ಚಿಕ್ಕಮಗಳೂರು (ಜೂ. 14): ಜಿಲ್ಲೆಯ ಕಡೂರು ತಾಲೂಕಿನ ಕೆ.ದಾಸರಹಳ್ಳಿಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಎಲ್ಲ 55 ಜನರ ನೆಗೆಟಿವ್‌ ವರದಿಗಳು ಬಂದಿದೆ.

ವಿದ್ಯಾರ್ಥಿಯಲ್ಲಿ ಸೋಂಕು ದೃಢಪಡುತ್ತಿದ್ದಂತೆ ಆತನ ಸಂಪರ್ಕದಲ್ಲಿದ್ದ ಎಲ್ಲರನ್ನೂ ಕ್ವಾರೆಂಟೈನ್‌ ಮಾಡಲಾಗಿದ್ದು, ಅವರ ಗಂಟಲ ದ್ರವ ಪರೀಕ್ಷೆ ನೆಗೆಟಿವ್‌ ಆಗಿವೆ ಎಂದು ಜಿಲ್ಲಾ ವಿಚಕ್ಷಣಾಧಿಕಾರಿ ಡಾ.ಮಂಜುನಾಥ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಕೆಲವು ದಿನಗಳಿಂದ ವಿದ್ಯಾರ್ಥಿಯಲ್ಲಿ ಜ್ವರ ಕಾಣಿಸಿಕೊಂಡಿದ್ದರಿಂದ ಕಡೂರು ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆರೋಗ್ಯದಲ್ಲಿ ಚೇತರಿಕೆ ಕಂಡುಬಾರದೇ ಇದ್ದರಿಂದ ಅವರಿಗೆ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಸಂದರ್ಭ ವಿದ್ಯಾರ್ಥಿಯಲ್ಲಿ ಸೋಂಕು ಇರುವುದು ಪತ್ತೆಯಾಗಿತ್ತು. ಕೂಡಲೇ ವಿದ್ಯಾರ್ಥಿಯನ್ನು ಜಿಲ್ಲಾ ಕೋವಿಡ್‌-19 ಆಸ್ಪತ್ರೆಗೆ ಸೇರಿಸಲಾಗಿದೆ. ವಿದ್ಯಾರ್ಥಿಯ ಪ್ರಾಥಮಿಕ ಸಂಪರ್ಕದಲ್ಲಿ 5 ಮಂದಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಸೇರಿದಂತೆ 55 ಮಂದಿ ಇದ್ದು, ಅವರನ್ನು ಕ್ವಾರೆಂಟೈನ್‌ನಲ್ಲಿ ಇರಿಸಲಾಗಿದೆ. ಎಲ್ಲರ ಪರೀಕ್ಷಾ ವರದಿಗಳು ನೆಗೆಟಿವ್‌ ಬಂದಿವೆ.

ಹಾಸನ ಜಿಲ್ಲೆಯಲ್ಲಿ ಮತ್ತೆ 11 ಪಾಸಿಟಿವ್‌ ಕೇಸ್‌

ವಿದ್ಯಾರ್ಥಿಯಲ್ಲಿ ಚೇತರಿಕೆ:

ಜಿಲ್ಲಾ ಕೋವಿಡ್‌-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಜೂ.11ರಂದು ವಿದ್ಯಾರ್ಥಿಯ ಗಂಟಲ ದ್ರವ ಪರೀಕ್ಷೆ ಪಾಸಿಟಿವ್‌ ಬಂದಿತ್ತು. ಈ ಹಿನ್ನೆಲೆಯಲ್ಲಿ ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದೆರಡು ದಿನಗಳಿಂದ ಜ್ವರ ಇಳಿಮುಖವಾಗಿದೆ. ದಿನೇ ದಿನೇ ಆರೋಗ್ಯ ಚೇತರಿಸಿಕೊಳ್ಳುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪ್ರಥಮದಲ್ಲಿ ಗಂಟಲ ದ್ರವ ಪರೀಕ್ಷೆ ಮಾಡಿದ ನಂತರ 7 ದಿನಗಳ ಬಳಿಕ ಎರಡನೇ ಹಂತದಲ್ಲಿ ಪರೀಕ್ಷೆ ನಡೆಸಲಾಗುವುದು. ಆಗ, ನೆಗೆಟಿವ್‌ ಬಂದರೆ, ಆತನಿಗೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಮನೆಯಲ್ಲಿ ಹೋಂ ಕ್ವಾರೆಂಟೈನ್‌ ಮಾಡಲಾಗುವುದು. 7 ದಿನಗಳ ಎರಡನೇ ಹಂತದ ಪರೀಕ್ಷೆಯಲ್ಲೂ ಪಾಸಿಟಿವ್‌ ಬಂದರೆ ಪ್ರತಿ 3 ದಿನಗಳಿಗೊಮ್ಮೆ ಪರೀಕ್ಷೆ ನಡೆಲಾಗುವುದು. ನೆಗೆಟಿವ್‌ ರಿಪೋರ್ಟ್‌ ಬಂದರೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗುವುದು.

