ಕೋವಿಡ್‌ಗೆ ಮುನ್ನ ಕೆಎಸ್‌ಆರ್‌ಟಿಸಿ ನಾಲ್ಕು ನಿಮಗಳ ಬಸ್‌ಗಳಲ್ಲಿ ನಿತ್ಯ 2 ಕೋಟಿ ಜನ ಪಯಣಿಸುತ್ತಿದ್ದರು ಕಳೆದ 16 ತಿಂಗಳಿಂದ ಸುಮಾರು 4 ಸಾವಿರ ಕೋಟಿ ನಷ್ಟ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್‌ ಎಸ್‌. ಸವದಿ ಹೇಳಿಕೆ

ಮೈಸೂರು (ಜು.07): ಕೋವಿಡ್‌ಗೆ ಮುನ್ನ ಕೆಎಸ್‌ಆರ್‌ಟಿಸಿ ನಾಲ್ಕು ನಿಮಗಳ ಬಸ್‌ಗಳಲ್ಲಿ ನಿತ್ಯ 2 ಕೋಟಿ ಜನ ಪಯಣಿಸುತ್ತಿದ್ದರು. ಇವತ್ತು 25 ಲಕ್ಷ ಜನರು ಪಯಣಿಸುತ್ತಿದ್ದಾರೆ. ಕಳೆದ 16 ತಿಂಗಳಿಂದ ಸುಮಾರು 4 ಸಾವಿರ ಕೋಟಿ ನಷ್ಟವಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್‌ ಎಸ್‌. ಸವದಿ ತಿಳಿಸಿದರು.

ರಾಜೀವ್‌ನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ಆವರಣದಲ್ಲಿ ನಿರ್ಮಿಸಿರುವ ರಾಜ್ಯದ ಎರಡನೇ ವಾಹನ ತಪಾಸಣಾ ಹಾಗೂ ಪ್ರಮಾಣೀಕರಣ ಕೇಂದ್ರವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ನಿಗಮದ 1.30 ಲಕ್ಷ ಸಿಬ್ಬಂದಿ ವೇತನಕ್ಕೆ ಪ್ರತಿ ತಿಂಗಳು 324 ಕೋಟಿ ಕೊಡಬೇಕು. ಸಂಬಳ ಕೊಡುವುದು ಕಷ್ಟವಾಯಿತು. ಸಿಎಂ ಅವರಿಗೆ ವಿನಂತಿ ಮಾಡಿದಾಗ ಈವರೆಗೆ 2480 ಕೋಟಿ ರು. ನೀಡಿದ್ದಾರೆ. ಲಾಕ್‌ಡೌನ್‌ ವೇಳೆಯು ಸಂಬಳ ಕಡಿತ ಮಾಡಿಲ್ಲ. ಪೂರ್ಣ ಸಂಬಳ ಪಾವತಿಸಲಾಗಿದೆ ಎಂದು ಹೇಳಿದರು.

ಇಂದಿನಿಂದ 4 ಸಾವಿರ KSRTC ಬಸ್‌ಗಳು ರಸ್ತೆಗೆ, ಪ್ರಯಾಣಿಕರಿಗೆ ಷರತ್ತುಗಳು ಅನ್ವಯ..!

ಅನ್‌ಲಾಕ್‌ ಬಳಿಕ ಬಸ್‌ಗಳ ಸಂಚಾರ ಆರಂಭವಾಗಿದೆ. ನಿತ್ಯ ಡಿಸೇಲ್‌ಗೆ 3 ಕೋಟಿ ಬೇಕು, ಆದರೆ 2 ಕೋಟಿ ಆದಾಯ ಬರುತ್ತಿದ್ದು, 1 ಕೋಟಿ ನಷ್ಟವಾಗುತ್ತಿದೆ. ಡಿಸೇಲ್‌ ಹಣವೂ ಬರುತ್ತಿಲ್ಲ. ಇಲಾಖೆ ತೀವ್ರ ಸಂಕಷ್ಟದಲ್ಲಿದ್ದರೂ ಟಿಕೆಟ್‌ ದರ ಏರಿಕೆ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಬೆಂಗಳೂರು ಬಳಿಕ ಮೈಸೂರಿನಲ್ಲಿ 2ನೇ ವಾಹನ ತಪಾಸಣಾ ಹಾಗೂ ಪ್ರಮಾಣೀಕರಣ ಕೇಂದ್ರವನ್ನು ಉದ್ಘಾಟಿಸಲಾಗಿದೆ. 3ನೇ ಕೇಂದ್ರ ಧಾರವಾಡದಲ್ಲಿ ಕೆಲಸ ಮುಗಿದಿದೆ. ಹಂತ ಹಂತವಾಗಿ ಪ್ರತಿ ಜಿಲ್ಲೆಯಲ್ಲಿ ಪ್ರಮಾಣೀಕರಣ ಕೇಂದ್ರ ಆರಂಭಿಸಲಾಗುವುದು. ಸಂಪೂರ್ಣ ವಾಹನ ತಪಾಸಣಾ ಹಾಗೂ ಪ್ರಮಾಣೀಕರಣ ಕೇಂದ್ರವು ಅಪಘಾತ ತಡೆಯಲಿಕ್ಕೆ ಸಹಕಾರಿಯಾಗಲಿದೆ. ವಾಹನ ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಅಪಘಾತ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತವೆ. ಮನುಷ್ಯರ ಆರೋಗ್ಯ ಪರೀಕ್ಷಿಸುವ ಮಾದರಿಯಲ್ಲಿಯೇ ವಾಹನಗಳ ಪೂರ್ಣ ತಪಾಸಣೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

ವಾಹನ ತಪಾಸಣಾ ಕೇಂದ್ರವು 15.78 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸ್ಪೈನ್‌ ದೇಶದಿಂದ ಯಂತ್ರಗಳನ್ನು ತರಿಸಲಾಗಿದೆ. ಮೈಸೂರು ವಿಭಾಗದ ಕೆಲವೊಂದು ಜಿಲ್ಲೆಗಳ ವಾಹನಗಳ ಅರ್ಹತೆ ಪರೀಕ್ಷಿಸುವ ಉದ್ದೇಶ ಹೊಂದಲಾಗಿರುತ್ತದೆ. ವಾಹನಗಳ ಅರ್ಹತಾ ಗುಣಮಟ್ಟಹೆಚ್ಚಿಸುವ ಜತೆಗೆ ಅಪಘಾತಗಳನ್ನು ಕಡಿಮೆಗೊಳಿಸುವ ಉದ್ದೇಶ ಹೊಂದಿದೆ ಎಂದರು.

ಕೆಎಸ್‌ಆರ್‌ಟಿಸಿ ಪ್ರಯಾಣಿಕರ ಸಂಖ್ಯೆ 7 ಲಕ್ಷಕ್ಕೇರಿಕೆ

ಶಾಸಕ ತನ್ವೀರ್‌ ಸೇಠ್‌ ಮಾತನಾಡಿ, 20 ವರ್ಷ ಮೇಲ್ಪಟ್ಟವಾಹನಗಳ ಬಳಕೆ ನಿಷೇಧ ಸಂಬಂಧ ನಿರ್ಣಯ ತೆಗೆದುಕೊಳ್ಳಬೇಕು. ಚಾಲಕರ ಮೇಲಿನ ಅನಗತ್ಯ ಒತ್ತಡವನ್ನು ಕಡಿಮೆ ಮಾಡಬೇಕು. ಮೈಸೂರಲ್ಲಿ ಖಾಸಗಿ ಬಸ್‌ ನಿಲ್ದಾಣಕ್ಕೆ ಕ್ರಮ ವಹಿಸಬೇಕು. ಪ್ರವಾಸಿಗರಿಗೆ ಅನುಕೂಲವಾಗುವ ದಿಸೆಯಲ್ಲಿ ಸಾರಿಗೆ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌, ಎಂಡಿಎ ಅಧ್ಯಕ್ಷ ಎಚ್‌.ವಿ. ರಾಜೀವ್‌, ಮೈಲ್ಯಾಕ್‌ ಅಧ್ಯಕ್ಷ ಎನ್‌.ವಿ. ಫಣೀಶ್‌, ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಎ. ಹೇಮಂತ್‌ಕುಮಾರ್‌ಗೌಡ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌, ನಗರ ಪೊಲೀಸ್‌ ಆಯುಕ್ತ ಡಾ. ಚಂದ್ರಗುಪ್ತ, ಎಸ್ಪಿ ಆರ್‌. ಚೇತನ್‌, ಉಪ ಸಾರಿಗೆ ಆಯುಕ್ತ ಸಿದ್ದಪ್ಪ ಎಚ್‌. ಕಲ್ಲೇರ್‌, ಪ್ರಾದೇಶಿಕ ಸಾರಿಗೆ ಅಧಿಕಾರಿ ಎಲ್‌. ದೀಪಕ್‌ ಮೊದಲಾದವರು ಇದ್ದರು. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona