Covid Crisis: 100 ದಿನದ ಬಳಿಕ ಬೆಂಗಳೂರಿನಲ್ಲಿ 458 ಮಂದಿಗೆ ಕೊರೋನಾ
ನಗರದಲ್ಲಿ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಸುಮಾರು 100 ದಿನದ ಬಳಿಕ 458 ಮಂದಿಗೆ ಸೋಂಕು ತಗುಲಿದೆ, 208 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ.
ಬೆಂಗಳೂರು (ಜೂ.10): ನಗರದಲ್ಲಿ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಸುಮಾರು 100 ದಿನದ ಬಳಿಕ 458 ಮಂದಿಗೆ ಸೋಂಕು ತಗುಲಿದೆ, 208 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ. ಸದ್ಯ 2,776 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಸೋಂಕು ಪರೀಕ್ಷೆಗಳು 17 ಸಾವಿರ ನಡೆದಿದ್ದು, ಪಾಸಿಟಿವಿಟಿ ದರ ಶೇಕಡ 2.5ರಷ್ಟುದಾಖಲಾಗಿದೆ.
ಬುಧವಾರಕ್ಕೆ ಹೋಲಿಸಿದರೆ ಪರೀಕ್ಷೆಗಳಲ್ಲಿ ಎರಡು ಸಾವಿರ ಹೆಚ್ಚಳವಾಗಿದ್ದು, ಹೊಸ ಪ್ರಕರಣಗಳು 100 ಹೆಚ್ಚಳವಾಗಿವೆ (ಬುಧವಾರ 358 ಕೇಸ್, ಸಾವು ಶೂನ್ಯ). ಕಳೆದ ಫೆಬ್ರವರಿ 20ರಂದು 485 ಪ್ರಕರಣಗಳು ಪತ್ತೆಯಾಗಿದ್ದವು. ಬಳಿಕ ಇಳಿಮುಖವಾಗಿ 50 ಆಸುಪಾಸಿಗೆ ತಗ್ಗಿದ್ದವು. ಮೇ ಅಂತ್ಯದಲ್ಲಿ ಸರಾಸರಿ 10 ಸಾವಿರ ಇದ್ದ ಪರೀಕ್ಷೆಗಳು ಪ್ರಸಕ್ತ ವಾರ 15 ಸಾವಿರಕ್ಕೆ ಹೆಚ್ಚಿವೆ. ಈ ಹಿನ್ನೆಲೆ ಹೊಸ ಪ್ರಕರಣಗಳು ಏರಿಕೆಯಾಗುತ್ತಿದ್ದು, 108 ದಿನ ಬಳಿಕ ಮತ್ತೆ 450 ಗಡಿ ದಾಟಿವೆ. ರಾಜ್ಯದ ಒಟ್ಟಾರೆ ಸೋಂಕು ಪ್ರಕರಣಗಳ ಪೈಕಿ ಶೇ.97ರಷ್ಟುಬೆಂಗಳೂರಿನಲ್ಲೇ ಪತ್ತೆಯಾಗಿವೆ.
ಮಾಸ್ಕ್ ಧರಿಸದ ಪ್ರಯಾಣಿಕರು ವಿಮಾನದಿಂದ ಔಟ್!
ಸದ್ಯ ಸಕ್ರಿಯ ಸೋಂಕಿತರ ಪೈಕಿ 19 ಮಂದಿ ಮಾತ್ರ ಆಸ್ಪತ್ರೆಯಲ್ಲಿದ್ದು, ಈ ಪೈಕಿ ಐಸಿಯುನಲ್ಲಿ ಒಬ್ಬರು, ಸಾಮಾನ್ಯ ಹಾಸಿಗೆಗಳಲ್ಲಿ 18 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 2,758 ಮಂದಿ ಮನೆಯಲ್ಲಿ ಆರೈಕೆಯಲ್ಲಿದ್ದಾರೆ. 5ಕ್ಕಿಂತ ಕಡಿಮೆ ಪ್ರಕರಣಗಳಿರುವ 7 ಕ್ಲಸ್ಟರ್ ಪ್ರದೇಶಗಳಿವೆ. ಈವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 17.86 ಲಕ್ಷಕ್ಕೆ, ಗುಣಮುಖರ ಸಂಖ್ಯೆ 17.67 ಲಕ್ಷಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 16,965 ಎಂದು ಬಿಬಿಎಂಪಿ ಕೊರೋನಾ ವರದಿಯಲ್ಲಿ ತಿಳಿಸಲಾಗಿದೆ.
ಪ್ರತಿದಿನ 300ಕ್ಕೂ ಅಧಿಕ ಕೇಸ್: ನಗರದಲ್ಲಿ ಕೊರೋನಾ ಸೋಂಕು ಪ್ರಕರಣ ಏರಿಕೆಯಾಗುತ್ತಿರುವುದರಿಂದ ಸಾರ್ವಜನಿಕರು ಮನೆಯಿಂದ ಹೊರ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ, ಸದ್ಯ ದಂಡ ವಿಧಿಸುತ್ತಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂನ್ ಆರಂಭದಿಂದ ನಗರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳ ಆಗುತ್ತಿವೆ. ದಿನಕ್ಕೆ 300ಕ್ಕೂ ಅಧಿಕ ಸೋಂಕು ಪ್ರಕರಣ ಪತ್ತೆಯಾಗುತ್ತಿವೆ. ಆದರೂ ಜನರು ಆತಂಕ ಪಡುವ ಅಗತ್ಯ ಇಲ್ಲ. ಮನೆಯಿಂದ ಹೊರ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಗುಂಪು ಜನರಿರುವ ಪ್ರದೇಶಗಳಲ್ಲಿ ಹೋದಾಗ ಸಾಮಾಜಿಕ ಅಂತರ ಪಾಲಿಸಬೇಕು ಎಂದು ಮನವಿ ಮಾಡಿದರು.
Covid 19 ಭಾರತಕ್ಕೆ ಮತ್ತೆ ವಕ್ಕರಿಸಿದ ಕೊರೋನಾ, ಒಂದೇ ದಿನ 7 ಸಾವಿರ ಕೇಸ್!
ಸಾರ್ವಜನಿಕರು ಹೆಚ್ಚಾಗಿ ಸೇರುತ್ತಿರುವ ಶಾಪಿಂಗ್ ಮಾಲ್, ಹೋಟೆಲ್, ರೆಸ್ಟೋರೆಂಟ್‌ಗಳು ಸೇರಿ ಜನರು ಒಂದೆಡೆ ಹೆಚ್ಚಾಗಿ ಸೇರುವ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿದವರಿಗೆ ಮಾತ್ರ ಪ್ರವೇಶ ಅವಕಾಶ ನೀಡುವಂತೆ ಪಾಲಿಕೆಯಿಂದ ನಿರ್ದೇಶಿಸಲಾಗಿದೆ. ಈ ಬಗ್ಗೆ ಪಾಲಿಕೆಯ ಮಾರ್ಷಲ್‌ಗಳು ನಿತ್ಯ ಶಾಪಿಂಗ್ ಮಾಲ್, ಹೋಟೆಲ್ ಸೇರಿ ವಿವಿಧ ಪ್ರದೇಶಗಳಲ್ಲಿ ಗಸ್ತು ತಿರುಗಿ ತಪಾಸಣೆ ಮಾಡಲಿದ್ದಾರೆ. ಮಾಸ್ಕ್ ಧರಿಸುವ ಮತ್ತು ಸಾಮಾಜಿಕ ಅಂತರ ಪಾಲಿಸುವ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ. ಸದ್ಯಕ್ಕೆ ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಯಾವುದೇ ಚಿಂತನೆ ಇಲ್ಲ. ಆದರೆ, ಪ್ರಕರಣ ತೀವ್ರವಾಗಿ ಹೆಚ್ಚಳವಾದಲ್ಲಿ ದಂಡ ವಿಧಿಸುವುದನ್ನು ಮರು ಜಾರಿಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದರು.