ಉತ್ತರ ಕನ್ನಡ: ಒಂದೇ ಒಂದು ಮೇಸೆಜ್‌ಗೆ 32 ಗ್ರಾಮೀಣ ಬಸ್ ನಿಲ್ದಾಣ ಸ್ವಚ್ಛ..!
ಈ ಸ್ವಚ್ಛತಾ ಅಭಿಯಾನದಲ್ಲಿ ಗ್ರಾಮ ಪಂಚಾಯಿತಿಗಳ ಎಲ್ಲ ಅಧಿಕಾರಿಗಳು, ಸಿಬ್ಬಂದಿ, ಜನಪ್ರತಿನಿಧಿಗಳು ಸಹಕಾರ ನೀಡುತ್ತಾರೆ ಎಂಬ ವಿಶ್ವಾಸ ವೃದ್ಧಿಸಿದೆ. ಶಾಸಕರ ಸೂಚನೆಯಂತೆ ನಮ್ಮ ಬಸ್ ನಿಲ್ದಾಣ ನಮ್ಮ ಹೆಮ್ಮೆ ಎಂಬ ಮಾದರಿಯಲ್ಲಿ ನಿರ್ವಹಣೆ ಆಗಲಿ ಎಂಬ ಆಶಯ ನಮ್ಮದು: ತಾಪಂ ಪ್ರಭಾರಿ ಇಒ ಸತೀಶ ಹೆಗಡೆ
ಮಂಜುನಾಥ ಸಾಯಿಮನೆ
ಶಿರಸಿ(ಆ.19): ವಾಟ್ಸ್‌ಆ್ಯಪ್‌ನಲ್ಲಿ ಒಂದು ಮೆಸೇಜ್ ನೀಡಿದ ಪರಿಣಾಮ ತಾಲೂಕಿನ 32ಕ್ಕೂ ಅಧಿಕ ಗ್ರಾಮೀಣ ಬಸ್ ನಿಲ್ದಾಣಗಳು ಸ್ವಚ್ಛಗೊಂಡು ನಳ ನಳಿಸುತ್ತಿವೆ. ಈ ವರೆಗೆ ಒಂದೇ ಒಂದು ಕಸಬರಿಗೆಯನ್ನೂ ಕಾಣದ ಹಳ್ಳಿ ಭಾಗದ ಅನೇಕ ಬಸ್ ನಿಲ್ದಾಣಗಳು ಸ್ವಚ್ಚಗೊಂಡಿವೆ.
ಗಲೀಜಾಗಿ ಬಸ್‌ಗಾಗಿ ಕಾಯಲು ಬಂದ ಪ್ರಯಾಣಿಕರು ಕೂಡ ಕೂರಲೂ ಆಗದೇ ಇದ್ದ ಸ್ಥಿತಿಯಲ್ಲಿದ್ದ ಅನೇಕ ಬಸ್ ನಿಲ್ದಾಣಗಳನ್ನು ಆಯಾ ಗ್ರಾಮ ಪಂಚಾಯಿತಿಗಳ ಸಿಬ್ಬಂದಿ, ಅಧಿಕಾರಿಗಳ ನೇತೃತ್ವದಲ್ಲಿ ಹೊಸ ಅಧ್ಯಕ್ಷ-ಉಪಾಧ್ಯಕ್ಷರ ತಂಡಗಳ ಮೇಲುಸ್ತುವಾರಿಯಲ್ಲಿ ಸ್ವಚ್ಛಗೊಳ್ಳುತ್ತಿವೆ.
ಉತ್ತರ ಕನ್ನಡ: ಕೈಕೊಟ್ಟ ಮಳೆ, ಬತ್ತದ ಬೆಳೆ ಇಳಿಮುಖ, ಆತಂಕದಲ್ಲಿ ಅನ್ನದಾತ..!
