ಸಾಗರ: 6 ಎಕರೆ ಸರ್ಕಾರಿ ಒತ್ತುವರಿ ಜಾಗ ತೆರವು
ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟಿದ್ದ ಸುಮಾರು 6 ಎಕರೆ ಸರ್ಕಾರಿ ಜಮೀನನ್ನು ಅಕ್ರಮವಾಗಿ ಸಾಗುವಳಿ ಮಾಡಿದ್ದ ಜಾಗವನ್ನು ತೆರವುಗೊಳಿಸಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಸಾಗರ(ಜೂ.01): ಪಟ್ಟಣ ಸಮೀಪದ ಬಳಸಗೋಡು ಸರ್ವೆ ನಂ. 36ರಲ್ಲಿರುವ ಸುಮಾರು 6 ಎಕರೆ ಜಾಗವನ್ನು ನಗರಸಭೆ ಪೌರಾಯುಕ್ತ ಎಚ್.ಕೆ.ನಾಗಪ್ಪ ಹಾಗೂ ರಾಜಸ್ವ ನಿರೀಕ್ಷಕ ಆನಂದ್ ನಾಯ್ಕ ನೇತೃತ್ವದಲ್ಲಿ ಭಾನುವಾರ ಬೆಳಗ್ಗೆ ತೆರವುಗೊಳಿಸಲಾಯಿತು.
ಬಳಸಗೋಡು ಸರ್ವೆ ನಂ. 36ರಲ್ಲಿನ 6 ಎಕರೆ ಸರ್ಕಾರಿ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕೆ ಮೀಸಲು ಇರಿಸಲಾಗಿತ್ತು. ಆದರೆ ಈ ಜಾಗದಲ್ಲಿ ಕಳೆದ ಕೆಲವು ವರ್ಷಗಳಿಂದ ಕೆಲವು ವ್ಯಕ್ತಿಗಳು ಸಾಗುವಳಿ ಮಾಡಿ, ಮನೆ ನಿರ್ಮಾಣ ಸೇರಿ ಇನ್ನಿತರೆ ಚಟುವಟಿಕೆ ಕೈಗೊಳ್ಳುವ ಮೂಲಕ ಒತ್ತುವರಿಗೆ ಪ್ರಯತ್ನ ನಡೆಸಿದ್ದರು.
ನಗರಸಭೆ ಅಧಿಕಾರಿಗಳು ತೆರವುಗೊಳಿಸಿರುವ ಜಾಗದ ಪಕ್ಕದಲ್ಲಿ ಖಾಸಗಿಯವರೊಬ್ಬರ ಲೇಔಟ್ ಇದೆ. ಇಲ್ಲಿ 6 ಎಕರೆ ಸರ್ಕಾರಿ ಜಾಗದ ಜೊತೆಗೆ 2 ಎಕರೆ ನಗರಸಭೆ ಜಾಗವೂ ಇದೆ. ಕಳೆದ ವರ್ಷ ಕೆಲವು ಪ್ರಭಾವಿಗಳು 6 ಎಕರೆ ಜಾಗವನ್ನು ಒತ್ತುವರಿ ಮಾಡಿ, ನಿವೇಶನವಾಗಿ ಮಾರ್ಪಡಿಸಿ ಮಾರಾಟ ಮಾಡಿದ್ದರು. ಮಾರಾಟ ಮಾಡಿದ್ದ ನಿವೇಶನದಲ್ಲಿ 18 ಮನೆಗಳನ್ನು ಸಹ ನಿರ್ಮಾಣ ಮಾಡಲಾಗಿತ್ತು. ಸಾರ್ವಜನಿಕರ ದೂರಿನ ಮೇರೆಗೆ ನಗರಸಭೆ ಮನೆಗಳನ್ನು ನೆಲಸಮ ಮಾಡಿತ್ತು.
ನಗರವ್ಯಾಪ್ತಿಯಲ್ಲಿರುವ ನಗರಸಭೆ ಜಾಗ ಗುರುತಿಸಿ ಬೇಲಿ ಹಾಕುವಂತೆ ಶಾಸಕ ಎಚ್.ಹಾಲಪ್ಪ ಅವರು ಎಸ್‌ಎಫ್‌ಸಿ ವಿಶೇಷ ಅನುದಾನದಲ್ಲಿ 30 ಲಕ್ಷ ರೂ. ನೀಡಿದ್ದರು. ಆದರೆ ನಗರಸಭೆ ಅಕಾರಿಗಳು ಜಾಗ ಗುರುತಿಸಿ ಬೇಲಿ ಹಾಕದೆ ಇರುವುದಕ್ಕೆ ಶಾಸಕರು ನಗರಸಭೆ ಪೌರಾಯುಕ್ತರು ಹಾಗೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.
ಶಿವಮೊಗ್ಗದಲ್ಲಿ 17 ಮಂದಿ ಕೊರೋನಾ ಗುಣಮುಖ, ಆಸ್ಪತ್ರೆಯಿಂದ ಡಿಸ್ಚಾರ್ಜ್
ಈ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ 6 ಗಂಟೆಯಿಂದಲೆ ನಗರಸಭೆ ಹಾಗೂ ಕಂದಾಯ ಇಲಾಖೆಯಿಂದ ಒತ್ತುವರಿ ತೆರವು ಮಾಡಲಾಗಿದೆ. ಜಾಗ ಕಬಳಿಕೆಗಾಗಿ ನಿರ್ಮಿಸಿದ್ದ ಕಾಂಪೊಂಡ್ ಒಡೆದು, ನಗರಸಭೆಯಿಂದ ಬೇಲಿ ನಿರ್ಮಿಸುವ ಕೆಲಸಕ್ಕೆ ಚಾಲನೆ ನೀಡಲಾಯಿತು. ದಿಢೀರನೇ ಪೌರಾಯುಕ್ತರ ನೇತೃತ್ವದ ತಂಡ ಭಾನುವಾರದಿಂದ ಅಕ್ರಮ ಭೂ ಒತ್ತುವರಿ ತೆರವಿಗೆ ಮುಂದಾಗಿರುವುದು ಭೂಗಳ್ಳರಿಗೆ ತಲೆನೋವಾಗಿ ಪರಿಣಮಿಸಿದೆ. ಪೌರಾಯುಕ್ತರು ತೆರವು ಕಾರ್ಯಾಚರಣೆ ಇನ್ನಷ್ಟುಬಿಗಿಗೊಳಿಸುವ ಅಗತ್ಯವಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ಒತ್ತುವರಿ ತೆರವು ಕುರಿತು ಮಾತನಾಡಿದ ಪೌರಾಯುಕ್ತ ಎಚ್.ಕೆ.ನಾಗಪ್ಪ, ಶಾಸಕರ ಸೂಚನೆ ಹಾಗೂ ಉಪವಿಭಾಗಾಕಾರಿ ಮಾರ್ಗದರ್ಶನದಲ್ಲಿ ಸುಮಾರು 6 ಎಕರೆ ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಿ, ನಗರಸಭೆ ವಶಕ್ಕೆ ಪಡೆಯಲಾಗಿದೆ. ಕೆಲವು ಪ್ರಭಾವಿಗಳು ಈ ಜಾಗವನ್ನು ಒತ್ತುವರಿ ಮಾಡಿ ಅದನ್ನು ನಿವೇಶನವಾಗಿ ಪರಿವರ್ತಿಸಿ ಮಾರಾಟ ಮಾಡುವ ಪ್ರಯತ್ನ ನಡೆಸಿದ್ದರು ಎಂದು ಹೇಳಿದರು.
ಸರ್ಕಾರಿ ಮತ್ತು ನಗರಸಭೆ ಜಾಗ ಒತ್ತುವರಿ ತೆರವಿಗೆ ಇದೀಗ ಚಾಲನೆ ನೀಡಲಾಗಿದೆ. ಎಷ್ಟೇ ಪ್ರಭಾವಿಗಳು ಒತ್ತುವರಿ ಮಾಡಿದ್ದರೂ ಮುಲಾಜಿಲ್ಲದೇ ತೆರವು ಮಾಡಲಾಗುತ್ತದೆ. ಈಗಾಗಲೆ ಶಾಸಕರು ನಗರಸಭೆ ಜಾಗಕ್ಕೆ ಕಾಂಪೊಂಡ್ ನಿರ್ಮಿಸಲು 30 ಲಕ್ಷ ರೂ. ಮೀಸಲಿರಿಸಿದ್ದಾರೆ. ನಗರಸಭೆ ಹಾಗೂ ಸರ್ಕಾರಿ ಜಾಗ ಯಾರೇ ಒತ್ತುವರಿ ಮಾಡಿದ್ದರೆ ತಕ್ಷಣ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಒತ್ತುವರಿ ತೆರವು ಜೊತೆಗೆ ಒತ್ತುವರಿದಾರರ ವಿರುದ್ದ ಪ್ರಕರಣ ದಾಖಲಿಸಿ, ಒತ್ತುವರಿ ಖರ್ಚನ್ನು ಸಂಬಂಧಪಟ್ಟಒತ್ತುವರಿದಾರರಿಂದ ವಸೂಲಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಕಂದಾಯ ನಿರೀಕ್ಷಕ ಆನಂದ ನಾಯ್ಕ, ನಗರಸಭೆ ಅಭಿಯಂತರರಾದ ರಾಜೇಶ್, ವಿಠ್ಠಲ್ ಹೆಗಡೆ ಇತರರು ಇದ್ದರು.