ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಫೆ.10):  ಬಿಬಿಎಂಪಿಗೆ 2006ರಲ್ಲಿ ಸೇರ್ಪಡೆಗೊಂಡ 110 ಹಳ್ಳಿಗಳ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 534 ‘ಸಿ’ ಹಾಗೂ ‘ಡಿ’ ಗ್ರೂಪ್‌ ಸಿಬ್ಬಂದಿ ಬರೋಬ್ಬರಿ 15 ವರ್ಷದ ಬಳಿಕ ಅಧಿಕೃತವಾಗಿ ಬಿಬಿಎಂಪಿ ನೌಕರರಾಗಿದ್ದಾರೆ.

2006-07ರಲ್ಲಿ ಏಳು ನಗರಸಭೆ ಹಾಗೂ ಒಂದು ಪುರಸಭೆ ಹಾಗೂ ಗ್ರಾ.ಪಂ ವ್ಯಾಪ್ತಿಗೆ ಒಳಪಟ್ಟಿದ್ದ 110 ಹಳ್ಳಿಗಳನ್ನು ಸೇರ್ಪಡೆಗೊಳಿಸುವ ಮೂಲಕ ಬೆಂಗಳೂರು ಮಹಾನಗರ ಪಾಲಿಕೆ(ಬಿಎಂಪಿ)ಯು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯಾಗಿ ಮೇಲ್ದರ್ಜೆಗೇರಿತ್ತು. ಈ ವೇಳೆ 110 ಹಳ್ಳಿಗಳ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 534 ‘ಸಿ’ ಮತ್ತು ‘ಡಿ’ ಗ್ರೂಪ್‌ ಸಿಬ್ಬಂದಿ ಅನ್ನು ಬಿಬಿಎಂಪಿಗೆ ಸೇರ್ಪಡೆ ಮಾಡಲಾಗಿತ್ತು. ಆದರೆ, ದಾಖಲೆ ಪರಿಶೀಲನೆ ನೆಪದಲ್ಲಿ ಈ ಸಿಬ್ಬಂದಿಯನ್ನು ಬಿಬಿಎಂಪಿ ನೌಕರರು ಎಂದು ಅಧಿಕೃತವಾಗಿ ಪರಿಗಣಿಸಿರಲಿಲ್ಲ.

ಅಂತೂ 15 ವರ್ಷಗಳ ನಂತರ ಕಡೆಗೂ ದಾಖಲೆ ಪರಿಶೀಲನೆ ಮುಗಿದಿದ್ದು, 534 ಗ್ರಾ.ಪಂ ಸಿಬ್ಬಂದಿ ಬಿಬಿಎಂಪಿಯ ನೌಕರರು ಎಂದು ಪರಿಗಣಿಸುವಂತೆ ಸರ್ಕಾರ ಆದೇಶಿಸಿದೆ. ಜತೆಗೆ ಸಿಬ್ಬಂದಿಗೆ ಪೂರ್ವನ್ವಯಗೊಳ್ಳುವಂತೆ ವೇತನ, ಭತ್ಯೆ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸುವಂತೆ ರಾಜ್ಯ ಸರ್ಕಾರದಿಂದ ಬಿಬಿಎಂಪಿ ಸಿಬ್ಬಂದಿ ಮತ್ತು ಆಡಳಿತ ವಿಭಾಗಕ್ಕೆ ನಿರ್ದೇಶನ ಬಂದಿದೆ

ತತ್ಸಮಾನ ಹುದ್ದೆಗೆ ಸೂಚನೆ

ಗ್ರಾಮ ಪಂಚಾಯಿಯಿಂದ ಬಿಬಿಎಂಪಿಗೆ ವಿಲೀನಗೊಂಡ ನೌಕರರ ಹುದ್ದೆಗೆ ತತ್ಸಮಾನವಾದ ಹುದ್ದೆ ಬಿಬಿಎಂಪಿ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಲಭ್ಯವಿಲ್ಲದಿದ್ದರೆ ಅಂತಹ ನೌಕರರಿಗೆ ತತ್ಸಮಾನ ಹುದ್ದೆಗೆ ನಿಯೋಜಿಸುವಂತೆ ಸೂಚನೆ ನೀಡಲಾಗಿದೆ.

ಬಿಬಿಎಂಪಿಗೆ ತಲೆನೋವಾದ ಮೀನು..!

ಗ್ರಾ.ಪಂ.ನಲ್ಲಿ ಗಣಕಯಂತ್ರ ನಿರ್ವಾಹಕರು ಹಾಗೂ ಕಚೇರಿ ಸಹಾಯಕರಾಗಿ ಸೇವೆ ಸಲ್ಲಿಸಿದ್ದ ನೌಕರರಿಗೆ ಬಿಬಿಎಂಪಿಯಲ್ಲಿ ದ್ವಿತೀಯ ದರ್ಜೆ ಸಹಾಯಕ(ಎಸ್‌ಡಿಎ) ಹುದ್ದೆ ನೀಡುವುದು. ನೀರು ಸರಬರಾಜು ಸಹಾಯಕ, ಕೈ ಪಂಪ್‌ ರಿಪೇರಿ, ವಾಟರ್‌ ಮೆನ್‌, ಜಲಗಾರ, ಸ್ವೀಪರ್‌, ಪಂಪ್‌ ಅಪರೇಟರ್‌, ನೀರಿನ ಆಪರೇಟರ್‌, ವಿದ್ಯುತ್‌ ಸಹಾಯಕ, ಎಲೆಕ್ಟ್ರೀಷಿಯನ್‌, ಫ್ಲಂಬರ್‌, ಮ್ಯಾಕ್ಯಾನಿಕ್‌ ಹಾಗೂ ಅಟೆಂಡರ್‌ಗೆ ಬಿಬಿಎಂಪಿಯಲ್ಲಿ ಮಾಲಿ ಹುದ್ದೆ ನೀಡುವುದಕ್ಕೆ ಆದೇಶಿಸಲಾಗಿದೆ.

ಮೃತಪಟ್ಟ ಕುಟುಂಬಸ್ಥರಿಗೂ ಉದ್ಯೋಗ

2006ರಲ್ಲಿ ಬಿಬಿಎಂಪಿಗೆ ವಿಲೀನಗೊಂಡ ಗ್ರಾ.ಪಂ ಸಿಬ್ಬಂದಿಯ ಪೈಕಿ ‘ಸಿ’ ಗ್ರೂಪ್‌ನ ಇಬ್ಬರು ಹಾಗೂ ಡಿ ಗ್ರೂಪ್‌ನ ಏಳು ಮಂದಿ ಸಿಬ್ಬಂದಿ ಈಗಾಗಲೇ ಮೃತಪಟ್ಟಿದ್ದಾರೆ. ಬಿಬಿಎಂಪಿ ಸಿಬ್ಬಂದಿ ಸೇವಾ ಅವಧಿಯಲ್ಲಿ ಮೃತಪಟ್ಟರೆ ಅವರ ಕುಟುಂಬ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಹುದ್ದೆ ನೀಡುವಂತೆ, ಗ್ರಾ.ಪಂ.ನಿಂದ ಬಿಬಿಎಂಪಿಗೆ ವಿಲೀನಗೊಂಡ ಮೃತ ಸಿಬ್ಬಂದಿ ಕುಟುಂಬಕ್ಕೂ ಬಿಬಿಎಂಪಿಯಲ್ಲಿ ಉದ್ಯೋಗ ದೊರೆಯಲಿದೆ.
ಇನ್ನುಳಿದಂತೆ ಸಿ ಗ್ರೂಪ್‌ನ ಒಬ್ಬ ಹಾಗೂ ಡಿ ಗ್ರೂಪ್‌ನ ಇಬ್ಬರು ನೌಕರರು ನಿವೃತ್ತರಾಗಿದ್ದಾರೆ. ಡಿ ಗ್ರೂಪ್‌ನ 10 ಮಂದಿ ಸಿಬ್ಬಂದಿ ಗೈರಾಗಿದ್ದಾರೆ. ಸಿ ಗ್ರೂಪ್‌ನ ಒಬ್ಬ ಸಿಬ್ಬಂದಿಯನ್ನು ಎಸಿಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇವೆಯಿಂದ ವಜಾಗೊಳಿಸಲಾಗಿದೆ.

ಟಿಎಂಸಿ- ಸಿಎಂಸಿ ಸಿಬ್ಬಂದಿ ವಿಲೀನ ಬಾಕಿ

ಬಿಬಿಎಂಪಿಗೆ 2006ರಲ್ಲಿಯೇ ಸೇರ್ಪಡೆಗೊಂಡ ಏಳು ನಗರಸಭೆ ಹಾಗೂ ಒಂದು ಪುರಸಭೆಯ ಸಿಬ್ಬಂದಿಯೂ ಬಿಬಿಎಂಪಿಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಸಿಬ್ಬಂದಿಗೆ ಇನ್ನೂ ಬಿಬಿಎಂಪಿ ಸಿಬ್ಬಂದಿ ಎಂದು ಅಧಿಕೃತವಾಗಿ ಪರಿಗಣನೆಯಾಗಿಲ್ಲ. ವಿಲೀನಕ್ಕೆ ಸಂಬಂಧಿಸಿದಂತೆ ಪರಿಶೀಲನೆ, ದೃಢೀಕರಣ ಪ್ರಕ್ರಿಯೆ ಪ್ರಗತಿಯಲ್ಲಿದೆ. ವೇತನ ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ಅವರಿಗೂ ನೀಡಲಾಗುತ್ತಿದೆ ಎಂದು ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತ ಜೆ. ಮಂಜುನಾಥ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

110 ಹಳ್ಳಿಯ ಗ್ರಾ.ಪಂ ಸಿಬ್ಬಂದಿ 2006-07 ರಿಂದಲ್ಲೂ ಬಿಬಿಎಂಪಿಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರ ಈ ಸಿಬ್ಬಂದಿಯ ಬಗ್ಗೆ ಹಲವಾರು ಸ್ಪಷ್ಟಣೆ ಕೇಳಿತ್ತು. ಅದನ್ನು ನೀಡಲಾಗಿತ್ತು. ಸರ್ಕಾರ ಈಗ ಅಧಿಕೃತವಾಗಿ ಆದೇಶಿಸಿದೆ. ಅನ್ನು ಪಾಲಿಕೆಯಲ್ಲಿ ಜಾರಿಗೊಳಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.