ಮಂಡ್ಯ: ಜಮೀನಿನಲ್ಲಿ ಕೂಲಿ ಕೆಲಸ ಮಾಡುವ ವೇಳೆ ಕಾಡಾನೆ ದಾಳಿ, ಮಹಿಳೆ ಸಾವು
ಸಾಕಮ್ಮ ಮೃತ ಮಹಿಳೆ. ಕಬ್ಬಿನ ಗದ್ದೆಯೊಳಗೆ ಸಲಗ ಇರುವ ಬಗ್ಗೆ ಅರಿವೇ ಇಲ್ಲದೆ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಏಕಾಏಕಿ ಆನೆ ದಾಳಿ ನಡೆಸಿದಾಗ ಈ ದುರಂತ ಸಂಭವಿಸಿದೆ.
ಮಂಡ್ಯ(ನ.20): ಜಮೀನೊಂದರಲ್ಲಿ ಕೂಲಿ ಕೆಲಸ ಮಾಡುವ ಸಮಯದಲ್ಲಿ ಹಠಾತ್ತನೆ ಸಲಗವೊಂದು ನಡೆಸಿದ ದಾಳಿಯಲ್ಲಿ ಕೂಲಿ ಕಾರ್ಮಿಕ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ತಾಲೂಕಿನ ಲಾಳನಕೆರೆ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಗ್ರಾಮದ ಸಾಕಮ್ಮ (೫೦) ಮೃತ ಮಹಿಳೆ. ಕಬ್ಬಿನ ಗದ್ದೆಯೊಳಗೆ ಸಲಗ ಇರುವ ಬಗ್ಗೆ ಅರಿವೇ ಇಲ್ಲದೆ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಏಕಾಏಕಿ ಆನೆ ದಾಳಿ ನಡೆಸಿದಾಗ ಈ ದುರಂತ ಸಂಭವಿಸಿದೆ.
ಭಾನುವಾರ ಬೆಳಗ್ಗೆ ೮ ಗಂಟೆ ಸಮಯದಲ್ಲಿ ಪೀಹಳ್ಳಿ ಗ್ರಾಮದ ಮಾಲೀಕರೊಬ್ಬರ ಜಮೀನಿನ ಕೂಲಿ ಕೆಲಸಕ್ಕೆ ಸಾಕಮ್ಮ ತೆರಳಿದ್ದರು. ಇವರ ಜೊತೆ ಎಂಟಕ್ಕೂ ಹೆಚ್ಚು ಮಂದಿ ಕೂಲಿ ಕೆಲಸ ಮಾಡುತ್ತಿದ್ದರು. ಜಮೀನಿನಲ್ಲಿ ಸಲಗವಿರುವ ಬಗ್ಗೆ ಯಾರೊಬ್ಬರಿಗೂ ಸುಳಿವಿರಲಿಲ್ಲ. ಹಾಗಾಗಿ ಎಲ್ಲರೂ ಭಯ-ಭೀತಿಯಿಲ್ಲದೆ ಕೆಲಸ ಮಾಡುತ್ತಿದ್ದರು.
ಮೋದಿ ಕೈ ಬಲಪಡಿಸಲು ವಿಜಯೇಂದ್ರ ರಾಜ್ಯ ಪ್ರವಾಸ
ಸಲಗ ಶನಿವಾರ ರಾತ್ರಿಯೇ ಕಬ್ಬಿನ ಗದ್ದೆಯಲ್ಲಿ ಬಿಡು ಬಿಟ್ಟಿದ್ದರಿಂದ ಯಾರ ಅರಿವಿಗೂ ಬಂದಿರಲಿಲ್ಲ. ಕಾರ್ಮಿಕರು ಕೆಲಸ ಮಾಡುವ ಸಮಯದಲ್ಲಿ ಆನೆ ಸಾಕಮ್ಮ ಅವರ ಮೇಲೆ ಏಕಾಏಕಿ ದಾಳಿ ಮಾಡಿದ್ದು, ತಪ್ಪಿಸಿಕೊಳ್ಳಲು ಸಾಕಮ್ಮ ಪ್ರಯತ್ನ ಮಾಡಿದರಾದರೂ ಅಷ್ಟರಲ್ಲಿ ಆನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದರು. ಅದೃಷ್ಟ ವಶಾತ್ ಇತರ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದುರಂತ ನಡೆದ ಹಿನ್ನೆಲೆಯಲ್ಲಿ ನೂರಾರು ಜನ ಜಮಾಯಿಸಿ ಕಬ್ಬಿನ ಗದ್ದೆಯಲ್ಲೇ ಬಿಡು ಬಿಟ್ಟಿದ್ದ ಆನೆಯನ್ನು ಓಡಿಸಲು ಪ್ರಯತ್ನಿಸಿದರು. ಹಲವರು ಆನೆ ಇರುವ ಕಡೆಗೆ ಕಲ್ಲು ತೂರಿದರು.ಅರಣ್ಯ ಇಲಾಖೆ ಸಿಬ್ಬಂದಿ ಕಲ್ಲು ತೂರದಂತೆ ಮತ್ತು ಅವುಗಳ ಸಮೀಪ ಹೋಗದಂತೆ ಮನವಿ ಮಾಡಿದರಾದರೂ ರೊಚ್ಚಿಗೆದ್ದ ಜನರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅರಣ್ಯ ಅಧಿಕಾರಿಗಳು, ಗ್ರಾಮಾಂತರ ಪೊಲೀಸರು ಸ್ಥಳದಲ್ಲಿ ಸಲಗವನು ಕಾಡಿಗಟ್ಟುವ ಕಾರ್ಯದಲ್ಲಿ ತೊಡಗಿದ್ದರು. ಆನೆ ದಾಳಿಯಿಂದ ಮಹಿಳೆ ಸಾವನಪ್ಪಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಜಿಲ್ಲಾಧಿಕಾರಿ ಭೇಟಿ:
ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಸಾವನ್ನಪ್ಪಿರುವ ಸುದ್ದಿ ತಿಳಿದ ತಕ್ಷಣ ಜಿಲ್ಲಾಧಿಕಾರಿ ಡಾ.ಕುಮಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಒಂಟಿಯಾಗಿ ಸಲಗ ಎಲ್ಲಿಂದ ಬಂದಿತೆಂಬ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಎಲಿಫೆಂಟ್ ಕಾರಿಡಾರ್ ತಂಡದವರು ಆನೆಯನ್ನು ಕಾಡಿಗಟ್ಟುವ ಪ್ರಯತ್ನದಲ್ಲಿ ತೊಡಗಿದ್ದರು.
'ಜಾತಿ ಗಣತಿ ವರದಿ ಬಹಿರಂಗದಿಂದ ರಾಜಕೀಯ ಸ್ಥಿತ್ಯಂತರ'
ಮಹಿಳೆ ಕುಟುಂಬಕ್ಕೆ ೧೫ ಲಕ್ಷ ರು. ಪರಿಹಾರ:
ಸಲಗವೊಂದರ ದಾಳಿಗೆ ಸಿಲುಕಿ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ೧೫ ಲಕ್ಷ ರು. ಪರಿಹಾರ ಘೋಷಿಸಿರುವುದಾಗಿ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಕನ್ನಡಪ್ರಭ ಪತ್ರಿಕೆಗೆ ತಿಳಿಸಿದರು. ತಕ್ಷಣಕ್ಕೆ ೫ ಲಕ್ಷ ರು. ಪರಿಹಾರ ನೀಡಲಾಗಿದೆ. ಅಲ್ಲದೆ, ವಾರಸುದಾರರಿಗೆ ಪ್ರತಿ ತಿಂಗಳು ೪ ಸಾವಿರ ರು. ಪಿಂಚಣಿಗೆ ವ್ಯವಸ್ಥೆ ಮಾಡಿರುವುದಾಗಿ ಹೇಳಿದರು.
ಆನೆ ಎಲ್ಲಿಂದ ಬಂದಿದೆ ಎಂಬ ಬಗ್ಗೆ ಮಾಹಿತಿ ದೊರಕಿಲ್ಲ. ಎಲಿಫೆಂಟ್ ಕಾರಿಡಾರ್ ತಂಡದವರು ಸ್ಥಳಕ್ಕೆ ಆಗಮಿಸಿದ್ದಾರೆ. ಆನೆಯನ್ನು ಕಾಡಿನತ್ತ ಕಳುಹಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದರು.