Asianet Suvarna News Asianet Suvarna News

ಕೊಪ್ಪಳದ ಗವಿಮಠ ಜಾತ್ರೆ: ಎರಡೇ ದಿನದಲ್ಲಿ 5 ಲಕ್ಷ ಭಕ್ತರಿಂದ ಪ್ರಸಾದ ಸ್ವೀಕಾರ

ತಲಾ 200 ಕ್ವಿಂಟಲ್ ಅಕ್ಕಿ, ಮಾದಲಿ, 7.5 ಕ್ವಿಂಟಲ್ ತುಪ್ಪ, 3000 ಲೀಟರ್ ಹಾಲು ಬಳಕೆ| 10 ಕ್ವಿಂಟಲ್ ಉಪ್ಪಿನಕಾಯಿ ಬಳಕೆ| ತಡರಾತ್ರಿ 2 ಗಂಟೆವರೆಗೂ ಪ್ರಸಾದ ವಿತರಣೆ|

5 Lakh Devotees Taken Prasada in Gavimath Fair in Koppal
Author
Bengaluru, First Published Jan 15, 2020, 8:56 AM IST
  • Facebook
  • Twitter
  • Whatsapp

ಕೊಪ್ಪಳ(ಜ.15): ದಾಸೋಹಕ್ಕೆ ಹೆಸರಾದ ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ಕೇವಲ 2 ದಿನದಲ್ಲಿ ಪ್ರಸಾದ ಸ್ವೀಕರಿಸಿದ ಭಕ್ತರ ಸಂಖ್ಯೆ 5 ಲಕ್ಷ. ಎರಡೂ ದಿನವೂ ಮುಂಜಾನೆ 9 ಗಂಟೆಗೆ ಆರಂಭವಾದ ದಾಸೋಹ ಸೇವೆ ಮುಗಿದಿದ್ದು ಮಧ್ಯರಾತ್ರಿ 2 ಗಂಟೆಯ ಬಳಿಕವೇ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಎರಡು ದಿನದಲ್ಲಿ ಪ್ರಸಾದ ಸ್ವೀಕರಿಸಿದ ಭಕ್ತರ ಸಂಖ್ಯೆ ಲಕ್ಷಕ್ಕೂ ಅಧಿಕ ಎನ್ನಲಾಗಿದೆ. ದಾಸೋಹದಲ್ಲಿ ಎರಡೇ ದಿನದಲ್ಲಿ 200 ಕ್ವಿಂಟಲ್ ಮಾದಲಿ (ಸಿಹಿ ಪದಾರ್ಥ), 200 ಕ್ವಿಂಟಲ್ ಅಕ್ಕಿ ಅನ್ನ ಬಳಕೆಯಾಗಿದೆ. ಇದರ ಜೊತೆ 3 ಸಾವಿರ ಲೀಟರ್ ಹಾಲು, 7.5 ಕ್ವಿಂಟಲ್ ತುಪ್ಪ, ಸುಮಾರು 40 ಕ್ವಿಂಟಲ್ ತರಕಾರಿ, 35 ಕ್ವಿಂಟಲ್ ದಾಲ್, 12 ಕೊಪ್ಪರಿಗೆ ಸಾಂಬಾರು, 8 ಕ್ವಿಂಟಲ್ ಪುಟಾಣಿ ಚಟ್ನಿ, 10 ಕ್ವಿಂಟಲ್ ಉಪ್ಪಿನಕಾಯಿ ಹಾಗೂ 6 ಕ್ವಿಂಟಲ್ ಕೆಂಪು ಚಟ್ನಿಯನ್ನು ಪ್ರಸಾದ ಭೋಜನದ ರೂಪದಲ್ಲಿ ನೀಡಲಾಗಿದೆ. ಇದಲ್ಲದೆ ನಾಲ್ಕೆದು ಲಕ್ಷ ರೊಟ್ಟಿ ಸಹ ಬಳಕೆಯಾಗಿವೆ.ಇಷ್ಟೊಂದು ದವಸ, ಧಾನ್ಯಗಳು, ಬೇಳೆಕಾಳುಗಳು, ತರಕಾರಿ ಬಳಕೆ ಯಾಗಿದ್ದು ಸುಮಾರು 5 ಲಕ್ಷ ಜನ ಭಕ್ತರು ಪ್ರಸಾದ ಸ್ವೀಕರಿಸಿದ್ದಾರೆ ಎಂದು ಅಂದಾಜು ಮಾಡಲಾಗಿದೆ. 

ತಡ ರಾತ್ರಿವರೆಗೂ ಪ್ರಸಾದ: 

ಜಾತ್ರೆಯ ಮಹಾ ದಾಸೋಹ ಮಂಟಪದಲ್ಲಿ ರಾತ್ರಿ 2 ಗಂಟೆಯ ವರೆಗೂ ಪ್ರಸಾದ ವಿತರಣೆ ಮಾಡಲಾಗಿದೆ. ಮಧ್ಯರಾತ್ರಿಯ ವೇಳೆಯಲ್ಲೂ ಸುಮಾರು ಅರ್ಧ ಕಿ.ಮೀ. ಸರದಿ ಇತ್ತು. ಸೋಮವಾರ ರಾತ್ರಿ 2 ಗಂಟೆಯವರೆಗೂ ಪ್ರಸಾದ ವಿತರಿಸಲಾಗಿತ್ತು. ಇನ್ನೇನು ಪ್ರಸಾದ ವಿತರಣೆ ಮುಗಿಸಲಾಗಿತ್ತು. ಆ ಸಂದರ್ಭದಲ್ಲಿ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಬಳಿ ಆಗಮಿಸಿದ 15 ಭಕ್ತರಿಗೆ 2.30 ಕ್ಕೆ ಮತ್ತೆ ಪ್ರಸಾದ ವಿತರಿಸಲಾಯಿತು. 

ಗವಿಶ್ರೀ ಮಲಗಿದ್ದೇ 3 ಗಂಟೆಗೆ: 

ದಾಸೋಹ, ಪ್ರಸಾದ ವ್ಯವಸ್ಥೆಯೆಲ್ಲ ಪೂರೈಸಿ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಮಧ್ಯ ರಾತ್ರಿ 1.30 ಕ್ಕೆ ಗುಡ್ಡ ಮೇಲೆ ಹೋಗಿದ್ದಾರೆ. ಪೂಜೆ, ಪ್ರಸಾದ ಮುಗಿಸಿ, ಬಂದ ಭಕ್ತರನ್ನು ಮಾತನಾಡಿಸಿ ಅವರಿಗೆ ಪ್ರಸಾದ ಕೊಡಿಸಿ ಮಲಗುವಾಗ 3 ಗಂಟೆ ಆಗಿದೆ. ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಮುಂಜಾನೆ 4 ಕ್ಕೆಲ್ಲ ಮತ್ತೆ ಎದ್ದಿದ್ದಾರೆ. ಎದ್ದು, ಬೆಳಗಿನ ಕರ್ಮಾದಿಗಳನ್ನು ಪೂರ್ಣಗೊಳಿಸಿ, ಪುನಃ ಜಾತ್ರೆಯ ಆವರಣಕ್ಕೆ ನಸುಕಿನಲ್ಲಿಯೇ ಆಗಮಿಸಿದ್ದಾರೆ.
ಜಾತ್ರೆಯ ದಾಸೋಹದ ಎರಡೇ ದಿನದಲ್ಲಿ 200 ಕ್ವಿಂಟಲ್ ಅಕ್ಕಿ, 200 ಕ್ವಿಂಟಲ್ ಮಾದಲಿ ಬಳಕೆಯಾಗಿದ್ದು, ಸುಮಾರು 4.5 -5 ಲಕ್ಷ ಭಕ್ತರು ಪ್ರಸಾದ ಸ್ವೀಕರಿಸಿರಬಹುದು ಎಂದು ಅಂದಾಜಿಸಲಾಗಿದೆ. ಇದು ಇನ್ನೂ ಅಧಿಕನೂ ಇರಬಹುದು ಎಂದು ಉಸ್ತುವಾರಿ ಪ್ರಕಾಶ ಚಿನಿವಾಲರ ಹೇಳಿದ್ದಾರೆ. 

ಪ್ರಸಾದಕ್ಕೆ ಇದುವರೆಗೂ 7.5 ಕ್ವಿಂಟಲ್ ತುಪ್ಪ, 3 ಸಾವಿರ ಲೀಟರ್ ಹಾಲು ಬಳಕೆಯಾಗಿದೆ. ಹಗಲು-ರಾತ್ರಿ ಭಕ್ತರೇ ಸ್ವಯಂಪ್ರೇರಿತವಾಗಿ ಬಾಣಸಿಗರಂತೆ ಕೆಲಸ ಮಾಡುತ್ತಿದ್ದಾರೆ ಎಂದು ಉಸ್ತುವಾರಿ ರಾಮನಗೌಡ ತಿಳಿಸಿದ್ದಾರೆ. 
 

Follow Us:
Download App:
  • android
  • ios