ಬೆಂಗಳೂರು ವಿವಿ ಘಟಿಕೋತ್ಸವದಲ್ಲಿ ನಟ ದ್ವಾರಕೀಶ್‌ಗೆ ಗೌರವ ಡಾಕ್ಟರೇಟ್ ಪ್ರದಾನ
- ಬೆಂಗಳೂರು ವಿಶ್ವವಿದ್ಯಾಲಯ 57 ನೇ ಘಟಿಕೋತ್ಸವದ ಸಂಭ್ರಮ
- ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್‌ಗೆ ಗೌರವ ಡಾಕ್ಟರೇಟ್ ಪ್ರಧಾನ
- ಈವರೆಗೆ ಬೆಂಗಳೂರು ವಿವಿ ವತಿಯಿಂದ 267 ಜನರಿಗೆ ಗೌರವ ಡಾಕ್ಟರೇಟ್ ಪ್ರದಾನ
ವರದಿ - ವಿದ್ಯಾಶ್ರೀ, ಏಷ್ಯಾನೆಟ್ ಸುವರ್ಣನ್ಯೂಸ್
ಬೆಂಗಳೂರು (ಡಿ.5): ಬೆಂಗಳೂರಿನ ವಿಶ್ವವಿದ್ಯಾಯ 57ನೇ ಘಟಿಕೋತ್ಸವದ ಸಂಭ್ರಮ ಇಂದು ಮನೆ ಮಾಡಿತ್ತು .ವಿವಿ ಘಟಿಕೊತ್ಸವ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಘಟಿಕೋತ್ಸವ ಅದ್ದೂರಿಯಾಗಿ ನಡೆದಿದ್ದು, ಜ್ಞಾನಜ್ಯೋತಿ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಘಟಿಕೋತ್ಸವಕ್ಕೆ ಚಾಲನೆ ನೀಡಿದರು. ಈ ಘಟಿಕೋತ್ಸವದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟ ದ್ವಾರಕೀಶ್ ಸೇರಿ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
ವಿದ್ಯಾಭ್ಯಾಸದಲ್ಲಿ ಸಾಧನೆ ಮಾಡಿದವರಿಗೆ ಚಿನ್ನದ ಪದಕಗಳನ್ನು ಕೊಟ್ಟಿ ಗೌರವಿಸಿದರು. ಅಷ್ಟೇ ಅಲ್ಲದೆ ಸರಿ ಸುಮಾರು 267 ಅಭ್ಯರ್ಥಿಗಳಿಗೆ ಡಾಕ್ಟ ರೇಟ್ ಪದವಿ ಪ್ರದಾನ ಮಾಡಲಾಯಿತು. ಇನ್ನು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಶ್ವವಿದ್ಯಾಲಯದ ಅನುದಾನ ಆಯೋಗದ ಅಧ್ಯಕ್ಷ ಪ್ರೊ.ಎಂ. ಜಗದೀಶ್, ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಭಾಗವಹಿಸಿದ್ದರು. ಕನ್ನಡ ಚಲನಚಿತ್ರೋದ್ಯಮಕ್ಕೆ ನೀಡಿದ ಕೊಡುಗೆಗೆ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್, ಕಾನೂನು ಮತ್ತು ಸಮುದಾಯ ಸೇವಾ ಕ್ಷೇತ್ರದಲ್ಲಿ ಕೊಡುಗೆಯನ್ನು ನೀಡಿರುವ ಅಮೆರಿಕಾದ ಕಾನೂನು ಸಂಸ್ಥೆಯ ಸಂಸ್ಥಾಪನಾ ಅಧ್ಯಕ್ಷ ಅಮರನಾಥ ಗೌಡ ಹಾಗೂ ಚಿತ್ರಕಲಾವಿದ ಮತ್ತು ಛಾಯಾಗ್ರಾಹಕ ಡಾ. ಟಿ.ಅನಿಲ್‍ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪುದಾನ ಮಾಡಲಾಯಿತು.
ವಿಶ್ವವಿದ್ಯಾಲಯಗಳ ಪಾರದರ್ಶಕ ಆಡಳಿತಕ್ಕೆ 50 ಮಾರ್ಗಸೂಚಿ
34,337 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ: ವಿಶ್ವವಿದ್ಯಾಲಯದಿಂದ ಒಟ್ಟು 34,337 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಈ ಪೈಕಿ 300 ಚಿನ್ನದ ಪದಕ, 73 ನಗದು ಬಹುಮಾನ, 267 ಅಭ್ಯರ್ಥಿಗಳಿಗೆ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಸುಮಾರು 50 ಸಾವಿರ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ವಿತರಣೆ ಮಾಡಲಾಗಿದೆ. 250ಕ್ಕೂ ಹೆಚ್ಚಿನ ಮಂದಿಗೆ ಡಾಕ್ಟರೇಟ್ ಪದವಿಯನ್ನು ನೀಡಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯ ಎತ್ತರಕ್ಕೆ ಬೆಳೆಯುತ್ತಿದೆ, ಉತ್ತಮ ಸಾಧನೆ ಮಾಡುತ್ತಿದೆ. ಜೊತೆಗೆ ನಮ್ಮೆಲ್ಲರ ಅಚ್ಚು ಮೆಚ್ಚಿನ ನಟರು ದ್ವಾರಕೀಶ್, ಹಿರಿಯ ಕಾನೂನು ತಜ್ಞರು ಅಮರ ನಾಥ್ ಹಾಗೂ ಕಲಾವಿದರಾದ ಅನಿಲ್ ಕುಮಾರ್ ಅವ್ರಿಗೂ ಗೌರವ ಡಾಕ್ಟರೇಟ್ ಪ್ರದಾನ ಮಾಡಿದ್ದು ಸಂತಸ ತಂದಿದೆ ಎಂದು ಅಶ್ವತ್ಥ್ ನಾರಾಯಣ ಸಂತಸ ವ್ಯಕ್ತಪಡಿಸಿದರು.
ಗುಣಮಟ್ಟದ ಶಿಕ್ಷಣದಿಂದ ಸಮಸ್ಯೆ ಪರಿಹಾರ: ನಮ್ಮ ದೇಶದಲ್ಲಿ 135 ಕೋಟಿಗೂ ಹೆಚ್ಚು ಜನಸಂಖ್ಯೆ ಇದೆ. ಸ್ವಯಂ ಕಲಿಕೆ ಅನ್ನೋದು ತುಂಬ ಮುಖ್ಯ. ವಿವೇಕಾನಂದರ ನುಡಿಯಂತೆ ನನ್ನ ಜೀವನಕ್ಕೆ ನಾನೇ ಶಿಲ್ಪಿ ಅನ್ನೋ ರೀತಿ ಇರಬೇಕು. ಆದರೆ, ನಾವು ಇಷ್ಟು ಸೈಟು, ಆಸ್ತಿ ಮಾಡಿಕೊಂಡಿದ್ದೇವೆ ಅನ್ನೋದು ಸುಸ್ಥಿರ ಅಭಿವೃದ್ಧಿ ಅಲ್ಲ. ಶಿಕ್ಷಣ ವ್ಯವಸ್ಥೆ, ಸಂಸ್ಥೆಗಳನ್ನ ಸರಿಯಾಗಿ ಮಾಡಿದರೆ ಮುಂದಿನ ಕೆಲವು ವರ್ಷಗಳಲ್ಲಿ ದೊಡ್ಡ ಸಾಧನೆ ಮಾಡಬಹುದು. ಸರ್ಕಾರದಿಂದ ಅತ್ಯುತ್ತಮವಾದ ಸುಧಾರಣೆಗಳನ್ನು ಜಾರಿಗೆ ತಂದಿದ್ದೇವೆ. ಈ ತಿಂಗಳನ್ನ ಅಂದರೆ ಡಿಸೆಂಬರ್ ತಿಂಗಳನ್ನ ಗುಡ್ ಗವರ್ನೆನ್ಸ್ ಡೇ (ಸುಶಾಸನ ದಿನ)ವಾಗಿ ಆಚರಣೆ ಮಾಡಲಾಗುತ್ತಿದೆ. ಎಲ್ಲರೂ ಉತ್ತಮವಾಗಿ ಅಭ್ಯಾಸ ಮಾಡುತ್ತಾ ಸಮಾಜ ಸುಧಾರಣಾ ಕಾರ್ಯಗಳತ್ತವೂ ಗಮನ ನೀಡಬೇಕು. ಇನ್ನು ಸಮಾಜದ ಎಲ್ಲ ಸಮಸ್ಯೆಗಳಿಗೆ ಗುಣಮಟ್ಟದ ಶಿಕ್ಷಣದಿಂದ ಪರಿಹರಿಸಲು ಸಾಧ್ಯ ಎಂದು ಸಚಿವ ಅಶ್ವತ್ಥ ನಾರಾಯಣ ವಿದ್ಯಾರ್ಥಿಗಳಿಗೆ ಸಲಹೆ ನೀಡಿ, ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.
ವಿವಿ ಸಭೆಗಳು ಇನ್ನು ನೇರಪ್ರಸಾರ: ಸಚಿವ ಅಶ್ವತ್ಥ್‌ನಾರಾಯಣ
ಸಾಧನೆಗೆ ಗುರಿಗೆ ಗುರುಗಳ ಹಾರೈಕೆ ಸಿಕ್ಕಿದೆ: ಪದವಿ ಪಡೆದವರ ಪೋಷಕರಿಗಂತೂ ಖುಷಿಗೆ ಪಾರವೇ ಇರಲಿಲ್ಲ. ಇನ್ನು ಪದವಿ ಪಡೆದವರು ಎಲ್ಲಿ ಇದ್ದರೂ ಸಹ ನಾವು ಮುಂದೆ ಬರಬಹುದು. ಜೀವನದಲ್ಲಿ ಛಲ ಮುಖ್ಯ. ಎಂದಿಗೂ ನಮ್ಮ ಗುರಿಯೊಂದಿಗೆ ನಾನು ಸಾಗಬೇಕು. ಆಗಲೇ ನಾವು ಸಾಧಿಸಲು ಸಾಧ್ಯ. ಇದರ ಜೊತೆಗೆ ನಮ್ಮ ಪೋಷಕರು ಮತ್ತು ಪ್ರತಿ ಕಾಲೇಜು ಉಪನ್ಯಾಸಕರು ತುಂಬಾ ಪ್ರೋತ್ಸಾಹ ನೀಡಿದ್ದಕ್ಕೆ ನಾವು ಇಲ್ಲಿ ನಿಲ್ಲಲು ಸಾಧ್ಯವಾಗಿರುವುದು ಎಂದು ವಿಧ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ 57ನೇ ವಾರ್ಷಿಕ ಘಟಿಕೋತ್ಸವದಲ್ಲಿ ಒಟ್ಟು 300 ಬಂಗಾರದ ಪದಕಗಳು ಹಾಗೂ 73 ನಗದು ಬಹುಮಾನಗಳನ್ನು ಒಟ್ಟು 167 ವಿದ್ಯಾರ್ಥಿಗಳಿಗೆ ವಿತರಿಸಲಾಗಿತ್ತು. ಘಟಿಕೋತ್ಸವದಲ್ಲಿ ಬೆಳ್ಳಿಯ 20 ಗ್ರಾಂ ಬಿಲ್ಲೆಯ ಮೇಲೆ 1.3 ಗ್ರಾಂ ಚಿನ್ನದಿಂದ ಕೆತ್ತಲಾದ ಪದಕಗಳನ್ನು ನೀಡಿ ವಿದ್ಯಾರ್ಥಿಗಳನ್ನು ಮತ್ತಷ್ಟು ಪ್ರೋತ್ಸಾಹಿಸಿದರು.