Asianet Suvarna News Asianet Suvarna News

ಬಿಬಿಎಂಪಿಗೆ 2 ತಿಂಗಳಲ್ಲಿ 57% ತೆರಿಗೆ: ದಾಖಲೆ..!

*  2009 ಕೋಟಿ ಸಂಗ್ರಹ
*  ಬಿಬಿಎಂಪಿ ಇತಿಹಾಸದಲ್ಲಿ ಅಲ್ಪಾವಧಿಯಲ್ಲಿ ಇಷ್ಟು ತೆರಿಗೆ ಸಂಗ್ರಹ ಇದೇ ಮೊದಲು
*  ಸಾರ್ವಕಾಲಿಕ ದಾಖಲೆ ಸೃಷ್ಟಿ 
 

57 Percent Tax in 2 Months for BBMP in Bengaluru grg
Author
Bengaluru, First Published Jun 2, 2022, 5:15 AM IST | Last Updated Jun 2, 2022, 5:15 AM IST

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಜೂ.02):  ಬಿಬಿಎಂಪಿ ಇತಿಹಾಸದಲ್ಲಿ ಕೇವಲ ಎರಡು ತಿಂಗಳಲ್ಲಿ ಬರೋಬ್ಬರಿ ಎರಡು ಸಾವಿರ ಕೋಟಿಗೂ ಅಧಿಕ ಮೊತ್ತದ ಆಸ್ತಿ ತೆರಿಗೆ ಸಂಗ್ರಹ ಮಾಡುವ ಮೂಲಕ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ. ಆರ್ಥಿಕ ವರ್ಷದ ಮೊದಲ ತಿಂಗಳಾದ ಏಪ್ರಿಲ್‌ನಲ್ಲಿ ಆಸ್ತಿ ತೆರಿಗೆ ಪಾವತಿದಾರರಿಗೆ ಶೇ.5ರಷ್ಟುರಿಯಾಯಿತಿ ನೀಡಿತ್ತು. ಕೊರೋನಾ ಹಿನ್ನೆಲೆಯಲ್ಲಿ ಮೇ ಅಂತ್ಯದವರೆಗೆ ಶೇ.5ರಷ್ಟುರಿಯಾಯಿತಿ ವಿಸ್ತರಿಸಲಾಗಿತ್ತು. ಈ ಸೌಲಭ್ಯದ ಪ್ರಯೋಜನ ಪಡೆದ ಆಸ್ತಿ ಮಾಲಿಕರು ವಾರ್ಷಿಕ ಆಸ್ತಿ ತೆರಿಗೆ ಪಾವತಿಸಿದ್ದಾರೆ.

2022-23ನೇ ಸಾಲಿನಲ್ಲಿ ಆಸ್ತಿ ತೆರಿಗೆಯಿಂದ .3,475 ಕೋಟಿ ಸಂಗ್ರಹ ಗುರಿಯನ್ನು ಪಾಲಿಕೆ ಇಟ್ಟುಕೊಂಡಿದೆ. ಮೊದಲ ಎರಡು ತಿಂಗಳಲ್ಲಿ .2 ಸಾವಿರ ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಮೂಲಕ ಗುರಿಯ ಶೇ.57.81ರಷ್ಟುಆಸ್ತಿ ತೆರಿಗೆ ಸಂಗ್ರಹವಾಗಿದೆ. ಉಳಿದ ಶೇ.42.19ರಷ್ಟು ಆಸ್ತಿ ತೆರಿಗೆಯನ್ನು ಮುಂದಿನ 10 ತಿಂಗಳಲ್ಲಿ ಸಂಗ್ರಹಿಸಬೇಕಿದೆ.

ನಾಯಿ ಕಚ್ಚಿದರೆ ಪರಿಹಾರ ಕೊಡ್ತಾರೆ ಗೊತ್ತಾ..?!

ಹೆಚ್ಚುತ್ತಿರುವ ಆನ್‌ಲೈನ್‌ ಪಾವತಿ:

ಇದೇ ವೇಳೆ ವರ್ಷದಿಂದ ವರ್ಷಕ್ಕೆ ಆನ್‌ಲೈನ್‌ ಮೂಲಕ ಆಸ್ತಿ ತೆರಿಗೆ ಪಾವತಿ ಪ್ರಮಾಣ ಹೆಚ್ಚಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ .1,073.11 ಕೋಟಿ ಆನ್‌ಲೈನ್‌ ಮೂಲಕ ಪಾವತಿ ಆಗಿದೆ. ಉಳಿದ .937.46 ಕೋಟಿ ಮಾತ್ರ ನಗದು ಸೇರಿದಂತೆ ಒಟ್ಟು .2009.75 ಕೋಟಿ ಪಾವತಿ ಆಗಿದೆ.

ತಿಂಗಳಲ್ಲಿ 545 ಕೋಟಿ: 

ಏಪ್ರಿಲ್‌ ಅಂತ್ಯಕ್ಕೆ .1,455 ಕೋಟಿ ಹಾಗೂ ಮೇ ತಿಂಗಳಿನಲ್ಲಿ .545 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಈ ಹಿಂದಿನ ವರ್ಷ ಶೇ.5ರಷ್ಟುರಿಯಾಯಿತಿ ನೀಡಿದರೂ ಈ ಪ್ರಮಾಣದ ಆಸ್ತಿ ತೆರಿಗೆ ಸಂಗ್ರಹವಾಗಿರಲಿಲ್ಲ ಎಂದು ಕಂದಾಯ ವಿಭಾಗದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

600- 700 ಕೋಟಿ ಅಧಿಕ ತೆರಿಗೆ ಸಂಗ್ರಹ

2020-21ನೇ ಸಾಲಿನ ಮೇ ಅಂತ್ಯಕ್ಕೆ .1456.01 ಕೋಟಿ ಹಾಗೂ 2021-22ನೇ ಸಾಲಿನ ಮೇ ಅಂತ್ಯಕ್ಕೆ .1362.25 ಕೋಟಿ ಸಂಗ್ರಹವಾಗಿತ್ತು. ಕಳೆದ ಎರಡು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ 600 ರಿಂದ 700 ಕೋಟಿ ಹೆಚ್ಚಿನ ಆಸ್ತಿ ತೆರಿಗೆ ಸಂಗ್ರಹವಾಗಿದೆ.

ರಿಯಾಯಿತಿಯಿಂದ 23 ಕೋಟಿ ನಷ್ಟ

ರಾಜ್ಯ ಸರ್ಕಾರ ಆಸ್ತಿ ತೆರಿಗೆ ಪಾವತಿಯ ರಿಯಾಯಿತಿ ಅವಧಿಯನ್ನು ಮೇ ಅಂತ್ಯದ ವರೆಗೆ ವಿಸ್ತರಣೆ ಮಾಡಿದ ಪರಿಣಾಮ ಬಿಬಿಎಂಪಿಗೆ ಸುಮಾರು .23 ಕೋಟಿ ಆದಾಯ ನಷ್ಟವಾಗಿದೆ. ಜೂನ್‌ 1ರಿಂದ 2024ರ ಮಾಚ್‌ರ್‍ 31ರ ಅವಧಿಯಲ್ಲಿ ಆಸ್ತಿ ತೆರಿಗೆ ಪಾವತಿ ಮಾಡುವವರಿಗೆ ಶೇ.9ರಷ್ಟುದಂಡ ಸಹಿತ ಪಾವತಿಸಬೇಕಾಗುತ್ತದೆ.

ಲೋಕಾಯುಕ್ತ ಪತ್ರ ನೋಡಿ ಬೆಚ್ಚಿಬಿದ್ದ ಬಿಬಿಎಂಪಿ ಅಧಿಕಾರಿಗಳು: ಲೆಟರ್‌ನಲ್ಲಿ ಅಂಥಾದ್ದೇನಿದೆ?

ಬಿಬಿಎಂಪಿ ಇತಿಹಾಸದಲ್ಲಿ ಮೊದಲ ಬಾರಿಗೆ ಕೇವಲ ಎರಡು ತಿಂಗಳಲ್ಲಿ .2 ಸಾವಿರ ಕೋಟಿಗೂ ಅಧಿಕ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಈ ಬಾರಿ ಬಿಬಿಎಂಪಿ ಬಜೆಟ್‌ನಲ್ಲಿ ಹಾಕಿಕೊಂಡಂತೆ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಸಾಧಿಸುತ್ತೇವೆ ಅಂತ ಕಂದಾಯ ವಿಭಾಗದ ವಿಶೇಷ ಆಯುಕ್ತ ಡಾ. ಆರ್‌.ಎಲ್‌.ದೀಪಕ್‌ ತಿಳಿಸಿದ್ದಾರೆ. 

ವಲಯವಾರು ಆಸ್ತಿ ತೆರಿಗೆ ಸಂಗ್ರಹ ವಿವರ (ಮೇ 31ಕ್ಕೆ)
ವಲಯ ಆಸ್ತಿ ತೆರಿಗೆ (ಕೋಟಿ)

ಪೂರ್ವ 376.64
ಪಶ್ಚಿಮ 231.42
ದಕ್ಷಿಣ 323.79
ಮಹದೇವಪುರ 549.04
ಆರ್‌ಆರ್‌ನಗರ 136.15
ಯಲಹಂಕ 127.04
ದಾಸರಹಳ್ಳಿ 65.16
ಬೊಮ್ಮನಹಳ್ಳಿ 197.3
ಒಟ್ಟು 2009.57

ಕಳೆದ 2 ವರ್ಷದ ಆಸ್ತಿ ತೆರಿಗೆ ಸಂಗ್ರಹ (ಮೇ ಅಂತ್ಯಕ್ಕೆ)
ವರ್ಷ ಆಸ್ತಿ ತೆರಿಗೆ

2020-21 1456.01
2021-22 1362.25
2022-23 2009.6
 

Latest Videos
Follow Us:
Download App:
  • android
  • ios