Asianet Suvarna News Asianet Suvarna News

ಇಂಡಿ ಉಪ ವಿಭಾಗದ ತಾಲೂಕುಗಳಿಗೆ ಬೇಕಿದೆ 371(ಜೆ) ಕಲಂ: ಶಾಸಕ ಯಶವಂತರಾಯಗೌಡ ಪಾಟೀಲ

ಇಂಡಿ ಉಪವಿಭಾಗದ ಇಂಡಿ, ಸಿಂದಗಿ ತಾಲೂಕಿನ ಸರಹದ್ದು ಅವಲೋಕಿಸಿದರೆ ಕಲಬುರಗಿ ಹಾಗೂ ಈ ತಾಲೂಕುಗಳು ಕೇವಲ 2 ಕಿಮೀ ಅಂತರದಲ್ಲಿ ಸಂದಿಸುತ್ತವೆ. ಭೀಮಾನದಿಯ ಆಚೆ ಕಲಬುರಗಿ ಜಿಲ್ಲೆಯ ತಾಲೂಕು ಗ್ರಾಮಗಳು ಇದ್ದರೆ, ಭೀಮಾನದಿ ಈಚೆಗೆ ವಿಜಯಪುರ ಜಿಲ್ಲೆಯ ಇಂಡಿ, ಸಿಂದಗಿ ತಾಲೂಕುಗಳು ಇವೆ. ಈ ಎಲ್ಲ ತಾಲೂಕುಗಳು ನಂಜುಂಡಪ್ಪ ವರದಿಯಂತೆ ಎಲ್ಲ ಕ್ಷೇತ್ರದಲ್ಲಿಯೂ ಅತ್ಯಂತ ಹಿಂದುಳಿದ ತಾಲೂಕುಗಳು ಇವೆ. ಹೀಗಿರುವಾಗಿ 371(ಜೆ) ಈ ತಾಲೂಕುಗಳು ಹಾಗೂ ಜಿಲ್ಲೆ ಸೇರ್ಪಡೆ ಯಾಕಾಗಬಾರದು ಎಂದು ಪ್ರಜ್ಞಾವಂತ ನಾಗರಿಕರ ಪ್ರಶ್ನೆ 

371 j is Need for Indi Sub Division Taluks Says MLA Yashavantharayagouda Patil grg
Author
First Published Dec 2, 2023, 1:00 AM IST

ಖಾಜು ಸಿಂಗೆಗೋಳ

ಇಂಡಿ(ಡಿ.02): ಶೈಕ್ಷಣಿಕ, ರಾಜಕೀಯ, ಆರ್ಥಿಕ, ಔದ್ಯೋಗಿಕವಾಗಿ ಇಂಡಿ ಉಪ ವಿಭಾಗದ ತಾಲೂಕು ತೀರಾ ಹಿಂದುಳಿದಿವೆ. ಅಷ್ಟೇ ಅಲ್ಲದೇ ಇಂಡಿ ಉಪ ವಿಭಾಗದ ಸಿಂದಗಿ, ಆಲಮೇಲ, ಚಡಚಣ, ದೇವರಹಿಪ್ಪರಗಿ ಸೇರಿದಂತೆ ಜಿಲ್ಲೆಯ ಇತರೆ ತಾಲೂಕುಗಳ ಜನತೆ ಮಾನಸಿಕವಾಗಿ ಹಾಗೂ ವ್ಯವಹಾರಿಕವಾಗಿ ಕಲಬುರಗಿ ಜೊತೆ ಇದ್ದಾರೆ. ಹೀಗಾಗಿ ಇಂಡಿ ಉಪ ವಿಭಾಗದ ತಾಲೂಕುಗಳು 371(ಜೆ) ಕಲಂಗೆ ಸೇರ್ಪಡೆ ಮಾಡಬೇಕು ಎಂಬ ಕೂಗು ಮಾರ್ದನಿಸುತ್ತಿದೆ.

ಹೌದು, ಇಂಡಿ ಉಪವಿಭಾಗದ ಇಂಡಿ, ಸಿಂದಗಿ ತಾಲೂಕಿನ ಸರಹದ್ದು ಅವಲೋಕಿಸಿದರೆ ಕಲಬುರಗಿ ಹಾಗೂ ಈ ತಾಲೂಕುಗಳು ಕೇವಲ 2 ಕಿಮೀ ಅಂತರದಲ್ಲಿ ಸಂದಿಸುತ್ತವೆ. ಭೀಮಾನದಿಯ ಆಚೆ ಕಲಬುರಗಿ ಜಿಲ್ಲೆಯ ತಾಲೂಕು ಗ್ರಾಮಗಳು ಇದ್ದರೆ, ಭೀಮಾನದಿ ಈಚೆಗೆ ವಿಜಯಪುರ ಜಿಲ್ಲೆಯ ಇಂಡಿ, ಸಿಂದಗಿ ತಾಲೂಕುಗಳು ಇವೆ. ಈ ಎಲ್ಲ ತಾಲೂಕುಗಳು ನಂಜುಂಡಪ್ಪ ವರದಿಯಂತೆ ಎಲ್ಲ ಕ್ಷೇತ್ರದಲ್ಲಿಯೂ ಅತ್ಯಂತ ಹಿಂದುಳಿದ ತಾಲೂಕುಗಳು ಇವೆ. ಹೀಗಿರುವಾಗಿ 371(ಜೆ) ಈ ತಾಲೂಕುಗಳು ಹಾಗೂ ಜಿಲ್ಲೆ ಸೇರ್ಪಡೆ ಯಾಕಾಗಬಾರದು ಎಂದು ಪ್ರಜ್ಞಾವಂತ ನಾಗರಿಕರು ಪ್ರಶ್ನಿಸುತ್ತಿದ್ದಾರೆ.

ಸಿಎಂ ಬದಲಾವಣೆ ವಿಷಯವೇ ಅಪ್ರಸ್ತುತ: ಶಾಸಕ ಯಶವಂತರಾಯಗೌಡ

ಹಿಂದುಳಿದ ತಾಲೂಕು:

ಹೈದ್ರಾಬಾದ್‌ ನಿಜಾಮನ ಆಳ್ವಿಕೆಯಿಂದ ಮುಕ್ತಿಗೊಂಡು ಮುಂಬೈ ಕರ್ನಾಟಕಕ್ಕೆ ಒಳಗೊಂಡ ವಿಜಯಪುರ ಜಿಲ್ಲೆ ಇಂದಿನವರೆಗೆ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದೆ. ಗಡಿಭಾಗದಲ್ಲಿರುವ ಈ ತಾಲೂಕಿನಲ್ಲಿ ಪದವಿ ಕಾಲೇಜುಗಳು ಹೊರತುಪಡಿಸಿದರೆ ಉನ್ನತ ಶಿಕ್ಷಣ ಈ ಭಾಗದ ಯುವಕರಿಗೆ ಮರೀಚಿಕೆಯಾಗಿದೆ. ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಲ್ಲ, ಆರೋಗ್ಯ ಹಾಗೂ ವೃತ್ತಿಪರ ಶಿಕ್ಷಣ ಸಂಸ್ಥೆಗಳಂತೂ ಕೇಳಬೇಡಿ ಎನ್ನುವಂತಾಗಿದೆ. ಸದಾ ಬರಗಾಲದಿಂದ ತತ್ತರಿಸುತ್ತಿರುವ ಈ ತಾಲೂಕಿನ ಜನರು ನೆರೆಯ ಮಹಾರಾಷ್ಟ್ರ ಪುಣೆ, ಮುಂಬೈ, ಕರಾಡ, ಸಾತಾರ ಹಾಗೂ ಗೋವಾ ರಾಜ್ಯಗಳಿಗೆ ಗೂಳೆ ಹೋಗುತ್ತಿದ್ದು, ಆರ್ಥಿಕವಾಗಿ ಅಂತ್ಯಂತ ಹಿಂದುಳಿದ ತಾಲೂಕು ಇದಾಗಿದೆ. ಹೀಗಾಗಿ ಇಲ್ಲಿ 371(ಜೆ) ಕಲಂ ಅನ್ವಯವಾಗುವುದು ಅವಶ್ಯಕವಾಗಿದೆ.

ಅಲ್ಲಿಯಂತೆ ಇಲ್ಲೂ ಸಮಸ್ಯೆ:

ನೆರೆಯ ಜಿಲ್ಲೆ ಕಲಬುರಗಿ ತಾಲೂಕಿನ ಅಫಜಲಪೂರ, ಆಳಂದ ತಾಲೂಕುಗಳು ಹೇಗೆ ಬರಗಾಲದಿಂದ ತತ್ತರಿಸಿ ಕುಡಿಯುವ ನೀರಿನ ಸಮಸ್ಯೆ ಹೇಗೆ ಅನುಭವಿಸುತ್ತಿವೆಯೋ ಹಾಗೆಯೇ ಇಂಡಿ, ಸಿಂದಗಿ ಭಾಗದಲ್ಲಿಯೂ ಬೇಸಿಗೆ ಬಂದರೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೊರೈಸಲಾಗುತ್ತದೆ. ಈ ಬಾರಿಯಂತೂ ಮಳೆಗಾಲದಲ್ಲಿಯೂ ವಸತಿ ಪ್ರದೇಶಕ್ಕೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ.

ಕಲಬುರಗಿ ನಂಟು:

ಕಲಬುರಗಿಯಲ್ಲಿ ಹೈಕೋರ್ಟ್‌ ಹಾಗೂ ಈಶಾನ್ಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿ ಇರುವುದರಿಂದ ವಿಜಯಪುರವೂ ಇವುಗಳ ವ್ಯಾಪ್ತಿಯಲ್ಲಿ ಬರುತ್ತವೆ. ವ್ಯವಹಾರಿಕವಾಗಿ ಕಲಬುರಗಿ ಜಿಲ್ಲೆಯನ್ನು, ಸರ್ಕಾರಿ ಕಚೇರಿಗಾಗಿ ಕಲಬುರಗಿ ಜಿಲ್ಲೆಗೆ ಹೋಗುವುದು ಅನಿವಾರ್ಯತೆ ಇರುವಾಗ 371(ಜೆ) ವಿಜಯಪುರ ಜಿಲ್ಲೆಗೆ ಏಕೆ ಬೇಡ ಎಂಬ ಪ್ರಶ್ನೆ ಈ ಭಾಗದ ಜನರದ್ದಾಗಿದೆ.

ಅವಿಭಜಿತ ವಿಜಯಪುರ-ಬಾಗಲಕೋಟೆ ಜಿಲ್ಲೆಯ ಜನರು ಮನೆ, ಜಮೀನುಗಳನ್ನು ಕಳೆದುಕೊಂಡು ಆಲಮಟ್ಟಿ ಅಣೆಕಟ್ಟೆ ಕಟ್ಟಲು ಅನುಕೂಲ ಮಾಡಿದ್ದರಿಂದ ಆ ಗ್ರಾಮಗಳ ಜನರು ತ್ಯಾಗ ಮಾಡಿದ್ದರ ಫಲವಾಗಿ ಇಂದು ನಾರಾಯಣಪೂರ ಜಲಾಶಯಕ್ಕೆ ನೀರು ಹರಿಯುತ್ತಿದೆ. ಆದರೆ ಮನೆ, ಭೂಮಿಯನ್ನು ಕಳೆದುಕೊಂಡಿರುವ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿರುವ ಇಂಡಿ ಶಾಖಾ ಕಾಲುವೆ ಟೇಲ್‌ ಎಂಡ್‌ನಲ್ಲಿರುವುದರಿಂದ ಸಮರ್ಪಕ ನೀರು ಹರಿಯದೇ ಇರುವುದರಿಂದ ಈ ಭಾಗ ನೀರಾವರಿಯಿಂದಲೂ ವಂಚಿತಗೊಂಡಿದೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಲೆ ಇದೆ. ಇಂಡಿ, ಚಡಚಣ ತಾಲೂಕಿನಲ್ಲಿ ಭೀಮಾನದಿ ಹರಿದರೂ, ಭೀಮಾನದಿಗೆ ನೀರು ಹರಿಯದೇ ಇರುವುದರಿಂದ ನದಿ ತೀರದ ಜನರಿಗೆ ಕುಡಿಯುವ ನೀರಿನ ತೊಂದರೆಯೂ ತಪ್ಪಿಲ್ಲ.

