ಲೈಫ್‌ಲೈನ್‌ ಆಸ್ಪತ್ರೆಯಲ್ಲಿ ಏಕಕಾಲಕ್ಕ 5 ಸೋಂಕಿತರ ಸಾವು| ಆಕ್ಸಿಜನ್‌ ಕೊರತೆಯೇ ಕಾರಣ: ಮೃತಪಟ್ಟವರ ಕುಟುಂಬಸ್ಥರ ಆಕ್ರೋಶ| ಆಸ್ಪತ್ರೆಯಿಂದ ಹೊರಬಾರದ ಆಸ್ಪತ್ರೆ ಸಿಬ್ಬಂದಿ| ನಡುವೆ ಆಸ್ಪತ್ರೆ ಸುತ್ತಮುತ್ತ ಬ್ಯಾರಿಕೇಡ್‌ ಅಳವಡಿಸಿ, ಪೊಲೀಸ್‌ ಬಿಗಿ ಬಂದೋಬಸ್ತ್‌| 

ಹುಬ್ಬಳ್ಳಿ(ಮೇ.05): ಇಲ್ಲಿನ ಲೈಫ್‌ಲೈನ್‌ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಿಪಂ ಮಾಜಿ ಸದಸ್ಯ ಸೇರಿದಂತೆ ಐವರು ಕೊರೋನಾ ಸೋಂಕಿತರು ಏಕಕಾಲಕ್ಕೆ ಮೃತಪಟ್ಟಿದ್ದಾರೆ. 

ಸೋಂಕಿತರ ಸಾವಿಗೆ ಆಕ್ಸಿಜನ್‌ ಕೊರತೆಯೇ ಕಾರಣ ಎಂದು ಮೃತಪಟ್ಟವರ ಸಂಬಂಧಿಕರು ಆರೋಪಿಸಿದ್ದಾರೆ. ಆದರೆ, ಇದನ್ನು ತಳ್ಳಿಹಾಕಿರುವ ಜಿಲ್ಲಾಡಳಿತ, ಆಕ್ಸಿಜನ್‌ ಕೊರತೆಯಿಂದ ಸೋಂಕಿತರು ಮೃತಪಟ್ಟಿಲ್ಲ. ಆಸ್ಪತ್ರೆಯಲ್ಲಿ ಆಕ್ಸಿಜನ್‌ ಉತ್ಪಾದನಾ ಘಟಕವೇ ಇದೆ. ತನಿಖೆ ನಂತರವೇ ನೈಜವಾದ ಕಾರಣ ಗೊತ್ತಾಗಲಿದೆ ಎಂದು ಸ್ಪಷ್ಟಪಡಿಸಿದೆ. ಈ ನಡುವೆ ಆಸ್ಪತ್ರೆಯೆದುರು ಮೃತರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.

"

ಆಗಿದ್ದೇನು?:

ಇಲ್ಲಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಾದ ಲೈಫ್‌ಲೈನ್‌ನಲ್ಲಿ ಸಂಜೆ 5ರ ಸುಮಾರಿಗೆ ಐಸಿಯುನಲ್ಲಿರುವ ಐವರು ಸೋಂಕಿತರ ಆರೋಗ್ಯದಲ್ಲಿ ಏರುಪೇರಾಗಿದೆ. ಆಸ್ಪತ್ರೆ ಸಿಬ್ಬಂದಿ, ವೈದ್ಯರು ಪರಿಸ್ಥಿತಿ ನಿಭಾಯಿಸಲು ಪ್ರಯತ್ನ ಪಟ್ಟಿದ್ದಾರೆ. ಆದರೆ, ಕೆಲವೇ ನಿಮಿಷಗಳಲ್ಲೇ ಒಬ್ಬರಾದ ಮೇಲೊಬ್ಬರು ಮೃತಪಟ್ಟಿದ್ದಾರೆ.

