ಕೊರೋನಾ ಸೋಂಕಿತರಿಗೆ ನೀಡಲು ಆಸ್ಪತ್ರೆಗಳ ಒಪ್ಪಿಗೆ| ಗಂಭೀರವಲ್ಲದ ರೋಗಿಗಳ ಮನವೊಲಿಸಿ ಡಿಸ್ಚಾರ್ಜ್‌| ಆಸ್ಪತ್ರೆಗಳಲ್ಲಿ ಅನಿವಾರ್ಯ ಇರುವವರಿಗೆ ಮಾತ್ರ ಚಿಕಿತ್ಸೆ| ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಉದ್ದೇಶಪೂರ್ವಕವಾಗಿ ಕೊರೋನಾ ಸೋಂಕು ಪರೀಕ್ಷಾ ಕಿಟ್‌ ಹಾಳು ಮಾಡಿದವರ ಮೇಲೆ ಕ್ರಮ: ಸುಧಾಕರ್‌| 

ಬೆಂಗಳೂರು(ಏ.13): ಕೊರೋನಾ ಸೋಂಕು ತೀವ್ರ ಹೆಚ್ಚಳ ಹಿನ್ನೆಲೆಯಲ್ಲಿ ವಾರದೊಳಗೆ ಶೇ.50ರಷ್ಟು ಹಾಸಿಗೆಯನ್ನು ಸೋಂಕಿತರ ಚಿಕಿತ್ಸೆಗೆ ಮೀಸಲಿಡಲು ಹಾಗೂ ಪ್ರಸ್ತುತ ಆಸ್ಪತ್ರೆಗೆ ದಾಖಲಾಗಿರುವ ಕೊರೋನೇತರ ಗಂಭೀರ ಅನಾರೋಗ್ಯವಿಲ್ಲದ ರೋಗಿಗಳ ಮನವೊಲಿಸಿ ಡಿಸ್ಚಾರ್ಜ್‌ ಮಾಡಲು ಖಾಸಗಿ ಆಸ್ಪತ್ರೆಗಳು ಒಪ್ಪಿಕೊಂಡಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್‌ ಹೇಳಿದ್ದಾರೆ.

ಸೋಮವಾರ ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್‌ ಹೋಮ್‌ಗಳ ಸಂಘಟನೆ (ಫಾನಾ) ಸಂಘಟನೆ ಪದಾಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ವಾರದೊಳಗೆ ಶೇ.50ರಷ್ಟು ಹಾಸಿಗೆ ಮೀಸಲಿಡಲು ಹಾಗೂ ಈಗ ದಾಖಲಾಗಿರುವ ಕೋವಿಡ್‌ ಅಲ್ಲದ ತುರ್ತಿಲ್ಲದ ರೋಗಿಗಳಿಗೆ ಮನವಿ ಮಾಡಿ ಡಿಸ್ಚಾರ್ಜ್‌ ಮಾಡಲು ಒಪ್ಪಿಕೊಂಡಿವೆ. ಜತೆಗೆ ಅಲ್ಪ ರೋಗ ಲಕ್ಷಣ ಹಾಗೂ ಲಕ್ಷಣ ರಹಿತ ರೋಗಿಗಳಿಗೆ ಹೋಟೆಲ್‌ಗಳಲ್ಲಿ, ಕೊರೋನಾ ಆರೋಗ್ಯ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಬೇಕೆಂದು ಸೂಚಿಸಲಾಗಿದೆ. ಆಸ್ಪತ್ರೆಗಳೇ ಹೋಟೆಲ್‌ಗಳಲ್ಲಿ ಹಾಸಿಗೆ ವ್ಯವಸ್ಥೆ ಮಾಡಿ ಆರೋಗ್ಯ ಕೇಂದ್ರ ನಿರ್ವಹಿಸಬೇಕು. ಆಸ್ಪತ್ರೆಗಳಲ್ಲಿ ಅನಿವಾರ್ಯ ಇರುವವರಿಗೆ ಮಾತ್ರ ಚಿಕಿತ್ಸೆ ನೀಡಬೇಕೆಂದು ಸೂಚಿಸಲಾಗಿದೆ ಎಂದರು.

ಶಾಕಿಂಗ್: ಲಾಕ್ ಡೌನ್ ಸುಳಿವು ನೀಡಿದ ಸಚಿವ ಸುಧಾಕರ್!

ರೆಮಿಡಿಸಿವಿರ್‌ ಔಷಧಿ ಪೂರೈಕೆಗೆ ಕ್ರಮ

ನವೆಂಬರ್‌ ತಿಂಗಳಲ್ಲಿ ಕೊರೋನಾ ಸೋಂಕು ಕಡಿಮೆಯಾಗಿದ್ದರಿಂದ ಹಲವು ಕಂಪನಿಗಳು ರೆಮ್‌ಡೆಸಿವಿರ್‌ ಔಷಧಿ ತಯಾರಿಕೆ ಹಾಗೂ ಪೂರೈಕೆಯನ್ನು ಸ್ಥಗಿತಗೊಳಿಸಿವೆ. ರಾಜ್ಯ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಲಭ್ಯವಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಕೊರತೆ ಇದೆ ಎಂದು ಖಾಸಗಿ ಆಸ್ಪತ್ರೆಗಳು ಹೇಳಿರುವ ಬಗ್ಗೆ ಡ್ರಗ್‌ ಕಂಟ್ರೋಲರ್‌ ಜೊತೆ ಚರ್ಚಿಸಿ ಅಗತ್ಯವಿರುವ ಔಷಧ ಪ್ರಮಾಣ ಗುರುತು ಮಾಡಿ ಸರ್ಕಾರದಿಂದಲೇ ನಿರ್ದಿಷ್ಟದರದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಪೂರೈಸುವ ಕ್ರಮ ವಹಿಸಲಾಗುವುದು. ಆಕ್ಸಿಜನ್‌, ಆಕ್ಸಿಜನ್‌ ಜನರೇಟರ್‌ ಕೊರತೆಯಾಗದಂತೆ ಕ್ರಮ ಕೈಗೊಳ್ಳುತ್ತೇವೆ. ಕೊರತೆಯ ಸಂಭವ ಬಂದರೆ ಕೈಗಾರಿಕಾ ಆಕ್ಸಿಜನ್‌ ಬಳಸಲು ಕ್ರಮ ವಹಿಸಲಾಗುವುದು ಎಂದು ಸುಧಾಕರ್‌ ಹೇಳಿದರು.

ಪರೀಕ್ಷೆಯಲ್ಲಿ ತಪ್ಪಸೆಗಿದ ನೌಕರ ವಜಾ

ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಉದ್ದೇಶಪೂರ್ವಕವಾಗಿ ಕೊರೋನಾ ಸೋಂಕು ಪರೀಕ್ಷಾ ಕಿಟ್‌ ಹಾಳು ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ತಪ್ಪೆಸಗಿದ ನೌಕರರನ್ನು ವಜಾಗೊಳಿಸಲಾಗಿದೆ. ಇದೊಂದು ತಪ್ಪಿಗಾಗಿ ಸರ್ಕಾರ ಮಾಡಿದ ಉತ್ತಮ ಕೆಲಸಗಳನ್ನು ಮರೆಮಾಚುವುದು ಬೇಡ. ಈವರೆಗೆ 2.2 ಕೋಟಿಗೂ ಅಧಿಕ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ ಶೇ.85 ನಷ್ಟು ಆರ್‌ಟಿಪಿಸಿಆರ್‌ ಪರೀಕ್ಷೆಯಾಗಿದೆ ಎಂದರು.