ರೈಲು ಪ್ರಯಾಣಿಕರಿಗೊಂದು ಸಂತಸದ ಸುದ್ದಿ
ಬೇಡಿಕೆ ಮೇರೆಗೆ 52 ಹೆಚ್ಚುವರಿ ರೈಲು| ಈ ರೈಲುಗಳು ಡಿ.12ರಿಂದ ಬೆಂಗಳೂರು-ಮೈಸೂರು, ಹಾಸನ, ಹಿಂದೂಪುರ, ಹೊಸೂರು, ಮಾರಿಕುಪ್ಪಂ, ಬಂಗಾರಪೇಟೆ ನಡುವೆ ಸಂಚಾರ| ಯಶವಂತಪುರದಿಂದ ಮಚಲಿಪಟ್ಟಣಂಗೆ ವಿಶೇಷ ರೈಲು ಸಂಚಾರ|
ಬೆಂಗಳೂರು(ಡಿ.03): ನೈಋುತ್ಯ ರೈಲ್ವೆ ಪ್ರಯಾಣಿಕರ ಬೇಡಿಕೆ ಪ್ರತಿಕ್ರಿಯೆ ಆಧರಿಸಿ ಬೆಂಗಳೂರು ಸಂಪರ್ಕಿಸುವ 12 ಅಲ್ಪ ದೂರದ ಪ್ಯಾಸೆಂಜರ್ ರೈಲುಗಳು ಸೇರಿದಂತೆ 52 ಹೆಚ್ಚುವರಿ ವಿಶೇಷ ರೈಲುಗಳ ಕಾರ್ಯಾಚರಣೆ ಮಾಡಲು ಮುಂದಾಗಿದೆ.
ಈ ರೈಲುಗಳು ಡಿ.12ರಿಂದ ಬೆಂಗಳೂರು-ಮೈಸೂರು, ಹಾಸನ, ಹಿಂದೂಪುರ, ಹೊಸೂರು, ಮಾರಿಕುಪ್ಪಂ, ಬಂಗಾರಪೇಟೆ ನಡುವೆ ಸಂಚರಿಸಲಿವೆ. ಈ ರೈಲುಗಳಿಗೆ ಮುಂಗಡ ಟಿಕೆಟ್ ಕಾಯ್ದಿರಿಸುವ ಅಗತ್ಯವಿಲ್ಲ. ಭಾನುವಾರ ಹೊರತುಪಡಿಸಿ ವಾರದ ಉಳಿದ ಆರು ದಿನ ಈ ರೈಲುಗಳ ಸೇವೆ ಇರಲಿವೆ. ಕೊರೋನಾ ಪೂರ್ವದ ಪ್ರಯಾಣ ದರವೇ ಈ ರೈಲುಗಳಿಗೆ ಅನ್ವಯಿಸಲಿದೆ. ಈಗಾಗಲೇ ಹಬ್ಬದ ಹಿನ್ನೆಲೆಯಲ್ಲಿ ಆರಂಭಿಸಿದ್ದ 152 ವಿಶೇಷ ರೈಲು ಕಾರ್ಯಾಚರಣೆಯನ್ನು ಡಿಸೆಂಬರ್ ಅಂತ್ಯದವರೆಗೂ ವಿಸ್ತರಣೆ ಮಾಡಲಾಗಿದೆ.
ಕಲಬುರಗಿ: ಕಲ್ಯಾಣ ಕರ್ನಾಟಕಕ್ಕೆ ಮತ್ತೊಂದು ರೇಲ್ವೆ ದೋಖಾ..!
ಯಶವಂತಪುರದಿಂದ ಮಚಲಿಪಟ್ಟಣಂಗೆ ವಿಶೇಷ ರೈಲು ಸಂಚಾರ
ಡಿ.9ರಿಂದ ಮಚಲಿಪಟ್ಟಣಂ-ಯಶವಂತಪುರ-ಮಚಲಿಪಟ್ಟಣಂ ನಡುವೆ ವಿಶೇಷ ರೈಲು ಕಾರ್ಯಾಚರಣೆ ಮಾಡಲಿದೆ. ಈ ರೈಲು ವಾರದಲ್ಲಿ ಮೂರು ದಿನ ಸಂಚರಿಸಲಿದ್ದು, ಪ್ರತಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಮಧ್ಯಾಹ್ನ 3.50ಕ್ಕೆ ಮಚಲಿಪಟ್ಟಣಂ ರೈಲು ನಿಲ್ದಾಣದಿಂದ ಹೊರಟು ಮರುದಿನ ಬೆಳಗ್ಗೆ 10.10ಕ್ಕೆ ಯಶವಂತಪುರ ರೈಲು ನಿಲ್ದಾಣ ತಲುಪಲಿದೆ. ಅದೇ ರೀತಿ ಪ್ರತಿ ಮಂಗಳವಾರ, ಗುರುವಾರ ಹಾಗೂ ಭಾನುವಾರ ಮಧ್ಯಾಹ್ನ 2.20ಕ್ಕೆ ಯಶವಂತಪುರ ರೈಲು ನಿಲ್ದಾಣದಿಂದ ಹೊರಟು ಮಾರನೇ ದಿನ ಮಧ್ಯಾಹ್ನ 3.50ಕ್ಕೆ ಮಚಲಿಪಟ್ಟಣಂ ತಲುಪಲಿದೆ.
ಈ ರೈಲು ಗುಡಿವಾಡ, ವಿಜಯವಾಡ, ಗುಂಟೂರು, ನರಸರಾವ್‌ಪೇಟ್, ಮಾರ್ಕಪುರ ರಸ್ತೆ, ಗಿದ್ದಲೂರ್, ನಂದ್ಯಾಲ್, ದೋನೆ, ಗೂಟಿ, ಅನಂತಪುರ, ಧರ್ಮಾವರಂ, ಶ್ರೀಸತ್ಯಸಾಯಿ ಪ್ರಶಾಂತಿ ನಿಲಯಂ, ಪೆನುಕೊಂಡ, ಹಿಂದೂಪುರ ಹಾಗೂ ಯಲಹಂಕ ರೈಲು ನಿಲ್ದಾಣದಲ್ಲಿ ನಿಲುಗಡೆ ಆಗಲಿದೆ. ಟು ಟಯರ್‌ನ ಎರಡು ಎಸಿ ಬೋಗಿ, ತ್ರಿ ಟಯರ್‌ನ ಎರಡು ಎಸಿ ಬೋಗಿ, ಒಂಬತ್ತು ತ್ರಿ ಟಯರ್‌ನ ಸೆಕೆಂಡ್ ಕ್ಲಾಸ್ ಸ್ಪೀಪರ್ ಬೋಗಿ, ಮೂರು ಜನರಲ್ ಸೆಕೆಂಡ್ ಕ್ಲಾಸ್ ಕೋಚ್‌ಗಳು ಸೇರಿದಂತೆ ಒಟ್ಟು 18 ಕೋಚ್‌ಗಳನ್ನು ಹೊಂದಿದೆ. ಈ ರೈಲಿನಲ್ಲಿ ಸಂಚರಿಸಲು ಪ್ರಯಾಣಿಕರು ಮುಂಗಡವಾಗಿ ಟಿಕೆಟ್ ಕಾಯ್ದಿರಿಸಬೇಕು ಎಂದು ನೈಋುತ್ಯ ರೈಲ್ವೆ ತಿಳಿಸಿದೆ.