ಏನಿದು ಕಮಾಲ್…?:
ಆ. 7ರಂದು ತಾಲೂಕು ಪಂಚಾಯಿತಿಯಲ್ಲಿ ಪಿಡಿಒಗಳ ಸಭೆ ನಡೆಸಿದ್ದ ಶಾಸಕ ಭೀಮಣ್ಣ ನಾಯ್ಕ ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಇರಬೇಕು. ಹಾಗೆ ಗ್ರಾಮ ಪಂಚಾಯಿತಿ ಕೆಲಸ ಮಾಡಬೇಕು ಎಂದು ಹೇಳಿದ್ದರು. ಈ ಸೂಚನೆ ಗಂಭೀರವಾಗಿ ಪರಿಗಣಿಸಿದ ತಾಪಂ ನೂತನ ಪ್ರಭಾರಿ ಕಾರ್ಯನಿರ್ವಹಣಾ ಅಧಿಕಾರಿ ಸತೀಶ ಹೆಗಡೆ ಬುಧವಾರ ಸಂಜೆ ಒಂದು ಮೇಸೆಜ್‌ನ್ನು ತಾಲೂಕು ಪಿಡಿಒಗಳ ಗ್ರೂಪ್‌ಗೆ ಹಾಕಿದ್ದರು. ಆ. 23ರೊಳಗೆ ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿನ ಎಲ್ಲ ಬಸ್ ನಿಲ್ದಾಣಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿ ಇರುವ ಒಣ ಕಸ ವಿಲೇವಾರಿ ಸಿಬ್ಬಂದಿ ಹಾಗೂ ಪಂಚಾಯಿತಿ ನೌಕರರು ಸಹಿತ, ಜನಪ್ರತಿನಿಧಿಗಳ ಮಾರ್ಗದರ್ಶನದಲ್ಲಿ ಒಂದು ಅಭಿಯಾನ ಮಾದರಿಯಲ್ಲಿ ನಡೆಸುವಂತೆ ಕೋರಿದ್ದರು.
ಇದಕ್ಕೆ ಸ್ಪಂದನೆ ದೊರೆತು ತಾಲೂಕಿನ 32 ಗ್ರಾಮೀಣ ಬಸ್ ನಿಲ್ದಾಣಗಳು ಸ್ವಚ್ಛವಾದವು. ಗುದ್ದಲಿ, ಪಿಕಾಸಿ, ಕೆಲವಡೆ ನೀರನ್ನೂ ಒಯ್ದು ಸ್ವಚ್ಛಗೊಳಿಸಿದರು. ಆ. 23ರೊಳಗೆ 32 ಪಂಚಾಯ್ತಿ ವ್ಯಾಪ್ತಿಯ ಎಲ್ಲ ಸಣ್ಣ-ಪುಟ್ಟಬಸ್ ನಿಲ್ದಾಣಗಳು ಸ್ವಚ್ಛವಾಗಿಸಲು ಗ್ರಾಪಂ ತಂಡ ಕೂಡ ಮುಂದಾಗಿದೆ. ದಿನಕ್ಕೆ 45ರಿಂದ 50 ಕ್ವಿಂಟಲ್ ನಿಲ್ದಾಣಗಳಲ್ಲಿ ಕಸ ಸಿಕ್ಕಿರಬಹುದು ಎಂದು ಅಂದಾಜಿಸಲಾಗಿದೆ. ಪ್ಲಾಸ್ಟಿಕ್, ಉಳಿಕೆ ತ್ಯಾಜ್ಯ ಸಂಗ್ರಹಿಸಿ ತ್ಯಾಜ್ಯ ವಿಲೇವಾರಿ ಘಟಕಗಳಿಗೂ ಒಯ್ಯಲಾಯಿತು. ಒಂದೇ ದಿನಕ್ಕೇ ಈ ಪ್ರತಿಕ್ರಿಯೆ ಸಿಕ್ಕಿರುವುದು ಅಚ್ಚರಿಯಾಗಿದೆ ಎಂದು ಇಒ ಸತೀಶ ಹೆಗಡೆ ಹರ್ಷ ವ್ಯಕ್ತಪಡಿಸಿದ್ದಾರೆ.
ಶೂನ್ಯ ಖರ್ಚು:
ಪಿಡಿಒಗಳಿಗೆ ಮಾಹಿತಿ ನೀಡುವಾಗ ಪಂಚಾಯಿತಿಗೆ ಖರ್ಚು ಬಾರದಂತೆ ಕ್ರಮ ಜರುಗಿಸಬೇಕು ಎಂದು ಇಒ ಸೂಚಿಸಿದ್ದರು. ಸಣ್ಣ-ಪುಟ್ಟ ದುರಸ್ತಿ ಇದ್ದರೆ ಮಾಡಿಸಬಹುದು. ಸ್ವಚ್ಛತೆಗೆ ಯಾವುದೇ ಖರ್ಚು ಹಾಕದೇ ಅಭಿಯಾನ ನಡೆಸಬೇಕು ಎಂಬುದಾಗಿ ಹೇಳಿದ್ದರು. ಸ್ವತಃ ಜನಪ್ರತಿನಿಧಿಗಳು, ಪಂಚಾಯ್ತಿ ಸಿಬ್ಬಂದಿ ತೊಡಗಿಕೊಂಡಿದ್ದನ್ನು ನೋಡಿದ ಹಳ್ಳಿ ಭಾಗದ ಜನರೂ ಸ್ವಚ್ಛತಾ ಅಭಿಯಾನದಲ್ಲಿ ಕೈ ಜೋಡಿಸಿದ್ದು ಇನ್ನೊಂದು ವಿಶೇಷ. ಇದೊಂದು ಮಾದರಿ ಅಭಿಯಾನವಾಗಿ ನಿರಂತರವಾಗಿರುವಂತೆ ತಾವೂ ಸಹಕಾರ ನೀಡುವುದಾಗಿ ಕೆಲವು ಗ್ರಾಮಸ್ಥರು ವಾಗ್ದಾನ ಮಾಡಿದ್ದು ಉಲ್ಲೇಖನೀಯವಾಗಿದೆ. ಗುರುವಾರದಿಂದ ಆರಂಭವಾದ ಈ ಸ್ವಚ್ಛತಾ ಅಭಿಯಾನವನ್ನು ಪ್ರಥಮ ಹಂತದಲ್ಲಿ ಆಯಾ ಪಂಚಾಯ್ತಿಯಗಳು ಆ. 23ರ ತನಕ ನಡೆಸಲಿದ್ದಾರೆ.
ಹಳೆ ದೇಶಪಾಂಡೆ ಯುಗ ಮುಗಿಯಿತು, ಇನ್ನು ಸ್ಟ್ರಿಕ್ಟ್ ಆಗಿರುವೆ: ನಾನು ಯಾರಿಗೂ ಕಂಟ್ರಾಕ್ಟ್ ಕೊಡಲ್ಲ
ಈ ಸ್ವಚ್ಛತಾ ಅಭಿಯಾನದಲ್ಲಿ ಗ್ರಾಮ ಪಂಚಾಯಿತಿಗಳ ಎಲ್ಲ ಅಧಿಕಾರಿಗಳು, ಸಿಬ್ಬಂದಿ, ಜನಪ್ರತಿನಿಧಿಗಳು ಸಹಕಾರ ನೀಡುತ್ತಾರೆ ಎಂಬ ವಿಶ್ವಾಸ ವೃದ್ಧಿಸಿದೆ. ಶಾಸಕರ ಸೂಚನೆಯಂತೆ ನಮ್ಮ ಬಸ್ ನಿಲ್ದಾಣ ನಮ್ಮ ಹೆಮ್ಮೆ ಎಂಬ ಮಾದರಿಯಲ್ಲಿ ನಿರ್ವಹಣೆ ಆಗಲಿ ಎಂಬ ಆಶಯ ನಮ್ಮದು ಎಂದು ತಾಪಂ ಪ್ರಭಾರಿ ಇಒ ಸತೀಶ ಹೆಗಡೆ ಹೇಳಿದ್ದಾರೆ.
ನನ್ನ ಕ್ಷೇತ್ರ ಸ್ವಚ್ಛ ಕ್ಷೇತ್ರ ಆಗಬೇಕು ಎಂಬ ಕನಸು ನನ್ನದು. ಹೀಗಾಗಿ ಪಿಡಿಒಗಳ ಸಭೆ ಕೂಡ ನಡೆಸಿದ್ದೆ. ಬಸ್ ನಿಲ್ದಾಣಗಳಿಂದ ಈ ಕೆಲಸ ಆರಂಭವಾಗಿದೆ. ಇದು ನಿರಂತರ ಅಭಿಯಾನವಾಗಿ ಮುಂದುವರಿಯಲಿ ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದ್ದಾರೆ.