ಬೆಂಗಳೂರು [ಆ.1]:  ಬಿಬಿಎಂಪಿ ವ್ಯಾಪ್ತಿಯಲ್ಲಿ 40/60 (2500 ಚದರ ಅಡಿ)ಗಿಂತ ಕಡಿಮೆ ಅಳತೆಯ ನಿವೇಶನದಲ್ಲಿ ಮನೆ ಕಟ್ಟುವುದಕ್ಕೆ ಪಾಲಿಕೆಯಿಂದ ನಕ್ಷೆ ಮಂಜೂರಾತಿ ಪಡೆಯುವ ಅಗತ್ಯವಿಲ್ಲ. ಕೇವಲ ಕಟ್ಟಡದ ನಕ್ಷೆಯನ್ನು ಆನ್‌ಲೈನ್‌ ಮೂಲಕ ಸಲ್ಲಿಸಿದರೆ ಸಾಕಾಗಲಿದ್ದು, ಈ ಹೊಸ ವ್ಯವಸ್ಥೆ ಆ.15ರ ಸ್ವಾತಂತ್ರ್ಯ ದಿನಾಚರಣೆಯಿಂದ ಚಾಲ್ತಿಗೆ ಬರಲಿದೆ ಎಂದು ಆಯುಕ್ತ ಮಂಜುನಾಥ್‌ ಪ್ರಸಾದ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಂಬಿಕೆ ಮತ್ತು ಪರಿಶೀಲನೆ’ ಆಧಾರದ ಮೇಲೆ 2,400 ಚ.ಅಡಿಗಿಂತ ಕಡಿಮೆ ವಿಸ್ತೀರ್ಣದ ನಿವೇಶನಗಳಲ್ಲಿ ಕಟ್ಟಡ ಕಟ್ಟಿಕೊಳ್ಳಲು ಅನುವು ಮಾಡಿಕೊಡಲಾಗುತ್ತಿದೆ. ಹೀಗಾಗಿ, 2,400 ಚ.ಅಡಿಗಿಂತ ಕಡಿಮೆ ವಿಸ್ತೀರ್ಣದ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಪಡೆಯುವ ಅಗತ್ಯವಿಲ್ಲ, ಆದರೆ, ಕಟ್ಟಡ ನಿರ್ಮಿಸುವವರು ಕಡ್ಡಾಯವಾಗಿ ನೋಂದಾಯಿತ ವಾಸ್ತುಶಿಲ್ಪಿಗಳಿಂದ ನಕ್ಷೆಯನ್ನು ಸಿದ್ಧಪಡಿಸಿ, ಮಾಹಿತಿಗೆ ಪಾಲಿಕೆಗೆ ಸಲ್ಲಿಸಿದರೆ ಸಾಕಾಗಲಿದೆ. ಕಟ್ಟಡ ನಕ್ಷೆ ಮಂಜೂರಾತಿ ಪಡೆಯುವ ಅಗತ್ಯವಿಲ್ಲ ಎಂದು ತಿಳಿಸಿದರು.

ಆನ್‌ಲೈನ್‌ ಸಲ್ಲಿಕೆ:  ಕಟ್ಟಡ ನಕ್ಷೆ ಮಂಜೂರಾತಿಗೆ ಆನ್‌ಲೈನ್‌ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ. 2400 ಚ.ಅಡಿ ಮತ್ತು ಅದಕ್ಕಿಂತ ಹೆಚ್ಚು ವಿಸ್ತೀರ್ಣದ ಕಟ್ಟಡಗಳ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಪಡೆಯುವುದು ಕಡ್ಡಾಯ. 2400 ಚ.ಅಡಿಗಿಂತ ಕಡಿಮೆ ನಿವೇಶನದಲ್ಲಿ ಕಟ್ಟಡ ನಿರ್ಮಿಸುವವರು ನೋಂದಾಯಿತ ವಾಸ್ತುಶಿಲ್ಪಿಗಳಿಂದ ‘ಬಿಲ್ಡಿಂಗ್‌ ಬೈಲಾ’ ಪ್ರಕಾರ ನಕ್ಷೆ ಸಿದ್ಧಪಡಿಸಿ ಪಾಲಿಕೆಯ ವೆಬ್‌ಸೈಟ್‌ಗೆ ಅಪ್‌ ಲೋಡ್‌ ಮಾಡಬೇಕು. ಬಿಬಿಎಂಪಿ ಈಗಾಗಲೇ ಅತ್ಯಾಧುನಿಕ ಸಾಫ್ಟ್‌ವೇರ್‌ ಹೊಂದಿದ್ದು, ಕಟ್ಟಡ ನಕ್ಷೆ ಬಿಲ್ಡಿಂಗ್‌ ಬೈಲಾ ಪ್ರಕಾರವಿದ್ದರೆ ಮಾತ್ರ ಒಪ್ಪಿಗೆ ನೀಡಲಿದೆ. ಇಲ್ಲವಾದರೆ, ನಕ್ಷೆಯಲ್ಲಿರುವ ತಪ್ಪುಗಳನ್ನು ಗುರುತಿಸಿ ಸರಿಪಡಿಸುವುದಕ್ಕೆ ಸೂಚಿಸಲಿದೆ ಎಂದು ತಿಳಿಸಿದರು.

ನಿಯಮ ಉಲ್ಲಂಘಿಸಿದರೆ ಕ್ರಮ

ನಕ್ಷೆಯಲ್ಲಿ ಆನ್‌ಲೈನ್‌ ಮೂಲಕ ಸಲ್ಲಿಕೆ ಮಾಡಿದ ತಕ್ಷಣ ಕೆಲಸ ಆರಂಭಿಸಬಹುದು. ಪಾಲಿಕೆ ಅಧಿಕಾರಿಗಳ ಪರಿಶೀಲನೆ ಅನುಮೋದನೆಗಾಗಿ ಕಾಯುವ ಅವಶ್ಯಕತೆ ಇರುವುದಿಲ್ಲ. ಒಂದು ವೇಳೆ ಸುಳ್ಳು ದಾಖಲೆ ನೀಡಿ ಅಥವಾ ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿದಲ್ಲಿ ಅಂತಹ ಕಟ್ಟಡ ಮಾಲಿಕರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ನಿವಾಸಿ ಕಟ್ಟಡಕ್ಕೆ ಮಾತ್ರ ಅನ್ವಯ

ಈ ನಿಯಮ ವಾಣಿಜ್ಯ ಕಟ್ಟಡಗಳಿಗೆ ಅನ್ವಯವಾಗುವುದಿಲ್ಲ. ವಾಣಿಜ್ಯ ಕಟ್ಟಡಗಳು ಎಂದಿನಂತೆ ನಕ್ಷೆ ಮಂಜೂರಾತಿ ಪಡೆಯಬೇಕು. ವಾಣಿಜ್ಯವಲ್ಲದ ಕಟ್ಟಡಗಳು ನೆಲ ಮಳಿಗೆ ಹಾಗೂ ಮೂರು ಅಂತಸ್ತು ನಿರ್ಮಿಸಬಹುದು. ಈ ಮೊದಲು 300 ಚ.ಅಡಿಗಿಂತ ಮೇಲ್ಪಟ್ಟಎಲ್ಲ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಪಡೆಯಬೇಕಿತ್ತು ಎಂದು ತಿಳಿಸಿದರು.

2400 ಚ.ಅಡಿಗಿಂತ ಕಡಿಮೆ ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಿಸುವವರು ನಕ್ಷೆ ಮಂಜೂರಾತಿಗೆ ಪಾಲಿಕೆಗೆ ಅಲೆದಾಡುವ ಅವಶ್ಯಕತೆ ಇಲ್ಲ. ನಂಬಿಕೆ ಮತ್ತು ಪರಿಶೀಲನೆ ಆಧಾರದಲ್ಲಿ ಬಿಲ್ಡಿಂಗ್‌ ಬೈಲಾ ಪ್ರಕಾರ ನಕ್ಷೆ ಸಿದ್ಧಪಡಿಸಿ ಪಾಲಿಕೆಗೆ ಆನ್‌ಲೈನ್‌ ಮೂಲಕ ಸಲ್ಲಿಕೆ ಮಾಡಿ ಕಟ್ಟಡ ನಿರ್ಮಾಣ ಆರಂಭಿಸಬಹುದಾಗಿದೆ. ಆ.15ರಿಂದ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ.

-ಮಂಜುನಾಥ್‌ ಪ್ರಸಾದ್‌, ಆಯುಕ್ತ.