Asianet Suvarna News Asianet Suvarna News

ಕರಗ ಉತ್ಸವಕ್ಕೆ 40 ಲಕ್ಷ ಮುಂಗಡ ಅನುದಾನ: ತುಷಾರ್‌ ಗಿರಿನಾಥ್‌

ಬೆಂಗಳೂರು ಕರಗ ಉತ್ಸವ ಆಯೋಜನೆಗೆ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಗೆ ಮುಂಗಡವಾಗಿ 40 ಲಕ್ಷ ಅನುದಾನ ನೀಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

40 lakh advance grant for Karaga Utsav Says Tushar Girinath gvd
Author
First Published Mar 23, 2023, 5:22 AM IST

ಬೆಂಗಳೂರು (ಮಾ.23): ಬೆಂಗಳೂರು ಕರಗ ಉತ್ಸವ ಆಯೋಜನೆಗೆ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಗೆ ಮುಂಗಡವಾಗಿ 40 ಲಕ್ಷ ಅನುದಾನ ನೀಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕರಗ ಉತ್ಸವಕ್ಕೆ ಸಂಬಂಧಿಸಿದಂತೆ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕರಗ ಉತ್ಸವಕ್ಕೆ ಪ್ರತಿ ವರ್ಷ ಬಿಬಿಎಂಪಿಯಿಂದ 1ರಿಂದ 1.50 ಕೋಟಿ ರುಪಾಯಿ ಅನುದಾನ ನೀಡಲಾಗುತ್ತದೆ. ಉತ್ಸವ ಪೂರ್ಣಗೊಂಡ ನಂತರ ವೆಚ್ಚವನ್ನಾಧರಿಸಿ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಅದರಂತೆ ಈ ಬಾರಿ ಮುಂಚಿತವಾಗಿ .40 ಲಕ್ಷ ಅನುದಾನ ನೀಡಲು ಸೂಚಿಸಲಾಗಿದೆ ಎಂದರು.

ಏ.6ರಂದು ಕರಗ ಶಕ್ತ್ಯುತ್ಸವ ನಡೆಯಲಿದ್ದು, ಕರಗ ಸಂಚರಿಸಲಿರುವ ಮಾರ್ಗದಲ್ಲಿ ಕೆಲವೆಡೆ ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿದೆ. ಕರಗ ಶಕ್ತ್ಯುತ್ಸವಕ್ಕೂ ಮುನ್ನವೇ ಚುನಾವಣಾ ನೀತಿ ಸಂಹಿತೆ ಜಾರಿಯಾದರೆ ಕಾಮಗಾರಿಗಳು ನಿಧಾನಗತಿಯಲ್ಲಿ ನಡೆಯುತ್ತದೆ, ಹೀಗಾಗಿ ಅದಕ್ಕೂ ಮುನ್ನವೇ ಕರಗ ಸಂಚರಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ಶಾಸಕ ಉದಯ್‌ ಗರುಡಾಚಾರ್‌ ಮಾತನಾಡಿ, ಕರಗ ಉತ್ಸವ ಎಂದಿನಂತೆ ಪಕ್ಷಾತೀತವಾಗಿ ನಡೆಯಲಿದೆ. ಕರಗ ಶಕ್ತ್ಯುತ್ಸವ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತೆ ಬರುವ ಸಾಧ್ಯತೆಗಳಿದ್ದರೂ ಉತ್ಸವಕ್ಕೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಬೆಂಗಳೂರಿನಲ್ಲಿ ನಿತ್ಯ 6 ಸಾವಿರ ಕೊರೋನಾ ಪರೀಕ್ಷೆ ಗುರಿ: ತುಷಾರ್‌ ಗಿರಿನಾಥ್‌

ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಸತೀಶ್‌ ಮಾತನಾಡಿ, ಕರಗ ಉತ್ಸವಕ್ಕೆ .75 ಲಕ್ಷ ಹೆಚ್ಚಿನ ಹಣ ಖರ್ಚಾಗುತ್ತದೆ. ಉತ್ಸವಕ್ಕೆ ಅಗತ್ಯವಿರುವ ಅನುದಾನವನ್ನು ನೀಡಬೇಕೆಂಬ ಕೋರಿಕೆಗೆ ಬಿಬಿಎಂಪಿ ಮುಖ್ಯ ಆಯುಕ್ತರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಯಾವುದೇ ಧರ್ಮ, ಜಾತಿ ಬೇಧವಿಲ್ಲದೆ ಕರಗ ಆಚರಿಸಲಾಗುವುದು. ಪ್ರತೀತಿಯಂತೆ ಮಸ್ತಾನ್‌ ಸಾಬ್‌ ದರ್ಗಾಕ್ಕೆ ಕರಗ ಶಕ್ತ್ಯುತ್ಸವ ಭೇಟಿ ನೀಡಲಿದೆ ಎಂದು ತಿಳಿಸಿದರು. ಇದೇ ವೇಳೆ ಕರಗ ಉತ್ಸವದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಯಿತು. ವಿಶೇಷ ಆಯುಕ್ತರಾದ ಡಾ. ಹರೀಶ್‌ ಕುಮಾರ್‌, ಡಾ.ದೀಪಕ್‌, ರವೀಂದ್ರ ಇದ್ದರು.

ಕರಗ ಉತ್ಸವದ ವಿವರ
ಮಾ.29: ರಥೋತ್ಸವ, ಧ್ವಜಾರೋಹಣ
ಮಾ.30ರಿಂದ ಏ.2: ಶ್ರೀ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು, ಮಹಾಮಂಗಳಾರತಿ
ಏ.3: ಆರತಿ
ಏ.4: ಸಂಪಗಿಕೆರೆ ಅಂಗಳದ ಶಕ್ತಿ ಪೀಠದಲ್ಲಿ ಹಸಿ ಕರಗ
ಏ.5: ಪೊಂಗಲ್‌ ಸೇವೆ, ಪುರಾಣ ಕಥನ
ಏ.6: ಕರಗ ಶಕ್ತ್ಯುತ್ಸವ, ಶ್ರೀ ಧರ್ಮರಾಯ ಸ್ವಾಮಿ ಮಹಾರಥೋತ್ಸವ
ಏ.7: ಪುರಾಣ ಪ್ರವಚನ, ಶ್ರೀ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ಗಾವು ಶಾಂತಿ
ಏ.8: ವಸಂತೋತ್ಸವ, ಧ್ವಜಾವರೋಹಣ

ಕಾಂಗ್ರೆಸ್ಸಿನದು ವೋಟ್‌ ಬ್ಯಾಂಕ್‌ ರಾಜಕಾರಣ: ಸಚಿವ ಸುಧಾಕರ್‌ ಟೀಕೆ

ಸಭೆಯಲ್ಲಿ ಚರ್ಚೆಯಾದ ಅಂಶಗಳು
*ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕಾರ್ಯಕ್ರಮವನ್ನು ನಡೆಸುವುದು.
*ಕರಗ ಶಕ್ತ್ಯುತ್ಸವ ಸಂಚರಿಸುವ ರಸ್ತೆ, ಪಾದಚಾರಿ ಮಾರ್ಗಗಳ ದುರಸ್ತಿಪಡಿಸುವುದು.
*ಉತ್ಸವ ನಡೆಯುವ ಬೀದಿಗಳಲ್ಲಿ ದೀಪಗಳ ಅಳವಡಿಕೆ.
*ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ನಿಯೋಜನೆ.
*ಇ-ಶೌಚಾಲಯಗಳ ವ್ಯವಸ್ಥೆ.
*ಸಂಪಂಗಿರಾಮನಗರ ಕಲ್ಯಾಣಿಯ ಸ್ವಚ್ಛತೆ ಮತ್ತು ಕಲ್ಯಾಣಿಗೆ ನೀರು ತುಂಬಿಸುವುದು.
*ಸಂಚಾರ ದಟ್ಟಣೆಯಾಗದಂತೆ ಮಾರ್ಗ ಬದಲಾವಣೆ ಮತ್ತು ವಾಹನ ನಿಲುಗಡೆಗೆ ಸ್ಥಳ ನಿಗದಿ.

Follow Us:
Download App:
  • android
  • ios