'ಜಾತಿ ಗಣತಿ ವರದಿ ಬಹಿರಂಗದಿಂದ ರಾಜಕೀಯ ಸ್ಥಿತ್ಯಂತರ'
ಜಾತಿ ಗಣತಿ ವರದಿ ಬಹಿರಂಗದಿಂದ ರಾಜಕೀಯ ಸ್ಥಿತ್ಯಂತರವಾಗಲಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್ ಹೇಳಿದರು.
ಮಂಡ್ಯ : ಜಾತಿ ಗಣತಿ ವರದಿ ಬಹಿರಂಗದಿಂದ ರಾಜಕೀಯ ಸ್ಥಿತ್ಯಂತರವಾಗಲಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್ ಹೇಳಿದರು.
ಆಯೋಗ ನೀಡಿರುವ ವರದಿ ಬಹಿರಂಗೊಳ್ಳುವ ಮುನ್ನವೇ ಅದು ಸರಿ ಇಲ್ಲ ಎಂದು ವಿರೋಧಿಸುವುದು ಬೇಡ. ಮೊದಲು ವರದಿ ಬಹಿರಂಗ ಗೊಳ್ಳಲಿ. ಆನಂತರ ಅದರ ಸರಿ-ತಪ್ಪುಗಳ ವಿಮರ್ಶೆಯಾಗಲಿ. 187 ಕೋಟಿ ರು. ವೆಚ್ಚದಲ್ಲಿ ಜನರ ತೆರಿಗೆ ಹಣದಿಂದ ತಯಾರಿಸಲಾಗಿರುವ ವರದಿ ಬಹಿರಂಗಗೊಳ್ಳಬೇಕು ಎಂದು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.
ವರದಿ ಬಹಿರಂಗಗೊಳ್ಳುವುದರಿಂದ ಹಿಂದುಳಿದ ವರ್ಗಕ್ಕೆ ಸೇರಿದ ಅಸಹಾಯಕ ಸಮುದಾಯಗಳಿಗೆ ಸಾಮಾಜಿಕ ಪ್ರಾತಿನಿಧ್ಯ ಸಿಗುವುದಲ್ಲದೆ, ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿಯೂ ಸರ್ವತೋಮುಖ ಬೆಳವಣಿಗೆಯಾಗಲಿದೆ. ಇದೊಂದು ಹೊಸ ಸಾಮಾಜಿಕ ಬದಲಾವಣೆಗೆ ನಾಂದಿಯಾಗಲಿದೆ ಎಂದು ಭವಿಷ್ಯ ನುಡಿದರು.
ಪ್ರಬಲ ಸಮುದಾಯಗಳು ತಮಗೆ ಈಗಿರುವ ಮೀಸಲಾತಿ ಎಲ್ಲಿ ಕೈತಪ್ಪಿ ಹೋಗಬಹುದೋ ಎಂಬ ಭಯದಿಂದ ವರದಿ ಬಹಿರಂಗಕ್ಕೆ ವಿರೋಧ ವ್ಯಕ್ತಪಡಿಸುತ್ತಿವೆ. ಆದರೆ, ಹಿಂದುಳಿದ ವರ್ಗಗಳಿಗೆ ಸಂವಿಧಾನಾತ್ಮಕವಾಗಿ ಎಷ್ಟು ಮೀಸಲಾತಿ ಸಿಗಬೇಕೋ ಅಷ್ಟು ಸಿಗುತ್ತದೆ. ಅವರು ಯಾವುದೇ ಸಮುದಾಯಕ್ಕೆ ಸ್ಪರ್ಧಿಗಳೂ ಅಲ್ಲ, ಮೀಸಲಾತಿಯನ್ನು ಕಸಿದುಕೊಳ್ಳುವುದಕ್ಕೂ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಸ್ತುತ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಜಯಪ್ರಕಾಶ್ ಹೆಗ್ಡೆ ಅವರು ನ.24 ಕ್ಕೆ ಜಾತಿ ಗಣತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ವರದಿ ಸ್ವೀಕರಿಸುವುದಾಗಿ ಹೇಳಿದ್ದಾರೆ. ವರದಿಯನ್ನು ಸರ್ಕಾರ ಬಹಿರಂಗಪಡಿಸಿದರೆ ಒಳ್ಳೆಯದು. ಅದನ್ನು ಮುಚ್ಚಿಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದೂ ನುಡಿದರು.
1931 ರಲ್ಲಿ ಮಿಲ್ಲರ್ ಆಯೋಗ ಬಳಿಕ ಮೊಟ್ಟ ಮೊದಲಬಾರಿಗೆ ದೇಶದಲ್ಲಿ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಿತ್ತು. ಆನಂತರ ವರದಿ ಬಿಡುಗಡೆ ಮಾಡುವ ಅವಕಾಶ ಕರ್ನಾಟಕಕ್ಕೆ ದೊರಕಿತ್ತು. ಆದರೆ, ಬಿಹಾರ ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡಿತು. ಈಗಲಾದರೂ ಜಾತಿಗಣತಿ ವರದಿಯನ್ನು ಪಡೆದು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು.
ಜಾತಿ ಗಣತಿ ವರದಿಯಲ್ಲಿ 197 ಜಾತಿಗಳನ್ನು ಪರಿಗಣಿಸಲಾಗಿದ್ದು, ಪ್ರವರ್ಗ-೧ರಲ್ಲಿ ೯೫ ಜಾತಿಗಳು, ಪ್ರವರ್ಗ-೨ರಲ್ಲಿ ೧೦೨ ಜಾತಿಗಳನ್ನು ಅತಿ ಹಾಗೂ ಅತ್ಯಂತ ಹಿಂದುಳಿದ ಜಾತಿಗಳೆಂದು ಗುರುತಿಸಲಾಗಿದೆ. ಇಷ್ಟು ವರ್ಷಗಳಲ್ಲಿ ಯಾವ ಯಾವ ಸಮುದಾಯಕ್ಕೆ ಯಾವ ಕ್ಷೇತ್ರಗಳಲ್ಲಿ ಎಷ್ಟೆಷ್ಟು ಪ್ರಾತಿನಿಧ್ಯ ಸಿಕ್ಕಿದೆ, ಸಿಕ್ಕಿಲ್ಲ ಎನ್ನುವುದನ್ನು ಪರಾಮರ್ಶೆ ನಡೆಸಿ ಅನ್ಯಾಯಕ್ಕೊಳಗಾಗಿರುವ ಸಮುದಾಯಗಳಿಗೆ ನ್ಯಾಯ ಸಿಗುವಂತೆ ಮಾಡಬೇಕಿದೆ ಎಂದು ನುಡಿದರು.