ಕಾಂಗ್ರೆಸ್ಸಿನದು ವೋಟ್ ಬ್ಯಾಂಕ್ ರಾಜಕಾರಣ: ಸಚಿವ ಸುಧಾಕರ್ ಟೀಕೆ
ಕಾಂಗ್ರೆಸ್‌ನವರು ಬರೀ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಹೊರತು, ರಾಜ್ಯ, ರಾಜ್ಯದ ಯುವಕರನ್ನು ಸಬಲೀಕರಣ ಮಾಡುವ ಕೆಲಸ ಮಾಡುತ್ತಿಲ್ಲ. ಯುವಕರನ್ನು ಸಬಲೀಕರಣ ಮಾಡುತ್ತಿರುವುದು ಪ್ರಧಾನಿ ನರೇಂದ್ರ ಮೋದಿ ಅವರು ಮಾತ್ರ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಚಿಕ್ಕಬಳ್ಳಾಪುರ (ಮಾ.22): ಕಾಂಗ್ರೆಸ್‌ನವರು ಬರೀ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಹೊರತು, ರಾಜ್ಯ, ರಾಜ್ಯದ ಯುವಕರನ್ನು ಸಬಲೀಕರಣ ಮಾಡುವ ಕೆಲಸ ಮಾಡುತ್ತಿಲ್ಲ. ಯುವಕರನ್ನು ಸಬಲೀಕರಣ ಮಾಡುತ್ತಿರುವುದು ಪ್ರಧಾನಿ ನರೇಂದ್ರ ಮೋದಿ ಅವರು ಮಾತ್ರ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಚಿಕ್ಕಬಳ್ಳಾಪುರ ನಗರದಲ್ಲಿ ಮಂಗಳವಾರ ಬಿಎಂಟಿಸಿ ಬಸ್ ಸಂಚಾರಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಗ್ಯಕ್ಕೆ ಪೂರಕವಾಗಿ ಸ್ವಚ್ಛಭಾರತ್ ಮಿಷನ್, ಜಲಜೀವನ್ ಮಿಷನ್, ಮುದ್ರಾ ಯೋಜನೆ ನಾವು ನೀಡುತ್ತಿದ್ದೇವೆ, ಇವರು 3 ಸಾವಿರ, ಒಂದೂವರೆ ಸಾವಿರ, 200 ಯೂನಿಟ್ ವಿದ್ಯುತ್ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ದ ಕಿಡಿಕಾರಿದರು.
ಕಾಂಗ್ರೆಸ್‌ದು ಸುಳ್ಳು ಗ್ಯಾರೆಂಟಿ: ಕಾಂಗ್ರೆಸ್ ನೀಡುತ್ತಿರುವ ಎಲ್ಲ ಭರವಸೆಗಳೂ ಕೇವಲ ಸುಳ್ಳುಗಳೇ ಆಗಿದ್ದು, ಕಾಂಗ್ರೆಸ್ ನಾಯಕರು ಹತಾಶರಾಗಿ, ಸುಳ್ಳನ್ನೇ ಬಂಡವಾಳ ಮಾಡಿಕೊಂಡು ಸುಳ್ಳು ಭರವಸೆ ನೀಡುತ್ತಿದ್ದಾರೆ. ಅವರನ್ನು ಕೇಳಿ ನಿರುದ್ಯೋಗಿ ಪದವೀಧರರು ಎಷ್ಟುಮಂದಿ ಇದ್ದಾರೆ, ಡಿಪ್ಲೊಮೋ ಮಾಡಿದವರು ಎಷ್ಟುಮಂದಿ ಇದ್ದಾರೆ ಎಂಬ ಮಾಹಿತಿ ಇದೆಯೇ ಎಂದು ಪ್ರಶ್ನಿಸಿದರು. ಈ ಬಗ್ಗೆ ಕಾಂಗ್ರಸ್‌ಗೆ ಯಾವುದೇ ನಿಖರತೆ ಇಲ್ಲ. ಬಡವರು ತಿಂಗಳು ಪೂರ್ತಿ 70 ಯೂನಿಟ್ ವಿದ್ಯುತ್ ಬಳಸುವುದಿಲ್ಲ. ಆದರೆ ಇವರು 200 ಯೂನಿಟ್ ನೀಡುವುದಾಗಿ ಹೇಳಿರುವುದು ವಿಪರ್ಯಾಸ. 10 ಕೆಜಿ ಅಕ್ಕಿ ನೀಡುವುದಾಗಿ ಹೇಳಿದ್ದಾರೆ. ಈ ಹಿಂದೆ ಇವರದೇ ಆಡಳಿತ ಇದ್ದಾಗ ಯಾಕೆ ನೀಡಲಿಲ್ಲ, ಅಂದು ರಾಜ್ಯದಲ್ಲಿ ಬಡವರಿರಲಿಲ್ಲವೇ, ಇಂದು ಸೃಷ್ಟಿಯಾಗಿದ್ದಾರೆಯೇ ಎಂದು ಸುಧಾಕರ್ ಪ್ರಶ್ನಿಸಿದರು.
ಸಿ.ಟಿ.ರವಿಯೇ ಉರೀಗೌಡ, ಅಶ್ವತ್ಥನಾರಾಯಣನೇ ನಂಜೇಗೌಡ: ಡಿ.ಕೆ.ಶಿವಕುಮಾರ್
ಬಿಜೆಪಿ ಸರ್ಕಾರದ ಸಾಧನೆಗಳ ಸರಮಾಲೆ: ಡಿ.ಕೆ.ಸುರೇಶ್ ಅವರ ಆರೋಪದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತಿರುವುದು ಬಿಜೆಪಿ ಸರ್ಕಾರ. ಈ ರಾಮಮಂದಿರ ನಿರ್ಮಾಣ ಇಂದಿನ ಮಾತಲ್ಲ, ಕಳೆದ 30 ವರ್ಷಗಳ ಆಶಯಗಳಲ್ಲಿ ಅದೂ ಒಂದು. ಅದರ ಸಾಕಾರ ಮಾಡಿದ್ದು ಬಿಜೆಪಿ, ಯಾರ ಕಾಲದಲ್ಲಿ ಅಯೋಧ್ಯೆಯಲ್ಲಿ ಏನಾಯಿತು ಎಂದು ಗೊತ್ತಿದೆ, ಅದನ್ನು ಕೆಣಕಿ ಕೇಳಬೇಕಾ ಎಂದು ಸಂಸದ ಡಿ.ಕೆ.ಸುರೇಶ್‌ಗೆ ಸುಧಾಕರ್ ತಿರುಗೇಟು ನೀಡಿದರು.
27ಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸಿಎಂ ಚಾಲನೆ: ಜಿಲ್ಲೆಯಲ್ಲಿ ನಿರ್ಮಾಣ ಆಗಿರುವ ಸರ್ಕಾರಿ ವೈದ್ಯಕೀಯ ಕಾಲೇಜ್ ಉದ್ಘಾಟನೆಗೆ ಮಾ.27 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಜಿಲ್ಲೆಗೆ ಭೇಟಿ ನೀಡಲಿದ್ದು, ಅಂದು ಸರ್ಕಾರಿ ವೈದ್ಯಕೀಯ ಕಾಲೇಜು ಲೋಕಾರ್ಪಣೆಗೊಳ್ಳಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಮಂಗಳವಾರ ಕ್ಷೇತ್ರದ ಜನತೆಗೆ ಯುಗಾದಿ ಹಬ್ಬದ ಉಡುಗೋರೆಯಾಗಿ ಚಿಕ್ಕಬಳ್ಳಾಪುರ ಜನತೆಗೆ ಬಿಎಂಟಿಸಿ ಬಸ್ ಸೇವೆ ಕಾರ್ಯಾರಂಭಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿ, ಬಿಎಂಟಿಸಿ ಬಸ್ ಸಂಚಾರ ನನಗೆ ಅತ್ಯಂತ ಸಂತಸ ತಂದಿದೆ ಎಂದರು.
ಎಲ್ಲಿದೆ ಕಾಂಗ್ರೆಸ್, ಅವರ ಕಾಲ ಮುಗಿದು ಹೋಗಿದೆ: ಬಿ.ಎಸ್.ಯಡಿಯೂರಪ್ಪ
ನವೀನ್ ಕಿರಣ್‌ಗೆ ಕಾರ್ಯಕ್ಕೆ ಶ್ಲಾಘನೆ: ಜಿಲ್ಲೆಗೆ ಬಿಎಂಟಿಸಿ ಸೇವೆ ತರಲು ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ ಸಚಿವ ಸುಧಾಕರ್, ಹವಾನಿಯಂತ್ರಿತ ಬಿಎಂಟಿಸಿ ಬಸ್‌ಗಳು ಪ್ರತಿನಿತ್ಯ ಬೆಂಗಳೂರಿಗೆ ನೇರವಾಗಿ ಸೇವೆ ಒದಗಿಸಲಿವೆ. ವಿದ್ಯಾರ್ಥಿಗಳು, ರೈತರು, ಉದ್ಯೋಗಿಗಳಿಗೆ ಇದು ಸಹಕಾರಿಯಾಗಲಿದೆ. ಈ ಸೇವೆ ಆರಂಭಿಸಲು ಕೆಎಸ…ಆರ್ ಟಿಸಿ ಅವರ ಒಪ್ಪಿಗೆ ಬೇಕಿತ್ತು. ಅವರು ಪರವಾನಿಗಿ ನೀಡುವುದು ತಡವಾದ ಕಾರಣ ಮುಖ್ಯಮಂತ್ರಿಗಳಿಂದ ಎರಡು ಬಾರಿ ಸೂಚನೆ ಕೊಡಿಸಿ ಬಸ್ ಸೇವೆ ಆರಂಭಿಸಲಾಗಿದೆ ಎಂದರು. ಬದ್ಧತೆ ಇದ್ದರೆ ಮಾತ್ರ ಇಂತಹ ಕೆಲಸ ಮಾಡಲು ಸಾಧ್ಯ, ಇಂತಹ ಬದ್ಧತೆ ಬಿಎಂಟಿಸಿ ಉಪಾಧ್ಯಕ್ಷ ನವೀನ್ ಕಿರಣ್ ಅವರು ತೋರಿಸಿರುವುದು ಅವರ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆಂದರು.