ಕೋಲಾರ(ಮೇ.03): ಲಾಕ್‌ಡೌನ್‌ ಘೋಷಣೆಯಾದಂತ ಸಂದರ್ಭದಲ್ಲಿ ಗುಜರಾತ್‌ನ ಸೂರತ್‌ ನಗರದಲ್ಲಿ ಸಿಲುಕಿಹಾಕಿಕೊಂಡಿದ್ದ ಜಿಲ್ಲೆಯ 44 ಮಂದಿ ಇಂದು(ಭಾನುವಾರ) ಮಾಲೂರು ಪಟ್ಟಣಕ್ಕೆ ಆಗಮಿಸಿದ್ದಾರೆ. 

"

ಇವರೆಲ್ಲರೂ ಸೂರತ್‌ ನಗರದಿಂದ ಖಾಸಗಿ ಬಸ್‌ನಲ್ಲಿ ಮಾಲೂರು ಪಟ್ಟಣಕ್ಕೆ ಆಗಮಿಸಿದ್ದಾರೆ. ಇಂದು ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಎರಡು ಬಸ್‌ಗಳಲ್ಲಿ ಮಾಲೂರಿನ ಗಡಿ ಕಟ್ಟಿಗೇನಹಳ್ಳಿ ಬಳಿ ಆಗಮಿಸುತ್ತಿದ್ದಂತೆ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಲಾಗಿದೆ. 

ಕೋಲಾರ ಜಿಲ್ಲಾಧಿಕಾರಿ ಸತ್ಯಭಾಮ. ಎಸ್ಪಿ ಕಾರ್ತಿಕ ರೆಡ್ಡಿ  ನೇತೃತ್ವದ ಪೊಲೀಸ್ ಬಿಗಿ ಭದ್ರತೆಯಲ್ಲಿ ಆರೋಗ್ಯ ತಪಾಸಣೆ ನಡೆಸಲಾಗಿದೆ. ಇವರಲ್ಲಿ ಕೊರೋನಾದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಇವರನ್ನ ಮಾಲೂರು ತಾಲೂಕಿನ ರಾಜೇನಹಳ್ಳಿಯ ಸರ್ಕಾರಿ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ ಇಡಲು ನಿರ್ಧಾರ ಮಾಡಲಾಗಿದೆ. ಇವರೆಲ್ಲರೂ ಗುಜರಾತ್‌ನಿಂದ ಬರುತ್ತಿದ್ದಂತೆ ಹಸಿರು ವಲಯ ಕೋಲಾರ ಜಿಲ್ಲೆಯಲ್ಲಿ ಆತಂಕ ಹೆಚ್ಚಾಗಿದೆ. 

ಮಸೀದಿಯೊಳಗೆ ನುಗ್ಗಿದ ಲೇಡಿ ಸಿಂಗಂ, ಕೋಲಾರದ ತಹಶೀಲ್ದಾರ್ ದಿಟ್ಟತನ

ಜಿಲ್ಲೆಯ ಮಾಲೂರು ಮೂಲದ ಇವರೆಲ್ಲರೂ ಫೆಬ್ರವರಿಯಲ್ಲಿ ಗುಜರಾತ್‌ನ ಸೂರತ್ ನಗರಕ್ಕೆ ಧರ್ಮಪ್ರಚಾರಕ್ಕಾಗಿ ತೆರಳಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ಲಾಕ್‌ಡೌನ್ ವೇಳೆಯಲ್ಲಿ ಸೂರತ್‌ನಲ್ಲಿ ಉಳಿದುಕೊಂಡಿದ್ದರು. ಇದೀಗ ಲಾಕ್‌ಡೌನ್ ನಿಯಮ ಕೊಂಚ ಸಡಿಲಿಕೆ ಆಗಿದ್ದರಿಂದ ಮಾಲೂರಿಗೆ ವಾಪಸ್‌ ಬಂದಿದ್ದಾರೆ.