ಕನಕಪುರ: ಬಿಪಿ​ಎಲ್‌ ಕಾರ್ಡ್‌ ಹೊಂದಿದ್ದ ಗ್ರಾಪಂ ಅಧ್ಯಕ್ಷೆ ಕುಟುಂಬ​ದಿಂದ 49 ಸಾವಿರ ದಂಡ ವಸೂ​ಲಿ!

ಅಚ್ಚಲು ಗ್ರಾಮ ಪಂಚಾಯತಿ ಅಧ್ಯಕ್ಷೆ ಶಿವಮ್ಮ ಅವರ ಕುಟುಂಬದಿಂದ 49 ಸಾವಿರ ದಂಡ ವಸೂಲಿ ಮಾಡಿದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ

49000 Fine from the Grama Panchayat President Who Had BPL Card at Kanakapura grg

ಕನಕಪುರ(ನ.03):  ಕಾನೂನು ಬಾಹಿರವಾಗಿ ಬಿಪಿಎಲ್‌ ಪಡಿತರ ಸೌಲಭ್ಯ ಪಡೆದಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಅಚ್ಚಲು ಗ್ರಾಮ ಪಂಚಾಯತಿ ಅಧ್ಯಕ್ಷೆ ಶಿವಮ್ಮ ಅವರ ಕುಟುಂಬದಿಂದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ 49 ಸಾವಿರ ದಂಡ ವಸೂಲಿ ಮಾಡಿದೆ.

ತಾಲೂಕಿನ ಸಾತನೂರು ಹೋಬಳಿಯ ಗೊಲ್ಲರದೊಡ್ಡಿ ಗ್ರಾಮದ ವಾಸಿ ಹಾಗೂ ಅಚ್ಚಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಕೆಂಗೇಗೌಡ ಅವರ ಕುಟುಂಬ ನಿಯಮ ಬಾಹಿರವಾಗಿ ಬಿಪಿಎಲ್‌ ಪಡಿತರ ಚೀಟಿ ಪಡೆದು ವಂಚಿಸಿರುವುದು ಅಧಿಕಾರಿಗಳ ಪರಿಶೀಲನೆಯಿಂದ ಬೆಳಕಿಗೆ ಬಂ​ದಿತು.

ನಕಲಿ BPL Card ಹೊಂದಿರುವ ಸರಕಾರಿ ನೌಕರರಿಗೆ ಬಿಗ್ ಶಾಕ್!

ಈ ಹಿನ್ನೆಲೆಯಲ್ಲಿ ಅಚ್ಚಲು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಿವಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಅವರ ಪುತ್ರ ಅಜಯ್‌ ಕುಮಾರ್‌ ಯಾದವ್‌ ಪದವೀಧರನಾಗಿದ್ದು ಆರ್ಥಿಕವಾಗಿ ಸಬಲರಾಗಿದ್ದಾರೆ. ಸಾಕಷ್ಟುಆಸ್ತಿ ಹೊಂದಿದ್ದರೂ ಅಕ್ರಮವಾಗಿ ಬಿಪಿಎಲ್‌ ಪಡಿತರ ಚೀಟಿ ಮತ್ತು ಅದರ ಸೌಲಭ್ಯ ಪಡೆದು ಬಡವರಿಗೆ ಮತ್ತು ಸರ್ಕಾರಕ್ಕೆ ವಂಚಿಸುತ್ತಿದ್ದು ಇವರ ಪಡಿತರವನ್ನು ರದ್ದುಗೊಳಿಸಿ ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು ಮಾಡಿ ನಿಯಮ ಬಾಹಿರವಾಗಿ ಪಡೆದಿರುವ ಪಡಿತರಕ್ಕೆ ದಂಡ ವಿಧಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ರವಿಕುಮಾರ್‌ ಕಂಚನಹಳ್ಳಿ ಪೊಲೀಸ್‌ ಇಲಾಖೆ ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.

ಜಿಲ್ಲಾಧಿಕಾರಿಗಳು ದೂರನ್ನು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಗೆ ವರ್ಗಾಯಿಸಿ ತನಿಖೆ ನಡೆಸುವಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಲಾಖೆ ಅಧಿಕಾರಿಗಳು ತನಿಖೆ ಕೈಗೊಂಡು ಗೊಲ್ಲರ ದೊಡ್ಡಿ ಗ್ರಾಮದ ವಾಸಿ ಹಾಗೂ ಅಚ್ಚಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಕೆಂಗೇಗೌಡ ಹಾಗೂ ಅವರ ಕುಟುಂಬದವರು 14 ಎಕರೆ ಜಮೀನು ಹೊಂದಿದ್ದು ಇದರಲ್ಲಿ ಜಲಮಂಡಳಿ ಹೋಸದಾಗಿ ಪೈಪ್‌ಲೈನ್‌ ಅಳವಡಿಸಲು ಗುತ್ತಿಗೆ ಪಡೆದಿರುವ ಖಾಸಗಿ ಕಂಪನಿಗೆ ಪೈಪ್‌ ತಯಾರಿಕೆಗೆ ಜಮೀನು ಬಾಡಿಗೆ ನೀಡಿ ವಾರ್ಷಿಕವಾಗಿ 5 ಲಕ್ಷ ಬಾಡಿಗೆಯನ್ನು ಪಡೆಯುತ್ತಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

'ಬಿಪಿಎಲ್‌ ಕಾರ್ಡ್‌ ಹೊಂದಿದ ಪ್ರತಿ ಕುಟುಂಬಕ್ಕೂ ಮನೆ'

ನಾವು ಹೊಂದಿರುವ ಆಸ್ತಿಪಾಸ್ತಿ, ಕಾರು ಬಾಡಿಗೆಯಿಂದ ಬರುವ ಹಣ, ನಾವು ಪಡೆದಿರುವ ಬಿಪಿಎಲ್‌ ಪಡಿತರ ಮಾನದಂಡಗಳಿಗೆ ವ್ಯತಿರಿಕ್ತವಾಗಿದೆ ಎಂದು ತಪ್ಪೋಪ್ಪಿಕೊಂಡಿರುವ ಅಚ್ಚಲು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಿವಮ್ಮ ಮತ್ತು ಅವರ ಕುಟಂಬ ಬಿಪಿಎಲ್‌ ಪಡಿತರವನ್ನು ಎಪಿಎಲ್‌ ಪಡಿತರವನ್ನಾಗಿ ಪರಿವರ್ತಿಸಿ ಜೊತೆಗೆ ಈವರೆಗೂ ಪಡೆದುಕೊಂಡಿರುವ ಪಡಿತರ ಬಾಬ್ತು ಮುಕ್ತ ಮಾರುಕಟ್ಟೆ ದರದಲ್ಲಿ ದಂಡ ಪಾವತಿಸುವುದಾಗಿ ಇಲಾಖೆಯ ಖಾತೆಗೆ 49 ಸಾವಿರ ರು. ದಂಡ ಪಾವತಿಸಿದ್ದಾರೆ.

ಈವರೆಗೆ ಪಡೆದ ಪಡಿತರಕ್ಕೆ ಪೂರ್ಣ ಪ್ರಮಾಣದ ದಂಡ ವಸೂಲಿ ಮಾಡುವುದರ ಜೊತೆಗೆ ನಕಲಿ ದಾಖಲೆ ಸೃಷ್ಟಿಮಾಡಿ ಬಿಪಿಎಲ್‌ ಕಾರ್ಡ್‌ ಪಡೆದ ಬಗ್ಗೆ ತಹಸೀಲ್ದಾರ್‌ ಕ್ರಿಮಿನಲ್‌ ಮೊಕದ್ದಮೆ ದಾಖಲು ಮಾಡಬೇಕೆಂದು ಸಾಮಾಜಿಕ ಕಾರ್ಯಕರ್ತ ಕಂಚನಹಳ್ಳಿ ರವಿಕುಮಾರ್‌ ಒತ್ತಾಯಿಸಿದ್ದಾರೆ.
 

Latest Videos
Follow Us:
Download App:
  • android
  • ios