3 ಪಲ್ಟಿ ಹೊಡೆದ ಬಸ್: 50 ಜನಕ್ಕೆ ಗಾಯ, ನಾಲ್ವರ ಸ್ಥಿತಿ ಗಂಭೀರ
ಬಸ್ಸೊಂದು ಮತ್ತೊಂದು ಬಸ್‌ಗೆ ಡಿಕ್ಕಿ ಹೊಡೆದ ಘಟನೆ ಬಂಟ್ವಾಳದ ಬೆಂಜನಪದವು ಸಮೀಪದ ಕಲ್ಪನೆ ತಿರುವಿನಲ್ಲಿ ಭಾನುವಾರ ನಡೆದಿದ್ದು, 50ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ. ಗಾಯಾಳುಗಳ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, 50 ಜನ ಗಾಯಗೊಂಡಿದ್ದಾರೆ.
ಮಂಗಳೂರು(ಫೆ.17): ಬಸ್ಸೊಂದು ಮತ್ತೊಂದು ಬಸ್‌ಗೆ ಡಿಕ್ಕಿ ಹೊಡೆದ ಘಟನೆ ಬಂಟ್ವಾಳದ ಬೆಂಜನಪದವು ಸಮೀಪದ ಕಲ್ಪನೆ ತಿರುವಿನಲ್ಲಿ ಭಾನುವಾರ ನಡೆದಿದ್ದು, 50ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ. ಗಾಯಾಳುಗಳ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಪ್ರಯಾಣಿಕ ಮೋಹನ್ ಸಿಂಗ್, ಗುರುಪುರ ಕೈಕಂಬ ನಿವಾಸಿ ಚಂದ್ರಶೇಖರ, ಕಮಲಾಕ್ಷ, ಪೆರ್ಮುದೆ ನಿವಾಸಿ ಲೀಲಾವತಿ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ತೆಂಕಮಿಜಾರ್‌ನ ಸುಧಾ, ಮೊಡಂಕಾಪು ಗವೀರ್‍ನ್, ಪೊರ್ಕೋಡಿ ಪೇಜಾವರ ನಿವಾಸಿ ವನಜಾ, ಲಲಿತಾ, ಶ್ರೀಮತಿ, ವಸಂತಿ, ವಿಮಲ, ಕಮಲ, ಪೆರ್ಮುದೆ ಲೀಲಾವತಿ, ಗುರುಪುರ ಕೈಕಂಬ ಚಂದ್ರಶೇಖರ, ಕಮಲಾಕ್ಷ, ಕರಿಯಂಗಳ ನಿರ್ವಾಹಕ ಅಶೋಕ, ಪೆರ್ಮುದೆ ಲೀಲಾವತಿ ಮಗಳು, ಹಾಶೀಕಾ, ಗುರುಪುರ ಕೈಕಂಬ ಸುಧಾ ಮಗಳು ರಮ್ಯ, ನೆರೆ ನಗರ ರಾಜೇಶ್, ಕೆಂಜಾರು ಗುಲಾಬಿ, ಕೆಂಜಾರು ಪೊರ್ಕಾಡಿ ಹೇಮಲತಾ, ಚಾಲಕ ಸುರೇಶ್, ಕೆಂಜಾರು ಚರಣ್, ಸಾವಿತ್ರಿ, ಸರಿತಾ, ಸುಲೈಮಾನ್, ಜೋಹನ್, ಜೆಯಿನ್, ದಯಾಲತಾ, ಸುಶ್ಮಿತಾ, ಮಹಮ್ಮದ್ ಸಲೀಂ, ಪಲ್ಕೀಶ್, ಹಸನಬ್ಬ, ಮಹಮ್ಮದ್ ರಝಾಕ್ ಮತ್ತಿತರರು ಗಾಯಾಳುಗಳು.
ಘಟನೆ ವಿವರ:
ಬಿಸಿ ರೋಡಿನಿಂದ ಪೊಳಲಿ ಕಡೆಗೆ ಹೋಗುವ ಸರ್ವೀಸ್ ಬಸ್‌ಗೆ ಮದುವೆ ಕಾರ್ಯಕ್ರಮಕ್ಕೆ ತೆರಳಿ ವಾಪಸು ಹೋಗುತ್ತಿದ್ದ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದ ಕಾರಣ ಎದುರಿನ ಬಸ್ ಚಾಲಕನ ನಿಯಂತ್ರಣ ತಪ್ಪಿ ಮೂರು ಪಲ್ಟಿಯಾಗಿ ವಾಪಸು ನೇರವಾಗಿ ನಿಂತಿದೆ.
ಪಾಕ್ ಪರ ಘೋಷಣೆ ಕೂಗಿದವರ ಬಿಡುಗಡೆ: ಸರ್ಕಾರದ ಉದ್ದೇಶವೇ ಬೇರೆ..!
ಹಿಂಬದಿಯಿಂದ ಡಿಕ್ಕಿ ಹೊಡೆದ ಬಸ್ ವಿದ್ಯುತ್ ಕಂಬಕ್ಕೆ ವಾಪಸು ಡಿಕ್ಕಿ ಹೊಡೆದು ರಸ್ತೆ ಬದಿ ಕಂದಕಕ್ಕೆ ಉರುಳಿ ನಿಂತಿದೆ. ಬಿಸಿರೋಡಿನ ಸ್ಪರ್ಶ ಕಲಾ ಮಂದಿರಕ್ಕೆ ಬಜಪೆಯಿಂದ ಮದುಮಗಳ ದಿಬ್ಬಣವನ್ನು ಕರೆದುಕೊಂಡ ಬಂದ ಬಸ್ ಮದುವೆ ಮುಗಿಸಿ ವಾಪಸು ಹೋಗುವ ವೇಳೆ ಈ ಘಟನೆ ನಡೆದಿದೆ.
ಡಿಕ್ಕಿಗೆ ಸ್ಪಷ್ಟವಾದ ಕಾರಣ ಇನ್ನು ತಿಳಿದು ಬಂದಿಲ್ಲ. ಆದರೆ ಹಿಂಬದಿಯಿಂದ ಡಿಕ್ಕಿ ಹೊಡೆದ ಬಸ್‌ನ ಚಾಲಕ ಅತಿಯಾದ ವೇಗವೇ ಕಾರಣ ಎನ್ನಲಾಗಿದ್ದು, ಪೊಲೀಸರ ತನಿಖೆಯ ಬಳಿಕವಷ್ಟೇ ತಿಳಿಯಬೇಕಾಗಿದೆ. ಪ್ರಕರಣದಲ್ಲಿ ಗಂಭೀರ ಹಾಗೂ ಸಣ್ಣಪುಟ್ಟಗಾಯಗಳು ಸೇರಿದಂತೆ ಒಟ್ಟು 54 ಮಂದಿ ವಿವಿಧ ಆಸ್ಪತ್ರೆಗಳಿಗೆ ತೆರಳಿದ್ದು, ಬಹುತೇಕ ಮಂದಿಗೆ ಚಿಕಿತ್ಸೆ ಪಡೆದು ಮರಳಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಜಗಳ: ಕತ್ತು ಹಿಸುಕಿ ಹೆಂಡತಿ ಕೊಂದ ಪಾಪಿ ಗಂಡ
12 ಮಂದಿ ಬಂಟ್ವಾಳ ಸರ್ಕಾರಿ ಆಸ್ಪತ್ರೆ, 7 ಮಂದಿ ಬಿ.ಸಿ.ರೋಡು ಸೋಮಯಾಜಿ ಆಸ್ಪತ್ರೆ, 19 ಮಂದಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆ, 15 ಮಂದಿ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದಾರೆ ಎಂದು ಬಂಟ್ವಾಳ ಸಂಚಾರಿ ಪೊಲೀಸರು ತಿಳಿಸಿದ್ದಾರೆ. ಚಾಲಕನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸ್ಥಳದಲ್ಲಿ ಬಂಟ್ವಾಳ ನಗರ ಠಾಣಾ ಎಸ್.ಐ. ಅವಿನಾಶ್, ಟ್ರಾಫಿಕ್ ಎಸ್. ಐ. ರಾಮ ನಾಯ್ಕ ಹಾಗೂ ಸಿಬ್ಬಂದಿ ಪರಿಸ್ಥಿತಿ ನಿಯಂತ್ರಿಸಿದರು.