ಬೆಂಗಳೂರಲ್ಲಿ ಗುರುವಾರ 4192 ಕೇಸ್‌ ಪತ್ತೆ| 3799 ಈ ಹಿಂದಿನ ದಾಖಲೆ| ಒಟ್ಟು ಸೋಂಕಿತರ ಸಂಖ್ಯೆ 2.08 ಲಕ್ಷ| 260 ಮಂದಿ ಕೊರೋನಾ ಸೋಂಕಿತರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ| 

ಬೆಂಗಳೂರು(ಸೆ.25): ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ನಾಲ್ಕು ಸಾವಿರಕ್ಕೂ ಅಧಿಕ ಹೊಸ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗುವ ಮೂಲಕ ಹೊಸ ದಾಖಲೆ ಸೃಷ್ಟಿಯಾಗಿದೆ. ಕೊರೋನಾ ಸೋಂಕಿನ ಲಾಕ್‌ಡೌನ್‌ ಘೋಷಣೆಯಾಗಿ ಗುರುವಾರಕ್ಕೆ ಆರು ತಿಂಗಳು ಪೂರ್ಣಗೊಂಡಿದ್ದು, ಈ ಅವಧಿಯಲ್ಲಿ ಮೊದಲ ಬಾರಿಗೆ ಒಂದೇ ದಿನದಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಸೋಂಕು ಪತ್ತೆಯಾಗಿದೆ.

"

ಕಳೆದ ಸೆ.17ರಂದು ಪತ್ತೆಯಾದ 3,799 ಸೋಂಕು ಪ್ರಕರಣಗಳು ಈವರೆಗೆ ಬೆಂಗಳೂರಿನಲ್ಲಿ ಒಂದೇ ದಿನ ಪತ್ತೆಯಾದ ಅತ್ಯಧಿಕ ಸೋಂಕು ಪ್ರಕರಣಗಳಾಗಿದ್ದವು. ಗುರುವಾರ ಆ ಸಂಖ್ಯೆಗಿಂತ ಹೆಚ್ಚಿನ ಪ್ರಕರಣ ಪತ್ತೆಯಾಗುವ ಮೂಲಕ ಹೊಸ ದಾಖಲೆ ಸೃಷ್ಟಿಯಾಗಿದೆ. ಗುರುವಾರ ನಗರದಲ್ಲಿ 4,192 ಸೋಂಕು ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ಬೆಂಗಳೂರಿನ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 2,08,467ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕೊರೋನಾ ಲಾಕ್ಡೌನ್‌ಗೆ 6 ತಿಂಗಳು : ತೆರವಿನ ಬಳಿಕ ತಾರಕಕ್ಕೇರಿದ ಸೋಂಕು

ಇನ್ನು ಗುರುವಾರ 3,854 ಕೊರೋನಾ ಸೋಂಕಿತರು ಗುಣಮುಖರಾಗಿದ್ದು, ಈ ಮೂಲಕ ಗುಣಮುಖರ ಸಂಖ್ಯೆ 1,65,419 ತಲುಪಿದೆ. ಗುರುವಾರ 24 ಮಂದಿ ಕೊರೋನಾ ಸೋಂಕಿನಿಂದ ಮೃತಪಟ್ಟವರದಿಯಾಗಿದೆ. ಒಟ್ಟು ಮೃತರ ಸಂಖ್ಯೆ 2,762ಕ್ಕೆ ಏರಿಕೆಯಾಗಿದೆ. ಇನ್ನು ಬೆಂಗಳೂರಿನಲ್ಲಿ 40,285 ಸಕ್ರಿಯ ಪ್ರಕರಣಗಳಿದ್ದು, 260 ಮಂದಿ ಕೊರೋನಾ ಸೋಂಕಿತರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ನಗರದಲ್ಲಿ ಕಂಟೈನ್ಮೆಂಟ್‌ ಹೊಸ ಲೆಕ್ಕ

ಬೆಂಗಳೂರಿನಲ್ಲಿ ಈವರೆಗಿನ ಕೊರೋನಾ ಸೋಂಕು ಪತ್ತೆಯಾದ ಕಂಟೈನ್ಮೆಂಟ್‌ ವಲಯದ ಲೆಕ್ಕಚಾರಕ್ಕೆ ಕೈ ಬಿಟ್ಟು ಗುರುವಾರದಿಂದ ಬಿಬಿಎಂಪಿ ಹೊಸದಾಗಿ ಕಂಟೈನ್ಮೆಂಟ್‌ ವಲಯಗಳ ಲೆಕ್ಕಾಚಾರ ಆರಂಭಿಸಿದೆ.
ಬಿಬಿಎಂಪಿ 198 ವಾರ್ಡ್‌ಗಳಲ್ಲಿ ಕೊರೋನಾ ಸೋಂಕಿನ ಭೀತಿ ಆರಂಭವಾದ ಬಳಿಕ ಸೆ.23ರ ವರೆಗೆ 33,140 ಕಂಟೈನ್ಮೆಂಟ್‌ ಪ್ರದೇಶ ಸೃಷ್ಟಿಯಾಗಿವೆ. ಅದರಲ್ಲಿ ಈಗಾಗಲೇ 11,582 ಪ್ರದೇಶ ಕಂಟೈನ್ಮೆಂಟ್‌ ಮುಕ್ತವಾಗಿದ್ದು, ಇನ್ನೂ 21,558 ಸಕ್ರಿಯ ಕಂಟೈನ್ಮೆಂಟ್‌ ಪ್ರದೇಶಗಳಿವೆ ಎಂಬ ಸೆ.23ರ ಬಿಬಿಎಂಪಿ ಕೋವಿಡ್‌ ವಾರ್‌ ರೂಂ ಬುಲೆಟಿನ್‌ನಲ್ಲಿ ಮಾಹಿತಿ ನೀಡಿತ್ತು.

ಆದರೆ, ಸೆ.24ರ ಬಿಬಿಎಂಪಿಯ ಬುಲೆಟಿನ್‌ನಲ್ಲಿ ಸೆ.23ರ ವರೆಗೆ ದಾಖಲಾದ ಎಲ್ಲ ಕಂಟೈನ್ಮೆಂಟ್‌ ವಿವರ ಕೈ ಬಿಟ್ಟು, ಸೆ.24ರ ಗುರುವಾರದಿಂದ ಹೊಸ ಲೆಕ್ಕಚಾರ ಆರಂಭಿಸಿದ್ದು, ಇಡೀ ನಗರದಲ್ಲಿ ಕೇವಲ 16 ಕಂಟೈನ್ಮೆಂಟ್‌ ವಲಯವಿದೆ ಎಂದು ಮಾಹಿತಿ ನೀಡಿದೆ.

ನಗರದಲ್ಲಿ ಗುರುವಾರ ಒಂದೇ ದಿನ ನಾಲ್ಕು ಸಾವಿರಕ್ಕೂ ಅಧಿಕ ಕೊರೋನಾ ಸೋಂಕು ಪತ್ತೆಯಾದರೂ, 40 ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿದ್ದರೂ ಬಿಬಿಎಂಪಿಯ ಹೊಸ ಲೆಕ್ಕಾಚಾರದ ಪ್ರಕಾರ 198 ವಾರ್ಡ್‌ಗಳಲ್ಲಿ ಕೇವಲ 16 ಕಂಟೈನ್ಮೆಂಟ್‌ ವಲಯವಿದೆ ಎಂದು ಹೇಳಿದೆ.

ಹೊಸ 16 ಕಂಟೈನ್ಮೆಂಟ್‌ ಪ್ರದೇಶಗಳ ಪೈಕಿ ದಾಸರಹಳ್ಳಿ ಹಾಗೂ ಮಹದೇವಪುರ ವಲಯದಲ್ಲಿ ತಲಾ 3 ಕಂಟೈನ್ಮೆಂಟ್‌ ಪ್ರದೇಶ, ಬೊಮ್ಮನಹಳ್ಳಿ, ಪೂರ್ವ ಹಾಗೂ ದಕ್ಷಿಣ ವಲಯದಲ್ಲಿ ತಲಾ 2 ಕಂಟೈನ್ಮೆಂಟ್‌ ಪ್ರದೇಶ, ಯಲಹಂಕ, ಆರ್‌ಆರ್‌ನಗರ ವಲಯ ಹಾಗೂ ಪಶ್ಚಿಮ ವಲಯದಲ್ಲಿ ತಲಾ ಒಂದೇ ಒಂದು ಕಂಟೈನ್ಮೆಂಟ್‌ ಪ್ರದೇಶವಿದೆ ಎಂದು ಬಿಬಿಎಂಪಿ ಗುರುವಾರ ಮಾಹಿತಿ ನೀಡಿದೆ.