ಮೈಸೂರು (ಫೆ.19):  ಭಿಕ್ಷುಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಐವರು ಆರೋಪಿಗಳನ್ನು ಮೈಸೂರಿನ ಲಷ್ಕರ್‌ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕೂಲಿ ಕೆಲಸ, ಚಿಂದಿ ಆಯುವ ಕೆಲಸ ಮಾಡಿಕೊಂಡಿರುವ ರಫೀಕ್‌ ಅಹಮ್ಮದ್‌ ಅ.ತಲ್ಲಾ, ಆರ್‌. ಮಂಜುನಾಥ್‌, ಮನು ಅ. ಲೇಡಿಸ್‌, ರೇವಣ್ಣ ಅ.ರೇವ ಹಾಗೂ ಕೃಷ್ಣ ಬಂಧಿತ ಆರೋಪಿಗಳು.

ನಗರ ಬಸ್‌ ನಿಲ್ದಾಣ, ಅಶೋಕ ರಸ್ತೆ ಇನ್ನಿತರ ಕಡೆ ಭಿಕ್ಷೆ ಬೇಡುತ್ತಿದ್ದ ಮಹಿಳೆ ರಸ್ತೆ ಬದಿಯಲ್ಲೇ ಮಲಗಿ ಕಾಲ ಕಳೆಯುತ್ತಿದ್ದರು. ಲಷ್ಕರ್‌ ಮೊಹಲ್ಲಾ ಬಿ.ಎನ್‌. ಸ್ಟ್ರೀಟ್‌ನಲ್ಲಿ ಅಂಗಡಿ ಮುಂಭಾಗ ಮಲಗಿದ್ದ ಭಿಕ್ಷುಕಿ ಮೇಲೆ ಆರೋಪಿಗಳು ಫೆ.16ರ ಬೆಳಗಿನ ಜಾವ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ವೇಳೆ ಗಸ್ತಿನಲ್ಲಿದ್ದ ಪೊಲೀಸ್‌ ವಾಹನ ಕಂಡು ಆರೋಪಿಗಳು ಪರಾರಿಯಾಗಿದ್ದಾರೆ. ಪೊಲೀಸರು ಮಹಿಳೆಯರನ್ನು ಪರಿಶೀಲಿಸಿದಾಗ ಉಸಿರಾಟ ಇರಲಿಲ್ಲ. ಆರೋಪಿಗಳು ಅತ್ಯಾಚಾರ ಎಸಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಬರ್ತ್‌ ಡೇ ವಿಶ್ ನೆಪ ಹೇಳಿಕೊಂಡು ಸಹೋದರಿಯ ಪತಿಯನ್ನೇ ಹತ್ಯೆಗೈದ ಕಿರಾತಕರು ...

ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು, ಅಂಗಡಿ ಮುಂಭಾಗದಲ್ಲಿದ್ದ ಸಿಸಿ ಟಿವಿ ಕ್ಯಾಮೆರಾದ ದೃಶ್ಯಾವಳಿ ಹಾಗೂ ಶ್ವಾನದಳದ ಸಹಾಯದಿಂದ ವಿವಿಧೆಡೆ ತಲೆ ಮೆರಿಸಿಕೊಂಡಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಅಂಗಡಿ ಮುಂಭಾಗ ಮಲಗಿದ್ದ ಮಹಿಳೆ ಮೇಲೆ ಲೈಂಗಿಕ ಕ್ರಿಯೆ ಮಾಡಿ, ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಪ್ರಮುಖ ಆರೋಪಿ ರಫೀಕ್‌ ಅಹಮದ್‌ ಮಾತ್ರ ಮನೆಯಲ್ಲಿ ವಾಸ ಮಾಡುತ್ತಿದ್ದು, ಉಳಿದ 4 ಮಂದಿ ಯಾವುದೇ ಮನೆ ಇಲ್ಲದೆ, ಅಕ್ಕಿಚೌಕ, ಮಂಡಿ ಕಡೆಗಳಲ್ಲಿ, ಅಂಗಡಿ ಮುಂಭಾಗ ಮಲಗಿ ಜೀವನ ಸಾಗಿಸುತ್ತಿದ್ದರು ಎಂಬುದು ಪೊಲೀಸರು ವಿಚಾರಣೆಯಿಂದ ತಿಳಿದು ಬಂದಿದೆ.

ಡಿಸಿಪಿ ಡಾ.ಎ.ಎನ್‌. ಪ್ರಕಾಶ್‌ಗೌಡ, ದೇವರಾಜ ಉಪ ವಿಭಾಗದ ಎಸಿಪಿ ಶಶಿಧರ್‌ ಅವರ ಮಾರ್ಗದರ್ಶನದಲ್ಲಿ ಲಷ್ಕರ್‌ ಠಾಣೆ ಇನ್ಸ್‌ಪೆಕ್ಟರ್‌ ಎಸ್‌.ಡಿ. ಸುರೇಶ್‌ಕುಮಾರ್‌, ದೇವರಾಜ ಠಾಣೆ ಇನ್ಸ್‌ಪೆಕ್ಟರ್‌ ದಿವಾಕರ ಅವರ ಉಸ್ತುವಾರಿಯಲ್ಲಿ ಲಷ್ಕರ್‌ ಠಾಣೆಯ ಎಸ್‌ಐಗಳಾದ ಗೌತಮ್‌ ಗೌಡ, ಧನಲಕ್ಷಿ, ದೇವರಾಜ ಠಾಣೆಯ ಎಸ್‌ಐಗಳಾದ ರಾಜು, ಲೀಲಾವತಿ, ಸಿಬ್ಬಂದಿ ವೀರೇಶ್‌, ಸುರೇಶ್‌, ಸಿದ್ದಿಖ್‌ ಈ ಪತ್ತೆ ಮಾಡಿದ್ದಾರೆ.

ಘಟನಾ ಸ್ಥಳಕ್ಕೆ ತಕ್ಷಣ ಭೇಟಿ ನೀಡಿ ಸಾಕ್ಷಾಧಾರ ಸಂಗ್ರಹಿಸಿ, ಸ್ಥಳಕ್ಕೆ ಶ್ವಾನದಳ ಕರೆಸಿ ತಮ್ಮ ಕರ್ತವ್ಯ ಪ್ರಜ್ಞೆ, ವೃತ್ತಿಪರತೆ ಮೆರೆದ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನಗರ ಪೊಲೀಸ್‌ ಆಯುಕ್ತ ಡಾ. ಚಂದ್ರಗುಪ್ತ ಅವರು .10 ಸಾವಿರ ಬಹುಮಾನ ಘೋಷಿಸಿದ್ದಾರೆ.