ಸದ್ಯ ಸೋಂಕಿತ ವಿದ್ಯಾರ್ಥಿ ಆರೋಗ್ಯದಲ್ಲಿ ಆಗುವ ಚೇತರಿಕೆ ನೋಡಿದರೆ 7 ದಿನಗಳ ನಂತರ ನಡೆಯುವ ಎರಡನೇ ಹಂತದ ಪರೀಕ್ಷೆಯಲ್ಲಿ ನೆಗೆಟಿವ್‌ ವರದಿ ಬರುವ ಸಾಧ್ಯತೆ ಹೆಚ್ಚಿದೆ ಎಂದು ನುರಿತ ವೈದ್ಯರು ಅಂದಾಜು ಮಾಡಿದ್ದಾರೆ.

ವಿದ್ಯಾರ್ಥಿ ಪರೀಕ್ಷೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಎಸ್ಸೆಸ್ಸೆಲ್ಸಿ ಪಠ್ಯಪುಸ್ತಕಗಳನ್ನು ಶಿಕ್ಷಣ ಇಲಾಖೆಯಿಂದ ನೀಡಲಾಗಿದೆ. ಜತೆಗೆ ಆಸ್ಪತ್ರೆಯಲ್ಲಿ ಓದಲು ಅನುಕೂಲವಾಗುವ ವ್ಯವಸ್ಥೆಯನ್ನು ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಮಾಡಿದೆ.

ಕೊರೋನಾ ಅವಾಂತರ, ಸಾವಿನಲ್ಲಿ ಭಾರತಕ್ಕೆ ವಿಶ್ವದಲ್ಲಿ 9ನೇ ಸ್ಥಾನ!

ಸೋಂಕಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲ: ಡಿಡಿಪಿಐ

ಚಿಕ್ಕಮಗಳೂರು: ಕೊರೋನಾ ಸೋಂಕಿರುವ ಎಸ್ಸೆಸ್ಸೆಲ್ಲಿ ವಿದ್ಯಾರ್ಥಿಗಳಿಗೆ ಜೂ.25ರಂದು ನಡೆಯಲಿರುವ ಪರೀಕ್ಷೆಯಲ್ಲಿ ಬರೆಯಲು ಅವಕಾಶ ನೀಡದಿರಲು ಸರ್ಕಾರ ನಿರ್ದೇಶನ ನೀಡಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ನಂಜಯ್ಯ ತಿಳಿಸಿದ್ದಾರೆ.

ಈಗ ಪರೀಕ್ಷೆಯಿಂದ ವಂಚಿತರಾಗುವ ವಿದ್ಯಾರ್ಥಿಗಳಿಗೆ ಫಲಿತಾಂಶ ಬಂದ ಒಂದು ತಿಂಗಳ ನಂತರ ನಡೆಯುವ ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಬರೆಯಲು ಅವಕಾಶ ನೀಡಲಾಗುವುದು. ಆಗ ಅವರನ್ನು ಹೊಸದಾಗಿ ಪರೀಕ್ಷೆ ತೆಗೆದುಕೊಂಡಿರುವವರೆಂದು ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ.

ಈಗ ಪಾಸಿಟಿವ್‌ ಬಂದು, ಪರೀಕ್ಷೆಯ ವೇಳೆಗೆ ನೆಗೆಟಿವ್‌ ರಿಪೋರ್ಟ್‌ ಬಂದರೆ, ಅಂಥವರು ಇತರೇ ವಿದ್ಯಾರ್ಥಿಗಳಂತೆ ಜೂ.25ರಂದು ಪರೀಕ್ಷೆಗೆ ಹಾಜರಾಗಬಹುದು. ಕಂಟೈನ್ಮೆಂಟ್‌ ಝೋನ್‌ನಲ್ಲಿ ಇರುವ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅಪೇಕ್ಷೆ ಪಟ್ಟರೆ ಅಂಥವರಿಗೆ ಪ್ರತ್ಯೇಕವಾಗಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಿಕೊಡಲಾಗುವುದು. ಪರೀಕ್ಷೆ ಹಾಜರಾಗಲು ನಿರಾಕರಿಸಿದರೆ ಅಂತಹವರಿಗೂ ಸಹ ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಹೊಸದಾಗಿ ಪರೀಕ್ಷೆ ಬರೆಯುವವರು ಎಂದು ಪರಿಗಣಿಸಿ ಅವಕಾಶ ನೀಡಲಾಗುವುದು ಎಂದು ಹೇಳಿದ್ದಾರೆ.