ಜೇವರ್ಗಿ ಶಾಖಾ ಕಾಲುವೆ ಹಾಗೂ ನಾರಾಯಣಪೂರ ಬಲದಂಡೆ ಕಾಲುವೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಳಕೆಯಾಗುತ್ತಿರುವುದರಿಂದ ಇಂಡಿ ಶಾಖಾ ಕಾಲುವೆ ಹಾಗೂ ಗುತ್ತಿಬಸವಣ್ಣ ಏತ ನೀರಾವರಿ ಯೋಜನೆಗಳಿಗೆ ಸಮರ್ಪಕ ನೀರು ಹರಿಯದೇ ಇರುವುದರಿಂದ ನೀರಾವರಿ ಯೋಜನೆಗಳಲ್ಲಿಯೂ ಈ ಭಾಗ ಹಿಂದೆ ಬಿದ್ದಿದೆ. ಹೀಗಾಗಿ ಇಂಡಿ ಉಪ ವಿಭಾಗಾದ ತಾಲೂಕುಗಳು 371(ಜೆ) ಕಲಂಗೆ ಸೇರ್ಪಡೆ ಮಾಡಬೇಕು ಎಂಬ ಕೂಗು ಈಗ ಗಟ್ಟಿಯಾಗಿ ಮೊಳಗುತ್ತಿದೆ. ಒಂದು ವೇಳೆ ಇದು ಸಾಕಾರವಾದರೆ ಈ ಭಾಗದ ಜನರು ಹಸನಾಗುವುದು ಖಚಿತ.

ಏಳ್ಗೆಯಾಗಲು ಬೇಕು 371(ಜೆ) ಕಲಂ

ಕ್ರಿ.ಶ. 1724 ರಲ್ಲಿ ವಿಜಯಪುರ ಹೈದರಬಾದನ ನಿಜಾಮರ ಆಳ್ವಿಕೆಗೆ ಒಳಪಟ್ಟಿತ್ತು. ಕ್ರಿ.ಶ.1760 ರಲ್ಲಿ ಮರಾಠರಿಂದ ನಿಜಾಮರು ಸೋಲಲ್ಪಟ್ಟಾಗ ವಿಜಯಪುರ ನಿಜಾಮರಿಂದ ಮರಾಠ ಪೇಶ್ವೆಗಳ ಆಳ್ವಿಕೆಗೆ ಒಳಪಟ್ಟಿತ್ತು. ನಂತರ ಕ್ರಿ,ಶ.1818 ರ 3 ನೇ ಆಂಗ್ಲ-ಮರಾಠಾ ಯುದ್ದದಲ್ಲಿ ಬ್ರಿಟಿಷರಿಂದ ಮರಾಠರು ಸೋಲಲ್ಪಟ್ಟಾಗ ವಿಜಯಪುರ ಮರಾಠರಿಂದ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತ್ತು. ನಂತರ ವಿಜಯಪುರವನ್ನು ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಂಪನಿಗೆ ಹಸ್ತಾಂತರಿಸಲಾಯಿತು. ಬಳಿಕ ಸಾತಾರಾ ರಾಜರಿಗೆ ಒಪ್ಪಿಸಲಾಯಿತು. ವಿಜಯಪುರ ಜಿಲ್ಲೆಯನ್ನು ಒಬ್ಬರಿಂದ ಒಬ್ಬರ ಆಳ್ವಿಕೆಗೆ ಒಳಪಟ್ಟು ಅತ್ಯಂತ ಶೋಚನೀಯ ಸ್ಥಿತಿ ಅನುಭವಿಸಿದ್ದರಿಂದ ಈ ಭಾಗ ಎಲ್ಲ ರಂಗದಲ್ಲಿಯೂ ಹಿಂದೆ ಬಿದ್ದಿದೆ. ಹೀಗಾಗಿ ವಿಜಯಪುರ ಜಿಲ್ಲೆ 371(ಜೆ) ಕಲಂಗೆ ಸೇರ್ಪಡೆ ಮಾಡುವುದು ಅತೀ ಸೂಕ್ತವಾಗಿದೆ ಎಂದು ಸಂಶೋಧಕರ ಅಭಿಪ್ರಾಯವಾಗಿದೆ.

ಬಳ್ಳಾರಿಗೆ ಸಿಕ್ಕಂತೆ ನಮ್ಗು ಸಿಗಲಿ

ಸಂಶೋಧಕರ ಪ್ರಕಾರ ಬಳ್ಳಾರಿ ಜಿಲ್ಲೆ ಮೂಲತಃ ಮದ್ರಾಸ್‌ ರೆಜಿಮೆಂಟ್‌ನಲ್ಲಿ ಇತ್ತು. ಅದು ಎಲ್ಲ ರಂಗದಲ್ಲಿಯೂ ಹಿಂದುಳಿದೆ ಎಂದು ಬಳ್ಳಾರಿಯನ್ನು 371ಜೆ ವ್ಯಾಪ್ತಿಗೆ ಸೇರ್ಪಡೆ ಮಾಡಲಾಯಿತು. ಹಾಗೆಯೇ ವಿಜಯಪುರವೂ ನಿಜಾಮರ ಆಳ್ವೆಯಿಂದ ಮುಕ್ತಿಗೊಂಡು ಮುಂಬೈ ಪ್ರಾಂತ್ಯಕ್ಕೆ ಸೇರ್ಪಡೆಯಾಗಿತ್ತು.ಆ ದರೆ ವಿಜಯಪುರವು ಬಳ್ಳಾರಿ ಜಿಲ್ಲೆಯಂತೆ ಎಲ್ಲ ಕ್ಷೇತ್ರದಲ್ಲಿಯೂ ಹಿಂದೆ ಇದೆ.

ಅನುದಾನ ಕೇಳಿದ್ರೆ ಬಿಎಸ್‌ವೈ ಬಿಜೆಪಿಗೆ ಬಾ ಅಂತಾ ಕರೀತಾರೆ : ಕೈ ಶಾಸಕ

ಬೆಳಗಾವಿ ಅಧಿವೇಶನದಲ್ಲಿ ಚರ್ಚೆ

ನಂಜುಂಡಪ್ಪ ವರದಿಯಂತೆ ಎಲ್ಲ ರಂಗದಲ್ಲಿಯೂ ಅತ್ಯಂತ ಹಿಂದುಳಿದ ಈ ತಾಲೂಕು ಹಾಗೂ ಜಿಲ್ಲೆ. ವಿಜಯಪುರ ಜಿಲ್ಲೆಯು ಕಲಬುರಗಿ ಹೈಕೋರ್ಟ್‌ ಹಾಗೂ ಈಕಕರಸಾ ಸಂಸ್ಥೆ ಕೇಂದ್ರ ಕಚೇರಿಗೆ ಒಳಗೊಂಡಿರುವುದರಿಂದ ಈ ಭಾಗದ ಜನರು ಕಲಬುರಗಿ ನಂಟು ಜಾಸ್ತಿ ಇದೆ. ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕು ಹಾಗೂ ಇಂಡಿ ತಾಲೂಕಿನ ಅಂತರ ಕೇವಲ 2 ಕಿಮೀ ಇದೆ. ಹೀಗಿರುವಾಗಿ 371(ಜೆ)ಕಲಂ ನಮ್ಮ ಭಾಗಕ್ಕೂ ಸಿಗಬೇಕಲ್ಲ. ಕಲಬುರಗಿಯ ಅಫಜಲಪೂರ ತಾಲೂಕಿಗೂ ಹಾಗೂ ವಿಜಯಪುರ ಜಿಲ್ಲೆಯ ಇಂಡಿ, ಸಿಂದಗಿ ತಾಲೂಕಿಗೂ ಹೋಲಿಕೆ ಮಾಡಿದರೆ ಬರ, ಕುಡಿಯುವ ನೀರಿನ ಸಮಸ್ಯೆ, ನೀರು ಉದ್ಯೋಗ, ಶೈಕ್ಷಣಿಕ ಸೇರಿದಂತೆ ಯಾವುದೇ ವ್ಯತ್ಯಾಸ ಕಾಣುವುದಿಲ್ಲ. ಹೀಗಾಗಿ 371(ಜೆ) ಇಂಡಿ ಉಪ ವಿಭಾಗದ ತಾಲೂಕುಗಳು ಸೇರ್ಪಡೆಯಾಗುವ ಕುರಿತು ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಚರ್ಚಿಸಲಾಗುತ್ತದೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ತಿಳಿಸಿದ್ದಾರೆ. 

ವಿಜಯಪುರ ಜಿಲ್ಲೆ 371(ಜೆ) ವ್ಯಾಪ್ತಿಗೆ ಸೇರ್ಪಡೆಗೆ ನನ್ನಿಂದ ಏನೆಲ್ಲ ಮಾಡಲು ಸಾಧ್ಯವಿದೆಯೋ ಅದೆಲ್ಲವನ್ನು ನಾನು ಮಾಡುತ್ತೇನೆ. ಒಟ್ಟಿನಲ್ಲಿ ನಮ್ಮ ಜಿಲ್ಲೆಯ ಜನರು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಮುಂದೆ ಬರಬೇಕು ಎಂಬುವುದು ನನ್ನ ಆಶೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ. 

Follow Us:
Download App:
  • android
  • ios