ಮಂಗಳೂರು (ಜೂ. 15):  ಕಳೆದ ಒಂದು ವಾರದಿಂದ ನಿರಂತರವಾಗಿ ಕೊರೋನಾ ಸೋಂಕು ವರದಿಯಾಗುತ್ತಿರುವ ದ.ಕ. ಜಿಲ್ಲೆಯಲ್ಲಿ ಭಾನುವಾರವೂ ಐವರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 276 ತಲುಪಿದೆ.

ಸೋಂಕು ಪತ್ತೆಯಾದ ಐವರ ಪೈಕಿ ಮುಂಬೈನಿಂದ ಆಗಮಿಸಿದ 24 ವರ್ಷದ ಯುವಕ ಮೃತಪಟ್ಟಿದ್ದಾರೆ. ರೋಗಿ ಸಂಖ್ಯೆ 4526ರ ಸಂಪರ್ಕದಿಂದ ಕ್ವಾರಂಟೈನ್‌ನಲ್ಲಿದ್ದ 12 ವರ್ಷದ ಬಾಲಕನೊಬ್ಬನಿಗೆ ಸೋಂಕು ದೃಢಪಟ್ಟಿದೆ. ಉಳಿದ ಮೂವರು ಸೋಂಕಿತರು ಸೌದಿ ಅರೇಬಿಯಾದಿಂದ ಆಗಮಿಸಿದವರು. ಸೌದಿಯಿಂದ ಆಗಮಿಸಿ ಪಾಸಿಟವ್‌ ಆಗಿರುವ 24 ಮತ್ತು 26 ವರ್ಷದ ಇಬ್ಬರೂ ಯುವತಿಯರು ಗರ್ಭಿಣಿಯರು. ಸೌದಿಯಿಂದ ಆಗಮಿಸಿದ ಇನ್ನೋರ್ವ 60 ವರ್ಷದ ವೃದ್ಧನಿಗೆ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 276ಕ್ಕೆ ಏರಿಕೆಯಾಗಿದೆ.

ಹೆಚ್ಚಿದ ಕೊರೋನಾರ್ಭಟ: ಬೆದರಿದ ಬೆಂಗಳೂರು..!

—7 ಮಂದಿ ಡಿಸ್ಚಾರ್ಜ್: ವೆನ್ಲಾಕ್‌ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿರುವ 50 ವರ್ಷದ ಪುರುಷ ರೋಗಿ ಸಂಖ್ಯೆ 3183 ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸಿದ್ದಾರೆ. ಇವರನ್ನು ಐಸಿಯುನಿಂದ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. 70 ವರ್ಷದ ಪುರುಷ ರೋಗಿ ಸಂಖ್ಯೆ 6282 ಮಧುಮೇಹ ರೋಗ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿದ್ದಾರೆ. 52 ವರ್ಷದ ಪುರುಷ ರೋಗಿ ಸಂಖ್ಯೆ 6283 ಮಧುಮೇಹ, ಅರ್ಬುದ ರೋಗದಿಂದ ಬಳಲುತ್ತಿದ್ದು, ಇಬ್ಬರಿಗೂ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಭಾನುವಾರ ಏಳು ಮಂದಿ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

356 ವರದಿ ನಿರೀಕ್ಷೆ: ಜಿಲ್ಲೆಯಲ್ಲಿ ಭಾನುವಾರ ದೊರೆತ 94 ಮಂದಿಯ ವರದಿಯಲ್ಲಿ ಐದು ಪಾಸಿಟಿವ್‌, 89 ನೆಗೆಟಿವ್‌ ಆಗಿದೆ. ಇನ್ನೂ 365 ಮಂದಿಯ ವರದಿ ನಿರೀಕ್ಷಿಸಲಾಗಿದೆ. 230 ಮಂದಿಯನ್ನು ಹೊಸದಾಗಿ ಪರೀಕ್ಷೆಗೆ ಒಳಪಡಿಸಲಾಗಿದೆ. ಉಸಿರಾಟದ ತೊಂದರೆಯ 28 ಪ್ರಕರಣ ವರದಿಯಾಗಿದೆ. ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 276 ಪಾಸಿಟಿವ್‌ ಪ್ರಕರಣ ವರದಿಯಾಗಿದೆ. ಈ ಪೈಕಿ 122 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 8 ಮಂದಿ ಮೃತಪಟ್ಟಿದ್ದಾರೆ. 153 ಮಂದಿ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"