ಮೈಸೂರು [ಮಾ.16]:  ವಿವಾಹಿತ ಮಹಿಳೆ ಕೊಲೆ ಮಾಡಿ ಶವ ಹೂತಿಟ್ಟಿದ್ದ ಪ್ರಿಯಕರ ಸೇರಿದಂತೆ ನಾಲ್ವರ ಆರೋಪಿಗಳನ್ನು ಮೈಸೂರು ಜಿಲ್ಲೆ ಟಿ. ನರಸೀಪುರ ತಾಲೂಕು ತಲಕಾಡು ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಟಿ. ನರಸೀಪುರ ತಾಲೂಕು ಅಲಗೂಡು ನಿವಾಸಿ ಲೇ. ಸುಬ್ಬಣ್ಣ ಎಂಬವರ ಪುತ್ರ ಮಹೇಶ್‌ ಅ. ದೇವರಗುಡ್ಡ (38), ಅಕ್ಕೂರುದೊಡ್ಡಿ ನಿವಾಸಿ ಲೇ. ಸಿದ್ದನಾಯಕ ಎಂಬವರ ಪುತ್ರ ಸೋಮ(34), ಲೇ. ಸಿದ್ದನಾಯಕ ಎಂಬವರ ಪುತ್ರ ಮಹದೇವ ನಾಯಕ(50) ಹಾಗೂ ಹೆಮ್ಮಿಗೆ ಗ್ರಾಮದ ಚೌಡಯ್ಯ (58) ಬಂಧಿತ ಆರೋಪಿಗಳು.

ಆರೋಪಿಗಳು ನಾಲ್ವರು ಸೇರಿ ಚಾಮರಾಜನಗರ ಜಿಲ್ಲೆ ಹನೂರು ತಾಲೂಕು ಮನಗಹಳ್ಳಿಯ ರಾಜಮ್ಮ (42) ಎಂಬವರನ್ನು ಹತ್ಯೆ ಮಾಡಿ, ಶವವನ್ನು ಹೂತಿಟ್ಟಿದ್ದರು. ಮಹೇಶನೊಂದಿಗೆ ರಾಜಮ್ಮ ಹೊಂದಿದ್ದ ಅನೈತಿಕ ಸಂಬಂಧವೇ ಅವರ ಕೊಲೆಗೆ ಕಾರಣವಾಗಿದೆ ಎಂದು ಮೈಸೂರು ಎಸ್ಪಿ ಸಿ.ಬಿ. ರಿಷ್ಯಂತ್‌ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೊಲೆಯ ಹಿನ್ನೆಲೆ:  ಹನೂರು ತಾಲೂಕು ಮನಗಹಳ್ಳಿಯ ರಾಜಮ್ಮ ಜ.28 ರಿಂದ ನಾಪತ್ತೆಯಾಗಿದ್ದು, ಈ ಸಂಬಂಧ ಹನೂರು ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ತನಿಖೆ ಆರಂಭಿಸಿದ ಪೊಲೀಸರಿಗೆ ರಾಜಮ್ಮ ಆರೋಪಿ ಮಹೇಶ ಮತ್ತು ಆತನ ಸ್ನೇಹಿತ ಸೋಮ ಎಂಬವರೊಂದಿಗೆ ಅನೈತಿಕ ಸಂಬಂಧವಿತ್ತು ಎಂಬುದು ಗೊತ್ತಾಗಿದೆ. ಈ ಸಂಬಂಧ ತನಿಖೆ ಮುಂದುವರಿಸಿದ ತಲಕಾಡು ಠಾಣೆಯ ಪೊಲೀಸರು, ರಾಜಮ್ಮ ಕೊಲೆ ಪ್ರಕರಣವನ್ನು ಭೇದಿಸಿದ್ದಾರೆ.
ಫಸ್ಟ್‌ನೈಟಿಗೂ ಮುನ್ನ ಪತ್ನಿಯ ರಾಸಲೀಲೆ ಲೀಕ್‌! ಪತಿಯ ಮೊಬೈಲ್ ಗೆ ಬಂದ ವಿಡಿಯೋ...

ಹಾಲಿ ಹನೂರು ತಾಲೂಕು ಕೂಡಲೂರು ಗ್ರಾಮದಲ್ಲಿ ವಾಸವಿರುವ ಮಹೇಶನೊಂದಿಗೆ ರಾಜಮ್ಮ ಅನೈತಿಕ ಸಂಬಂಧ ಹೊಂದಿದ್ದರು. ಅಲ್ಲದೆ, ಮಹೇಶನ ಸ್ನೇಹಿತ ಸೋಮನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ರಾಜಮ್ಮಗೆ ಮಹೇಶನ ಮೇಲೆ ಹೆಚ್ಚು ಪ್ರೀತಿಯಿತ್ತು. ಹೀಗಾಗಿಯೇ ನೀನು ನನ್ನೊಂದಿಗೆ ಇರಬೇಕು ಎಂದು ಮಹೇಶನನ್ನು ರಾಜಮ್ಮ ಒತ್ತಡ ಹೇರುತ್ತಿದ್ದಳು. ಆದರೆ, ಮಹೇಶನಿಗೂ ಸಂಸಾರವಿದ್ದ ಕಾರಣ, ರಾಜಮ್ಮನ ಹಠದಿಂದ ಬೇಸರಗೊಂಡಿದ್ದ.

ಇದೇ ಕಾರಣಕ್ಕಾಗಿ ಕಳೆದ ಜ.28 ರಂದು ಮನಗಹಳ್ಳಿಯಿಂದ ಅಕ್ಕೂರುದೊಡ್ಡಿಯಲ್ಲಿ ಸೋಮ ನೋಡಿಕೊಳ್ಳುತ್ತಿದ್ದ ತೋಟದ ಮನೆಗೆ ರಾಜಮ್ಮನನ್ನು ಕರೆದುಕೊಂಡು ಬಂದು ಗುದ್ದಲಿಯಲ್ಲಿ ಹೊಡೆದು ಕೊಲೆ ಮಾಡಿದ್ದಾರೆ. ನಂತರ ಶವವನ್ನು ಅಲ್ಲಿಯೇ ಬಿಟ್ಟು ಹೋಗಿದ್ದು, 2- 3 ದಿನದ ನಂತರ ಬಂದು ಸಾಕ್ಷಾಧಾರಗಳನ್ನು ನಾಶಪಡಿಸಲು ಶವವನ್ನು ತೋಟದಲ್ಲಿಯೇ ಹೂತಿಟ್ಟಿದ್ದಾರೆ. ಮಹೇಶ ಮತ್ತು ಸೋಮ ಶವವನ್ನು ಹೂಳಲು ಚೌಡಯ್ಯ ಮತ್ತು ಮಹದೇವ ಸಹಕರಿಸಿದ್ದಾರೆ.

ಪ್ರಮುಖ ಆರೋಪಿ ಮಹೇಶನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಂತೆ ತಲಕಾಡಿನ ಮರಳಿನ ಪುಟ್ಟದ್ವೀಪದಲ್ಲಿ ಅವಿತು ಕುಳಿತಿದ್ದ ಸೋಮನನ್ನು ಸಹ ಪೊಲೀಸರು ಬಂಧಿಸಿದ್ದಾರೆ. ನಂತರ ಕೊಲೆಗೆ ಸಹಕರಿಸಿ ಚೌಡಯ್ಯ ಮತ್ತು ಮಹದೇವನನ್ನು ಸಹ ಪೊಲೀಸರು ಬಂಧಿಸಿ, ಹೂತಿಟ್ಟಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಎಸ್ಪಿ ರಿಷ್ಯಂತ್‌ ವಿವರಿಸಿದರು.

ಹೆಚ್ಚುವರಿ ಎಸ್ಪಿ ಪಿ.ವಿ. ಸ್ನೇಹ, ಡಿವೈಎಸ್ಪಿ ಪ್ರಭಾಕರ್‌ ಶಿಂಧೆ ಅವರ ಮಾರ್ಗದರ್ಶನದಲ್ಲಿ ಟಿ. ನರಸೀಪುರ ಸಿಪಿಐ ಎಂ.ಆರ್‌. ಲವ, ತಲಕಾಡು ಠಾಣೆಯ ಎಸ್‌ಐ ಬಸವರಾಜು, ಪ್ರೋಬೆಷನರಿ ಎಸ್‌ಐ ಹನುಮಂತ ಉಪ್ಪಾರ್‌, ಎಎಸ್‌ಐಗಳಾದ ರಮೇಶ್‌, ಪಚ್ಚೇಗೌಡ, ಸಿಬ್ಬಂದಿ ಸತೀಶ, ಪ್ರಭಾಕರ್‌, ಸತ್ಯನಾರಾಯಣ, ಪ್ರಕಾಶ್‌, ಸಿದ್ದರಾಜು, ವಸಂತಕುಮಾರ್‌, ವಿನೋದ್‌ಕುಮಾರ್‌, ವಿನಯ್‌ ಕುಮಾರ್‌, ಮಂಜುನಾಥ್‌, ಗಿರೀಶ, ದಯಾನಂದ, ಶಿವಸ್ವಾಮಿ, ಮಹೇಶ, ಸಿ.ಎನ್‌. ಇಸ್ಮಾಯಿಲ…, ಸೋಮನಾಯಕ, ಮಹದೇವು ಈ ಪತ್ತೆ ಮಾಡಿದ್ದಾರೆ.