ಚಾಮರಾಜನಗರ: ನಾಪತ್ತೆಯಾಗಿದ್ದ ಸೋಂಕಿತ ಜಿಲ್ಲಾಸ್ಪತ್ರೆ ಮುಂದಿನ ರಸ್ತೆಯಲ್ಲಿ ಶವವಾಗಿ ಪತ್ತೆ

ಜಿಪಂ ಹಾಗೂ ಪಾಲಿಕೆ ಮಾಜಿ ಸದಸ್ಯ, ನವಲಗುಂದ ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ ದೇಸಾಯಿಗೌಡ ಪಾಟೀಲ, ಕೇಶ್ವಾಪುರ ನಿವಾಸಿ ವಾಣಿ ಜನ್ನು, ಶಿರಸಿ ನಿವಾಸಿ ವಿನಯಾ, ಹುಬ್ಬಳ್ಳಿ ನಿವಾಸಿಗಳಾದ ಬಾಲಚಂದ್ರ, ಸುಶಾಂತ ದ್ರೋಣಾವತ್ತ ಮೃತಪಟ್ಟವರು. ಇವರಲ್ಲಿ ದೇಸಾಯಿಗೌಡ ಪಾಟೀಲ ಅವರು ಮಾಜಿ ಶಾಸಕ ಶಂಕರಗೌಡ ಪಾಟೀಲ ಅವರ ಹಿರಿಯ ಪುತ್ರರಾಗಿದ್ದಾರೆ.

ಕುಟುಂಬಸ್ಥರ ಆಕ್ರೋಶ:

ಐಸಿಯುನಲ್ಲಿರುವ ಐವರು ಸೋಂಕಿತರು ಕೆಲವೇ ನಿಮಿಷಗಳ ಅಂತರದಲ್ಲಿ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಆಕ್ಸಿಜನ್‌ ಕೊರತೆಯುಂಟಾಗಿತ್ತು. ಈ ಕಾರಣದಿಂದಾಗಿಯೇ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಮೃತರ ಕುಟುಂಬಸ್ಥರು ಆಸ್ಪತ್ರೆಯ ಹೊರಗೆ ಆಕ್ರೋಶ ವ್ಯಕ್ತಪಡಿಸಲು ಶುರು ಮಾಡಿದರು. ಇದರಿಂದಾಗಿ ಆಸ್ಪತ್ರೆಯ ಮುಂಭಾಗದಲ್ಲಿ ಗೊಂದಲಮಯ ವಾತಾವರಣವೂ ಸೃಷ್ಟಿಯಾಯಿತು. ಈ ವಿಷಯ ಕಾಡ್ಗಿಚ್ಚಿನಂತೆ ಊರೆಲ್ಲ ಹಬ್ಬಿತು. ಜನತೆ ಕೂಡ ಜಮೆಯಾಗಲು ಶುರು ಮಾಡಿದರು. ಈ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆಸ್ಪತ್ರೆಯ ಸುತ್ತಲು ಸರ್ಪಗಾವಲು ಹಾಕಿದ್ದಾರೆ.

ಆಕ್ಸಿಜನ್‌ ತಯಾರಿಕಾ ಯುನಿಟ್‌:

ಈ ನಡುವೆ ಲೈಫ್‌ಲೈನ್‌ ಆಸ್ಪತ್ರೆಯಲ್ಲಿ 85 ಸಾವಿರ ಲೀಟರ್‌ ಪರ್‌ ಮಿನಿಟ್‌ ಆಕ್ಸಿಜನ್‌ ತಯಾರಿಕೆ ಯುನಿಟ್‌ ಇದೆಯಂತೆ. ಇದಲ್ಲದೇ ತುರ್ತು ಸೇವೆಗಾಗಿ ಆಕ್ಸಿಜನ್‌ ಸಿಲೆಂಡರ್‌ಗಳನ್ನು ತರಿಸಿಕೊಳ್ಳುಲಾಗಿದೆ. ಹೀಗಾಗಿ ಆಕ್ಸಿಜನ್‌ ಕೊರತೆಯಿಂದ ಸೋಂಕಿತರು ಮೃತಪಟ್ಟಿಲ್ಲ. ಸೋಂಕಿತರ ಸಾವಿಗೆ ನೈಜ ಕಾರಣ ತನಿಖೆ ಬಳಿಕವೇ ಗೊತ್ತಾಗಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸ್ಪಷ್ಟಪಡಿಸಿದೆ.

