ಬ್ಯಾಂಕ್‌ನಲ್ಲೇ ₹ 53 ಕೋಟಿ ಇದ್ದರೂ ದೇಗುಲ ಅಭಿವೃದ್ಧಿಗೆ ಬಳಸುವಂತಿಲ್ಲ!
ತಾಲೂಕಿನ ಇತಿಹಾಸ ಪ್ರಸಿದ್ಧ ಹುಲಿಗಿಯ ಹುಲಿಗೆಮ್ಮ ದೇವಸ್ಥಾನಕ್ಕೆ ಭಕ್ತರು ಕೊಟ್ಟಿರುವ ಕಾಣಿಕೆ ಬರೋಬ್ಬರಿ .53 ಕೋಟಿ ಹಲವು ವರ್ಷಗಳಿಂದ ಬ್ಯಾಂಕ್‌ನಲ್ಲೇ ಕೊಳೆಯುತ್ತಿದ್ದರೂ ದೇಗುಲ ಅಭಿವೃದ್ಧಿ ಆ ಹಣ ಬಳಸಲು ಸಾಧ್ಯವಾಗುತ್ತಿಲ್ಲ!
ಸೋಮರಡ್ಡಿ ಅಳವಂಡಿ
ಕೊಪ್ಪಳ (ನ.19) :\ ತಾಲೂಕಿನ ಇತಿಹಾಸ ಪ್ರಸಿದ್ಧ ಹುಲಿಗಿಯ ಹುಲಿಗೆಮ್ಮ ದೇವಸ್ಥಾನಕ್ಕೆ ಭಕ್ತರು ಕೊಟ್ಟಿರುವ ಕಾಣಿಕೆ ಬರೋಬ್ಬರಿ .53 ಕೋಟಿ ಹಲವು ವರ್ಷಗಳಿಂದ ಬ್ಯಾಂಕ್‌ನಲ್ಲೇ ಕೊಳೆಯುತ್ತಿದ್ದರೂ ದೇಗುಲ ಅಭಿವೃದ್ಧಿ ಆ ಹಣ ಬಳಸಲು ಸಾಧ್ಯವಾಗುತ್ತಿಲ್ಲ!
ದೇವಸ್ಥಾನವನ್ನು ಮಾಸ್ಟರ್ ಪ್ಲಾನ್ ಅಡಿಯಲ್ಲಿ ಅಭಿವೃದ್ಧಿ ಮಾಡಬೇಕು ಎಂದು ಕಳೆದ ಹತ್ತು ವರ್ಷಗಳಿಂದ ಯೋಜನೆ ರೂಪಿಸಿದೆಯಾದರೂ ಸರ್ಕಾರದಿಂದ ಸಹಕಾರ ದೊರೆಯದೆ ಇರುವುದರಿಂದ ಅದು ಕಾರ್ಯಗತವಾಗುತ್ತಿಲ್ಲ. ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯವೂ ಕಾಣುತ್ತಿದೆ.
Koppal: ಹುಲಿಗಿಯಲ್ಲಿ ಭಕ್ತಸಾಗರ: 3 ಲಕ್ಷ ಭಕ್ತರಿಂದ ಅಮ್ಮನವರ ದರ್ಶನ
ಸರ್ಕಾರ ಸಮ್ಮತಿ ಸಿಗುತ್ತಿಲ್ಲ:
ದೇವಸ್ಥಾನದ ಹಣ ಬಳಸಿ ಅಭಿವೃದ್ಧಿ ಮಾಡುವುದಕ್ಕೂ ರಾಜ್ಯ ಸರ್ಕಾರದಿಂದ ಅನುಮತಿ ದೊರೆಯುತ್ತಿಲ್ಲ. ಪ್ರತಿ ಬಾರಿಯೂ ಒಂದಿಲ್ಲೊಂದು ಕಾರಣ ಮುಂದೆ ಮಾಡಿ ಮುಂದೂಡುತ್ತಿದೆಯೇ ಹೊರತು ಅಭಿವೃದ್ಧಿಗೆ ಸಹಕಾರ ನೀಡುತ್ತಿಲ್ಲ ಎನ್ನುವ ಕೊರಗು ಸ್ಥಳೀಯರದು.
ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗೆ .20 ಲಕ್ಷ ಬಳಕೆ ಮಾಡುವ ಅಧಿಕಾರ ಇದ್ದರೆ ಜಿಲ್ಲಾಧಿಕಾರಿಗೆ .1 ಕೋಟಿ ಕಾಮಗಾರಿ ಕೈಗೆತ್ತಿಕೊಳ್ಳುವ ಅಧಿಕಾರವಿದೆ. ಆದರೆ, ಇದ್ಯಾವುದಕ್ಕೂ ಸ್ಥಳೀಯ ಅಧಿಕಾರಿಗಳು ಮುಂದಾಗದೆ ಸರ್ಕಾರದತ್ತ ಮುಖ ಮಾಡಿ ಕೈತೊಳೆದುಕೊಂಡಿದ್ದಾರೆ. ಹೀಗಾಗಿ ದೇವಸ್ಥಾನದಲ್ಲಿಯೇ ಸಾಕಷ್ಟುಹಣವಿದ್ದರೂ ಅಭಿವೃದ್ಧಿ ಮಾಡುವುದಕ್ಕೆ ಆಗುತ್ತಿಲ್ಲ.
ಹತ್ತಾರು ಸಮಸ್ಯೆ:
ಹುಲಿಗೆಮ್ಮ ದೇವಸ್ಥಾನ ಕೇವಲ ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ. ಉತ್ತರ ಕರ್ನಾಟಕ ಹಾಗೂ ನೆರೆಯ ಆಂಧ್ರ, ಮಹಾರಾಷ್ಟ್ರಗಳ ವ್ಯಾಪ್ತಿಯಲ್ಲಿಯೂ ಅಪಾರ ಭಕ್ತರನ್ನು ಹೊಂದಿದೆ. ಪ್ರತಿ ಹುಣ್ಣಿಮೆಗೂ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ವಿಶೇಷ ಸಂದರ್ಭದಲ್ಲಿ ನಾಲ್ಕಾರು ಲಕ್ಷ ಭಕ್ತರು ಆಗಮಿಸುತ್ತಾರೆ. ನಿತ್ಯವೂ ಹತ್ತಾರು ಸಾವಿರ ಭಕ್ತರು ಇದ್ದೇ ಇರುತ್ತಾರೆ.
ಗಾಳಿಗೆ ತೂರಿದ ಕೋವಿಡ್ ನಿಯಮಾವಳಿ: ಹುಲಿಗೆಮ್ಮ ದೇವಿ ದರ್ಶನಕ್ಕೆ ಲಕ್ಷಾಂತರ ಭಕ್ತರು..!
ಆದರೆ ಇಲ್ಲಿ ಕನಿಷ್ಠ ಮೂಲ ಸೌಕರ್ಯಗಳಿಲ್ಲ. ಇರುವ ಸೌಲಭ್ಯಗಳು ಸಾಕಾಗುತ್ತಿಲ್ಲ. ಹೀಗಾಗಿ ಇಲ್ಲಿಗೆ ಆಗಮಿಸುವ ಭಕ್ತರು ನದಿಯ ದಡ ಅಥವಾ ರಸ್ತೆಯಲ್ಲಿಯೇ ಮಲಗಬೇಕು. ಇನ್ನು ಬರುವ ಭಕ್ತರಿಗೆ ಸ್ನಾನ, ಶೌಚಕ್ಕೂ ಸರಿಯಾದ ವ್ಯವಸ್ಥೆ ಇಲ್ಲ. ದೇವಸ್ಥಾನದ ಸುತ್ತಮತ್ತಲ ಪ್ರದೇಶದಲ್ಲಿ ಗಬ್ಬು ನಾರುತ್ತಿದೆ.
ದೈವಿ ಸಂಕಲ್ಪದಡಿ ಅಭಿವೃದ್ಧಿ:
ದೇವಸ್ಥಾನ ಅಭಿವೃದ್ಧಿಗೆ ಈಗಾಗಲೇ ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ. ಈ ಯೋಜನೆ ಸುಮಾರು ವರ್ಷಗಳಿಂದ ಕುಂಟುತ್ತಾ ಸಾಗಿದೆ. ಟೆಂಡರ್ ಕರೆಯಲಾಗಿದ್ದರೂ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿದೆ. ಈ ಮೊದಲು ರಾಜ್ಯ ಸರ್ಕಾರವೇ ಅಭಿವೃದ್ಧಿಗೆ ಅನುಮೋದನೆ ನೀಡಬೇಕಾಗಿತ್ತು. ಆದರೆ, ಈಗ ಸರ್ಕಾರ ದೈವಿ ಸಂಕಲ್ಪ ಯೋಜನೆಯಡಿ ಅಭಿವೃದ್ಧಿಪಡಿಸುವಂತೆ ಸೂಚಿಸಿದೆ. ಆದರೂ ನಿಧಾನಗತಿ ಮುಂದುವರಿದಿದೆ.
ಇಡೀ ದೇವಸ್ಥಾನವನ್ನು ಪುನರ್ ನಿರ್ಮಾಣ ಮಾಡುವುದಕ್ಕಾಗಿ ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ. ಗರ್ಭಗುಡಿಯನ್ನು ಮೂಲ ಸ್ವರೂಪದಲ್ಲಿ ಕಾಯ್ದುಕೊಂಡು ಉಳಿದೆಲ್ಲವನ್ನು ಪುನರ್ ನಿರ್ಮಾಣ ಮಾಡುವ ದಿಸೆಯಲ್ಲಿ ಪ್ರಯತ್ನ ನಡೆದಿದೆ. ಆದರೆ, ನಿಧಾನದ್ರೋಹಕ್ಕೆ ತುತ್ತಾಗಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ದೇವಸ್ಥಾನದಲ್ಲಿ ಹತ್ತಾರು ಸಮಸ್ಯೆಗಳಿವೆ. ಲಕ್ಷಾಂತರ ಭಕ್ತರು ಆಗಮಿಸಿದರೂ ಅವರಿಗೆ ಮೂಲ ಸೌಕರ್ಯ ದೊರೆಯುತ್ತಿಲ್ಲ. ದೇವಸ್ಥಾನದಲ್ಲಿಯೇ ಕೋಟ್ಯಂತರ ರುಪಾಯಿ ಇದ್ದರೂ ಪ್ರಯೋಜನವಾಗುತ್ತಿಲ್ಲ.
ಟಿ. ಜನಾರ್ದನ ಹುಲಿಗಿ, ಜಿಪಂ ಮಾಜಿ ಅಧ್ಯಕ್ಷರು
ದೇವಸ್ಥಾನದಲ್ಲಿರುವ ಹಣದ ಬಗ್ಗೆಯೂ ಮಾಹಿತಿ ಇದೆ ಮತ್ತು ಅದನ್ನು ಅಭಿವೃದ್ಧಿಪಡಿಸುವ ಕುರಿತು ಗಮನಕ್ಕೆ ಇದೆ. ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರದಲ್ಲಿ ಅಭಿವೃದ್ಧಿ ಕಾರ್ಯ ಪ್ರಾರಂಭವಾಗಲಿದೆ.
ಶಶಿಕಲಾ ಜೊಲ್ಲೆ, ಮುಜರಾಯಿ ಇಲಾಖೆಯ ಸಚಿವರು
ದೇವಸ್ಥಾನದ ಅಭಿವೃದ್ಧಿಗೆ ಗ್ರೀನ್ ಸಿಗ್ನಲ್ ದೊರೆತಿದ್ದು, ಭೂಸ್ವಾಧೀನ ಪ್ರಕ್ರಿಯೆಯಿಂದಾಗಿ ವಿಳಂಬವಾಗಿತ್ತು. ಈಗ ದೈವಿಸಂಕಲ್ಪ ಯೋಜನೆ ಅಡಿಯಲ್ಲಿ ಅಭಿವೃದ್ಧಿಗೆ ಅನುಮತಿ ದೊರೆತಿದೆ.
ಅರವಿಂದ ಸುತುಗುಂಡಿ, ಇಒ, ಹುಲಿಗೆಮ್ಮ ದೇವಸ್ಥಾನ