ಎರಡು ವಾರದೊಳಗೇ ಸೂಕ್ತ ದಾಖಲೆ ಇಲ್ಲದ ಕೋಟಿ ಕೋಟಿ ಹಣ ಜಪ್ತಿ, ಹಲವರ ಬಂಧನ- ಎಫ್‌ಐಆರ್‌, ಮುಕ್ತ, ಶಾಂತಿಯುತ- ನ್ಯಾಯಸಮ್ಮತ ಚುನಾವಣೆ ಸಂಕಲ್ಪ, ಬಿಗಿ ಕ್ರಮಗಳಿಗೆ ಮುಂದಾದ ಡಿಸಿ ಗುರುಕರ್‌

ಶೇಷಮೂರ್ತಿ ಅವಧಾನಿ

ಕಲಬುರಗಿ(ಏ.05): ಅಸೆಂಬ್ಲಿ ಚುನಾವಣೆಯಲ್ಲಿ ಕುರುಡು ಕಾಂಚಾಣ ಕುಣಿತಕ್ಕೆ ಮೂಗುದಾರ ಹಾಕುವ ಸದುದ್ದೇಶದಿಂದ ಸ್ಥಾಪಿಸಲಾಗಿರುವ ಚೆಕ್‌ಪೋಸ್ಟ್‌ ಸಿಬ್ಬಂದಿಗಳೇ ಹುಶಾರ್‌, ಗಡಿಯಲ್ಲಿ, ಇನ್ನೆಲ್ಲೋ ಇದ್ದೇವೆ, ನಮ್ಮ ಕೆಲಸದ ಮೇಲೆ ಅದ್ಯಾರು ನಿಗಾ ಇಡ್ತಾರೆ ಬಿಡಿ ಎಂದು ಚುನಾವಣೆಯ ಈ ಜವಾಬ್ದಾರಿಯುತ ಕೆಲಸ ನಿರ್ವಹಿಸುವಲ್ಲಿ ಮೈ ಮರೆತರೆ ಜೋಕೆ! ಆಮಿಷ ಮುಕ್ತ, ನ್ಯಾಯಸಮ್ಮತ, ಪಾರದರ್ಶಕ ಚುನಾವಣೆಗಾಗಿ ಸಂಕಲ್ಪ ಮಾಡಿರುವ ಕಲಬುರಗಿ ಜಿಲ್ಲಾಧಿಕಾರಿ ಯಶ್ವಂತ ಗುರುಕರ್‌ ಜಿಲ್ಲಾದ್ಯಂತ ಹರಡಿರುವ ಚೆಕ್‌ಪೋಸ್ಟ್‌ ಕಾರ್ಯವೈಖರಿ ಮೇಲೆ ನಿಗಾ ಇಡಲು ಖುದ್ದು ತಾವೇ ರಾತ್ರಿ ಹೊತ್ತು ಸರ್ಕಾರಿ ವಾಹನ ಬದಿಗಿಟ್ಟು ಖಾಸಗಿ ಕಾರಲ್ಲಿ ಸಂಚಾರಕ್ಕೆ ಹೊರಟಿದ್ದಾರೆ! ಜಿಲ್ಲಾಡಳಿತದ ‘ಬಿಗ್‌ ಬಾಸ್‌’ ಇಲೆಕ್ಷನ್‌ ಸಂದರ್ಭದಲ್ಲಿ ಶುರು ಮಾಡಿರುವ ಮಿಂಚಿನ ಸಂಚಾರ ಇಡೀ ಜಿಲ್ಲೆಯ ಚುನಾವಣೆ ಕೆಲಸ ಕಾರ್ಯಗಳಲ್ಲಿ ನಿರಂತರ ಲವಲವಿಕೆ, ಕಟ್ಟೆಚ್ಚರ ಇರುವಂತೆ ಮಾಡಿದೆ.

ಕಳೆದ ವಾರ 3 ದಿನ ರಾತ್ರಿ ಸಂಚಾರ:

ನಂಬಲರ್ಹ ಮೂಲಗಳ ಪ್ರಕಾರ ಡಿಸಿ ಯಶ್ವಂತ ಗುರುಕರ್‌ ಕಳೆದ ವಾರ 3 ದಿನ ರಾತ್ರಿ ರಾತ್ರಿ ನಿತ್ಯ ಹಲವು ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿದ್ದಾರೆ. ಅಲ್ಲಿ ಖಾಸಗಿ ವಾಹನದಲ್ಲಿ ಸಾಗಿ ತಪಾಸಣೆ ಹೇಗೆ ನಡೆಯುತ್ತಿದೆ ಎಂಬುದನ್ನು ಮನದಟ್ಟು ಮಾಡಿಕೊಂಡಿದ್ದಾರೆ. ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ಮಾರುವೇಷದಲ್ಲಿ ಡಿಸಿ ಇದ್ದಂತಹ ವಾಹನ ತಡೆದು ನಿಲ್ಲಿಸಿ ಕರ್ತವ್ಯ ನಿರತರಾಗಿರುವ ಸಿಬ್ಬಂದಿ ನಿಯಮದಂತೆ ತಪಾಸಣೆ ಮಾಡಿದ್ದಾರೆ. ತಪಾಸಣೆಯಾದ ನಂರವೇ ಅವರಿಗೆ ಗೊತ್ತಾಗಿದ್ದು ತಾವು ತಪಾಸಮೆ ಮಾಡಿರೋ ಕಾರಲ್ಲಿ ಡಿಸಿ ಸಾಹೇಬರು ಇರೋದು ಎಂಬ ಸಂಗತಿ!

ಸೇಡಂ ಜಿದ್ದಾಜಿದ್ದಿ: ಕಾಗಿಣಾ ತೀರದಲ್ಲಿ ಈ ಬಾರಿ ಮತ್ತೊಂದು ಚತುಷ್ಕೋನ ಕದನ

ಹೀಗೆ ಜಿಲ್ಲಾದ್ಯಂತ ಚೆಕ್‌ಪೋಸ್ಟ್‌ನಲ್ಲಿ ಹಗಲು ರಾತ್ರಿ ಕೆಲಸ ಮಾಡುತ್ತಿರೋದನ್ನ ಕಣ್ಣಾರೆ ಕಂಡಿರುವ ಡಿಸಿ ಸಿಬ್ಬಂದಿಗಳ ಕೆಲಸ ಹಾಗೂ ಸಮಯ ಪ್ರಜ್ಞೆಯನ್ನ ಮೆಚ್ಚಿಕೊಂಡಿದ್ದಾರೆಂದು ಗೊತ್ತಾಗಿದೆ. ಅಸೆಂಬ್ಲಿ ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಜಿಲ್ಲೆಯಲ್ಲಿ ಕಾರ್ಯಾರಂಭಿಸಿರುವ 42 ಚೆಕ್‌ಪೋಸ್ಟ್‌ಗಳು ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುತ್ತಿರೋದರಿಂದ 2 ವಾರದಲ್ಲೇ 4.65 ಕೋಟಿ ರು. ನಷ್ಟುಮೊತ್ತದ ನಗದು, ಚಿನ್ನ, ರಜತ, ಗಿಫ್ಟ್‌ ಸಾಮಗ್ರಿ ಜಪ್ತಿಯಾಗಿದೆ.

42 ಚೆಕ್‌ ಪೋಸ್ಟ್‌ ಸ್ಥಾಪನೆ:

ಚುನಾವಣೆ ಮುಕ್ತ ಹಾಗೂ ನ್ಯಾಯಸಮ್ಮತವಾಗಿರಬೇಕೆಂಬ ಉದ್ದೇಶದಿಂದ ಜಿಲ್ಲಾಡಿತ ಜಿಲ್ಲಾದ್ಯಂತ ಚೆಕ್‌ಪೋಸ್ಟ್‌ಗಳಲ್ಲಿನ ಕಟ್ಟೆಚ್ಚರ ಬಿಗಿ ಮಾಡಿದೆ. ಅಲ್ಲಿಂದ ಸಾಗುವ ಯಾವುದೇ ವಾಹನಕ್ಕೆ ಬಿಡದಂತೆ ತಪಾಸಣೆಗೆ ಸೂಚಿಸಿದೆ. ಜಿಲ್ಲೆಯಾದ್ಯಂತ 42 ಚೆಕ್‌ ಪೋಸ್ಟ್‌ ಸ್ಥಾಪಿಸಲಾಗಿದೆ. ಇದರಲ್ಲಿ ಮಹಾರಾಷ್ಟ್ರ ಮತ್ತು ತೆಲಾಂಗಾಣಾ ಗಡಿಗೆ ತಲಾ 8 ಅಂತರ ರಾಜ್ಯ ಗಡಿ ಚೆಕ್‌ ಪೋಸ್ಟ್‌ ಮತ್ತು ಕಲಬುರಗಿ ಪೊಲೀಸ್‌ ಆಯುಕ್ತಾಲಯ ವ್ಯಾಪ್ತಿಯಲ್ಲಿ 10 ಚೆಕ್‌ ಪೋಸ್ಟ್‌ಗಳಿವೆ. ಇದಲ್ಲದೆ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ 2017 ಸೆಕ್ಟರ್‌ ಅಧಿಕಾರಿಗಳು, 42 ಸ್ಟಾಟಿಕ್‌ ಸರ್ವೆಲೆನ್ಸ್‌ ತಂಡ, 44 ಫ್ಲೈಯಿಂಗ್‌ ಸ್ಕ್ಯಾಡ್‌ ತಂಡ, 9 ವಿ.ಎಸ್‌.ಟಿ. ತಂಡ, 9 ವಿ.ವಿ.ಟಿ. ತಂಡ, 9 ಅಕೌಂಟ್‌ ತಂಡ ಹಾಗೂ 9 ಖರ್ಚು ವೆಚ್ಚಗಳ ತಂಡ ರಚಿಸಿ ಅಕ್ರಮ ಹಣ ಕ್ಷೇತ್ರದಲ್ಲೆಲ್ಲೂ ಚಲಾವಣೆಗೆ ಬಾರದಂತೆ ಕಟ್ಟುನಿಟ್ಟಿನ ನಿಗಾ ಜಿಲ್ಲಾಡಳಿತ ಇಟ್ಟಿದೆ.

ಬ್ಯಾಂಕ್‌ ವಹಿವಾಟಿನ ಮೇಲೆ ಕಟ್ಟುನಿಟ್ಟು ನಿಗಾ:

ಜಿಲ್ಲಾದ್ಯಂತ ಬ್ಯಾಂಕ್‌ ಖಾತೆಗಳ ಮೂಲಕ ಅಕ್ರಮ ಹಣದ ವರ್ಗಾವಣೆಯಾಗಬಹುದು ಎಂಬ ಖಚಿತ ಮಾಹಿತಿ ಇರೋದರಿಂದ ಜಿಲ್ಲಾಡಳಿತ ಬ್ಯಾಂಕ್‌ಗಳ ಹಣಕಾಸಿನ ವಹಿವಾಟಿನ ಮೇಲೂ ನಿಗಾ ಇಟ್ಟಿದೆ. ಈಗಾಗಲೇ ಲೀಡ್‌ ಬ್ಯಾಂಕ್‌, ಹಲವು ಪ್ರಮುಖ ಬ್ಯಾಂಕ್‌ಗಳ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿರುವ ಜಿಲ್ಲಾಡಳಿತ ಕಳೆದ 3 ತಿಂಗಳಿಂದ ಯಾವುದೇ ವಹಿವಾಟಿಲ್ಲದೆ ಇರುವ ಖಾತೆಗಳು, ಇದೀಗ ಏಕಾಏಕಿ ಹಣದ ವಹಿವಾಟು ಅಂತಹ ಕಾತೆಗಳಲ್ಲಿ ಕಂಡಲ್ಲಿ ಅಂತಹ ಎಲ್ಲಾ ದಾಖಲೆಗಳು ತಮಗೆ ನೀಡಬೇಕು ಎಂದು ಸೂಚಿಸಿದೆ.

ನೆಫ್ಟ್‌, ಆರ್‌ಟಿಜಿಎಸ್‌, ಗೂಗಲ್‌ ಪೇ, ಪೋನ್‌ ಪೇ ಸೇರಿದಂತೆ ಯಾವುದೇ ವಿಧದಲ್ಲಿ ಹಣದ ವರ್ಗಾವಣೆಯಾದರೂ ಅದೆಲ್ಲದರ ಮಾಹಿತಿ ಪಡೆಯಲಾಗುತ್ತದೆ. ಕಣ್ತಪ್ಪಿ 1 ರುಪಾಯಿ ಕೂಡಾ ಅಕ್ರಮವಾಗಿ, ಮತಕ್ಕೆ ಪ್ರತಿಯಾಗಿ ಆಮಿಷ ರೂಪದಲ್ಲಿ ಹೀಗೆ ಆನ್‌ಲೈನ್‌ ಚಲಾವಣೆಯಾಗದಂತೆಯೂ ಕ್ರಮ ಜರುಗಿಸಲಾಗುತ್ತಿದೆ ಎಂದು ಜಿಲ್ಲಾಡಳಿತ ಹೇಳಿದೆ.

ಆರ್ಥಿಕವಾಗಿ ಸಂವೇದನಶೀಲ ಎಂದು ಗುರುತಿಸಲಾಗಿರುವ ಜೇವರ್ಗಿ, ಅಫಜಲ್ಪುರ ಹಾಗೂ ಆಳಂದ ಅಸೆಂಬ್ಲಿ ಕ್ಷೇತ್ರಗಳ ಮೇಲೆ ನಿಗಾ ಇಡಲು ಆದಾಯ ಕರ ಇಲಖೆ ಅಧಿಕಾರಿಗಳಿರುವ ತಂಡ ಶೀಘ್ರವೇ ಬಂದಿಳಿಯಲಿದೆ. ಜಿಲ್ಲಾದ್ಯಂತ ಅಕ್ರಮ ಹಣದ ವಹಿವಾಟು ಯಾವುದೇ ರೂಪದಲ್ಲಿಯೂ ನಡೆಯದಂತೆ ತಡೆ ಒಡ್ಡುವುದೇ ಈ ತಂಡದ ಮುಖ್ಯ ಉದ್ದೇಶವಾಗಿರಲಿದೆ.

ಚುನಾವಣೆ ಮುಕ್ತ, ನ್ಯಾಯಸಮ್ಮತವಾಗಿ ನಡೆಸಲು ನೀತಿ ಸಂಹಿತೆ ಕಟ್ಟುನಿಟ್ಟು ಜಾರಿಯಾಗಬೇಕು ಎಂಬ ಸೂಚನೆ ಎಲ್ಲ ಸಿಬ್ಬಂದಿಗೆ ನೀಡಲಾಗಿದೆ. ಅದಕ್ಕೆ ತಕ್ಕಂತೆ ವಿವಿಧ ತಂಡಗಳನ್ನು ರಚಿಸಿ ಕಾರ್ಯೋನ್ಮುಖರಾಗಿದ್ದೇವೆ. ಇಡೀ ತಂಡ ಏಕ ರೂಪದಲ್ಲಿ ಕೆಲಸ ಮಾಡುತ್ತಿದೆ. ಅಗತ್ಯ ಕಂಡಲ್ಲಿ ಬರುವ ದಿನಗಳಲ್ಲಿ ಚೆಕ್‌ಪೋಸ್ಟ್‌ ಸಂಖ್ಯೆ ಹೆಚ್ಚಿಸುವ ಚಿಂತನೆ ಸಾಗಿದೆ ಅಂತ ಜಿಲ್ಲಾಧಿಕಾರಿ ಯಶ್ವಂತ ಗುರುಕರ್‌ ಹೇಳಿದ್ದಾರೆ. 

Kalaburagi airport: ಕಲಬುರಗಿಯಿಂದ ರಾತ್ರಿ ವೇಳೆಯೂ ವಿಮಾನ ಸಂಚಾರ ಶುರು!

ಸೀಮಿತ ಪ್ರದೇಶದಲ್ಲಿರುವ ಬ್ಯಾಂಕ್‌ ಖಾತೆಗಳು ಕಳೆದ ಕೆಲವು ತಿಂಗಳಿಂದ ಯಾವುದೇ ಸ್ವರೂಪದ ವಹಿವಾಟಿಲ್ಲದೆ ಸುಮ್ಮನಿದ್ದು ಇದೀಗ ಏಕಾಏಕಿ ಹಣಕಾಸಿನ ವಹಿವಾಟಿನೊಂದಿಗೆ ಸಕ್ರೀಯವಾದಲ್ಲಿ ಅಂತಹ ಖಾತೆಗಳ ಸಂಪೂರ್ಣ ವಿವರ ಬ್ಯಾಂಕ್‌ಗಳಿಂದ ಸಂಗ್ರಹಿಸಿ ವಿಶ್ಲೇಷಣೆ ಮಾಡುತ್ತೇವೆ. ಆಗ ಆನ್‌ಲೈನ್‌ ಹಣ ವರ್ಗಾವಣೆಯಾದಲ್ಲಿ, ಅದು ಆಮಿಷ ರೂಪದಲ್ಲಿ ನೀಡಿದ್ದೇ ಆದಲ್ಲಿ ಅದನ್ನೆಲ್ಲ ತನಿಕೆಗೊಳಪಡಿಸುತ್ತೇವೆ. ಅಕ್ರಮಗಳಿಲ್ಲದೆ ಮುಕ್ತ ಚುನಾವಣೆ ನಡೆಸಬೇಕು ಎಂಬುದೇ ಜಿಲ್ಲಾಡಳಿತದ ಸಂಕಲ್ಪ ಅಂತ ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ತಿಳಿಸಿದ್ದಾರೆ. 

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.