ದೇಶಾದ್ಯಂತ ಮತ್ತೆ ಲಾಕ್‌ಡೌನ್‌ ಆಗುತ್ತಾ? ಕೇಂದ್ರ ಸಚಿವ ಜೋಶಿ ಹೇಳಿದ್ದು ಹೀಗೆ..?

ಹೊರಬರಲಿಲ್ಲ ಸಿಬ್ಬಂದಿ:

ಇಷ್ಟೆಲ್ಲ ಗಲಾಟೆಯಾದರೂ ಲೈಫ್‌ಲೈನ್‌ ಆಸ್ಪತ್ರೆಯ ಆಡಳಿತ ಮಂಡಳಿ ಯಾರೊಬ್ಬರೂ ಹೊರಗೆ ಬರಲೇ ಇಲ್ಲ. ಐವರು ಸೋಂಕಿತರ ಸಾವಿಗೆ ನೈಜ ಕಾರಣ ಏನು ಎಂಬುದನ್ನು ಹೇಳುವ ಗೋಜಿಗೆ ಮಾತ್ರ ಹೋಗಲಿಲ್ಲ. ಮೃತರ ಸಂಬಂಧಿಕರು ಸಮಸ್ಯೆ ಏನಾಗಿದೆ ಎಂಬುದನ್ನು ಆಸ್ಪತ್ರೆ ವೈದ್ಯರು ಬಂದು ಹೇಳಲಿ ಎಂದು ಪಟ್ಟುಹಿಡಿದರು. ಆದರೆ, ವೈದ್ಯರಾರ‍ಯರು ಹೊರಬಂದು ಹೇಳಲಿಲ್ಲ. ಕೊನೆಗೆ ಆ್ಯಂಬುಲೆನ್ಸ್‌ ಮೂಲಕ ಮೃತದೇಹಗಳನ್ನು ಸಾಗಿಸಲಾಯಿತು.
ಘಟನಾ ಸ್ಥಳಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಶವಂತ ಮದೀನಕರ, ಡಿಸಿಪಿ ಕೆ. ರಾಮರಾಜನ್‌ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ನಡುವೆ ಆಸ್ಪತ್ರೆ ಸುತ್ತಮುತ್ತ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಪೊಲೀಸ್‌ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ದೇಸಾಯಿಗೌಡರು ಹುಷಾರಾಗಿಯೇ ಇದ್ದರು. ಮಧ್ಯಾಹ್ನ 4ರ ಸುಮಾರಿಗೆ ಮಾತನಾಡಿದ್ದರು. ನಾನೇ ಅವರ ಬಳಿ ಚಹಾ ಕುಡಿಸಲು ತೆರಳಿದ್ದೆ. ಆಗ ನನ್ನೊಂದಿಗೆ ಮಾತನಾಡಿದ್ದರು. ಅದಾಗಿ 15 ನಿಮಿಷಕ್ಕೆ ಆಕ್ಸಿಜನ್‌ ಯುನಿಟ್‌ ಬಳಿ ಎಲ್ಲ ವೈದ್ಯರು, ಸಿಬ್ಬಂದಿ ಜಮೆಯಾಗಲು ಶುರು ಮಾಡಿದರು. ಆಗ ಸಂಶಯ ಬಂದು ಆಸ್ಪತ್ರೆಯೊಳಗೆ ಹೋಗಲು ಪ್ರಯತ್ನಿಸಿದೆ. ಆದರೆ, ನಮ್ಮನ್ನು ಒಳಗೆ ಬಿಡಲಿಲ್ಲ. ಕೆಲವೇ ಹೊತ್ತಿನಲ್ಲಿ ದೇಸಾಯಿಗೌಡರು ಸೇರಿದಂತೆ ಐಸಿಯುನಲ್ಲಿದ್ದ ಐವರು ಮೃತಪಟ್ಟರು. ಈ ಸಾವಿಗೆ ಆಕ್ಸಿಜನ್‌ ಕೊರತೆಯೇ ಕಾರಣ. ಆಸ್ಪತ್ರೆ ಸಿಬ್ಬಂದಿ ಮುಚ್ಚಿಡುತ್ತಿದೆ ಎಂದು ಬಸವರಾಜ ಇಟಿ ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona