ಕೋಲಾರ ಭಾಗದ ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ 500 ಕೋಟಿ: ಸಂಸದ ಮುನಿಸ್ವಾಮಿ
ಕೋಲಾರ ಭಾಗದ ರೈಲ್ವೆ ನಿಲ್ದಾಣಗಳಲ್ಲಿ ಶೌಚಾಲಯ, ವಿದ್ಯುತ್ ದೀಪಗಳು, ಕುಡಿಯುವ ನೀರು, ಪ್ಲಾಟ್‌ಫಾರಂ, ನಿರೀಕ್ಷಣಾ ಕೊಠಡಿ ಇತ್ಯಾದಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸುಮಾರು 450 ರಿಂದ 500 ಕೋಟಿಗಳಷ್ಟು ಅನುದಾನ ಬಿಡುಗಡೆಗೊಳಿಸುವ ಮೂಲಕ ಹಿಂದೆಂದೂ ಕಾಣದಂತಹ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.
ಕೆಜಿಎಫ್ (ಸೆ.07): ಕೋಲಾರ ಭಾಗದ ರೈಲ್ವೆ ನಿಲ್ದಾಣಗಳಲ್ಲಿ ಶೌಚಾಲಯ, ವಿದ್ಯುತ್ ದೀಪಗಳು, ಕುಡಿಯುವ ನೀರು, ಪ್ಲಾಟ್‌ಫಾರಂ, ನಿರೀಕ್ಷಣಾ ಕೊಠಡಿ ಇತ್ಯಾದಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸುಮಾರು 450 ರಿಂದ 500 ಕೋಟಿಗಳಷ್ಟು ಅನುದಾನ ಬಿಡುಗಡೆಗೊಳಿಸುವ ಮೂಲಕ ಹಿಂದೆಂದೂ ಕಾಣದಂತಹ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು. ನಗರದ ಹೊರವಲಯದ ಬೆಮೆಲ್ ಕಾರ್ಖಾನೆ ಬಳಿ ರೈಲ್ವೆ ಇಲಾಖೆಯಿಂದ ನೂತನವಾಗಿ ನಿರ್ಮಿಸಲಾಗಿರುವ ಟಿಕೆಟ್ ಕೌಂಟರ್‌ನ್ನು ಉದ್ಘಾಟಿಸಿ ಮಾತನಾಡಿ, ಗತಿಶಕ್ತಿ ಮತ್ತು ಅಮೃತ್ ಭಾರತ್ ಯೋಜನೆಯಡಿ ಕೋಲಾರ ಭಾಗದಲ್ಲಿನ ಮಾಲೂರು ರೈಲ್ವೆ ನಿಲ್ದಾಣವನ್ನು 2೦ ಕೋಟಿ, ವೆಚ್ಚದಲ್ಲಿ ಉನ್ನತೀಕರಿಸಲಾಗುವುದು ಎಂದರು.
ಬಂಗಾರಪೇಟೆ ನಿಲ್ದಾಣ ಉನ್ನತೀಕರಣ: ಬಂಗಾರಪೇಟೆ ರೈಲ್ವೆ ನಿಲ್ದಾಣ ಉನ್ನತೀಕರಣಕ್ಕೆ 20 ಕೋಟಿ, ಬಂಗಾರಪೇಟೆ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣಕ್ಕೆ 2ನೇ ಪ್ರವೇಶಕ್ಕೆ 6 ಕೋಟಿ, ಬಂಗಾರಪೇಟೆ-ಬೂದಿಕೋಟೆ ರೈಲ್ವೆ ಹಳಿ ಸಮಸ್ಯೆ ಬಗೆಹರಿಸಲು 34 ಕೋಟಿ ಹಣ ಬಿಡುಗಡೆ ಮಾಡಿ, ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದ್ದು, ಅತಿ ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು. ಟೇಕಲ್ ಬಳಿ ಫ್ಲೈಓವರ್ ನಿರ್ಮಾಣಕ್ಕೆ 26 ಕೋಟಿ, ಕುಪ್ಪಂ-ಮಾರಿಕುಪ್ಪಂ ರೈಲ್ವೆ ನಿಲ್ದಾಣಗಳ ಉನ್ನತೀಕರಣ ಮತ್ತು ಮೂಲಭೂತ ಸೌಲಭ್ಯಗಳನ್ನೊದಗಿಸಲು ಹಾಗೂ ಕುಪ್ಪಂ-ಮಾರಿಕುಪ್ಪಂ ನಡುವಿನ ರೈಲ್ವೆ ಹಳಿ ನಿರ್ಮಾಣಕ್ಕೆ ಬಜೆಟ್‌ನಲ್ಲಿ 200 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದರು.
