ್ದು ಅಸ್ಲಾಂ. ಆತನ ವಿರುದ್ಧ ಜೆ.ಜೆ.ನಗರ, ಡಿ.ಜೆ.ಹಳ್ಳಿ, ಬಂಟ್ವಾಳ ಹಾಗೂ ಹಲಗೇರಿ ಠಾಣೆಗಳಲ್ಲಿ ನಾಲ್ಕು ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣ ಮತ್ತು ಒಂದು ಕೊಲೆ ಯತ್ನ ಸೇರಿದಂತೆ ಎಂಟು ಪ್ರಕರಣಗಳು ದಾಖಲಾಗಿವೆ. ಈ ಶಸ್ತ್ರಾಸ್ತ್ರ ಮಾರಾಟ ದಂಧೆಯಲ್ಲಿ ಅಸ್ಲಾಂಗೆ ಮೈಸೂರಿನ ಜಾವೀದ್‌ ಖಾನ್‌ ಸಾಥ್‌ ನೀಡಿದ್ದು, ಖಾನ್‌ ಮೇಲೂ ಪ್ರಕರಣಗಳಿವೆ. ತಮ್ಮ ಗುರು ಸಾವಿನ ಬಳಿಕ ನಗರ ಬಿಟ್ಟಿದ್ದ ಈ ಇಬ್ಬರು, ಮತ್ತೆ ನಗರದಲ್ಲಿ ಸಕ್ರಿಯವಾಗುತ್ತಿದ್ದರು. ಇದಕ್ಕಾಗಿ ತಮ್ಮ ತಂಡವನ್ನು ಒಟ್ಟುಗೂಡಿಸಿದ್ದ ಅಸ್ಲಾಂ ಹಾಗೂ ಜಾವೀದ್‌, ಬ್ರಿಗೇಡ್‌ನಂತೆ ದಂಧೆ ಮುನ್ನಡೆಸಲು ತಯಾರಿ ನಡೆಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಸಿಕ್ಕಿತು ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.

ಈ ಸುಳಿವು ಆಧರಿಸಿ ಕಾರ್ಯಾಚರಣೆಗಿಳಿದ ಸಂಘಟಿತ ಅಪರಾಧ ದಳದ ಎಸಿಪಿ ನಾಗರಾಜ್‌ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ ಮುರುಗೇಂದ್ರಯ್ಯ ಹಾಗೂ ಕೇಶವಮೂರ್ತಿ ತಂಡ, ಪಿಸ್ತೂಲ್‌ ಹಾಗೂ ರಿವಾಲ್ವಾರ್‌ ಇಟ್ಟುಕೊಂಡು ದರೋಡೆಗೆ ಹೊಂಚು ಹಾಕಿದ್ದಾಗ ಬಿನ್ನಿಮಿಲ್‌ ಮೈದಾನದ ಬಳಿ ಆರೋಪಿಗಳನ್ನು ಬಂಧಿಸಿದೆ.