18 ಸಾವಿರ ವಿದ್ಯಾರ್ಥಿಗಳಿಗೆ ಗಣೇಶ ಹಬ್ಬಕ್ಕೆ ಬಟ್ಟೆಗಳನ್ನು ನೀಡುತ್ತೇನೆ: ಶಾಸಕ ಪ್ರದೀಪ್ ಈಶ್ವರ್
ಸರ್ಕಾರಕ್ಕೆ 1000 ಎಕರೆ ಹಸ್ತಾಂತರ: ಇಎಂಎಲ್ ವಶದಲ್ಲಿದ್ದ ಒಂದು ಸಾವಿರ ಎಕರೆ ಜಮೀನನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಲಾಗಿದ್ದು, ಈ ಪ್ರದೇಶದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಲಿವೆ. ಈಗಾಗಲೇ ಸುಮಾರು 6 ಸಾವಿರ ಕೋಟಿ ರು.ಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ಕಾರಿಡಾರ್‌ಗೆ ಹೊಂದಿಕೊಂಡಂತೆ ಈ ಕೈಗಾರಿಕೆಗಳು ಸ್ಥಾಪನೆಯಾಗಲಿವೆ ಎಂದು ತಿಳಿಸಿದರು. ಶಾಸಕಿ ರೂಪಕಲಾ ಶಶಿಧರ್ ಮಾತನಾಡಿ, ಬೆಮೆಲ್ ನಗರದ ರೈಲ್ವೆ ನಿಲ್ದಾಣ ನಿರ್ಮಾಣ ಮಾಡಿಕೊಡುವಂತೆ ಬಹುದಿನಗಳಿಂದ ಮನವಿ ನೀಡಿದ್ದು, ಇಂದು ಕಾರ್ಯಗತವಾಗಿದೆ. ಪ್ರತಿನಿತ್ಯ ಈ ಭಾಗದಿಂದ ಜೀವನೋಪಾಯಕ್ಕಾಗಿ ಸುಮಾರು 15 ಸಾವಿರಕ್ಕಿಂತ ಹೆಚ್ಚಿನ ಮಂದಿ ರೈಲಿನಲ್ಲಿ ಸಂಚರಿಸುತ್ತಿದ್ದು, ಅವರೆಲ್ಲರಿಗೂ ಅನುಕೂಲವಾಗಲಿದೆ.
ಕಾಂಗ್ರೆಸ್ ಕಾಲ್ಗುಣದಿಂದಲೇ ರಾಜ್ಯಕ್ಕೆ ಬರಗಾಲ: ಸಿ.ಟಿ.ರವಿ ಆಕ್ರೋಶ
ಬೋಗಿಗಳ ಸಂಖ್ಯೆ ಹೆಚ್ಚಿಸಲಿ: ಈ ಮೊದಲು ಮಾರಿಕುಪ್ಪಂ-ಬೆಂಗಳೂರು ಮಾರ್ಗದಲ್ಲಿ ಸಂಚರಿಸುತ್ತಿದ್ದ ರೈಲಿನಲ್ಲಿ 16 ಭೋಗಿಗಳು ಇದ್ದು, ಈಗ ಅದರ ಸಂಖ್ಯೆಯನ್ನು 12 ಕ್ಕೆ ಇಳಿಸಿರುವುದರಿಂದ ಪ್ರಯಾಣಿಕರು ತುಂಬಾ ತೊಂದರೆ ಅನುಭವಿಸುವಂತಾಗಿದ್ದು, ಭೋಗಿಗಳ ಸಂಖ್ಯೆಯನ್ನು ಈ ಮೊದಲಿನಂತೆಯೇ 16ಕ್ಕೆ ಹೆಚ್ಚಿಸಬೇಕೆಂದು ರೈಲ್ವೆ ಡಿಆರ್‌ಎಂ ಅವರಿಗೆ ಮನವಿ ಮಾಡಿದರು. ಹಿರಿಯ ರೈಲ್ವೆ ಡಿಆರ್‌ಎಂ ಯೋಗೇಶ್ ಮೋಹನ್, ಆವಣಿ ಭಾಗದ ಎಡಿಆರ್‌ಎಂ ಕುಸುಮ, ಸೀನಿಯರ್ ಡಿಸಿಎಂ ಕೃಷ್ಣನ್, ರೈಲ್ವೆ ಬೋರ್ಡ್ ಸದಸ್ಯ ಪ್ರದೀಪ್ ನಾಯ್ಡು, ನಗರಸಭೆ ಮಾಜಿ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ, ಸದಸ್ಯ ಮಾಣಿಕ್ಯಂ, ಹನುಮಂತು, ವೆಂಕಟೇಶ್, ಜನಾರ್ಧನ್ ಇದ್ದರು.